ಕೃಷಿಯಲ್ಲಿ ಗುರಿಯಿದ್ದರೆ ಲಾಭ ಗುರು
ಕ.ಪ್ರ.ವಾರ್ತೆ , ಮೈಸೂರು , ಜು.7
ಪರಂಪರಾನುಗತವಾಗಿ ಬರುವ ಅನುಭವದ ಮುಂದೆ ವಿಶ್ವವಿದ್ಯಾಲಯಗಳ ಪದವಿಗಳು ಏನೇನೂ ಅಲ್ಲ ಎಂಬುದಕ್ಕೆ ಟಿ. ನರಸೀಪುರ ತಾಲೂಕು ಮಾಡ್ರಹಳ್ಳಿಯ ಕೆಂಪಣ್ಣ ಶಂಕರ್ಗುರು ಅವರೇ ನಿದರ್ಶನ.
ಇವರ ಕುಟುಂಬ ಸರಿಸುಮಾರು 200 ವರ್ಷಗಳಿಂದ ಬತ್ತ ಬೆಳೆಯುವುದರಲ್ಲಿ ಹೆಸರುವಾಸಿ. ಪೂರ್ವಿಕರ ಜ್ಞಾನ ಒಬ್ಬರಿಂದ ಒಬ್ಬರಿಗೆ ವರ್ಗಾವಣೆಯಾಗುತ್ತಾ ಬಂದಿದೆ. ಎಂ.ಕೆ. ಶಂಕರ್ಗುರು ಅವರು ಕೂಡ ಕಳೆದ ಐದು ದಶಕಗಳಿಂದಲೂ ಬತ್ತದ ಬೇಸಾಯದಲ್ಲಿಯೇ ತೊಡಗಿಸಿಕೊಂಡಿದ್ದಾರೆ. ರಾಜ್ಯದಲ್ಲಿ ರೈತರ ಸಂಘಟನೆಗೆ ಅಪಾರವಾಗಿ ಶ್ರಮಿಸಿದ ದಿ. ಪ್ರೊ. ಎಂ.ಡಿ. ನಂಜುಂಡಸ್ವಾಮಿ ಅವರ ಕರೆಯ ಮೇರೆಗೆ 1992ರಲ್ಲಿ ದೇಸಿ ತಳಿಗಳ ಸಂರಕ್ಷಣೆಗೆ ಮುಂದಾದ ಶಂಕರ್ಗುರು ಮುಂದೊಂದು ದಿನ ಅವರೇ ಎನ್ಎಂಎಸ್- 2 ಬತ್ತದ ತಳಿಯನ್ನು ಅಭಿವೃದ್ಧಿಪಡಿಸಿದರು. ಇದು ತನು ಬತ್ತದ ತಳಿಗಿಂತ ಉತ್ತಮವಾಗಿದೆ ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಮಾನ್ಯತೆ ನೀಡಿದೆ. ಬಿಹಾರ ಸೇರಿದಂತೆ ಬೇರೆ ಬೇರೆ ರಾಜ್ಯಗಳಲ್ಲಿ ಎನ್ಎಂಎಸ್- 2 ತಳಿಯ ಬತ್ತ ಬೆಳೆಯಲಾಗುತ್ತಿದೆ.
ವಿಭಿನ್ನ ಗುಣಲಕ್ಷಣ ಹೊಂದಿರುವ ಅಂದರೆ ಉತ್ತಮವಾದ ತೆನೆ, ಬಾಗದ ಹುಲ್ಲು, ರೋಗರಹಿತ ಗುಣಗಳಿರುವ ಎತ್ತರವಾದ ನಾಲ್ಕು ಗಿಡಗಳ ತೆನೆ ಬೇರ್ಪಡಿಸಿ, ಸತತ ಏಳು ವರ್ಷ ಅಧ್ಯಯನ ನಡೆಸಿ, ಎಲ್ಲಾ ಹವಾಮಾನಗಳಿಗೂ ಹೊಂದಾಣಿಕೆಯಾಗುವಂತೆ ಈ ತಳಿ ಅಭಿವೃದ್ಧಿಪಡಿಸಲಾಗಿದೆ. ಬತ್ತದ ಇಳುವರಿಯ ಜೊತೆಗೆ ಹುಲ್ಲು ಕೂಡ ಚೆನ್ನಾಗಿ ಬರುತ್ತದೆ.
