ಅರಿಶಿನದಿಂದ ಅನ್ನದಾತನ ಬಾಳೆ ಬಂಗಾರ
ಕ.ಪ್ರ.ವಾರ್ತೆ , ಮೈಸೂರು , ಆ. 18
ಇವರದು ಹಂಗಿನ ಅರಮನೆಯಲ್ಲ. ಅಂದರೆ ಈವರೆಗೆ ಕೃಷಿ ಹಾಗೂ ತೋಟಗಾರಿಕೆ ಇಲಾಖೆಯಿಂದ ಯಾವುದೇ ಸಹಾಯಧನ, ಸಲಹೆ ಪಡೆದಿಲ್ಲ. ಆದರೆ ಬಾಳೆ ಹಾಗೂ ಅರಿಶಿನ ಬೆಳೆಯಲ್ಲಿ ಖರ್ಚೆಲ್ಲಾ ಕಳೆದು ವಾರ್ಷಿಕ 10 ಲಕ್ಷ ಆದಾಯ ಗಳಿಸುತ್ತಿದ್ದಾರೆ.
ಅವರ ಹೆಸರು ಸದಾಶಿವನ್. ವಾಸ ಹುಣಸೂರು ತಾಲೂಕು ತರೀಕಲ್ ಗ್ರಾಮ. ಇವರಿಗೆ ದಾಸನಪುರ ದಾಖಲೆಯಲ್ಲಿ 9 ಎಕರೆ ಜಮೀನಿದೆ. ತಮಿಳುನಾಡಿನಲ್ಲಿ ಹೆಚ್ಚು ಬೆಳೆಯುತ್ತಿದ್ದ ಅರಿಶಿನ ಬೆಳೆಯನ್ನು ಮೈಸೂರು ಭಾಗಕ್ಕೆ ಪರಿಚಯಿಸಿದ ಕೀರ್ತಿ ಇವರ ತಾತ ರಂಗಸ್ವಾಮಿ ಗೌಂಡರ್ (ರಂಗರಾವ್) ಅವರಿಗೆ ಸಲ್ಲುತ್ತದೆ. ಇವರು ಮೂಲತಃ ತಮಿಳುನಾಡಿನ ನಾಮಕಲ್ನವರು. 1964 ರಲ್ಲಿಯೇ ಹುಣಸೂರು ತಾಲೂಕಿಗೆ ವಲಸೆ ಬಂದು, ಕಷ್ಟಪಟ್ಟು ದುಡಿದು, ಕೃಷಿಯಲ್ಲಿ ಹೆಸರು ಮಾಡಿ, ನೆಲೆ ಕಂಡುಕೊಂಡವರು. ಇವರಿಗೆ ಮೂವರು ಪುತ್ರರು ಹಾಗೂ ಮೂವರು ಪುತ್ರಿಯರು. ಎಲ್ಲರಿಗೂ ತಲಾ 9 ಎಕರೆ ಜಮೀನನ್ನು ನೀಡಿದ್ದಾರೆ.
ರಂಗಸ್ವಾಮಿ ಗೌಂಡರ್ ಅವರ ಮಕ್ಕಳು ಕೂಡ ತಂದೆಯಂತೆ ಶ್ರದ್ಧೆಯಿಂದ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ರಂಗಸ್ವಾಮಿ ಗೌಂಡರ್ ಅವರ ಮಕ್ಕಳಲ್ಲಿ ಒಬ್ಬರಾದ ರಾಮಸ್ವಾಮಿ ಅವರ ಪುತ್ರನೇ ಸದಾಶಿವನ್. ಇನ್ನೂ 30ರ ಹರೆಯ. ಆದರೆ ಪೀಳಿಗೆಯಿಂದ ಪೀಳಿಗೆಗೆ ವರ್ಗವಾಗಿ ಬಂದಿರುವ ಕೃಷಿಯ ಅನುಭವದಿಂದ ಬಾಳೆ ಹಾಗೂ ಅರಿಶಿನ ಬೆಳೆಯುವುದರಲ್ಲಿ ನಿಷ್ಣಾತ. ಹೀಗಾಗಿಯೇ ರತ್ನಪುರಿಯಲ್ಲಿ ಎಸ್ಸೆಸ್ಸೆಲ್ಸಿಗೆ ಓದಿಗೆ ಗುಡ್ ಬೈ. 10 ವರ್ಷಗಳಿಂದ 9 ಎಕರೆಯ ಕೃಷಿ ಉಸ್ತುವಾರಿ ಇವರದ್ದೇ.
