ಎಲೆ ಗೊಬ್ಬರಕ್ಕೆ ಎಳ್ಳುನೀರು!
ಕ.ಪ್ರ.ವಾರ್ತೆ , ಮೈಸೂರು , ಆ. 20
ಕಸದಿಂದ ರಸ ತೆಗೆಯುವ ಅಭೂತಪೂರ್ವ ಯೋಜನೆಗೆ ಮಹಾನಗರ ಪಾಲಿಕೆ ಎಳ್ಳುನೀರು ಬಿಟ್ಟಿದ್ದು, ಲಕ್ಷಾಂತರ ರು. ಮೊತ್ತದ ಎಲೆಗೊಬ್ಬರ ನಾಶವಾಗುತ್ತಿದೆ.
ಪಾಲಿಕೆಯ 9 ವಲಯಗಳ ವ್ಯಾಪ್ತಿಯಲ್ಲಿಯೂ ಒಣಗಿದ ಎಲೆ ಸಂಗ್ರಹಿಸಿ ಅದರಿಂದ ಗೊಬ್ಬರ ತಯಾರಿಸುವ ಕೆಲಸಕ್ಕೆ ಪಾಲಿಕೆ ಮುಂದಾಗಿತ್ತು. ಇದಕ್ಕಾಗಿ ತರಬೇತಿ ಪಡೆದ ಸ್ತ್ರೀಶಕ್ತಿ ಸಂಘದ ಸದಸ್ಯರನ್ನು ಬಳಸಿಕೊಳ್ಳಲಾಗಿತ್ತು. ಕಲ್ಲಿನ ಚಪ್ಪಡಿಯ ಮೇಲೆ ಎಲೆಗಳನ್ನು ಹಾಸಿ, ನೀರು ಹಾಕಿ ಕೊಳೆಸಿ ತಯಾರಿಸುವ ಈ ಗೊಬ್ಬರಕ್ಕೆ ಪ್ರತಿ ಕೆಜಿಗೆ 6 ದರ ನಿಗದಿಪಡಿಸಲಾಗಿತ್ತು.
ಹೀಗೆ ತಯಾರಿಸಿದ ಗೊಬ್ಬರ ಪಾಲಿಕೆ ವ್ಯಾಪ್ತಿಯಲ್ಲಿ ಸುಮಾರು 20 ಟನ್ ಇದೆ. ಆದರೂ ಅದನ್ನು ಖಾಸಗಿಯವರಿಗೆ ಮಾರುವ ಅಥವಾ ಪಾಲಿಕೆ ವ್ಯಾಪ್ತಿಯಲ್ಲಿನ ಉದ್ಯಾನವನಗಳ ಅಭಿವೃದ್ಧಿಗೆ ಬಳಸಿಕೊಳ್ಳುವ ಗೋಜಿಗೆ ಪಾಲಿಕೆ ಅಧಿಕಾರಿಗಳು ಮುಂದಾಗಿಲ್ಲ. ಬದಲಿಗೆ ಇತ್ತೀಚೆಗೆ ಸುರಿದ ಮಳೆ ಮತ್ತು ಗಾಳಿಗೆ ಗೊಬ್ಬರ ಬಹುಪಾಲು ನಾಶವಾಗಿದೆ. ಶೂನ್ಯ ಕಸ ನಿರ್ವಹಣೆಯ ಜವಾಬ್ದಾರಿ ಹೊತ್ತಿರುವ ಪರಿಸರ ಎಂಜಿನಿಯರ್ ಸಹ ಈ ಯೋಜನೆಯನ್ನು ಸಂಪೂರ್ಣ ನಿರ್ಲಕ್ಷಿಸಿದ್ದಾರೆ. ಪಿ. ಮಣಿವಣ್ಣನ್ ಅವರು ಪಾಲಿಕೆ ಆಯುಕ್ತರಾಗಿದ್ದ ಅವಧಿಯಲ್ಲಿ ಒಂಭತ್ತು ವಲಯ ಕಚೇರಿ ತೆರೆದರು. ಇದರಿಂದಾಗಿ ಆಡಳಿತ ವಿಕೇಂದ್ರೀಕರಣಕ್ಕೆ ಅನುಕೂಲವಾಯಿತು. ಕಂದಾಯ ಪಾವತಿ, ಜನನ, ಮರಣ ಪತ್ರ, ಮನೆ ನಿರ್ಮಾಣಕ್ಕೆ ಅನುಮತಿ ಪತ್ರ ಸೇರಿದಂತೆ ಅನೇಕ ಕೆಲಸಕ್ಕೆ ಪಾಲಿಕೆಗೆ ಅಲೆಯುತ್ತಿದ್ದ ಸಾರ್ವಜನಿಕರ ಹತ್ತಿರಕ್ಕೆ ವಲಯ ಕಚೇರಿ ಕೊಂಡೊಯ್ಯಲಾಯಿತು.
