ಹದಗೆಟ್ಟಿರುವ ರಸ್ತೆಗಳು: ಸಂಚಾರಕ್ಕೆ ಸಂಚಕಾರ
ಧರ್ಮಾಪುರ ನಾರಾಯಣ್
ಕ.ಪ್ರ.ವಾರ್ತೆ ಹುಣಸೂರು ಜು. 20
ಕಿತ್ತುಹೋದ ರಸ್ತೆಯ ಡಾಂಬರ್, ಗುಂಡಿ ಬಿದ್ದ ಟಿಎಪಿಸಿಎಂಎಸ್ ಮುಖ್ಯರಸ್ತೆ ಹಾಗೂ ಗೋಕುಲ ರಸ್ತೆ ಹಳ್ಳ-ಕೊಳ್ಳಗಳಿಂದ ಕೂಡಿದ ರಸ್ತೆಯಲ್ಲಿ ನಿತ್ಯ ಓಡಾಡುವ ಸಾರ್ವಜನಿಕರು ಮತ್ತು ವಾಹನಗಳ ಚಾಲಕರು ನರಕಯಾತನೆ ಅನುಭವಿಸುತ್ತಿದ್ದಾರೆ.
ಇಲ್ಲಿನ ಕಲ್ಪತರು ಹೊಟೇಲ್ ವೃತ್ತದ ಬಿ.ಎಂ. ರಸ್ತೆಯಿಂದ ಚಿಕ್ಕಹುಣಸೂರು ವೃತ್ತದ ಧರ್ಮಾಪುರ ಮುಖ್ಯರಸ್ತೆಯ ತನಕ ಎರಡು ಕಿ.ಮೀ ದೂರ ಹಾಗೂ ಗೋಕುಲ ರಸ್ತೆಯಿಂದ ಬೈಪಾಸ್ ರಸ್ತೆ ತನಕ ಒಂದು ಕಿ.ಮೀ ದೂರದವರೆಗೆ ರಸ್ತೆಯೋ, ಗುಂಡಿಯೋ ಎನ್ನುವಂತೆ ಕಾಣುತ್ತಿದೆ. ಟಿಎಪಿಸಿಎಂಎಸ್ ಮುಖ್ಯರಸ್ತೆಯಲ್ಲಿ ನಿತ್ಯ ಪಟ್ಟಣಕ್ಕೆ ಹೋಗುವ ಸಾರ್ವಜನಿಕರು ಯಾತನೆ ಪಡುವಂತಾಗಿದೆ. ರಸ್ತೆಯ ಪರಿಸ್ಥಿತಿ ಹೀಗಾಗಿಬಿಟ್ಟಿದೆ. ನಿತ್ಯ ಸಂಚಾರಿಸುವ ಪ್ರತಿಯೊಬ್ಬ ಸವಾರರು ಹರಸಾಹಸ ಪಡಲೇಬೇಕಾದ ಅನಿವಾರ್ಯತೆ ಇದೆ.
ಗುರುವಾರ ನಡೆಯುವ ಸಂತೆಗೆ ರೈತರು, ವ್ಯಾಪಾರಿಗಳು, ದಲ್ಲಾಳಿಗಳು ಮತ್ತು ಗ್ರಾಹಕರ ಜತೆಗೆ ವಾಹನಗಳ ಸಂಖ್ಯೆಯೂ ಹೆಚ್ಚುವುದರಿಂದ, ಟ್ರಾಫಿಕ್ ಜಾಮ್ ಆಗಿ ಕಾಲಿಡದ ಪರಿಸ್ಥಿತಿ ಇದೆ. ಗೋಕುಲ ರಸ್ತೆಯಲ್ಲಿ ಗೊಬ್ಬರದ ಲಾರಿಗಳ ಸಾಲು ನಿಲ್ಲುವುದರಿಂದ ಗುಂಡಿಗಳು ಹೆಚ್ಚೆಚ್ಚು ಬಿದ್ದಿರುವುದರಿಂದ ರಸ್ತೆಯಲ್ಲಿ ಸಾಗಲು ನರಕಯಾತನೆ ಅನುಭವಿಸುವಂತಾಗಿದೆ. ಟಿಎಪಿಸಿಎಂಎಸ್ ರಸ್ತೆ ಗುಂಡಿ ಬಿದ್ದಿದ್ದರಿಂದ ದ್ವಿಚಕ್ರ ವಾಹನ ಸವಾರರು ಗುಂಡಿ ತಪ್ಪಿಸಲು ಹೋಗಿ ಅಪಘಾತಗಳು ನಡೆದಿದ್ದು ಉಂಟು. ನ್ಯಾಯ ಪಂಚಾಯಿತಿಗಳಾಗಿ ದಂಡ ನೀಡಿರುವುದು ಉಂಟು.
