ಮೈಸೂರು

ಸುದ್ದಿ ಸಂಕ್ಷೇಪ

Published On :

ಮಾರಾಮಾರಿ;4 ಮಂದಿ ಬಂಧನ
ಮೈಸೂರು: ಗಣೇಶನಗರದಲ್ಲಿ ಎರಡು ಗುಂಪುಗಳ ನಡುವೆ ನಡೆದ ಮಾರಾಮಾರಿ ಪ್ರಕರಣಕ್ಕೆ ಸಂಬಂಧಿಸಿದಂತೆ ನರಸಿಂಹರಾಜ ಮತ್ತು ಉದಯಗಿರಿ ಠಾಣೆ ಪೊಲೀಸರು 4 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಗಣೇಶನಗರ ನಿವಾಸಿಗಳಾದ ಕೋಳಿ ಮಂಜ, ರವಿ, ಸಿದ್ದರಾಮು ಮತ್ತು ಸಂತೋಷ್ ಬಂಧಿತ ಆರೋಪಿಗಳು. ಕ್ಷುಲ್ಲಕ ಕಾರಣ ಹಾಗೂ ಹಳೇ ದ್ವೇಷದ ಹಿನ್ನೆಲೆಯಲ್ಲಿ ಇತ್ತೀಚೆಗೆ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿತ್ತು. ಈ ಸಂಬಂಧ ಉದಯಗಿರಿ ಮತ್ತು ಎನ್.ಆರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ವಾಟರ್ ಫಿಲ್ಟರ್ ಕೊಡುಗೆ
ಚಾಮರಾಜನಗರ: ಸಿದ್ದರಾಜು ಅವರು ವಿಧಾನ ಪರಿಷತ್ ಸದಸ್ಯರಾಗಿ 5 ವರ್ಷ ತುಂಬಿದ ಹಿನ್ನೆಲೆಯಲ್ಲಿ ನಗರದ ಸುಖೀ ಸೇವಾ ಸಮಿತಿ ವತಿಯಿಂದ ಜಾಮೀಯ ಮಸೀದಿ ಪಕ್ಕದಲ್ಲಿರುವ ಅಂಗನವಾಡಿ ಕೇಂದ್ರಕ್ಕೆ ವಾಟರ್ ಫಿಲ್ಟರ್ ಮತ್ತು ಮಕ್ಕಳಿಗೆ ಸಿಹಿ ವಿತರಿಸಲಾಯಿತು. ಸುಖೀ ಸೇವಾ ಸಂಸ್ಥೆ ಅಧ್ಯಕ್ಷ ಚಾ.ಸಿ.ಗೋವಿಂದರಾಜು ಮಾತನಾಡಿ, ವಿಧಾನ ಪರಿಷತಚ್ ಸದಸ್ಯ ಸಿದ್ದರಾಜು ಅವರು ಸರಳ ಸಜ್ಜನ. ಬಡವರ ಬಗ್ಗೆ ಕಾಳಜಿ ಉಳ್ಳವರಾಗಿದ್ದು, ಅವರ ಅಧಿಕಾರವಧಿಯಲ್ಲಿ ಉತ್ತಮ ಜನಪರ ಕೆಲಸ ಮಾಡಿದ್ದು, ಮುಂದಿನ ಹಂತದಲ್ಲೂ ಉತ್ತಮ ಕಾರ್ಯವನ್ನು ನಿರ್ವಹಿಸಲಿ ಎಂದು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಜಾಮೀಯಾ ಮಸೀದಿಯ ಮೌಲ್ವಿ ಮುಕ್ತರ್ ಅಹಮ್ಮದ್, ಮಾಜಿ ಕಾರ್ಯದರ್ಶಿ ಅಬ್ದುಲ್ ಆಫೀಜ್, ಸುಖೀ ಸೇವಾ ಸಮಿತಿಯ ಗೌರವ ಅಧ್ಯಕ್ಷ ವೀರಭದ್ರನಾಯಕ, ಪ್ರಧಾನ ಕಾರ್ಯದರ್ಶಿ ಶ್ರೀಕಂಠಮೂರ್ತಿ, ಸದಸ್ಯರಾದ ರವಿ, ಶಿಕ್ಷಕಿ ಗಂಗೆ, ಖಜಾಂಚಿ ಕೆ.ನಾರಾಯಣ್ ಇದ್ದರು.
