ಮೈಸೂರು

ಹೂವಿನಿಂದ ಕೃಷಿಕನ ಬಾಳು ಸುಗಂಧ

Published On :

ಕ.ಪ್ರ.ವಾರ್ತೆ ,  ಮೈಸೂರು ,  ಆ. 26
ಹೂವಿನಿಂದ ನಾರು ಸ್ವರ್ಗಕ್ಕೆ ಎಂಬ ಮಾತಿದೆ. ಆದರೆ, ಹೂವು ಬೆಳೆದು ನೂರಾರು ರೈತರು ಬದುಕು ಕಟ್ಟಿಕೊಂಡಿದ್ದಾರೆ. ಅಂಥವರಲ್ಲಿ ಟಿ. ನರಸೀಪುರ ತಾಲೂಕು ಸೋಸಲೆ ಹೋಬಳಿ ಮುತ್ತಲವಾಡಿ ಕೆಬ್ಬೇಹುಂಡಿಯ ಸಿ. ನಟರಾಜ್ ಕೂಡ ಒಬ್ಬರು.
ಟಿ. ನರಸೀಪುರ ತಾಲೂಕಿನ ಮುತ್ತಲವಾಡಿ ಕೆಬ್ಬೇಹುಂಡಿ, ಮೇಗಳಕೊಪ್ಪಲು, ಉಳುಕನಹುಂಡಿ, ಎಸ್. ಮೇಗಡಹಳ್ಳಿ, ಬೆನಕನಹಳ್ಳಿ ಸುತ್ತಮುತ್ತ 100ಕ್ಕೂ ಹೆಚ್ಚು ಎಕರೆಯಲ್ಲಿ ರೈತರು ಸುಗಂಧರಾಜ ಬೆಳೆಯುತ್ತಿದ್ದಾರೆ. ಚಿಕ್ಕಮಾದೇಗೌಡ ಎಂಬವರ ಮಗನಾದ ನಟರಾಜುಗೆ ಮೂರೂವರೆ ಎಕರೆ ಜಮೀನಿದೆ. ಕೆಆರ್‌ಎಸ್ ಜಲಾಶಯದಿಂದ ರಾಮಸ್ವಾಮಿ ನಾಲೆಯ ಮೂಲಕ ನೀರಾವರಿ ಸೌಲಭ್ಯವಿದೆ. ಈ ಪೈಕಿ ಒಂದುಕಾಲು ಎಕರೆಯಲ್ಲಿ ಕಳೆದ ಮೂರು ದಶಕಗಳಿಂದಲೂ ಸುಗಂಧರಾಜ ಹೂವು ಬೆಳೆದು, ಬಾಳನ್ನು ಬೆಳಗಿಸಿಕೊಂಡಿದ್ದಾರೆ. ಉಳಿದ ಜಮೀನಿನಲ್ಲಿ ಬತ್ತ ಬೆಳೆಯುತ್ತಾರೆ. 20 ಕುಂಟೆ ತೋಟದಲ್ಲಿ 23 ತೆಂಗಿನ ಮರಗಳಿವೆ.
ಮಾರ್ಚ್- ಏಪ್ರಿಲ್ ತಿಂಗಳಲ್ಲಿ ಸುಗಂಧರಾಜ ನಾಟಿ ಮಾಡುತ್ತಾರೆ. ಮೂರು ತಿಂಗಳಿಗೆ ಹೂವು ಬರಲಾರಂಭಿಸುತ್ತವೆ. ಅಕ್ಟೋಬರ್- ನವೆಂಬರ್ ವೇಳೆಗೆ ಹೆಚ್ಚು ಹೂವು ಸಿಗುತ್ತವೆ. 1 ಕುಂಟೆಗೆ 3 ಕೆಜಿಯಂತೆ ದಿನಕ್ಕೆ 150 ಕೆಜಿಯಷ್ಟು ಹೂವು ಸಿಗುತ್ತವೆ. ಪ್ರತಿ ಕೆಜಿ 115 ರಿಂದ 120ಕ್ಕೆ ಮಾರಾಟವಾಗುತ್ತದೆ. ಹೆಚ್ಚು ಹೂವಿನ ಸಮಯದಲ್ಲಿ ಮಾಸಿಕ ಕಡಿಮೆ ಎಂದರೂ 48,000 ಸಿಗುತ್ತದೆ. ನಟರಾಜು ಅವರಿಗೆ ಒಂದುಕಾಲು ಎಕರೆಯಲ್ಲಿ ಹೂವು ಬೆಳೆಯಲು 80,000 ವೆಚ್ಚವಾಗುತ್ತದೆ. ಯಾವುದೇ ರೋಗ ಇಲ್ಲದೆ ಸರಿಯಾದ ದರ ಸಿಕ್ಕರೆ ವಾರ್ಷಿಕ 3 ಲಕ್ಷ  ಆದಾಯ ಬರುತ್ತದೆ. ಈ ಆದಾಯದಿಂದಲೇ ಕುಟುಂಬ ನಿರ್ವಹಣೆಯೂ ನಡೆಯುತ್ತಿದೆ. ಅಲ್ಲದೆ, ತಮ್ಮ ಮಕ್ಕಳನ್ನು ಓದಿಸುತ್ತಿದ್ದಾರೆ.
ಸಹಾಯಧನ: ನಟರಾಜು ಅವರು ಮೈಸೂರಿನ ದೇವರಾಜ ಮಾರುಕಟ್ಟೆಯಲ್ಲಿರುವ ಪಾಲಿಕೆ ಮಾಜಿ ಸದಸ್ಯ ಎಂ. ನಾರಾಯಣಪ್ಪ ಅವರ ಹೂವಿನ ಅಂಗಡಿಗೆ ಸುಂಗಂಧರಾಜ ಪೂರೈಸುತ್ತಾರೆ. ತೋಟಗಾರಿಕೆ ಇಲಾಖೆಯು ಮೂರು ಬಾರಿ ಸಹಾಯಧನ ನೀಡಿದೆ.
