ಮೈಸೂರು ದೊಡ್ಡಕೆರೆ ಜಾಗ ವಿವಾದ: ಸಿಐಡಿ ತನಿಖೆಗೆ ಹೈಕೋರ್ಟ್ ಆದೇಶ
ಕ.ಪ್ರ.ವಾರ್ತೆ , ಬೆಂಗಳೂರು , ಜು. 1
ಮಹಾರಾಜರ ಅವಧಿಯಲ್ಲಿ ಮಂಜೂರಾಗಿದೆ ಎನ್ನಲಾದ ಮೈಸೂರಿನ ದೊಡ್ಡಕೆರೆ ಮೈದಾನದ ಜಾಗಕ್ಕೆ ಸಂಬಂಧಿಸಿದ ಜಿಪಿಎ (ಜನರಲ್ ಪವರ್ ಆಫ್ ಆಟಾರ್ನಿ) ನೈಜತೆ ಕುರಿತ ವಿವಾದವನ್ನು ಸಿಐಡಿ ತನಿಖೆಗೆ ಒಪ್ಪಿಸಿ ಹೈಕೋರ್ಟ್ ಆದೇಶಿಸಿದೆ.
ಜಾಗ ಮಂಜೂರಾತಿ ಹಾಗೂ ಜಿಪಿಎ ದಾಖಲೆಗಳು ಅನುಮಾನಾಸ್ಪದವಾಗಿರುವುದರಿಂದ ಅವುಗಳ ಸತ್ಯಾಸತ್ಯತೆ ಕುರಿತು ತನಿಖೆ ನಡೆಸಿ ಆಗಸ್ಟ್ 5ರೊಳಗೆ ವರದಿ ಸಲ್ಲಿಸುವಂತೆ ಸಿಐಡಿಗೆ ನ್ಯಾ.ಹುಲುವಾಡಿ ಜಿ.ರಮೇಶ್ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದೆ. ಮೈಸೂರು ಮಹಾರಾಜರು ತಮಗೆ ಜಮೀನು ಮಂಜೂರು ಮಾಡಿದ್ದು, ಪವರ್ ಆಫ್ ಅಟಾರ್ನಿ ನೀಡಿದ್ದಾರೆ ಎಂದು ದೊಡ್ಡಕೆರೆ ಗೃಹ ನಿರ್ಮಾಣ ಸಂಘ ಸಲ್ಲಿಸಿರುವ ದಾಖಲೆಗಳು ಅನುಮಾನಸ್ಪದವಾಗಿವೆ. ಆದ್ದರಿಂದ ಜಿಪಿಎ ಪ್ರತಿಯಲ್ಲಿನ ಸಹಿ ಮೈಸೂರು ಮಹಾರಾಜರದ್ದೇ ಇಲ್ಲವೇ ನಕಲು ಮಾಡಲಾಗಿದೆಯೇ ಎಂಬುದರ ಕುರಿತು ಪರಿಶೀಲನೆ ನಡೆಸುವ ಅಗತ್ಯವಿದೆ ಎಂದು ಪೀಠ ಅಭಿಪ್ರಾಯಪಟ್ಟಿದೆ.
ವಿವಾದವೇನು?
ಮೈಸೂರು ದೊಡ್ಡಕೆರೆಯಲ್ಲಿನ 11.38 ಎಕರೆ ಜಮೀನನ್ನು ತಮಗೆ 1973ರಲ್ಲೇ ಮೈಸೂರು ಮಹಾರಾಜರು ಮಂಜೂರು ಮಾಡಿದ್ದಾರೆ. ಈ ಸಂಬಂಧ ಜಿಪಿಎಗೆ ಸಹಿ ಹಾಕಿದ್ದಾರೆ. ಆದರೆ, ಇದೀಗ ಅದು ಸರ್ಕಾರಿ ಜಾಗ ಎಂದು ಸರ್ಕಾರ ಕಾಮಗಾರಿಗಳಿಗೆ ಅಡ್ಡಿಯುಂಟು ಮಾಡುತ್ತಿದೆ ಎಂದು ಆಕ್ಷೇಪಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಆದರೆ, ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಸರ್ಕಾರ, ವಿವಾದದಲ್ಲಿರುವ ಭೂಮಿ ಕೆರೆಯ ಪ್ರದೇಶವಾಗಿದ್ದು, ಅದನ್ನು ಮಂಜೂರು ಮಾಡಿರುವ ಸಾಧ್ಯತೆಗಳಿಲ್ಲ. ಜಿಪಿಎಯನ್ನು ನಕಲು ಮಾಡಲಾಗಿದೆ ಎಂದು ವಾದಿಸಿತ್ತು. ಈಸಂಬಂಧ ಜಿಪಿಎ ಪ್ರತಿಗಳನ್ನು ಪರಿಶೀಲಿಸಿದ ಪೀಠ, ಅದರಲ್ಲಿ ಅನುಮಾನಾಸ್ಪದವಾಗಿರುವ ಅಂಶಗಳನ್ನು ಗಮನಿಸಿದ್ದು ತನಿಖೆಗೆ ಒಪ್ಪಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