ನಂಜನಗೂಡು ತಾಲೂಕು ಸುತ್ತೂರು ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರದಲ್ಲಿ ಕಳೆದ ವರ್ಷ ಎನ್ಎಂಎಸ್- 2 ತಳಿಯಿಂದ ಎಕರೆಗೆ 32 ಕ್ವಿಂಟಲ್ ಇಳುವರಿ ಪಡೆದಿದ್ದರು.
ಬೆನ್ನೆಲುಬು: ಎನ್ಎಂಎಸ್ ಎಂದರೆ ನರಸೀಪುರ ಮಾಡ್ರಹಳ್ಳಿ ಶಂಕರ್ ಎಂದೂ ಆಗುತ್ತದೆ. ಇವರ ಪತ್ನಿಯ ಹೆಸರು ನಿರ್ಮಲಾ. ಇವರ ಎಲ್ಲಾ ಕೃಷಿ ಚಟುವಟಿಕೆಗಳಿಗೆ ಅವರೇ ಬೆನ್ನೆಲುಬು. ಹೀಗಾಗಿ ನರಸೀಪುರ ಮಾಡ್ರಹಳ್ಳಿ ನಿರ್ಮಲಾ ಶಂಕರ್ ಎಂದು ಕೂಡ ಆಗುತ್ತದೆ ಎಂಬ ಡಬಲ್ ಉದ್ದೇಶದಿಂದಲೇ ಬತ್ತದ ತಳಿಗೆ ಎನ್ಎಂಎಸ್-2 ಎಂದು ಹೆಸರಿಸಿದೆ ಎಂದು ನಗುತ್ತಾರೆ 65 ವರ್ಷದ ಶಂಕರ್ಗುರು. ಇವರಿಗೆ ಮಾಡ್ರಹಳ್ಳಿಯಲ್ಲಿ 30 ಎಕರೆ ಜಮೀನಿದೆ. ಈ ಜಮೀನು ನೀರಾವರಿ ಆಗುವ ಪೂರ್ವದಲ್ಲಿ ಹತ್ತಿ, ಧನಿಯಾ, ರಾಗಿ, ಬಿಳಿ ಜೋಳ, ನೆಲಗಡಲೆ ಬೆಳೆಯುತ್ತಿದ್ದರು. ಕಬಿನಿ ಜಲಾಶಯ ನಿರ್ಮಾಣವಾದ ನಂತರ ಕಬಿನಿ ನಾಲೆಗಳ ಮೂಲಕ ನೀರಾವರಿಯಾಗಿದ್ದರಿಂದ ಹಿಪ್ಪುನೇರಳೆ, ಬತ್ತ ಬೆಳೆಯುತ್ತಿದ್ದರು. ಇತ್ತೀಚಿನ ವರ್ಷಗಳಲ್ಲಿ ಬತ್ತ ಬಿಟ್ಟು ಬೇರೇನೂ ಬೆಳೆಯುತ್ತಿಲ್ಲ. ಆರಂಭದಲ್ಲಿ ಸೇಲಂ ಸಣ್ಣ, ಜೀರಿಗೆ ಸಣ್ಣ ಬತ್ತದ ತಳಿ ಬೆಳೆಯುತ್ತಿದ್ದರು. ಈಗಲೂ ಅವರ ಜಮೀನಿನಲ್ಲಿ ಕಾಗಿಸಾಲೆ, ಜೀರಿಗೆಸಣ್ಣ, ಸೇಲಂ ಸಣ್ಣ, ಕಾಲಜೀರ, ರತ್ನಚೂಡಿ, ರಾಜಮುಡಿ ಮೊದಲಾದ ತಳಿಗಳಿವೆ. ಹೆಚ್ಚಾಗಿ ಐಆರ್- 64 ಬೆಳೆಯುತ್ತಾರೆ. ಇಳುವರಿ ಎಕರೆಗೆ 25 ರಿಂದ 30 ಕ್ವಿಂಟಲ್ ಬರುತ್ತದೆ. ರಾಸಾಯನಿಕ ಗೊಬ್ಬರ ಕಡಿಮೆ ಬಳಸುತ್ತಾರೆ. ಶೇ. 90ರಷ್ಟು ಸಾವಯವ ಕೃಷಿ ಎನ್ನಬಹುದು. ಪ್ರತಿ ಎಕರೆಗೆ ವೆಚ್ಚ 22,000 ಆದಾಯ 45,000 ನಿವ್ವಳ ಆದಾಯ 23,000
ಇವರು ಕಳೆದ 20 ವರ್ಷಗಳಿಂದಲೂ ರಾಜ್ಯ ಬೀಜ ಮಾರಾಟ ನಿಗಮಕ್ಕೆ ಬೀಜೋತ್ಪಾದಕ ರೈತ. ಅಂದರೆ ಇವರ ಜಮೀನಿನಲ್ಲಿ ಬೆಳೆಯುವ ಬತ್ತವನ್ನು ರಾಜ್ಯ ಬೀಜ ಮಾರಾಟ ನಿಗಮ ಖರೀದಿಸಿ, ಬಿತ್ತನೆ ಬೀಜವಾಗಿ ರೈತರಿಗೆ ಪೂರೈಸುತ್ತದೆ. ಇವರಿಗೆ ಕಳೆದ ವರ್ಷ ನ್ಯಾಷನಲ್ ಇನೋವೇಷನ್ ಫೌಂಡೇಷನ್ನಿಂದ ರಾಷ್ಟ ಪ್ರಶಸ್ತಿಯೂ ದೊರೆತಿದೆ.