ಬತ್ತ, ಅರಿಶಿನವೇ ಎಲ್ಲ: ಎರಡು ಎಕರೆಯಲ್ಲಿ 1,200 ತೆಂಗಿನ ಮರಗಳಿವೆ. ಇದಕ್ಕೆ ವಾರ್ಷಿಕ 40,000 ವೆಚ್ಚವಾದರೆ ಬರುವ ಆದಾಯ 1.70 ಲಕ್ಷ ರು. ಇವರು ಬತ್ತ, ಹತ್ತಿ ಬೆಳೆದಿದ್ದು ಉಂಟು. ಆದರೆ ಬಾಳೆ ಮತ್ತು ಅರಿಶಿನ ಕೈಗತ್ತಿದಂತೆ ಇತರೆ ಬೆಳೆಗಳು ಹತ್ತಲಿಲ್ಲ. ಹೀಗಾಗಿ ಅವುಗಳ ಸಹವಾಸವೇ ಬೇಡ ಎಂದು ಸತತವಾಗಿ ಇವೆರೆಡೆ ಬೆಳೆ ಬೆಳೆಯುತ್ತಿದ್ದಾರೆ. ಒಮ್ಮೆ ನಾಲ್ಕು ಎಕರೆಯಲ್ಲಿ ಅರಿಶಿನ ಹಾಕಿದರೆ, ಮೂರು ಎಕರೆಯಲ್ಲಿ ಬಾಳೆ ಹಾಕುತ್ತಾರೆ. ಪ್ರತಿ ಬಾರಿಯೂ ಬೆಳೆ ಬದಲಾವಣೆ ಮಾಡುತ್ತಾರೆ.
ಅಂದರೆ ಅರಿಶಿನ ಬೆಳೆದ ಜಮೀನಿನಲ್ಲಿ ಬಾಳೆ, ಬಾಳೆ ಬೆಳೆದ ಜಮೀನಿನಲ್ಲಿ ಅರಿಶಿನ ಬೆಳೆಯುತ್ತಾರೆ. ಅರಿಶಿನ ಕೀಳಿಸಿದ ನಂತರ ಅಬ್ಸಣಬು ಬೆಳೆದು, ಅದನ್ನು ಜಮೀನಿನಲ್ಲಿಯೇ ಗೊಬ್ಬರ ಮಾಡಿಸುತ್ತಾರೆ. ಇದರಿಂದ ಜಮೀನಿನ ಫಲವತ್ತತೆ ಹೆಚ್ಚಿದೆ.
