ಮೈಸೂರು

ಸಾರ್ವಜನಿಕರ ಚಪ್ಪಲಿ ಸವೆಸಬೇಡಿ

Published On :

ಕ.ಪ್ರ. ವಾರ್ತೆ   ಕೆ.ಆರ್. ನಗರ   ಜು. 17
ಸರ್ಕಾರಿ ಕೆಲಸಗಳಿಗೆ ಸಾರ್ವಜನಿಕರು ಕಚೇರಿಗಳಿಗೆ ಬಂದಾಗ ಅಧಿಕಾರಿಗಳು ಅನಗತ್ಯವಾಗಿ ಅವರನ್ನು ಅಲೆಸದೆ ಸಕಾಲದಲ್ಲಿ ನಿಯಮಾನುಸಾರ ಕೆಲಸ ಮಾಡಿಕೊಡಬೇಕು ಎಂದು ಲೋಕಾಯುಕ್ತ ಇನ್ಸ್ಪೆಕ್ಟರ್ ಗೋಪಾಲಕೃಷ್ಣ ಹೇಳಿದರು.
ಇಲ್ಲಿನ ಲೋಕೋಪಯೋಗಿ ಪ್ರವಾಸಿ ಮಂದಿರದಲ್ಲಿ ಬುಧವಾರ ಸಾರ್ವಜನಿಕರಿಂದ ಅಹವಾಲು ಆಲಿಸಿ ಅಧಿಕಾರಿಗಳಿಗೆ ಸೂಚನೆ ನೀಡಿ ಮಾತನಾಡಿ, ಕಚೇರಿಗಳಿಗೆ ಕಾರಣವಿಲ್ಲದೆ ಅಲೆಸಿ ಕೆಲಸ ಮಾಡಿಕೊಡುವವರ ವಿರುದ್ಧ ದೂರು ಬಂದರೆ ನಿರ್ದಾಕ್ಷಿಣ್ಯವಾಗಿ ಕಠಿಣ ಕ್ರಮಕ್ಕೆ ಸಂಬಂಧಿತ ಇಲಾಖೆಗಳಿಗೆ ಶಿಫಾರಸು ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಲೋಕಾಯುಕ್ತ ಇಲಾಖೆ ಅಧಿಕಾರಿಗಳು ಜನರ ಕೆಲಸಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸದ ಅಧಿಕಾರಿಗಳನ್ನು ಎಚ್ಚರಿಸಿ, ಅವರಿಂದ ಕೆಲಸ ಮಾಡಿಸುವ ಕಾರ್ಯಕ್ರಮ ಹಮ್ಮಿಕೊಂಡಿದೆ. ಸಮಸ್ಯೆಗಳು ನಮ್ಮವರೆಗೂ ಬರಲು ಬಿಡದೆ ಕಾನೂನು ವ್ಯಾಪ್ತಿಯಲ್ಲಿರುವ ಸಾರ್ವಜನಿಕ ಕೆಲಸಗಳನ್ನು ತಾಲೂಕು ಮಟ್ಟದ ಅಧಿಕಾರಿಗಳೆ ಮಾಡಬೇಕು ಎಂದು ಆದೇಶಿಸಿದರು.
ಬೋರೇಗೌಡನಕೊಪ್ಪಲು ಗ್ರಾಮದ ಜಯರಾಮ ದೂರು ನೀಡಿ ಭೇರ್ಯ ಗ್ರಾಪಂ ಬಸವ ವಸತಿ ಯೋಜನೆಯ ಮನೆಗಳನ್ನು ಉಳ್ಳವರಿಗೆ ನೀಡುತ್ತಿದ್ದು, ಅರ್ಹರು ನಾಲ್ಕಾರು ವರ್ಷಗಳಿಂದ ಅರ್ಜಿ ಸಲ್ಲಿಸಿದರೂ ಮಂಜೂರು ಮಾಡುತ್ತಿಲ್ಲ. 10 ಸಾವಿರ ಹಣ ನೀಡಿದರೆ ಮನೆ ಇರುವವರಿಗೆ ಮಂಜೂರಾತಿ ಮಾಡುತ್ತಾರೆ ಎಂದು ಹೇಳಿದರಲ್ಲದೆ, ಯಾವುದೆ ದಾಖಲೆಗಳನ್ನು ಸಾರ್ವಜನಿಕರಿಗೆ ಕೊಡುವುದಿಲ್ಲ. ಈ ಬಗ್ಗೆ ಕ್ರಮ ಕೈಗೊಳ್ಳಿ ಎಂದು ಮನವಿ ಮಾಡಿದರು. ಹೆಬ್ಬಾಳು ಗ್ರಾಮದ ಕೆರೆ ಒತ್ತುವರಿ ಮಾಡಿಕೊಂಡು ಕೆಲವು ಪ್ರಭಾವಿಗಳು ಕೃಷಿ ಕಾರ್ಯಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ತಹಸೀಲ್ದಾರರಿಗೆ ದೂರಿದರೆ ಅವರು ಜಲಸಂಪನ್ಮೂಲ ಇಲಾಖೆಯ ಅಧಿಕಾರಿಗಳು ಕೆರೆ ಒತ್ತುವರಿ ತೆರವುಗೊಳಿಸಬೇಕು ಎಂದು ನಮ್ಮ ಅರ್ಜಿಗೆ ಹಿಂಬರಹ ಕೊಡುತ್ತಾರೆ. ಈ ಬಗ್ಗೆ ಶಿಸ್ತು ಕ್ರಮ ಕೈಗೊಳ್ಳಿ ಎಂದು ಗ್ರಾಮದ ಗಜೇಂದ್ರ ಒತ್ತಾಯಿಸಿದರು.
ಲೋಕಾಯುಕ್ತ ಅಧಿಕಾರಿಗಳ ಅಹವಾಲು ಸಂದರ್ಭದಲ್ಲಿ ಬಹುತೇಕ ತಾಲೂಕು ಅಧಿಕಾರಿಗಳು ಗೈರು ಹಾಜರಾಗಿದ್ದರು. ಪುರಸಭಾ ಮುಖ್ಯಾಧಿಕಾರಿ ನಾಗಶೆಟ್ಟಿ, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಟಿ. ಜವರೇಗೌಡ, ತಾಲೂಕು ಆರೋಗ್ಯಾಧಿಕಾರಿ ಡಾ. ಶಿವಪ್ರಸಾದ್, ಡಾ. ರಾಮಚಂದ್ರ, ಡಾ. ರಮೇಶ್, ಅಬಕಾರಿ ಅಧಿಕಾರಿ ಡಾ. ಮೋಹನಕುಮಾರ್, ಸಹಾಯಕ ಎಂಜಿನಿಯರ್ ನಾಗರಾಜು ಮತ್ತು ಅಧಿಕಾರಿಗಳು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.