ಲಯನ್ಸ್‌ನಿಂದ ಸಮಾಜಸೇವೆ
ಕೊಳ್ಳೇಗಾಲ: ಲಯನ್ಸ್ ಸಂಸ್ಥೆ ಸೇವಾ ಮನೋಭಾವ ಕಲಿಸುವ ಇತಿಹಾಸವುಳ್ಳ ಸಂಸ್ಥೆಯಾಗಿದೆ ಎಂದು ಸಂಸ್ಥೆಯ ಜಿಲ್ಲಾ ಗವರ್ನರ್ ಹೇಮಂತ ಕುಮಾರ್ ಹೇಳಿದರು. ನಗರದ ಲಯನ್ಸ್ ಸಮುದಾಯ ಭವನದಲ್ಲಿ ಅಯೋಜಿಸಲಾಗಿದ್ದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿ, ಲಯನ್ಸ್ ಸೇವೆಯಲ್ಲಿ ಮುಂದಿದೆ. ಕೊಳ್ಳೇಗಾಲ ಸಂಸ್ಥೆ ಉತ್ತಮ ರೀತಿಯಲ್ಲಿ ಸಮಾಜಮುಖಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದೆ ಎಂದು ಶ್ಲಾಘಿಸಿದರು.
ಇತರ ಕ್ಲಬ್‌ಗಳಿಗೆ ಲಯನ್ಸ್ ಮಾದರಿಯಾಗಿದೆ. 17 ಮಂದಿ ಸಂಸ್ಥಾಪಕ ಸದಸ್ಯರಿದ್ದು ಸಂಸ್ಥೆ ಕೊಳ್ಳೇಗಾಲದಂತಹ ಗ್ರಾಮಾಂತರ ಪ್ರದೇಶದಲ್ಲಿ 37 ವರ್ಷ ಯಶಸ್ವಿಯಾಗಿ ಸೇವೆ ಪೂರೈಸಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ವಿರೂಪಾಕ್ಷ ಮಾತನಾಡಿ, ಸಮಾಜ ಮುಖಿ ಸೇವೆ ಸಂಸ್ಥೆಯ ಪ್ರಮುಖ ಗುರಿಯಾಗಿದ್ದು, ಅಧ್ಯಕ್ಷರಾಗಿ ನೇಮಕಗೊಂಡು ವರ್ಷದಲ್ಲಿ ಹಲವು ಉತ್ತಮ ಕಾರ್ಯ ಕೈಗೊಂಡ ತೃಪ್ತಿ ತಮಗಿದೆ ಎಂದರು. ಈ ಸಂದರ್ಭದಲ್ಲಿ ಕರುಣಾಲಯ ಬುದ್ಧಿಮಾಂದ್ಯ ಮಕ್ಕಳ ಶಾಲೆಗೆ ಹೊಲಿಗೆ ಯಂತ್ರ ವಿತರಿಸಲಾಯಿತು. ಸಂಸ್ಥೆಯ ಅಧ್ಯಕ್ಷ ಪಿ.ಮಹದೇವ, ಲಯನೆಸ್‌ನ ಅಧ್ಯಕ್ಷೆ ಉಷಾ, ವೀರೂಪಾಕ್ಷ, ಆನಂದರಾಮ ಶೆಟ್ಟಿ, ವೀರಭದ್ರಸ್ವಾಮಿ, ಚಂದ್ರಶೇಖರ, ನಾಗಲಿಂಗಪ್ಪ, ಚನ್ನಮಾದೇಗೌಡ, ಜಗದೀಶಕುಮಾರ್, ಎಂ.ವಿ.ನಾಗರಾಜು, ಗೋಪಿನಾಥ್, ಮಂಜುನಾಥಶೆಟ್ಟಿ, ಕುಮಾರಕೃಷ್ಣ, ಕಾಮಯ್ಯ, ಮಹದೇವ, ಸತೀಶ್, ಪುಟ್ಟಮಾದಪ್ಪ ಇದ್ದರು.
