ಮೈಸೂರು

ದಸರಾದಲ್ಲಿ ಹಾಡಲು ಕೈದಿಗಳಿಗೆ ಅವಕಾಶ ಸಿಕ್ಕಿತೇ?

Published On :

ಕ.ಪ್ರ.ವಾರ್ತೆ , ಮೈಸೂರು , ಆ. 21
ವಿಶ್ವವಿಖ್ಯಾತ ದಸರಾ ಮಹೋತ್ಸವದಲ್ಲಿ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರತಿವರ್ಷ ಆಯೋಜಿಸಲಾಗುತ್ತಿದೆ. ಈ ಬಾರಿಯ ದಸರಾ ಮಹೋತ್ಸವದಲ್ಲಿ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ದಸರಾ ಮಹೋತ್ಸವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನೀಡಲು ಜೈಲು ಹಕ್ಕಿಗಳು ಕಾತರವಾಗಿವೆ. ಹೌದು, ಮೈಸೂರು ಕೇಂದ್ರ ಕಾರಾಗೃಹದಲ್ಲಿ ಆರ್ಕೆಸ್ಟ್ರಾ ತಂಡವೊಂದನ್ನು ರಚಿಸಲಾಗಿದೆ.
ಈ ತಂಡವು ದಸರಾ ಹಾಗೂ ಇನ್ನಿತರ ಸರ್ಕಾರಿ ಕಾರ್ಯಕ್ರಮಗಳಲ್ಲಿ ತಮ್ಮ ಪ್ರತಿಭೆ ಅನಾವರಣ ಅವಕಾಶಕ್ಕಾಗಿ ಎದುರು ನೋಡುತ್ತಿದೆ.
ಆರ್ಕೆಸ್ಟ್ರಾ ತಂಡ: ಕಾರಾಗೃಹ ಇಲಾಖೆಯು ಬಂಧಿಗಳ ಸುಧಾರಣೆ ಹಾಗೂ ಮನಃಪರಿವರ್ತನೆಗಾಗಿ ಯೋಗ, ವೃತ್ತಿಪರ ಕೌಶಲಾಭಿವೃದ್ಧಿ ಮತ್ತಿತರ ತರಬೇತಿ ನೀಡುತ್ತಿದೆ. ಸುಧಾರಣೆ ಹಾಗೂ ಮನಃಪರಿವರ್ತನೆಯ ಹಿನ್ನೆಲೆಯಲ್ಲಿ ನಾಲ್ಕು ಗೋಡೆಗಳೊಳಗೆ ಬಂಧಿಯಾಗಿರುವ ಬಂಧಿಗಳ ಸಾಂಸ್ಕೃತಿಕ ಪ್ರತಿಭೆ ಹೊರಗೆ ಪಸರಿಸುವಂತೆ ಪ್ರಯತ್ನ ಮಾಡುತ್ತಿದೆ. ಇದರ ಭಾಗವಾಗಿ ಕಾರಾಗೃಹಗಳ ಇಲಾಖೆಯ ಇತಿಹಾಸದಲ್ಲಿಯೇ ಪ್ರಪ್ರಥಮ ಬಾರಿಗೆ ಮೈಸೂರು ಕೇಂದ್ರ ಕಾರಾಗೃಹದಲ್ಲಿ ವಿನೂತನ ರಸಮಯ ಸಂಗೀತದ ಪರಿವರ್ತನಾ ಆರ್ಕೆಸ್ಟ್ರಾ ತಂಡ ರಚಿಸಲಾಗಿದೆ.
