ಮೈಸೂರು ಝೂನಲ್ಲಿ ಹುಲಿ, ಚಿರತೆ ಸಾವು
ಕ.ಪ್ರ.ವಾರ್ತೆ , ಮೈಸೂರು , ಆ. 20
ಮೈಸೂರಿನ ಚಾಮರಾಜೇಂದ್ರ ಮೃಗಾಲಯದಲ್ಲಿ ಮಂಗಳವಾರ ಒಂದು ಹುಲಿ ಮತ್ತು ಚಿರತೆ ಮೃತಪಟ್ಟಿವೆ.
ಮೃಗಾಲಯದಲ್ಲಿನ 19 ವರ್ಷದ ಮಧುಕೇಶ್ವರ ಎಂಬ ಹುಲಿ ಮತ್ತು 12 ವರ್ಷದ ಪುಷ್ಕರ ಚಿರತೆ ಮೃತಪಟ್ಟಿವೆ. ಶಿವಮೊಗ್ಗದ ತಾವರಕೊಪ್ಪದ ಟೈಗರ್ ಮತ್ತು ಲಯನ್ ಸಫಾರಿಯಿಂದ ತರಲಾಗಿದ್ದ ಮಧುಕೇಶ್ವರ ಹುಲಿಯನ್ನು ಕಳೆದ 2002ರ ಫೆಬ್ರವರಿ 2 ರಂದು ತರಲಾಗಿತ್ತು. ಕಳೆದ ಮೂರು ತಿಂಗಳಿಂದ ಟ್ಯೂಮರ್ನಿಂದ ಹುಲಿಯು ಬಳಲುತ್ತಿತ್ತು. ಕಳೆದ ಜುಲೈ 18 ರಂದು ಟ್ಯೂಮರ್ ತೆಗೆಯಲಾಗಿತ್ತು. ಆದರೆ, ಹುಲಿ ಚಿಕಿತ್ಸೆಗೆ ಸ್ಪಂದಿಸರಲಿಲ್ಲ. ಚಿರತೆಯು ಕಳೆದ ಐದು ದಿನಗಳಿಂದ ಆಹಾರ ತ್ಯಜಿಸಿತ್ತು. ಅಲ್ಲದೆ, ಚಿಕಿತ್ಸೆ ಸ್ಪಂದಿಸುತ್ತಿರಲಿಲ್ಲ.
ವಕೀಲರಿಂದ ನ್ಯಾಯಾಲಯ ಕಲಾಪಕ್ಕೆ ಬಹಿಷ್ಕಾರ
ಮೈಸೂರು: ಶಿರಸ್ತೇದಾರ ಎ.ಎಂ. ನಾಗೇಂದ್ರಪ್ರಸಾದ್ ಅವರನ್ನು ವಾಪಸ್ ಕಳುಹಿಸಲು ಆಗ್ರಹಿಸಿ ಮೈಸೂರು ವಕೀಲರ ಸಂಘದವರು ಮಂಗಳವಾರ ನ್ಯಾಯಾಲಯ ಕಲಾಪವನ್ನು ಬಹಿಷ್ಕರಿಸಿದ್ದಾರೆ.
ವಕೀಲರ ಪ್ರತಿಭಟನೆ ಹಿನ್ನೆಲೆಯಲ್ಲಿ ಆ. 6ರಂದು ನಂಜನಗೂಡು ಹಿರಿಯ ಸಿವಿಲ್ ನ್ಯಾಯಾಧೀಶರ ಶಿರಸ್ತೇದಾರ ಸ್ಥಾನಕ್ಕೆ ನಾಗೇಂದ್ರಪ್ರಸಾದ್ ಅವರನ್ನು ವಾಪಸ್ ಕಳುಹಿಸಲಾಗಿತ್ತು. ಆದರೆ, ಸೋಮವಾರದಿಂದ ಆಮೀನ ಹುದ್ದೆಗೆ ಸಂದರ್ಶನವು ಮೈಸೂರು ನ್ಯಾಯಾಲಯದ ಆವರಣದಲ್ಲಿ ನಡೆಯುತ್ತಿದ್ದು, ಇದರಲ್ಲಿ ನಾಗೇಂದ್ರಪ್ರಸಾದ್ ಪಾಲ್ಗೊಂಡಿದ್ದಾರೆ. ಆಮೀನ ಹುದ್ದೆ ನೇಮಕಾತಿಯಲ್ಲಿ ಅವ್ಯವಹಾರ ನಡೆದಿದ್ದು, ಈ ಸಂಬಂಧ ಸೂಕ್ತ ತನಿಖೆ ನಡೆಸಬೇಕು. ಅಲ್ಲಿಯವರೆಗೂ ನ್ಯಾಯಾಲಯ ಕಲಾಪಕ್ಕೆ ಹಾಜರಾಗದಿರಲು ನಿರ್ಧರಿಸಿರುವುದಾಗಿ ಮೈಸೂರು ವಕೀಲರ ಸಂಘದ ಅಧ್ಯಕ್ಷ ಸಿ. ಬಸವರಾಜು ತಿಳಿಸಿದ್ದಾರೆ.
