ಚಾಲಕರು ಕಾರ್ಮಿಕ ಮಂಡಳಿ ಸದಸ್ಯತ್ವ ಪಡೆದುಕೊಳ್ಳಲಿ
ಕ.ಪ್ರ.ವಾರ್ತೆ , ಮೈಸೂರು , ಜು. 30
ಆಟೋ, ಮ್ಯಾಕ್ಸಿಕ್ಯಾಬ್, ಲಾರಿ ಚಾಲಕರು ಕಾರ್ಮಿಕ ಮಂಡಳಿಯ ಸದಸ್ಯರಾಗಿ ವಿವಿಧ ಸೌಲಭ್ಯ ಪಡೆದುಕೊಳ್ಳಬೇಕು ಎಂದು ಸಹಾಯಕ ಕಾರ್ಮಿಕ ಆಯುಕ್ತ ವೆಂಕಟೇಶ್ ಅ. ಶಿಂದಿಹಟ್ಟಿ ಮನವಿ ಮಾಡಿದರು.
ಮೈಸೂರು ಆದರ್ಶ ಆಟೋರಿಕ್ಷಾ ಚಾಲಕರ ವೇದಿಕೆಯು ಗಾಯತ್ರಿಪುರಂನಲ್ಲಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕಳೆದ ವರ್ಷ ಲ್ಯಾನ್ಸ್ಡೌನ್ ಕಟ್ಟಡ ದುರಂತದಲ್ಲಿ ಮೃತಪಟ್ಟ ಆಟೋ ಚಾಲಕ ಲೋಕೇಶ್ ಅವರ ಕುಟುಂಬಕ್ಕೆ ಕಾರ್ಮಿಕ ಇಲಾಖೆಯಿಂದ 2 ಲಕ್ಷ ಪರಿಹಾರದ ಚೆಕ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅಸಂಘಟಿತ ವಲಯದಲ್ಲಿ ಶೇ. 92 ಮಂದಿ ಕೆಲಸ ಮಾಡುತ್ತಿದ್ದು, ಇವರಿಗಾಗಿ ಕಾರ್ಮಿಕ ಕಲ್ಯಾಣ ಮಂಡಳಿಯಿದೆ. ಕಾನೂನು ರೂಪಿಸುವುದರ ಜೊತೆಗೆ ಸೌಲಭ್ಯ ಒದಗಿಸಲಾಗುತ್ತಿದೆ. ಕಾರ್ಮಿಕ ಮಂಡಳಿಯ ಸದಸ್ಯತ್ವ ಪಡೆದವರಿಗೆ ಅಪಘಾತ ಪರಿಹಾರ ಯೋಜನೆಯಡಿ 2 ಲಕ್ಷ ವಿಮೆ ಸೌಲಭ್ಯ ದೊರೆಯುತ್ತದೆ. ಇದಕ್ಕೆ 25 ಮಾತ್ರ ಪಾವತಿಸಿದರೆ ಸಾಕು.
ಯಾವುದೇ ಪ್ರೀಮಿಯಂ ಕಟ್ಟಬೇಕಿಲ್ಲ. ಸರ್ಕಾರದ ಅನುದಾನದಲ್ಲಿ ಪ್ರೀಮಿಯಂ ಪಾವತಿಸಲಾಗುತ್ತದೆ. ಚಾಲಕರು 25, ಭಾವಚಿತ್ರ ಮತ್ತು ಚಾಲನ ಪರವಾನಗಿ ನೀಡಿ ಸದಸ್ಯತ್ವ ಪಡೆಯಬಹುದು ಎಂದು ತಿಳಿಸಿದರು.
ಮುಂದಿನ ದಿನಗಳಲ್ಲಿ ವೈದ್ಯಕೀಯ ಚಿಕಿತ್ಸೆ ಸೌಲಭ್ಯವೂ ನೀಡಲು ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ಚರ್ಚಿಸಲಾಗುತ್ತಿದೆ. ಜಿಲ್ಲೆಯಲ್ಲಿ ಈವರೆಗೆ ಕೇವಲ 7700 ಚಾಲಕರು ಮಾತ್ರ ಕಾರ್ಮಿಕ ಕಲ್ಯಾಣ ಮಂಡಳಿಯ ಸದಸ್ಯತ್ವ ಪಡೆದು, ಗುರುತಿನ ಚೀಟಿ ಪಡೆದುಕೊಂಡಿದ್ದಾರೆ. ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಚಾಲಕರು ಸದಸ್ಯರಾಗಬೇಕು. ಈಗಾಗಲೇ ಸದಸ್ಯತ್ವ ಪಡೆದಿರುವವರು ಬಾಂಡ್ ಪಡೆದುಕೊಳ್ಳಬೇಕು ಎಂದು ಹೇಳಿದರು.
