ಕ್ಷೇತ್ರ ಬಿಜೆಪಿ ಅಧ್ಯಕ್ಷರ ಆಯ್ಕೆಯಲ್ಲಿ ಜಟಾಪಟಿ
ಕ.ಪ್ರ.ವಾರ್ತೆ ಮೈಸೂರು ಜು. 14
ಮಾಜಿ ಸಚಿವ ಎಸ್.ಎ. ರಾಮದಾಸ್ ಅನುಪಸ್ಥಿತಿಗೆ ಬೇಸರ ವ್ಯಕ್ತಪಡಿಸಿದ ಬಿಜೆಪಿ ಕಾರ್ಯಕರ್ತರು, ಕೃಷ್ಣರಾಜ ಕ್ಷೇತ್ರ ಬಿಜೆಪಿ ಅಧ್ಯಕ್ಷರ ಆಯ್ಕೆ ಸಭೆಯನ್ನು ಮುಂದೂಡುವಂತೆ ಪಟ್ಟು ಹಿಡಿದಿದ್ದರಿಂದ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.
ಕ್ಷೇತ್ರ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಸಂಬಂಧಿಸಿದಂತೆ ಭಾನುವಾರ ನಗರದ ನಟರಾಜ ಕಲ್ಯಾಣ ಮಂಟಪದಲ್ಲಿ ಸಭೆ ಆಯೋಜಿಸಲಾಗಿತ್ತು. ಈ ಸಂಬಂಧ ಪಕ್ಷದ ಕೋರ್ ಕಮಿಟಿ ಸದಸ್ಯರು ನಗರ ಬಿಜೆಪಿ ಕಚೇರಿಯಲ್ಲಿ ಸಭೆ ನಡೆಸಿದ ಬಳಿಕ ಹೆಸರು ಪ್ರಕಟಿಸಲು ಸಿದ್ಧತೆ ನಡೆಸಿದ್ದರು.
ಆದರೆ, ಸಭೆ ಆರಂಭವಾಗುತ್ತಿದ್ದಂತೆಯೆ ಬಿಜೆಪಿ ಮುಖಂಡ ಮಲ್ಲರಾಜೇ ಅರಸ್ ಅವರು ಕ್ಷೇತ್ರದ ಮಾಜಿ ಶಾಸಕರಾದ ಎಸ್.ಎ. ರಾಮದಾಸ್ ಅವರು ಬರುವವರೆಗೆ ಸಭೆ ನಡೆಸಬಾರದು. ಅವರಿಲ್ಲದೆ ಸಭೆ ನಡೆಸುವುದು ಸರಿಯಲ್ಲ ಎಂದರು. ಇದಕ್ಕೆ ಬಹುಪಾಲು ಕಾರ್ಯಕರ್ತರು ರಾಮದಾಸ್ ಸಭೆಗೆ ಆಗಮಿಸದೆ ಸಭೆ ನಡೆಸಬಾರದು ಎಂದು ಪಟ್ಟು ಹಿಡಿದರು.
ಈ ವೇಳೆ ಕ್ಷೇತ್ರ ಬಿಜೆಪಿಯ ಹಾಲಿ ಅಧ್ಯಕ್ಷ ಸೋಮಸುಂದರ್, ರಾಮದಾಸ್ ಅವರು ಅನಾರೋಗ್ಯದಿಂದ ಸಭೆಗೆ ಆಗಮಿಸಲು ಸಾಧ್ಯವಾಗಿಲ್ಲ. ಆದ್ದರಿಂದ ಸಭೆ ನಡೆಸುವಂತೆ ಸೂಚಿಸಿದರು. ಇದರಿಂದ ತೃಪ್ತರಾಗದ ಹಲವು ಮಂದಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಸಭೆಯಲ್ಲಿ ಸಾಕಷ್ಟು ಗೊಂದಲ ಉಂಟಾಯಿತು. ಕೆಲವರ ನಡುವೆ ಮಾತಿನ ಚಕಮಕಿ ನಡೆದು, ತಳ್ಳಾಟ ನೂಕಾಟಕ್ಕೂ ಕಾರಣವಾಯಿತು.
