ಮರಳು ಲಾರಿ ಮಾಲೀಕರ ಮುಷ್ಕರ ಅಬಾಧಿತ
ಕ.ಪ್ರ.ವಾರ್ತೆ , ಮೈಸೂರು , ಆ. 23
ಮರಳು ಲಾರಿ ಮುಷ್ಕರ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ಶುಕ್ರವಾರ ಕರೆದಿದ್ದ ಮರಳು ಲಾರಿ ಮಾಲೀಕರ ಸಂಘದ ಪದಾಧಿಕಾರಿಗಳ ಸಭೆಯು ವಿಫಲವಾಗಿದೆ.
ಜಿಲ್ಲಾ ಹಿರಿಯ ಭೂ ವಿಜ್ಞಾನಿ ಅಧ್ಯಕ್ಷತೆಯಲ್ಲಿ ಮರಳು ಲಾರಿಗಳ ವಿವಿಧ ಸಂಘಗಳ ಪದಾಧಿಕಾರಿಗಳೊಂದಿಗೆ ಚರ್ಚೆಯಲ್ಲಿ ಮರಳು ಸಾಗಾಣಿಕೆ ದರದಲ್ಲಿ ಈಗಿನ 3,850 ರಿಂದ 4,700 ಹೆಚ್ಚಳಕ್ಕೆ ಲಾರಿ ಮಾಲೀಕರು ಒಪ್ಪಿಗೆ ಸೂಚಿಸಿದರು.
ಹಾಲಿ ಇರುವ ವ್ಯವಸ್ಥೆಯಂತೆಯೇ ಮರಳು ಪರವಾನಗಿ ಇರುವ ವಿತರಣೆ ನೋಂದಾಯಿತ ಲಾರಿಗೆ ಟ್ಯಾಗ್ ಮಾಡಿ ನೀಡುವುದು. ಸಾರ್ವಜನಿಕರಿಂದ ಲಾರಿ ವ್ಯವಸ್ಥೆಯ ಬಗ್ಗೆ ಉತ್ತಮ ಅಭಿಪ್ರಾಯ ಕಂಡುಬಂದಲ್ಲಿ ನೇರವಾಗಿ ಪರವಾನಗಿ ವಿತರಣೆ ಮುಂದಿನ ದಿನಗಳಲ್ಲಿ ಪರಿಗಣಿಸಲಾಗುವುದು. ಮರಳು ಪೂರೈಕೆಯು ಪೂರ್ಣ ಪ್ರಮಾಣ ತಲುಪಿದ ನಂತರ ಅಗತ್ಯಕ್ಕೆ ಅನುಗುಣವಾಗಿ ಮರಳು ಬೇಡಿಕೆಯನ್ನು ಪೂರೈಸುವುದಾಗಿ ಅಧಿಕಾರಿಗಳ ಭರವಸೆ ನೀಡಿದರು.
ಆ.26 ರಿಂದ ಸಾರ್ವಜನಿಕರಿಗೆ ಮರಳು ಪೂರೈಕೆ ಲಭ್ಯವಿರುವ ಸಂಪನ್ಮೂಲ ಬಳಸಿಕೊಂಡು ಪ್ರಾರಂಭಿಸುವುದು ಮೇಲಿನ ಸಕಾರಾತ್ಮಕ ಅಂಶ ಪರಿಗಣಿಸಿ ಮರಳು ಲಾರಿ ಮಾಲೀಕರ ಮುಷ್ಕರ ಹಿಂತೆಗೆದುಕೊಳ್ಳುವಂತೆ ಅಧಿಕಾರಿಗಳು ಕೋರಿದರು.
ಈ ಸಭೆಯಲ್ಲಿ ಸಿಟಿ ಲಾರಿ ಮಾಲೀಕರ ಸಂಘ, ಟಿ. ನರಸೀಪುರ ಮರಳು ಲಾರಿ ಮಾಲೀಕರ ಸಂಘ, ಗ್ರಾಮಾಂತರ ಮರಳು ಲಾರಿ ಮಾಲೀಕರ ಸಂಘ ಹಾಗೂ ಇಲಕಲ್ ಮರಳು ಲಾರಿ ಮಾಲೀಕರ ಸಂಘಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ಮುಷ್ಕರ ಮುಂದುವರಿಕೆ: ರಹದಾರಿ ಹೊಂದಿರುವ ಲಾರಿಗಳಿಗೆ ಮರಳು ಪರ್ಮಿಟ್ ನೀಡುವುದು, ಪ್ರತಿ ಲಾರಿಗೂ ದಿನಕ್ಕೊಂದು ಪರ್ಮಿಟ್ ನೀಡುವುದು ಹಾಗೂ ಪೊಲೀಸರ ಕಿರುಕುಳ ತಪ್ಪಿಸುವ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳದ ಹಿನ್ನೆಲೆಯಲ್ಲಿ ಮುಷ್ಕರ ಮುಂದುವರಿಸುವುದಾಗಿ ಮೈಸೂರು ನಗರ ಸ್ಥಳೀಯ ಲಾರಿ ಮಾಲೀಕರ ಸಂಘದ ಅಧ್ಯಕ್ಷ ಬಿ. ರೇವಣ್ಣ ತಿಳಿಸಿದ್ದಾರೆ. ಇದರಿಂದಾಗಿ ಮೈಸೂರು ನಗರ ಸ್ಥಳೀಯ ಲಾರಿ ಮಾಲೀಕರ ಸಂಘದವರು ಹಮ್ಮಿಕೊಂಡಿರುವ ಲಾರಿ ಮುಷ್ಕರವು 4ನೇ ದಿನವಾದ ಶುಕ್ರವಾರ ಸಹ ಮುಂದುವರಿಯಿತು.
4ನೇ ದಿನಕ್ಕೆ ಕಲಾಪಕ್ಕೆ ಬಹಿಷ್ಕಾರ
ಮೈಸೂರು: ಶಿರಸ್ತೇದಾರ ಎ.ಎಂ. ನಾಗೇಂದ್ರ ಪ್ರಸಾದ್ ಅವರನ್ನು ಸ್ವಸ್ಥಾನಕ್ಕೆ ವಾಪಸ್ ಕಳುಹಿಸಲು ಒತ್ತಾಯಿಸಿ ಮೈಸೂರು ವಕೀಲರ ಸಂಘದವರು 4ನೇ ದಿನವಾದ ಶುಕ್ರವಾರ ಸಹ ನ್ಯಾಯಾಲಯ ಕಲಾಪ ಬಹಿಷ್ಕರಿಸಿದ್ದಾರೆ. ನಂಜನಗೂಡು ಹಿರಿಯ ಸಿವಿಲ್ ನ್ಯಾಯಾಧೀಶರ ಶಿರಸ್ತೇದಾರ ಸ್ಥಾನಕ್ಕೆ ನಾಗೇಂದ್ರಪ್ರಸಾದ್ ಅವರನ್ನು ವಾಪಸ್ ಕಳುಹಿಸಬೇಕು. ಆಮೀನ ಹುದ್ದೆ ನೇಮಕಾತಿಯಲ್ಲಿ ಆಗಿರುವ ಅವ್ಯವಹಾರ ತನಿಖೆ ಆದೇಶಿಸಬೇಕು. ಅಲ್ಲಿಯವರೆಗೂ ನ್ಯಾಯಾಲಯ ಕಲಾಪಕ್ಕೆ ಹಾಜರಾಗುವುದಿಲ್ಲ ಎಂದು ಮೈಸೂರು ವಕೀಲರ ಸಂಘದ ಅಧ್ಯಕ್ಷ ಸಿ. ಬಸವರಾಜು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

