ಬೋಗಸ್ ಬಿಪಿಎಲ್ ಕಾರ್ಡುದಾರರ ಪತ್ತೆಗೆ ಆಂದೋಲನ
ಕ.ಪ್ರ.ವಾರ್ತೆ ಮೈಸೂರು ಜು. 12
ಜಿಲ್ಲೆಯಲ್ಲಿ ಬೋಗಸ್ ಬಿಪಿಎಲ್ ಕಾರ್ಡು ಹೊಂದಿದ ಕುಟುಂಬಗಳ ಪತ್ತೆಗೆ ಹಾಗೂ ಪ. ಜಾತಿ ಮತ್ತು ಪ. ಪಂಗಡದವರಿಗೆ ಸಮರ್ಪಕ ಪಡಿತರ ಆಹಾರಧಾನ್ಯ ವಿತರಿಸದಿರುವವರ ಪತ್ತೆಗಾಗಿ ವಿಶೇಷ ಆಂದೋಲನ ಹಮ್ಮಿಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ರಾಮೇಗೌಡ ಹೇಳಿದರು.
ತಮ್ಮ ಕಚೇರಿಯಲ್ಲಿ ಅವರು ಬುಧವಾರ ಮೈಸೂರಿನಲ್ಲಿ ಜಿಲ್ಲಾ ಮಟ್ಟದ ಪ. ಜಾತಿ ಮತ್ತು ಪ. ವರ್ಗಗಳ ಹಿತರಕ್ಷಣಾ ಹಾಗೂ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪಡಿತರ ಆಹಾರ ಧಾನ್ಯಗಳು ವಿಶೇಷವಾಗಿ ಪಡಿತರ ಅಕ್ಕಿಯ ಅಕ್ರಮ ಸಾಗಾಣಿಕೆ ತಡೆಯಲು ಆಹಾರ ನಿಗಮದ ಗೋದಾಮುಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲಾಗುವುದು ಅಲ್ಲದೆ ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು ಬಿಗಿಗೊಳಿಸಲಾಗುವುದು. ಜಿಲ್ಲಾದ್ಯಂತ ಅನ್ನಭಾಗ್ಯ ಯೋಜನೆ ಜಾರಿಯಾಗಿರುವುದರಿಂದ ಪಡಿತರ ಅಕ್ಕಿಯ ಕಳ್ಳ ಸಾಗಣೆ ಆಗದಂತೆ ಹೆಚ್ಚಿನ ಹಾಗೂ ವಿಶೇಷ ನಿಗಾ ವಹಿಸಬೇಕು ಎಂದು ಆಹಾರ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯಲ್ಲಿ ಸರ್ಕಾರಿ ಭೂಮಿ ಇರುವೆಡೆ ಪ.ಜಾತಿ ಮತ್ತು ಪ.ಪಂಗಡದವರಿಗಾಗಿ ಸ್ಮಶಾನ ಭೂಮಿ ಗುರುತಿಸಲಾಗಿದೆ. ಭೂಮಿ ಇಲ್ಲದ ಕಡೆಯಲ್ಲಿ ಭೂಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆ ಕೈಗೊಳ್ಳಲಾಗುವುದು. ಇದಕ್ಕಾಗಿ ಹಣದ ಕೊರತೆಯಿಲ್ಲ. 2011ರ ಜನಗಣತಿಯ ಆಧಾರದ ಮೇಲೆ ಬೇಕಾಗುವ ಸ್ಮಶಾನ ಭೂಮಿಯ ಪ್ರಸ್ತಾವನೆಯನ್ನು ಹುಣಸೂರು ಮತ್ತು ಮೈಸೂರು ಉಪವಿಭಾಗಾಧಿಕಾರಿಗಳು ಕೂಡಲೆ ಸಲ್ಲಿಸಬೇಕು ಎಂದು ಹೇಳಿದರು.
ಜಿಲ್ಲೆಯಲ್ಲಿ ಕೆರೆ ಒತ್ತುವರಿಯನ್ನು ಕೂಡಲೆ ತೆರವುಗೊಳಿಸಲು ನಿರ್ಧರಿಸಲಾಗಿದೆ. ಶಿಕ್ಷಣ ಹಕ್ಕು ಕಾಯ್ದೆಯನ್ನು ಜಿಲ್ಲೆಯ ಎಲ್ಲಾ ಖಾಸಗಿ ಶಿಕ್ಷಣ ಸಂಸ್ಥೆಗಳು ಕಟ್ಟುನಿಟ್ಟಾಗಿ ಪರಿಪಾಲಿಸಬೇಕು. ಪರಿಪಾಲಿಸದ 16 ಖಾಸಗಿ ಶಾಲೆಗಳ ವಿರುದ್ಧ ಕ್ರಮ ಜರುಗಿಸಲು ಸೂಚಿಸಲಾಗಿದೆ. ಬಿಪಿಎಲ್ ಕಾರ್ಡ್ ತೋರಿಸಿದ ವಿದ್ಯಾರ್ಥಿಗಳಿಗೆ ಕೂಡಲೆ ಪ್ರವೇಶಾವಕಾಶ ನೀಡುವಂತೆ ಹಾಗೂ ಡೊನೇಶನ್ ಸಂಗ್ರಹದ ವಿವರ ಪಟ್ಟಿ ಪ್ರದರ್ಶಿಸುವಂತೆ ಎಲ್ಲಾ ಖಾಸಗಿ ವಿದ್ಯಾ ಸಂಸ್ಥೆಗಳಿಗೆ ಸೂಚಿಸಬೇಕು. ತಪ್ಪಿದರೆ ಕಾನೂನು ರೀತ್ಯಾ ಕ್ರಮ ಜರುಗಿಸಲಾಗುವುದು ಎಂದರು.