ಮಳೆಗಾಲದಲ್ಲಿ ಇನ್ನಷ್ಟು ದುಸ್ಥಿತಿ: ಇನ್ನು ಮಳೆಗಾಲ ಬಂದರಂತೆ ಅದರ ಪಾಡು ಹೇಳತೀರದು. ಈ ರಸ್ತೆಯಲ್ಲಿ ಹೇಗೆ ಓಡಾಡುವುದು? ಮಳೆ ನೀರು ಚರಂಡಿಗಳಿಗೆ ಹೋಗಲಾಗದೆ, ಗುಂಡಿಗಳಲ್ಲಿಯೇ ತುಂಬಿಕೊಳ್ಳುತ್ತದೆ. ಇದರಿಂದ ಸವಾರರು ಒಂದೆಡೆ ಇರಲಿ, ನಡೆದಾಡಲೂ ಸಾರ್ವಜನಿಕರು ಕಷ್ಟಪಡಬೇಕಾಗುತ್ತದೆ. ಈ ರಸ್ತೆ ಎರಡು ಮುಖ್ಯ ರಸ್ತೆಗಳಿಗೆ ಲಿಂಕ್ ನೀಡಲಿದ್ದು, ಪ್ರಮುಖವಾಗಿ ವ್ಯಾಪಾರ ವಹಿವಾಟು ನಡೆಸಲು ಅತ್ಯವಶ್ಯಕವಾಗಿದೆ. ಹದಗೆಟ್ಟಿರುವ ರಸ್ತೆಯನ್ನು ಕೂಡಲೇ ದುರಸ್ತಿಗೊಳಿಸಿ ಎನ್ನುತ್ತಾರೆ ಕರ್ನಾಟಕ ಪ್ರಜಾವೇದಿಕೆ ಜಿಲ್ಲಾಧ್ಯಕ್ಷ ಹುಣಸೂರು ಪಾಂಡು.
ಈ ರಸ್ತೆ ಲೋಕೋಪಯೋಗಿ ಇಲಾಖೆಯ ವ್ಯಾಪ್ತಿಗೆ ಬರುತ್ತದೆ. ಆದರೆ ಪುರಸಭೆ ವತಿಯಿಂದ ಅನುದಾನ ಮಂಜೂರಾಗಿದ್ದು, ಅಭಿವೃದ್ಧಿಪಡಿಸುತ್ತಿದ್ದಾರೆ ಎನ್ನುವುದು ಲೋಕೋಪಯೋಗಿ ಇಲಾಖೆ ಎಇಇ ವಾಸು ಅವರ ಪ್ರತಿಕ್ರಿಯೆ. ನಗರೋತ್ಪನ್ನ ಎರಡನೇ ಹಂತದಲ್ಲಿ 1.5 ಕೋಟಿ ವೆಚ್ಚದಲ್ಲಿ ಚರಂಡಿ ಮತ್ತು ರಸ್ತೆ ಡಾಂಬರೀಕರಣ ಕಾಮಗಾರಿಯನ್ನು ಶೀಘ್ರವೇ ಕಾಮಗಾರಿ ಪ್ರಾರಂಭಿಸುವುದಾಗಿ ಮುಖ್ಯಾಧಿಕಾರಿ ಹರೀಶ್ ಕನ್ನಡಪ್ರಭಕ್ಕೆ ಹೇಳಿದರು. ನಗರೋತ್ಪನ್ನ ಯೋಜನೆಯಡಿಯಲ್ಲಿ 5 ಕೋಟಿ ಅನುದಾನ ಮಂಜೂರಾತಿಯಾಗಿದ್ದು, ಇಲ್ಲಿನ ಪುರಸಭೆಯ ವ್ಯಾಪ್ತಿಯಲ್ಲಿ ಬರುವ ಗೋಕುಲ ರಸ್ತೆ ಮತ್ತು ಟಿಎಪಿಸಿಎಂಎಸ್ ರಸ್ತೆಯನ್ನು ಅಭಿವೃದ್ಧಿಪಡಿಸಲು ಈಗಾಗಲೇ ಅನುದಾನ ಮಂಜೂರಾತಿಯಾಗಿ, ಟೆಂಡರ್ ಪ್ರಕ್ರಿಯೆ ಮುಗಿದಿದೆ. ಶೀಘ್ರದಲ್ಲೆ ರಸ್ತೆಗಳ ಕಾಮಗಾರಿ ಅಭಿವೃದ್ಧಿಪಡಿಸುವೆ ಎಂದು ಶಾಸಕ ಮಂಜುನಾಥ್ ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