ಕಳೆದ ವರ್ಷ 80 ಕ್ವಿಂಟಲ್ ಬತ್ತ ಬೆಳೆದಿದ್ದರು. ಪ್ರತಿ ಕ್ವಿಂಟಲ್ 1,550 ಗಳಂತೆ ಮಾರಾಟವಾಯಿತು. 1.20 ಲಕ್ಷ ಆದಾಯ ಬಂದಿದೆ. ಬತ್ತ ಬೆಳೆಯಲು 45,000 ವೆಚ್ಚವಾಗಿದೆ. ಅಲ್ಲದೇ 20 ಕುಂಟೆಯಲ್ಲಿ 6444 ಎಂಬ ಹೈಬ್ರಿಡ್ ತಳಿ ಹಾಕಿದ್ದು, 32 ಚೀಲ ಇಳುವರಿ ಬಂದಿತ್ತು. ಈ ಬಾರಿ ಕೆಆರ್‌ಎಸ್- 4 ಎಂಬ ತಳಿ ಹಾಕಿದ್ದು, 45 ಚೀಲ ಇಳುವರಿ ಬರುವ ಸಾಧ್ಯತೆ ಇದೆ.
ಔಷಧಿ ತಯಾರಿಸಿ ಬಳಕೆ
ತೋಟಗಾರಿಕೆ ಬೆಳೆಗಳಿಗೆ ಅದರಲ್ಲೂ ಸುಗಂಧರಾಜ ಹೂವು ಬೆಳೆಯಲು ರಾಸಾಯನಿಕ ಗೊಬ್ಬರ, ಕೀಟನಾಶಕ ಬಳಸುವುದು ಮಾಮೂಲು. ಆದರೆ, ನಟರಾಜು ಸುಗಂಧರಾಜ ಬೆಳೆಯಲು ಹೆಚ್ಚಾಗಿ ಅಗ್ರಿ ಗೋಲ್ಡ್, ಬಯೋ ಗೋಲ್ಡ್ ಮೊದಲಾದ ಸಾವಯವ ಗೊಬ್ಬರ, ಎರೆಹುಳ ಗೊಬ್ಬರ ಬಳಸುತ್ತಾರೆ. ರಾಸಾಯನಿಕ ಕ್ರಿಮಿ ಹಾಗೂ ಕೀಟನಾಶಕದ ಬದಲು ಬೆಳ್ಳುಳ್ಳಿ, ಹಸಿಶುಂಠಿ, ಬೇವಿನ ಎಲೆ, ಹೊಗೆಸೊಪ್ಪು, ನಾಡಹಸುವಿನ ಗಂಜಲ, ಹಾಲು ಹಾಕಿ ಬಿಸಿನೀರಿನಲ್ಲಿ ಬೇಯಿಸಿ, ಒಂದು ವಾರ ಕೊಳೆಸುತ್ತಾರೆ. ನಂತರ ತಿಂಗಳಿಗೊಮ್ಮೆ ಹೂವಿನಗಿಡಗಳಿಗೆ ಹಾಕುತ್ತಾರೆ. ಇದರಿಂದ ಗಿಡಗಳಿಗೆ ಯಾವುದೇ ಕೀಟ ಬಾಧೆ ಕಂಡು ಬರುವುದಿಲ್ಲ. ಅದೇ ರೀತಿ ಕಳೆನಾಶಕವನ್ನು ಕೂಡ ಇವರು ಬಳಸುವುದಿಲ್ಲ. ಬದಲಿಗೆ ಕಳಾರಿ ಬಳಸಿ, ಕೀಳುತ್ತಾರೆ. ಮನೆಯಲ್ಲಿ 2 ನಾಡ ಹಸುಗಳು, ಒಂದು ಜೊತೆ ಎತ್ತುಗಳಿದ್ದು, ಅವುಗಳ ಸಗಣಿಯನ್ನು ಜಮೀನಿಗೆ ಕೊಟ್ಟಿಗೆ ಗೊಬ್ಬರವಾಗಿ ಬಳಸುತ್ತಾರೆ.
ರೈತರು ಲಾಸು, ಲಾಸು ಅನ್ನುವ ಬದಲು ಕಾಲಕ್ಕೆ ತಕ್ಕಂತೆ ಬದಲಾಗಬೇಕು. ಕೈತುಂಬಾ ಕಾಸು ಸಿಗುವ ಬೆಳೆ ಬೆಳೆಯಬೇಕು. ಮಕ್ಕಳನ್ನು ನೋಡಿಕೊಳ್ಳುವಂತೆ ಜಮೀನಿನ ಮೇಲೆ ನಿಗಾ ವಹಿಸಬೇಕು. ಆಸಕ್ತಿ ವಹಿಸಿ, ಕ್ರಮಬದ್ಧವಾಗಿ ವ್ಯವಸಾಯ ಮಾಡಬೇಕು. ಈ ಈ ರೀತಿ ಮಾಡಿದರೆ ಲಾಸಾಗುವ ಪ್ರಶ್ನೆಯೇ ಬರಲ್ಲ.
   ಸಿ. ನಟರಾಜು, ಎಂ. ಕೆಬ್ಬೇಹುಂಡಿ

-ಅಂಶಿ ಪ್ರಸನ್ನಕುಮಾರ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.