ಈ ಮೂಲಕ ಕಾರಾಗೃಹದ ನಿವಾಸಿಗಳನ್ನು ಬಿಡುಗಡೆಯ ನಂತರ ಸಮಾಜದ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಅವಿರತವಾಗಿ ಶ್ರಮಿಸಲಾಗುತ್ತಿದೆ. ಬಂಧಿಗಳ ಕಲಾ ಪತ್ರಿಭೆಯನ್ನು ತೆರೆದಿಡುವ ನಿಟ್ಟಿನಲ್ಲಿ ಸುಪ್ತವಾಗಿದ್ದ ಕಲೆ ಗುರುತಿಸಿ ಸಂಗೀತ ಕಲೆಯಲ್ಲಿ ಹೆಚ್ಚಿನ ಆಸಕ್ತಿಯುಳ್ಳ ಹಲವು ಪ್ರತಿಭಾವಂತ ಬಂಧಿ ನಿವಾಸಿಗಳಿಗೆ, ಹವ್ಯಾಸಿ ಹಾಡುಗಾರರಿಗೆ, ದಿನನಿತ್ಯ ನುರಿತ ಸಂಗೀತ ಶಿಕ್ಷಕರಿಂದ ಸಂಗೀತದ ತಾಲೀಮು ನೀಡಲಾಗುತ್ತಿದೆ.
ಜಾನಪದ ಗೀತೆ, ಭಾವಗೀತೆ, ಮಧುರವಾದ ಕನ್ನಡ ಚಿತ್ರಗೀತೆಗಳು ತಂಡದ ಪ್ರಮುಖ ಹೈಲೈಟ್‌ಗಳು. ಸರ್ಕಾರಿ ಸ್ವಾಮ್ಯದ ಈ ತಂಡಕ್ಕೆ ಕಾರಾಗೃಹ ಇಲಾಖೆ 1.43 ಲಕ್ಷ ವೆಚ್ಚದಲ್ಲಿ ಡ್ರಮ್ಸ್,ಕೀಬೋರ್ಡ್, ರಿದಂ ಪ್ಯಾಡ್, ತಬಲ, ಕಾಂಗೋ ಇನ್ನಿತರ ಸಂಗೀತ ಸಾಧನ ಹಾಗೂ ವಾದ್ಯ ಪರಿಕರ ಖರೀದಿಸಿ ಒದಗಿಸಲಾಗಿದೆ.
ಪ್ರತಿಭಾವಂತರು: ಪರಿವರ್ತನಾ ಆರ್ಕೆಸ್ಟ್ರಾ ತಂಡದಲ್ಲಿ ಜಾನಪದ ಸಂಗೀತ, ವಾದ್ಯ ಸಂಗೀತ ಮತ್ತು ಮಿಮಿಕ್ರಿ ಕಲೆಯಲ್ಲಿ ಪರಿಣಿತರಾಗಿರುವ ಪ್ರತಿಭಾವಂತ ಬಂಧಿಗಳಿದ್ದಾರೆ.
ಪರಿವರ್ತನಾ ಆರ್ಕೆಸ್ಟ್ರಾ ತಂಡವು ಈಗಾಗಲೇ ಸಣ್ಣ- ಪುಟ್ಟ ಕಾರ್ಯಕ್ರಮದಲ್ಲಿ ರಸಮಯ ಸಂಗೀತದ ಕಾರ್ಯಕ್ರಮ ನೀಡಿದೆ.
ಬಂಧಿಗಳ ಪ್ರತಿಭೆಯನ್ನು ಅನಾವರಣಗೊಳಿಸುವ ವಿನೂತನ ಪ್ರಯತ್ನಕ್ಕೆ ಸಾರ್ವಜನಿಕ ಸಭೆ, ಸಮಾರಂಭ, ಸರ್ಕಾರಿ ಸಮಾರಂಭಗಳಲ್ಲಿ ಸಂಗೀತ ಕಾರ್ಯಕ್ರಮ ನೀಡಲು ಅವಕಾಶ ಕಲ್ಪಿಸುವುದರೊಂದಿಗೆ ಜೈಲು ಹಕ್ಕಿಗಳ ರಂಗ ಪ್ರತಿಭೆಗೆ ಪ್ರೋತ್ಸಾಹ ನೀಡುವಂತೆ ಕೇಂದ್ರ ಕಾರಾಗೃಹ ಮುಖ್ಯ ಅಧೀಕ್ಷಕ ಎಂ.ಎನ್. ಜಯಸಿಂಹ ಮನವಿ ಮಾಡಿದ್ದಾರೆ.

-ಬಿ.ಶೇಖರ್ ಗೋಪಿನಾಥಂ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.