ಬಳಿಕ ಕ್ಷೇತ್ರವಾರು ಅಧ್ಯಕ್ಷರ ಆಯ್ಕೆ ಉಸ್ತುವಾರಿ ವಹಿಸಿರುವ ಶಾಸಕರಾದ ಎಸ್.ಆರ್. ವಿಶ್ವನಾಥ್, ವಿಜಯಕುಮಾರ್, ಮಾಜಿ ಶಾಸಕರಾದ ಇ. ಮಾರುತಿರಾವ್ ಪವಾರ್, ತೋಂಟದಾರ್ಯ, ಪಕ್ಷದ ರಾಜ್ಯ ಕಾರ್ಯದರ್ಶಿ ಗೋಪಿನಾಥ ರೆಡ್ಡಿ, ನಗರ ಸಂಘಟನ ಕಾರ್ಯದರ್ಶಿ ಶ್ರೀವತ್ಸ, ಎಂಡಿಎ ಮಾಜಿ ಅಧ್ಯಕ್ಷ ಎಲ್. ನಾಗೇಂದ್ರ ಅವರು ರಾಮದಾಸ್ ಅವರು ಬಂದ ಬಳಿಕವೆ ಸಭೆ ನಡೆಸುವುದಾಗಿ ಹೇಳಿ ಸಭೆ ಮುಂದೂಡಿದರು.
ಈ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಯುವ ಮೋರ್ಚಾ ಕಾರ್ಯಕಾರಿಣಿ ಸದಸ್ಯ ರಮೇಶ್ ಮತ್ತು ಸೋಮಸುಂದರ್ ಬೆಂಬಲಿಗರ ನಡುವೆ ಮಾತಿನ ಚಕಮಕಿ ನಡೆಯಿತು.
ಸಭಾಂಗಣದ ಹೊರಗೆ ಕಾರ್ಯಕರ್ತರ ನಡುವೆ ತಳ್ಳಾಟವೂ ನಡೆಯಿತು. ಆ ಬಳಿಕ ರಾಮದಾಸ್ ಅವರು ಬರುತ್ತಾರೆ, ಸಭೆ ನಡೆಸುವುದಾಗಿ ಸೋಮಸುಂದರ್ ಮತ್ತು ಬೆಂಬಲಿಗರು ಸಭೆಗೆ ಆಗಮಿಸಿದರಾದರೂ ಸಭೆ ಮುಂದೂಡಿದ್ದರಿಂದ ಎಲ್ಲರೂ ಹೊರ ಬಂದರು.
ಇದಕ್ಕೂ ಮುನ್ನ ನಗರ ಬಿಜೆಪಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಪಕ್ಷದ ಚುನಾವಣಾ ಉಸ್ತುವಾರಿಗಳು ಮತ್ತು ಅಧಿಕಾರಿಗಳು ಆಕಾಂಕ್ಷಿಗಳಾದ ಆರ್. ರಾಮಪ್ರಸಾದ್, ಜೋಗಿ ಮಂಜು, ಪ್ರಕಾಶ್, ಪುರುಷೋತ್ತಮ್, ನಾಗರಾಜ್, ರಾಜೇಶ್ ಸೇರಿದಂತೆ 15ಕ್ಕೂ ಹೆಚ್ಚು ಮಂದಿ ಆಕಾಂಕ್ಷಿಗಳ ಅಭಿಪ್ರಾಯ ಸಂಗ್ರಹಿಸಿದ್ದರು.
ಪಾಲಿಕೆ ಸದಸ್ಯರಾದ ಬಿ.ವಿ. ಮಂಜುನಾಥ್, ಶಿವಕುಮಾರ್, ಮ.ವಿ. ರಾಮಪ್ರಸಾದ್, ಸ್ನೇಕ್ ಶ್ಯಾಂ, ಮಾಜಿ ಸದಸ್ಯರಾದ ಎಂ.ಡಿ. ಪಾರ್ಥಸಾರಥಿ, ಎ.ವಿ. ವಿದ್ಯಾ ಅರಸ್, ನಗರ ಬಿಜಿಪಿ ಅಧ್ಯಕ್ಷ ಶಿವಕುಮಾರ್, ಮುಖಂಡರಾದ ಯಶಸ್ವಿನಿ ಸೋಮಶೇಖರ್, ಗಣೇಶ್ರಾವ್, ಸುಂದರ್, ನೂರ್ ಫಾತಿಮಾ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