ಈ ಎಲ್ಲಾ ವಲಯ ಕಚೇರಿಗೂ ಒಬ್ಬೊಬ್ಬರು ಪರಿಸರ ಎಂಜಿನಿಯರ್ ನೇಮಕ ಮಾಡಲಾಗಿದೆ. ಆದರೆ ಯಾವೊಬ್ಬ ಪರಿಸರ ಎಂಜಿನಿಯರ್ ಸಹ ಸಾರ್ವಜನಿಕರಿಗೆ ಸಿಗುವುದಿಲ್ಲ. ಎಲ್ಲಾ ಪರಿಸರ ಎಂಜಿನಿಯರ್ಗಳೂ ಮಧ್ಯಾಹ್ನ 3ರ ಬಳಿಕ ನಗರ ಪಾಲಿಕೆಯ ಕೇಂದ್ರ ಕಚೇರಿಯಲ್ಲಿ ಲಭ್ಯವಿರುತ್ತಾರೆ ಎಂದು ಪಾಲಿಕೆಯ ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ. ಆದರೆ ಇವರ ಅಗತ್ಯ ವಲಯ ಕಚೇರಿಯಲ್ಲಿ ಹೆಚ್ಚಿರುತ್ತದೆ.
ಆಯಾ ವಲಯ ಕಚೇರಿ ವ್ಯಾಪ್ತಿಯ ವಾರ್ಡ್ಗಳಲ್ಲಿ ಸ್ವಚ್ಛತೆಯ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತ ಪರಿಸರ ಎಂಜಿನಿಯರ್ಗಳು ಪಾಲಿಕೆಯಲ್ಲಿ ಇರುವುದಾದರೆ ವಲಯ ಕಚೇರಿ ಏಕೆ ಬೇಕು ಎಂದು ಪ್ರಶ್ನಿಸಿರುವ ವಿನಾಯಕನಗರ ನಿವಾಸಿ ಎಂ. ಚಿಕ್ಕವೆಂಕಟ ಅವರು ಮಾಹಿತಿ ಹಕ್ಕು ಕಾಯ್ದೆಯಡಿ ವಲಯ ಕಚೇರಿಯ ಪರಿಸರ ಎಂಜಿನಿಯರ್ಗಳ ಲಭ್ಯತೆ ಮತ್ತು ಅವರ ವಿವರ ಪಡೆದಿದ್ದಾರೆ. ಅಲ್ಲದೆ ಪಾಲಿಕೆಯ ವಲಯ ಕಚೇರಿಯಲ್ಲಿಯೆ ಪರಿಸರ ಎಂಜಿನಿಯರ್ಗಳು ಸಾರ್ವಜನಿಕರಿಗೆ ಲಭ್ಯ ಆಗಬೇಕು ಎಂದು ಆಶಯ ವ್ಯಕ್ತಪಡಿಸಿದ್ದಾರೆ.
-ಡಿ.ಎನ್. ಮಹೇಂದ್ರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