ಆದಿಶ್ರೀ ಭೇಟಿಯಾದ ರಮ್ಯ
ಮೈಸೂರು: ಮಂಡ್ಯ ಲೋಕಸಭಾ ಉಪ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಹಾಗೂ ನಟಿ ರಮ್ಯ ಅವರು ಆದಿಚುಂಚನಗಿರಿ ಮಠದ ನಿರ್ಮಲಾನಂದ ಸ್ವಾಮೀಜಿ ಅವರನ್ನು ಮಂಗಳವಾರ ಭೇಟಿಯಾಗಿ ಆರ್ಶೀವಾದ ಪಡೆದರು. ಶಾಖಾ ಮಠದ ಸೋಮೇಶ್ವರನಾಥ ಸ್ವಾಮೀಜಿ ಇದ್ದರು.
ವಿದ್ಯಾಸಂಸ್ಥೆಗೆ ಆಯ್ಕೆ
ಮೈಸೂರು: ಡಿ. ಬನುಮಯ್ಯ ವಿದ್ಯಾಸಂಸ್ಥೆಯ ಧರ್ಮದರ್ಶಿ ಮಂಡಳಿ ಸಭೆಯಲ್ಲಿ ಡಾ.ವಿ.ಬಿ. ಜಯದೇವ ಅವರನ್ನು ಸಂಸ್ಥೆಯ ಅಧ್ಯಕ್ಷರಾಗಿ ಹಾಗೂ ಡಿ. ಬನುಮಯ್ಯ ಪಾಲಿಟೆಕ್ನಿಕ್ ಪ್ರಾಂಶುಪಾಲೆ ವಿ.ಸಿ. ಕೋಮಲಾ ಅವರನ್ನು ಧರ್ಮದರ್ಶಿಯಾಗಿ ಆಯ್ಕೆ ಮಾಡಲಾಯಿತು. ಡಾ. ಜಯದೇವ ಅವರು ಡಿ. ಬನುಮಯ್ಯ ವಾಣಿಜ್ಯ ಮತ್ತು ಕಲಾ ಕಾಲೇಜಿನ ಸಂಸ್ಥಾಪಕ ಡಿ. ಬನುಮಯ್ಯ ಅವರ ಮರಿ ಮೊಮ್ಮಗ ಪ್ರಾಂಶುಪಾಲ ಬಿ.ವಿ. ಬನುಮಯ್ಯ ಅವರ ಪುತ್ರ.
ನಾಳೆ ಕ್ಯಾನ್ಸರ್ ತಪಾಸಣೆ ಶಿಬಿರ
ಮೈಸೂರು: ವಾಣಿವಿಲಾಸ ರಸ್ತೆಯ ಪ್ರೀತಿ ಕ್ಯಾನ್ಸರ್ ಸೆಂಟರ್ನಲ್ಲಿ ಆ. 22ರಂದು ಕ್ಯಾನ್ಸರ್ ಉಚಿತ ತಪಾಸಣಾ ಶಿಬಿರ ಏರ್ಪಡಿಸಿದ್ದು, ಒಂದು ತಿಂಗಳಿಗೂ ಮೇಲ್ಪಟ್ಟು ವಾಸಿಯಾಗದ ಗಾಯ, ರಕ್ತಸ್ರಾವ, ಊತ, ಗಡಸುತನ, ನುಂಗುವಾಗಿನ ತೊಂದರೆ, ಗಂಟಲಲ್ಲಿ ಉರಿತ ಅಥವಾ ತಡೆತ, ಧ್ವನಿ ಬದಲಾವಣೆ ಇರುವ ರೋಗಿಗಳು ಶಿಬಿರದಲ್ಲಿ ಪಾಲ್ಗೊಳ್ಳಬಹುದು. ದೂ. 0821- 4259259 ಸಂಪರ್ಕಿಸಬಹುದು.
