ಮೈಸೂರು

ದಾಖಲೆ ನೃತ್ಯಕ್ಕೆ ಸಾಲಗಾರರ ಟಾಂಗ್

Published On :

ಮೈಸೂರು: ಸತತ 15 ದಿನ ನೃತ್ಯ ಮಾಡುವ ಮೂಲಕ ಗಿನ್ನೆಸ್ ದಾಖಲೆ ನಿರ್ಮಿಸಲು ಮುಂದಾಗಿದ್ದ ನೃತ್ಯಪಟುವನ್ನು ಸಾಲಗಾರರು ಎಳೆದುಕೊಂಡು ಹೋಗಿರುವ ಘಟನೆ ನಗರದಲ್ಲಿ ನಡೆದಿದೆ. ರಾಮನಗರ ಜಿಲ್ಲೆ ಕನಕಪುರದ ಚಂದ್ರಕುಮಾರ್ ನಾಯಕ ನೃತ್ಯವನ್ನು ಅರ್ಧಕ್ಕೆ ಮೊಟಕು ಮಾಡಿದವರು. ಇವರು ಅರಣ್ಯ ಇಲಾಖೆ ರಾಮನಗರ ವಿಭಾಗದಲ್ಲಿ ನೌಕರಿಯಲ್ಲಿದ್ದಾರೆ. ಮೈಸೂರಿನ ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ಆವರಣದಲ್ಲಿ ಗಿನ್ನೆಸ್ ದಾಖಲೆ ಮಾಡಲು 6 ದಿನಗಳಿಂದ ನೃತ್ಯ ಆರಂಭಿಸಿದ್ದರು. ಆದರೆ, ಸಾಲಗಾರರು ಬೆನ್ನತ್ತಿ ಬಂದಿದ್ದರಿಂದ ನೃತ್ಯವನ್ನು ಅರ್ಧಕ್ಕೆ ಮೊಟಕುಗೊಳಿಸಿದ್ದಾರೆ. ಸಾಲಗಾರರು ಚಂದ್ರಕುಮಾರ್ನನ್ನು ಕನಕಪುರಕ್ಕೆ ಕರೆದುಕೊಂಡು ಹೋಗಿದ್ದಾರೆ ಎಂದು ತಿಳಿದು ಬಂದಿದೆ.
ವರ್ಗಾವಣೆ ಕೌನ್ಸೆಲಿಂಗ್
ಮೈಸೂರು: ಮೈಸೂರು ವಿಭಾಗ ಮಟ್ಟದ 2013- 14ನೇ ಸಾಲಿನ ಸರ್ಕಾರಿ ಪ್ರೌಢಶಾಲಾ ಶಿಕ್ಷಕರ ಘಟಕದೊಳಗಿನ ವರ್ಗಾವಣೆ ಕೋರಿರುವ ಶಿಕ್ಷಕರ ಅಂತಿಮ ಆದ್ಯತಾ ಪಟ್ಟಿಯನ್ನು ಇಲಾಖೆಯ ವೆಬ್ಸೈಟಿನಲ್ಲಿ ಪ್ರಕಟಿಸಲಾಗಿದೆ. ಅಂತಿಮ ಆದ್ಯತಾ ಪಟ್ಟಿಯಲ್ಲಿ ಹೆಸರಿರುವ ಪ್ರೌಢಶಾಲಾ ಶಿಕ್ಷಕರು ಜು. 10 ರಿಂದ 13 ರವರೆಗೆ ಮೈಸೂರು ಡಿ. ಸುಬ್ಬಯ್ಯ ರಸ್ತೆಯ ಸಾರ್ವಜನಿಕ ಶಿಕ್ಷಣ ಇಲಾಖೆ ವಿಭಾಗೀಯ ಕಾರ್ಯದರ್ಶಿಗಳ ಹಾಗೂ ಪದನಿಮಿತ್ತ ಜಂಟಿ ನಿರ್ದೇಶಕರ ಕಚೇರಿಯಲ್ಲಿ ಬೆಳಗ್ಗೆ 10 ರಿಂದ ಕೋರಿಕೆ ವರ್ಗಾವಣೆ ಕೌನ್ಸೆಲಿಂಗ್ ಮೂಲಕ ನಡೆಸಲಾಗುತ್ತದೆ. ಸಂಬಂಧಿಸಿದ ಪ್ರೌಢಶಾಲಾ ಶಿಕ್ಷಕರು ಆಯಾ ದಿನಾಂಕಗಳಂದು ಕೌನ್ಸೆಲಿಂಗ್ಗೆ ಹಾಜರಾಗುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಬಿ.ಕೆ. ಬಸವರಾಜು ಸೂಚಿಸಿದ್ದಾರೆ.
ವರ್ಗಾವಣೆ ಅಂತಿಮ ಆದ್ಯತಾ ಪಟ್ಟಿಯಲ್ಲಿ ಹೆಸರಿರುವ ಶಿಕ್ಷಕರು ಕೌನ್ಸಿಲಿಂಗ್ಗೆ ಹಾಜರಾಗುವ ವೇಳೆ ಶಾಲಾ ಮುಖ್ಯಸ್ಥರಿಂದ ಸೇವಾ ಪ್ರಮಾಣಪತ್ರ, ಗುರುತಿನ ಪತ್ರ ಮತ್ತು ಆದ್ಯತೆಯ ಮೂಲ ಪ್ರಮಾಣಪತ್ರದೊಂದಿಗೆ ಕೌನ್ಸೆಲಿಂಗ್ ದಿನಾಂಕದಂದು ತಪ್ಪದೆ ಹಾಜರಾಗಬೇಕು ಎಂದು ತಿಳಿಸಿದೆ. ಜು. 10ರಂದು ಕ್ರ.ಸಂ. 1ರಿಂದ 250 ರವರೆಗೆ, ಜು. 