ಪ್ರವಾಸೋದ್ಯಮ ಇಲಾಖೆಯಿಂದ ಈ ಹಿಂದೆ ವಿಶೇಷ ಘಟಕ ಮತ್ತು ಗಿರಿಜನ ಉಪಯೋಜನೆಯಡಿ ಅನರ್ಹ ಫಲಾನುಭವಿಗಳಿಗೆ ಮಂಜೂರು ಮಾಡಲಾದ ಟ್ಯಾಕ್ಸಿಗಳ ಬಗ್ಗೆ ಕಾನೂನು ಕ್ರಮ ಜರುಗಿಸಬೇಕು. ಅಂತೆಯೆ ಪ್ರಸಕ್ತ ಸಾಲಿನಲ್ಲಿ ಈ ಯೋಜನೆಯಡಿ ಅರ್ಹ ಫಲಾನುಭವಿಗಳ ಆಯ್ಕೆಯನ್ನು ಪಾರದರ್ಶಕವಾಗಿ ಮಾಡಬೇಕು. ಯಾವುದೆ ಕಾರಣಕ್ಕೂ ಅನರ್ಹ ಫಲಾನುಭವಿಗಳ ಆಯ್ಕೆಯನ್ನು ಸಹಿಸಲಾಗದು ಎಂದು ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಪ. ಜಾತಿ ಮತ್ತು ಪ. ವರ್ಗಗಳ ಹಿತರಕ್ಷಣಾ ಸಮಿತಿ ಸಭೆಗಳನ್ನು ಪ್ರತಿ 3 ತಿಂಗಳಿಗೊಮ್ಮೆ ಕಡ್ಡಾಯವಾಗಿ ಜಿಲ್ಲಾ, ಉಪವಿಭಾಗ ಮತ್ತು ತಾಲೂಕು ಮಟ್ಟಗಳಲ್ಲಿ ನಡೆಸಿ ಸಭೆಯಲ್ಲಿ ಚರ್ಚಿಸಲಾದ ವಿಷಯಗಳ ಬಗ್ಗೆ ಜರುಗಿಸಿದ ಕ್ರಮದ ವರದಿಯನ್ನು ನಿಗದಿತ ಅವಧಿಯಲ್ಲಿ ಸಲ್ಲಿಸಬೇಕು. ಈ ಸಭೆಗಳಿಗೆ ಹಾಜರಾಗದ ಅಧಿಕಾರಿಗಳ ಗೈರು ಹಾಜರಿಯನ್ನು ಗಂಭೀರವಾಗಿ ಪರಿಗಣಿಸಬೇಕು. ಅಧಿಕಾರಿಗಳು ಸಮಗ್ರ ಮಾಹಿತಿಯೊಂದಿಗೆ ಸಭೆಗಳಿಗೆ ಹಾಜರಾಗಬೇಕು. ಪ.ಜಾತಿ ಮತ್ತು ಪ. ವರ್ಗಗಳ ಜನರ ಮೇಲೆ ನಡೆಯುವ ದೌರ್ಜನ್ಯ ಪ್ರಕರಣಗಳಲ್ಲಿ ಪೊಲೀಸ್ ಮತ್ತು ಕಂದಾಯ ಇಲಾಖೆಗಳ ತುರ್ತು ಕ್ರಮ ಅಗತ್ಯವಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯೋನ್ಮುಖರಾಗಬೇಕು. ಅಲ್ಲದೆ, ನೊಂದವರಿಗೆ ತುರ್ತು ಪರಿಹಾರ ಒದಗಿಸಲು ಪ್ರಯತ್ನಿಸಬೇಕು. ನ್ಯಾಯಾಲಯಗಳಿಗೆ ವಸುನಿಷ್ಠ ವರದಿ ಸಲ್ಲಿಸಬೇಕು ಎಂದು ಡಾ. ರಾಮೇಗೌಡ ವಿವರಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ನಾಗಾನಾಯಕ್, ಎಂಡಿಎ ಆಯುಕ್ತ ಡಾ.ಸಿ.ಜಿ. ಬೆಟಸೂರ್ಮಠ, ಎಎಸ್ಪಿ ಆರ್.ಬಿ. ಮೋಹನರೆಡ್ಡಿ, ಜಿಪಂ ಮುಖ್ಯ ಯೋಜನಾಧಿಕಾರಿ ವಸುಂಧರಾದೇವಿ, ನಗರ ಪಾಲಿಕೆ ಆಯುಕ್ತ ಪಿ.ಜಿ. ರಮೇಶ್, ಜಿಲ್ಲಾ ಸಮಾಜಕಲ್ಯಾಣ ಅಧಿಕಾರಿ ವಿ. ರಾಜೇಶ್ ಗೌಡ, ಸಮಿತಿ ಸದಸ್ಯರಾದ ಡಿ. ಪದ್ಮನಾಭ್, ಶಂಭುಲಿಂಗಸ್ವಾಮಿ, ವೆಂಕಟೇಶ್, ಕೃಷ್ಣಯ್ಯ ಹಾಗೂ ಬೆಟ್ಟಯ್ಯ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