ಕಳೆದ ವರ್ಷ ರಾಷ್ಟ್ರೀಯ ಸ್ವಾಸ್ಥ್ಯ ಭೀಮಾ ಯೋಜನೆಯಡಿ 58 ಸಾವಿರ ಕುಟುಂಬದ 1.80 ಲಕ್ಷ ಜನರಿಗೆ ಸೌಲಭ್ಯ ಕಲ್ಪಿಸಲಾಗಿದೆ.
ಈ ಸೌಲಭ್ಯದಿಂದ ಒಳರೋಗಿಗಳಾಗಿ ದಾಖಲಾಗುವ ಚಾಲಕರಿಗೆ 30,000 ಚಿಕಿತ್ಸಾ ವೆಚ್ಚ ಭರಿಸಲಾಗುತ್ತದೆ ಎಂದರು.
ಅಸಂಘಟಿತ ಕಾರ್ಮಿಕರಿಗೆ ಹೊಸ ಪಿಂಚಣಿ ಯೋಜನೆ ಜಾರಿಗೆ ತರಲಾಗಿದ್ದು, ಈ ಯೋಜನೆಯಲ್ಲಿ ಪಿಆರ್ಎಎಂ ಕಾರ್ಡ್ ನೀಡಲಾಗುತ್ತದೆ.
ಆಟೋ, ಬಸ್, ಲಾರಿ ಚಾಲಕರು ತಿಂಗಳಿಗೆ 100 ಪಾವತಿಸಿದರೆ ನಿವೃತ್ತಿ ವೇಳೆಗೆ ಅವರಿಗೆ ಪಿಂಚಣಿ ನೀಡಲಾಗುತ್ತದೆ.
ಈ ಯೋಜನೆಯಡಿ ರಾಜ್ಯ ಸರ್ಕಾರವು ವರ್ಷಕ್ಕೆ 1200, ಕೇಂದ್ರ ಸರ್ಕಾರವು 1000 ನೀಡುತ್ತದೆ ಎಂದು ವಿವರಿಸಿದರು.
ಶಿಕ್ಷಣ ಕೊಡಿಸಿ: ಪತ್ರಿಕೋದ್ಯಮಿ ರಾಜಶೇಖರ ಕೋಟಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಆಟೋ ಚಾಲಕರು ತಮ್ಮ ವೃತ್ತಿ ಬಗ್ಗೆ ಕೀಳರಿಮೆ ಇರಿಸಿಕೊಳ್ಳಬಾರದು. ಮಕ್ಕಳನ್ನು ಚೆನ್ನಾಗಿ ಓದಿಸಬೇಕು. ಆಸ್ತಿ ಮಾಡುವುದಕ್ಕಿಂತ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವುದು ಮುಖ್ಯ ಎಂದು ಸಲಹೆ ನೀಡಿದರು.
ಆಟೋ ಚಾಲಕ ಲೋಕೇಶ್ ಅವರ ಪತ್ನಿ ಶೀಲಾ ಅವರಿಗೆ ಕಾರ್ಮಿಕ ಇಲಾಖೆಯಿಂದ ಕರ್ನಾಟಕ ರಾಜ್ಯ ಖಾಸಗಿ ವಾಣಿಜ್ಯ ವಾಹನ ಚಾಲಕರ ಅಪಘಾತ ಪರಿಹಾರ ಯೋಜನೆಯಡಿ 2 ಲಕ್ಷ ಪರಿಹಾರದ ಚೆಕ್ ವಿತರಿಸಲಾಯಿತು.
ಮಾಜಿ ಮೇಯರ್ ಅಯೂಬ್ಖಾನ್ ಅಧ್ಯಕ್ಷತೆ ವಹಿಸಿದ್ದರು. ನಗರಪಾಲಿಕೆ ಸದಸ್ಯ ಆರ್. ಅನಂತು, ಹಿರಿಯ ಕಾರ್ಮಿಕ ನಿರೀಕ್ಷಕ ಚೇತನ್, ಆದರ್ಶ ಆಟೋರಿಕ್ಷಾ ಚಾಲಕರ ವೇದಿಕೆ ಅಧ್ಯಕ್ಷ ಸರ್ದಾರ್ ಅಹಮದ್, ಪ್ರಧಾನ ಕಾರ್ಯದರ್ಶಿ ಸಿ. ನಾಗರಾಜ್, ಉಪಾಧ್ಯಕ್ಷ ಅಕ್ಸರ್ ಪಾಷಾ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