ಪ್ರಾಣಾಯಾಮ
ಮೈಸೂರು: ಕುವೆಂಪುನಗರದಲ್ಲಿರುವ ಉಪನಿಷತ್ ಯೋಗ ಕೇಂದ್ರದಲ್ಲಿ ಆ. 23 ರಿಂದ 7 ದಿನಗಳ ಪ್ರಾಣಾಯಾಮ, ಧ್ಯಾನದ ತರಗತಿ ನಡೆಲಿದ್ದು, ದೂ. 0821- 2541801 ಸಂಪರ್ಕಿಸಬಹುದು.
ಸಿಇಟಿ ತರಬೇತಿ
ಮೈಸೂರು: ಚಾಮರಾಜ ಮೊಹಲ್ಲಾದಲ್ಲಿರುವ ಜ್ಞಾನದೀಪ್ತಿ ಟ್ರಸ್ಟ್ನಲ್ಲಿ ಐಬಿಪಿಎಸ್, ರಾಷ್ಟ್ರೀಕೃತ ಬ್ಯಾಂಕುಗಳ ಪ್ರೊಬೇಷನರಿ ಮತ್ತು ಕ್ಲರ್ಕ್ ಹುದ್ದೆಗೆ ತರಬೇತಿ ನೀಡಲಿದ್ದು, ಆಸಕ್ತರು ಆ. 23 ರೊಳಗೆ ಹೆಸರು ನೋಂದಾಯಿಸಿಕೊಳ್ಳುವಂತೆ ಎಚ್.ಎನ್. ವೆಂಕಟೇಶ್ ಕೋರಿದ್ದಾರೆ. ಮೊ. 9686072224 ಸಂಪರ್ಕಿಸಬಹುದು. ಜಗನ್ಮೋಹನ ಅರಮನೆ ಬಳಿ ಇರುವ ನೇತಾಜಿ ಎಜುಕೇಷನ್ ಫೌಂಡೇಷನ್ನಲ್ಲಿ ಸಬ್ ಇನ್ಸ್ಪೆಕ್ಟರ್ ಹಾಗೂ ಪೊಲೀಸ್ ಪೇದೆ ನೇಮಕಾತಿ ಪರೀಕ್ಷೆ ತೆಗೆದುಕೊಳ್ಳುವ ಅಭ್ಯರ್ಥಿಗಳಿಗೆ ತಜ್ಞರಿಂದ 7 ದಿನಗಳ ತರಬೇತಿ ಏರ್ಪಡಿಸಿದ್ದು, ಮೊ. 8747973808 ಸಂಪರ್ಕಿಸಬಹುದು.
ಛಾಯಾಗ್ರಾಹಕ ಸಂಘಕ್ಕೆ ಆಯ್ಕೆ
ಎಚ್.ಡಿ. ಕೋಟೆ: ತಾಲೂಕು ಛಾಯಾಗ್ರಾಹಕ ಸಂಘದ ಪದಾಧಿಕಾರಿಗಳಾಗಿ ಕೆ.ಆರ್. ನಂದಕುಮಾರ್ ಶೈಲಿ (ಅಧ್ಯಕ್ಷರು), ಕೆ. ಶಂಕರ್ (ಉಪಾಧ್ಯಕ್ಷ), ಸ್ವಾಮಿನಾಯಕ (ಪ್ರಧಾನ ಕಾರ್ಯದರ್ಶಿ), ನಿಂಗರಾಜು (ಗೌರವಾಧ್ಯಕ್ಷ), ಸುರೇಶ್ (ಖಜಾಂಚಿ), ಕೆಂಡಗಣ್ಣಾರಾಧ್ಯ, ನಾಗರಾಜು, ತ್ರೀಶಂಭು, ರಾಜೇಶ, ಗುರುಸ್ವಾಮಿ, ಶಿವಣ್ಣ (ನಿರ್ದೇಶಕರು) ಅವಿರೋಧ ಆಯ್ಕೆಯಾಗಿದ್ದಾರೆ.