ಗ್ಯಾಂಗ್‌ವಾರ್ ಕೊಲೆ: ಇಬ್ಬರ ಸೆರೆ
ಮೈಸೂರು: ಹಳೇ ದ್ವೇಷದ ಹಿನ್ನೆಲೆಯಲ್ಲಿ ವ್ಯಕ್ತಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉದಯಗಿರಿ ಠಾಣೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಮೈಸೂರಿನ ಶಾಂತಿನಗರ ನಿವಾಸಿ ಶಕೀರ್ ಅಹಮದ್ (22) ಮತ್ತು ಗಣೇಶನಗರ ನಿವಾಸಿ ಘೋಷ್ ಮೈದೀನ್ (28) ಬಂಧಿತ ಆರೋಪಿಗಳು. ಉಳಿದ ಆರೋಪಿಗಳಿಗಾಗಿ ಪೊಲೀಸರು ಶೋಧ ಮುಂದುವರಿಸಿದ್ದಾರೆ. ಜು.1ರ ಮಧ್ಯರಾತ್ರಿ ಮಂಡಿ ಮೊಹಲ್ಲಾ ನಿವಾಸಿ ಸೈಯದ್ ಕಬೀರ್ (36) ಎಂಬಾತನನ್ನು ಕೊಲೆ ಮಾಡಿರುವ ಆರೋಪದ ಮೇಲೆ ಪೊಲೀಸರು ಬಂಧಿಸಿದ್ದಾರೆ.
ತೋಟಗಾರಿಕೆ ಬೆಳೆಯಿಂದ ಲಾಭ
ಚಾಮರಾಜನಗರ: ಗಿರಿಜನರು ಸರ್ಕಾರ ನೀಡುವ ಸವಲತ್ತುಗಳನ್ನು ಸದ್ಬಳಕೆ ಮಾಡಿಕೊಂಡು ತೋಟಗಾರಿಕೆ ಬೆಳೆಗಳನ್ನು ಬೆಳೆದು ಆರ್ಥಿಕವಾಗಿ ಆಭಿವೃದ್ಧಿ ಹೊಂದಬೇಕು ಎಂದು ತೋಟಗಾರಿಕೆ ಇಲಾಖೆಯ ಹಿರಿಯ ನಿರ್ದೇಶಕ ಮಹದೇವಸ್ವಾಮಿ ತಿಳಿಸಿದರು.
ನಗರದ ತೋಟಗಾರಿಕೆ ಇಲಾಖೆ ಅವರಣದಲ್ಲಿ ಕುಂಭೇಶ್ವರ ಕಾಲೋನಿಯ ಗಿರಿಜನ ರೈತರಿಗೆ ಗಿರಿಜನ ಉಪಯೋಜನೆಯಡಿ ರಸಗೊಬ್ಬರ ಹಾಗೂ ಬಿತ್ತನೆ ಬೀಜ ವಿತರಿಸಿ ಮಾತನಾಡಿ, ಗಿರಿಜನರು ತಮ್ಮ ಫಲವತ್ತಾದ ಭೂಮಿಯಲ್ಲಿ ಉತ್ತಮ ಫಸಲುಗಳನ್ನು  ಬೆಳೆಯಲು ಅನುಕೂಲವಾಗುವಂತೆ ಉತ್ತಮ ತಳಿಯ ಬಿತ್ತನೆ ಬೀಜ, ರಸಗೊಬ್ಬರ ಹಾಗೂ ಕ್ರಿಮಿನಾಶಕ ನೀಡಲಾಗುತ್ತಿದೆ. ಇದನ್ನು ಬಳಸಿಕೊಂಡು ತೋಟಗಾರಿಕೆ ಫಸಲು ಬೆಳೆದು ಅಭಿವೃದ್ಧಿ ಹೊಂದಬೇಕು ಎಂದರು.  ಸಹಾಯಕ ಅಧಿಕಾರಿ ನಂಜುಂಡಯ್ಯ, ಕೃಷ್ಣಮೂರ್ತಿ, ಮಹದೇವೇಗೌಡ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.