ಕೃಷಿಯಲ್ಲಿ ಐದು ದಶಕಗಳ ಅನುಭವ ಇರುವ ಶಂಕರ್ಗುರು ಅವರಿಗೆ ರೈತರು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ಸಿಗುತ್ತಿಲ್ಲ ಎಂಬ ನೋವಿದೆ. ರಾಜ್ಯ ಸರ್ಕಾರ ಈ ಬಾರಿಯ ಬಜೆಟ್ನಲ್ಲಾದರೂ ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿ ಮಾಡಬೇಕು. ಇಲ್ಲದಿದ್ದರೆ ರೈತ ಯಾರೋ ನಿಗದಿ ಮಾಡುವ ದರಕ್ಕೆ ತಾನು ಬೆಳೆದ ಉತ್ಪನ್ನಗಳನ್ನು ಮಾರಾಟ ಮಾಡಿ, ಕೆಲವು ಬಾರಿ ಲಾಭ ಮಾಡಿದರೆ ಮತ್ತೆ ಕೆಲವು ಬಾರಿ ನಷ್ಟ ಅನುಭವಿಸಬೇಕಾಗುತ್ತದೆ. ಇದರ ಬದಲು ರೈತ ಬೆಳೆ ಬೆಳೆಯಲು ತಗುಲುವ ವೆಚ್ಚವನ್ನು ಗಣನೆಗೆ ತೆಗೆದುಕೊಂಡು ದರ ನಿಗದಿ ಮಾಡಿದರೂ ರೈತನೂ ಉಳಿಯುತ್ತಾನೆ. ಗ್ರಾಹಕರೂ ಉಳಿಯುತ್ತಾರೆ. ಮಧ್ಯವರ್ತಿಗಳ ಹಾವಳಿಯೂ ತಪ್ಪುತ್ತದೆ ಎನ್ನುತ್ತಾರೆ.
ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ, ಮರಗೆಲಸ, ಕುಂಬಾರಿಕೆ- ಹೀಗೆ ಪ್ರತಿಯೊಂದು ವೃತ್ತಿಯ ಜ್ಞಾನವೂ ಪೀಳಿಗೆಯಿಂದ ಪೀಳಿಗೆಗೆ ವರ್ಗವಾಗುತ್ತಾ ಹೋಗುತ್ತವೆ. ಇವರು ಯಾವುದೇ ಪಂಡಿತರಿಗಿಂತ ಕಡಿಮೆ ಇಲ್ಲ. ಕೃಷಿಯನ್ನು ನಂಬಿ, ಸರಿಯಾಗಿ ಬೇಸಾಯ ಮಾಡಿದರೆ ನಷ್ಟ ಎಂಬುದು ಇಲ್ಲವೇ ಇಲ್ಲ. ನನ್ನ ಬಳಿ ಬರುವ ರೈತರಿಗೆ ಕ್ವಿಂಟಲ್ಗಟ್ಟಲೇ ಬಿತ್ತನೆ ಬೀಜ ನೀಡುವುದಿಲ್ಲ. ಬದಲಿಗೆ ಕಾಳುಗಳ ಲೆಕ್ಕದಲ್ಲಿ ನೀಡುತ್ತೇನೆ. ಅವರು ನಾಟಿ ಮಾಡಿ, ಚೆನ್ನಾಗಿದೆ ಎಂದರೆ ಅವರ ಜಮೀನಿನಲ್ಲಿ ಬೆಳೆಯಬಹುದು.
ಶಂಕರ್ಗುರು, ಮಾಡ್ರಹಳ್ಳಿ
- ಅಂಶಿ ಪ್ರಸನ್ನಕುಮಾರ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