ಕಾಂಗ್ರೆಸ್ ಬೆಂಬಲಿಸಿ
ಭೇರ್ಯ: ರಾಜ್ಯದಲ್ಲಿ ಉತ್ತಮ ಆಡಳಿತ ನೀಡುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರಕ್ಕೆ ಬೆನ್ನೆಲುಬಾಗಿ ನಿಲ್ಲಲು, ಜಿಲ್ಲೆಯ ವಿಧಾನ ಪರಿಷತ್ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಧರ್ಮಸೇನ ಅವರಿಗೆ ಪಂಚಾಯಿತಿ ಸದಸ್ಯರು ಮತ ನೀಡುವಂತೆ ತಾಲೂಕು ಹಿಂದುಳಿದ ವರ್ಗಗಳ ಅಧ್ಯಕ್ಷ ಗಂಧನಹಳ್ಳಿ ಹೇಮಂತ್ ಮನವಿ ಮಾಡಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಧರ್ಮಸೇನ ಅವರು ಸಭ್ಯ ರಾಜಕೀಯ ಕುಟುಂಬದಿಂದ ಬಂದಿರುವ ವ್ಯಕ್ತಿಯಾಗಿದ್ದು, ಅವರ ತಂದೆಯು ಕೂಡ ಸಚಿವರಾಗಿ ಅಭಿವೃದ್ಧಿ ಕೆಲಸ ಮಾಡಿದ್ದು, ಅದರಿಂದ ನಗರಪಾಲಿಕೆ ಮತ್ತು ಪುರಸಭಾ ಸದಸ್ಯರು ಜಿಪಂ ಮತ್ತು ತಾಪಂ ಸದಸ್ಯರು ಹಾಗೂ ಗ್ರಾಪಂ ಸದಸ್ಯರು ಮತ ನೀಡಿ, ಜಿಲ್ಲೆಯ ಅಭಿವೃದ್ಧಿಗೆ ಸಹಕಾರಿಯಾಗುವಂತೆ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು. ತಾಲೂಕು ಹಿಂದುಳಿದ ವರ್ಗಗಳ ಕಾರ್ಯದರ್ಶಿ ಅರುಣ್ಕುಮಾರ್, ಕೆಂಪರಾಜು, ಜಿ.ಎನ್. ಮಂಜುನಾಥ್, ಲೋಹಿತ್ ಇದ್ದರು.
ಬೃಹತ್ ರಾಖಿ...
ಮೈಸೂರು ಇಲ್ಲಿನ ಕುವೆಂಪುನಗರದಲ್ಲಿರುವ ಕ್ವಿನ್ಸ್ ಸ್ಕೂಲ್ ಆಫ್ ಡಿಸೈನ್ ವತಿಯಿಂದ ರಕ್ಷಾಬಂಧನ ಅಂಗವಾಗಿ 44 ಅಡಿ ಎತ್ತರದ ಹಾಗೂ 10 ಅಡಿ ಉದ್ದದ ಬೃಹತ್ ರಾಖಿ ತಯಾರಿಸಲಾಗಿತ್ತು. ಸಂಸ್ಥೆಯ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರು ಸಿದ್ಧಪಡಿಸಿದ್ದ ಈ ಬೃಹತ್ ರಾಖಿಯು ಇಲ್ಲಿನ ಜಯಲಕ್ಷ್ಮೀಪುರಂ ಬಿ.ಎಂ. ಹಾಬಿಟಾಟ್ ಮಾಲ್ನಲ್ಲಿ ಪ್ರದರ್ಶಿಸಿದ್ದು, ಸಾರ್ವಜನಿಕರ ಗಮನ ಸೆಳೆಯಿತು.
ನಾಳೆ 368 ಕೇಂದ್ರಗಳಲ್ಲಿ ಮತ
ಮೈಸೂರು: ಮೈಸೂರು: ಮೈಸೂರು- ಚಾಮರಾಜನಗರ ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿಗೆ ನಡೆಯುವ ಉಪ ಚುನಾವಣೆಯಲ್ಲಿ ಈ ಎರಡೂ ಜಿಲ್ಲೆಗಳ 368 ಗ್ರಾಪಂ ಕೇಂದ್ರಗಳಲ್ಲಿ ಆ. 22ರಂದು ಮತದಾನ ನಡೆಯಲಿದೆ. ಹಾಗೆ ಪಿರಿಯಾಪಟ್ಟಣದ ತಾಪಂ ಕಚೇರಿ, ಕೆ.ಆರ್. ನಗರದ ತಾಲೂಕು ಕಚೇರಿ, ಹುಣಸೂರಿನ ತಾಲೂಕು ಕಚೇರಿ, ಮೈಸೂರು ನಗರದ ಕೃಷಿ ಮಾರುಕಟ್ಟೆ ಅಧ್ಯಯನ ಸಂಸ್ಥೆ, ಎಚ್.ಡಿ. ಕೋಟೆ, ನಂಡನಗೂಡು, ಟಿ. ನರಸೀಪುರ, ಗುಂಡ್ಲುಪೇಟೆ, ಚಾಮರಾಜನಗರ, ಯಳಂದೂರು, ಕೊಳ್ಳೇಗಾಲ ತಾಲೂಕುಗಳ ತಾಲೂಕು ಕಚೇರಿಗಳಲ್ಲಿ ಮಸ್ಟರಿಂಗ್ ಕೇಂದ್ರಗಳನ್ನು ತೆರೆಯಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