11ರಂದು ಕ್ರ.ಸಂ. 251 ರಿಂದ 700ರವರೆಗೆ, ಜು. 12ರಂದು ಕ್ರ.ಸಂ. 701ರಿಂದ ಕೊನೆಯವರೆಗೆ ಶಿಕ್ಷಕರು ಹಾಗೂ ಜು. 13ರಂದು ದೈಹಿಕ ಶಿಕ್ಷಣ ಶಿಕ್ಷಕರು ಹಾಗೂ ವಿಶೇಷ ಶಿಕ್ಷಕರು ಕೌನ್ಸೆಲಿಂಗ್ಗೆ ಹಾಜರಾಗಬೇಕು. ಈ ಕುರಿತು ಹೆಚ್ಚಿನ ಮಾಹಿತಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರ ಕಚೇರಿಯಿಂದ ಪಡೆಯಬಹುದು.
ಗ್ಯಾಸ್ ರಿಫಿಲ್ಲಿಂಗ್: ವ್ಯಕ್ತಿ ಬಂಧನ
ಮೈಸೂರು: ಮನೆಯಲ್ಲಿ ಅಕ್ರಮವಾಗಿ ಗ್ಯಾಸ್ ರಿಫಿಲ್ಲಿಂಗ್ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಮಂಡಿ ಠಾಣೆ ಪೊಲೀಸರು ಆಹಾರ ಮತ್ತು ನಾಗರಿಕರ ಸರಬರಾಜು ಇಲಾಖೆ ಅಧಿಕಾರಿಗಳ ಸಹಾಯದೊಂದಿಗೆ ಮಂಗಳವಾರ ಬಂಧಿಸಿದ್ದಾರೆ. ಲಷ್ಕರ್ ಮೊಹಲ್ಲಾ ಅಶೋಕ ರಸ್ತೆ 22ನೇ ಕ್ರಾಸ್ ನಿವಾಸಿ ಕೈಫುಲ್ಲಾ ಖಾನ್ ಎಂಬವರ ಪುತ್ರ ಮುಜೀಬ್ ಅ. ಮುಜು (25) ಬಂಧಿತ ಆರೋಪಿ. ಈತನಿಂದ 4 ಗ್ಯಾಸ್ ಸಿಲಿಂಡರ್, ತಕ್ಕಡಿ, ಬೊಟ್ಟುಗಳು ಹಾಗೂ ಇನ್ನಿತರ ಉಪಕರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ನಂತರ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಮಂಡಿ ಠಾಣೆ ಇನ್ಸ್ಪೆಕ್ಟರ್ ಟಿ.ಬಿ. ರಾಜಣ್ಣ, ಎಸ್ಐ ಶಬ್ಬೀರ್ ಹುಸೇನ್ ಮತ್ತು ಸಿಬ್ಬಂದಿ ಈ ಪತ್ತೆ ಮಾಡಿದ್ದಾರೆ.
ವ್ಯಕ್ತಿ ಸಾವು
ಮೈಸೂರು: ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ರೈಲು ನಿಲ್ದಾಣದ 1ನೇ ಫ್ಲಾಟ್ಫಾರಂನಲ್ಲಿ ಅಪರಿಚಿತ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಮಂಗಳವಾರ ಬೆಳಗ್ಗೆ ನಡೆದಿದೆ. ಚಹರೆ- 50 ವರ್ಷ, 5.6 ಅಡಿ ಎತ್ತರ, ದೃಢಕಾಯ ಶರೀರ, ಗೋದಿ ಮೈಬಣ್ಣ, ದುಂಡು ಮುಖ, ನೀಳವಾದ ಮೂಗು, ಬೊಕ್ಕ ತಲೆ, ಸಣ್ಣ ಮೀಸೆ ಬಿಟ್ಟಿದ್ದಾರೆ. ಬಿಳಿ ಜನಿವಾರ, ಬಿಳಿ ಬಿಸ್ಕೆಟ್ ಬಣ್ಣದ ಶರ್ಟ್, ನೀಲಿ ಬಣ್ಣದ ಪ್ಯಾಂಟ್, ಧರಿಸಿದ್ದಾರೆ. ಮೃತ ವ್ಯಕ್ತಿಯ ದೇಹವನ್ನು ಮೈಸೂರು ವೈದ್ಯಕೀಯ ಕಾಲೇಜಿನ ಶವಾಗಾರದಲ್ಲಿ ಇರಿಸಲಾಗಿದೆ. ಮೃತರ ವಾರಸುದಾರರು ಇದ್ದಲ್ಲಿ ದೂ. 0821- 2516579 ಸಂಪರ್ಕಿಸಲು ಮೈಸೂರು ರೇಲ್ವೆ ಠಾಣೆ ಪೊಲೀಸರು ಕೋರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.