ಅರಿಶಿನವನ್ನು ಎಕರೆಗೆ 30 ರಿಂದ 50 ಕ್ವಿಂಟಾಲ್ವರೆಗೂ ಬೆಳೆಯುತ್ತಾರೆ. ಕಳೆದ ವರ್ಷ ಮೂರೂವರೆ ಎಕರೆಗೆ 120 ಕ್ವಿಂಟಾಲ್ ಇಳುವರಿ ಬಂದಿತ್ತು. ಪ್ರತಿ ಕ್ವಿಂಟಾಲ್ 6,800ಗೆ ಮಾರಾಟವಾಯಿತು. ಅರಿಶಿನ ಜತೆಗೆ ಅಂತರ ಬೆಳೆಯಾಗಿ ಹಸಿಮೆಣಸಿನಕಾಯಿ ಬೆಳೆಯುತ್ತಾರೆ. ಕಳೆದ ವಾರ 13 ಕಿಂಟಾಲ್ ಮೆಣಸಿನಕಾಯಿ ಬಿಡಿಸಿ, ಕೆಜಿಗೆ 40 ರಂತೆ ಮಾರಾಟ ಮಾಡಿದರು. 52,000 ಆದಾಯ ಬಂತು. ಇದು ಅರಿಶಿನ ಬೆಳೆಯ ಖರ್ಚಿಗೆ ಆಗುತ್ತದೆ. ಅರಿಶಿನ ಬೆಳೆಯಲು ಎಕರೆಗೆ 30 ರಿಂದ 40,000 ವೆಚ್ಚ ಬರುತ್ತದೆ. ಅರಿಶಿನದಿಂದ ಒಟ್ಟಾರೆ ಆದಾಯ 7 ಲಕ್ಷ ಬರುತ್ತದೆ. ನೇಂದ್ರ ಬಾಳೆ ಬೆಳೆಯಲು ಎಕರೆಗೆ 50 ಸಾವಿರ ವೆಚ್ಚವಾದರೆ 1.50 ಲಕ್ಷ ಆದಾಯ ಬರುತ್ತಿದೆ. ಅರಿಶಿನ ಹಾಗೂ ಬಾಳೆಗೆ ರಾಸಾಯನಿಕ ಗೊಬ್ಬರ ಬಳಸುತ್ತಾರೆ. ಕೂಲಿಯಾಳುಗಳನ್ನು ಚೆನ್ನಾಗಿ ನೋಡಿಕೊಳ್ಳುವುದರಿಂದ ಆಳುಗಳ ಸಮಸ್ಯೆಯಾಗುತ್ತಿಲ್ಲ. ಬಾಳೆಯನ್ನು ಕೇರಳಕ್ಕೆ, ಅರಿಶಿನವನ್ನು ಈರೋಡ್ಗೆ ಮಾರಾಟ ಮಾಡುತ್ತಾರೆ. ಮೆಣಸಿನಕಾಯನ್ನು ಹುಣಸೂರಿನ ಎಪಿಎಂಸಿಯಲ್ಲಿ ಮಾರಾಟ ಮಾಡುತ್ತಾರೆ.
ನಾನು ಸರ್ಕಾರಿ ಇಲಾಖೆಗಳಿಂದ ಈವರೆಗೆ ಯಾವುದೇ ಸಹಾಯಧನ, ಸಲಹೆ ಪಡೆದಿಲ್ಲ. ಒಮ್ಮೆ ಮಣ್ಣು ಪರೀಕ್ಷೆ ಮಾಡಿಸಬೇಕು ಎಂದುಕೊಂಡಿದ್ದೇನೆ. ಇದರಿಂದ ನಮ್ಮ ಜಮೀನಿನ ಮಣ್ಣಿನಲ್ಲಿರುವ ಪೋಷಕಾಂಶಗಳ ಕೊರತೆ ತಿಳಿದುಕೊಂಡು ಅದಕ್ಕೆ ತಕ್ಕಂತೆ ಗೊಬ್ಬರ ನೀಡಿ, ಇನ್ನೂ ಹೆಚ್ಚಿನ ಇಳುವರಿ ಪಡೆಯಬಹುದು. ರೈತರು ಗೌರ್ಮೆಂಟ್ ಕೆಲ್ಸ ಮಾತ್ರ ಕೆಲ್ಸ, ವ್ಯವಸಾಯ ಕೆಲ್ಸ ಅಲ್ಲ ಅಂತಾ ತಿಳಿಬಾರ್ದು. ಇಷ್ಟಪಟ್ಟು ವ್ಯವಸಾಯ ಮಾಡಿದ್ರೆ ಖಂಡಿತಾ ನಷ್ಟವಾಗುವುದಿಲ್ಲ.
-ಸದಾಶಿವನ್, ತರೀಕಲ್
-ಅಂಶಿ ಪ್ರಸನ್ನಕುಮಾರ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

