ಪ್ರಭಾಕರ್ ಶೆಟ್ಟಿ ಅಪಹರಣ ಸುಖಾಂತ್ಯ
ಕ.ಪ್ರ.ವಾರ್ತೆ ಮೈಸೂರು ಜೂ. 3-
ಅಪಹರಣಕ್ಕೊಳಗಾಗಿದ್ದ ಮೈಸೂರಿನ ಉದ್ಯಮಿ ಪ್ರಭಾಕರ್ ಶೆಟ್ಟಿ ಅವರು ಸಿನೀಮಿಯ ರೀತಿಯಲ್ಲಿ ಸೋಮವಾರ ಮುಂಜಾನೆ ತಪ್ಪಿಸಿಕೊಂಡು ಬಂದಿದ್ದು, ಅಪಹರಣ ಪ್ರಕರಣವು ಸುಖಾಂತ್ಯ ಕಂಡಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ತಲೆ ಮರೆಸಿಕೊಂಡಿರುವ ಇನ್ನೂ 6 ಮಂದಿಗಾಗಿ ಪೊಲೀಸರು ಶೋಧ ಆರಂಭಿಸಿದ್ದಾರೆ.
ಗೋಕುಲಂ ನಿವಾಸಿ ಲಿಂಗರಾಜು (38), ಮಂಡ್ಯ ಜಿಲ್ಲೆ ಮದ್ದೂರು ತಾಲೂಕು ಕೊಪ್ಪ ಬಳಿಯ ಲಿಂಬನಾಯಕನಹಳ್ಳಿ ನಿವಾಸಿ ಸುರೇಶ್ (35) ಮತ್ತು ಹಾಸನ ಜಿಲ್ಲೆ ಅರಸೀಕೆರೆ ನಿವಾಸಿ ಶಿವು (33) ಬಂಧಿತ ಆರೋಪಿಗಳು. ಇವರು ಎಸ್‌ವಿಇಐ ಖಜಾಂಚಿ, ಗೋಕುಲಂ ನಿವಾಸಿಯಾದ ಉದ್ಯಮಿ ಪ್ರಭಾಕರ್ ಶೆಟ್ಟಿ (55) ಅವರನ್ನು ಭಾನುವಾರ ಅಪಹರಿಸಿದ್ದರು.
ಶೆಟ್ಟಿ ತಪ್ಪಿಸಿಕೊಂಡರು: ಸೋಮವಾರ ಮುಂಜಾನೆ ಪ್ರಭಾಕರ್ ಶೆಟ್ಟಿ ಅಪಹರಣಕಾರರಿಂದ ಹೇಗೊ ತಪ್ಪಿಸಿಕೊಂಡು, ಸಮೀಪದಲ್ಲಿರುವ ಮಂಡಿ ಠಾಣೆ ಪೊಲೀಸರಿಗೆ ತೆರಳಿ, ಅಪಹರಣ ವೃತ್ತಾಂತವನ್ನು ಹೇಳಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು, ಸ್ಥಳಕ್ಕೆ ಧಾವಿಸುವಷ್ಟರಲ್ಲಿ ಆರೋಪಿಗಳು ಪರಾರಿಯಾಗಿದ್ದರು.
ಪೊಲೀಸರು, ಮಂಡಿ ಮೊಹಲ್ಲಾ ಪಂಚಮುಖಿ ದೇವಸ್ಥಾನದ ಬಳಿಯಿರುವ ಪಾಳು ಮನೆಯನ್ನು ಪರಿಶೀಲಿಸಿದಾಗ ಲಿಂಗರಾಜು, ಸುರೇಶ್ ಮತ್ತು ಶಿವು ಸಿಕ್ಕಿಬಿದ್ದರು.
ಈ ಅಪಹರಣ ಪ್ರಕರಣವನ್ನು ಮಂಡಿ ಠಾಣೆ ಪೊಲೀಸರು ಮುಂದಿನ ತನಿಖೆಗಾಗಿ ಮೈಸೂರು ದಕ್ಷಿಣ ಠಾಣೆ ಪೊಲೀಸರಿಗೆ ವರ್ಗಾಯಿಸಿದ್ದಾರೆ. ಉಳಿದ 6 ಮಂದಿ ಆರೋಪಿಗಳ ಪತ್ತೆಗಾಗಿ ಪೊಲೀಸರು ಶೋಧ ಮುಂದುವರಿಸಿದ್ದಾರೆ.
ಕಾರಣವೇನು?
ಶ್ರೀರಂಗಪಟ್ಟಣದಲ್ಲಿ ಬಿಂದಾಸ್ ಬಾರ್ ಮಾಲೀಕನಾದ ಲಿಂಗರಾಜು, ಉದ್ಯಮಿ ಪ್ರಭಾಕರ್ ಶೆಟ್ಟಿ ಅವರಿಂದ 30 ಲಕ್ಷ ವರೆಗೆ ಸಾಲ ಪಡೆದಿದ್ದರು. ಆದರೆ, ಸಾಲ ವಾಪಸ್ ನೀಡಿರಲಿಲ್ಲ. ಈ ವಿಚಾರದಲ್ಲಿ ಲಿಂಗರಾಜು ಮತ್ತು ಶೆಟ್ಟಿ ನಡುವೆ ಜಗಳವಾಗಿತ್ತು. ಈ ಕಾರಣಕ್ಕಾಗಿ ಲಿಂಗರಾಜು ವೃತ್ತಿಪರ ಅಪಹರಣಕಾರರ ತಂಡಕ್ಕೆ ಶೆಟ್ಟಿ ಅವರನ್ನು ಅಪಹರಿಸಲು ಸುಪಾರಿ ನೀಡಿದ್ದ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

