ಗ್ರಂಥಾಲಯ ಗಣಕೀಕರಣಕ್ಕೆ ಸಿದ್ಧತೆ
ಡಿ.ಎನ್. ಮಹೇಂದ್ರ
ಕ.ಪ್ರ.ವಾರ್ತೆ ಮೈಸೂರು ಜೂ. 6
ನಗರ ಕೇಂದ್ರ ಗ್ರಂಥಾಲಯ ಗಣಕೀಕರಣಗೊಳಿಸಲು ಗ್ರಂಥಾಲಯ ಪ್ರಾಧಿಕಾರ ತೀರ್ಮಾನಿಸಿದೆ.
ನಗರ ಕೇಂದ್ರ ಗ್ರಂಥಾಲಯದಲ್ಲಿ ಇನ್ನು ಪುಸ್ತಕಗಳಿಗಾಗಿ ಓದುಗರು ಹುಡುಕುವ ಗೋಜಿಗೆ ಹೋಗಬೇಕಿಲ್ಲ. ಪ್ರತಿ ರ್ಯಾಕ್ನಲ್ಲಿ ಅಂಟಿಸಲಾದ ವಿಷಯವಾರು ಮಾಹಿತಿ ಪಟ್ಟಿ ನೋಡುತ್ತ ರ್ಯಾಕ್ನಿಂದ ರ್ಯಾಕಿಗೆ ಹೋಗುವ ಅಗತ್ಯವೂ ಇಲ್ಲ. ಏಕೆಂದರೆ ಸದ್ಯದಲ್ಲಿಯೆ ನಗರ ಕೇಂದ್ರ ಗ್ರಂಥಾಲಯವನ್ನು ಗಣಕೀಕರಣಗೊಳಿಸಲಾಗುವುದು.
ಈ ಗ್ರಂಥಾಲಯದಲ್ಲಿನ ಸುಮಾರು 1 ಲಕ್ಷಕ್ಕೂ ಅಧಿಕ ಪುಸ್ತಕದ ಹೆಸರು ಮತ್ತು ಲೇಖಕರ ಹೆಸರನ್ನು ಕಂಪ್ಯೂಟರ್ಗೆ ಅಳವಡಿಸುವುದರಿಂದ ಪುಸ್ತಕ ಹುಡುಕಾಟ ಸುಲಭವಾಗುತ್ತದೆ. ಪುಸ್ತಕದ ಹೆಸರು ಮತ್ತು ಲೇಖಕರ ಹೆಸರನ್ನು ನಮೂದಿಸಿದರೆ ಯಾವ ರ್ಯಾಕ್ನಲ್ಲಿ ಪುಸ್ತಕ ಇದೆ ಎಂಬ ಮಾಹಿತಿಯನ್ನು ಕಂಪ್ಯೂಟರ್ ನೀಡುತ್ತದೆ.
ಗ್ರಂಥಾಲಯಗಳಲ್ಲಿ ಪುಸ್ತಕಗಳ ವರ್ಗೀಕರಣವನ್ನು ಡೆವಿ ದಶಮಾಂಶ ವರ್ಗೀಕರಣ ಅಥವಾ ಕೋಲನ್ ವರ್ಗೀಕರಣದ ಮಾದರಿಯಲ್ಲಿ ಜೋಡಿಸಲಾಗುತ್ತದೆ. ಈಗ ನಗರ ಕೇಂದ್ರ ಗ್ರಂಥಾಲಯದಲ್ಲಿ ಕೋಲನ್ ವರ್ಗೀಕರಣದ ಮಾದರಿಯಲ್ಲಿ ಪುಸ್ತಕ ಜೋಡಿಸಲಾಗಿದೆ. ಆದರೆ, ಈಗ ಗಣಕೀಕರಣಗೊಳಿಸುವಾಗ ಡೆವಿ ದಶಮಾಂಶ ವರ್ಗೀಕರಣ ಮಾದರಿಯಲ್ಲಿ ಜೋಡಿಸಲಾಗುತ್ತದೆ.
ಇತಿಹಾಸ, ಅರ್ಥಶಾಸ್ತ್ರ, ಕಾನೂನು ಶಾಸ್ತ್ರ, ನ್ಯಾಯಶಾಸ್ತ್ರ, ರಾಜ್ಯಶಾಸ್ತ್ರ, ಪ್ರಾಣಿಶಾಸ್ತ್ರ, ಪರಿಸರ ಅಧ್ಯಯನ, ಕನ್ನಡ ಸಾಹಿತ್ಯ ಚರಿತ್ರೆ, ಕಾದಂಬರಿ, ಕವನ ಸಂಕಲನ, ನಾಟಕ, ಸಣ್ಣಕತೆಗಳು, ಇಂಗ್ಲಿಷ್ ಕಾದಂಬರಿ, ನಾಟಕಗಳು, ಸ್ಪರ್ಧಾತ್ಮಕ ಪರೀಕ್ಷಾ ಪುಸ್ತಕಗಳು, ಮಕ್ಕಳ ಸಾಹಿತ್ಯ ಸೇರಿದಂತೆ ಹಲವು ಪ್ರಕಾರದ ಪುಸ್ತಕಗಳನ್ನು ಕ್ರಮವಾಗಿ ಜೋಡಿಸಲಾಗುತ್ತದೆ.
ಪಾರಂಪರಿಕ ಮಾದರಿ: ನಗರ ಕೇಂದ್ರ ಗ್ರಂಥಾಲಯದಲ್ಲಿನ ಪುಸ್ತಕ ಜೋಡಿಸುವ ರ್ಯಾಕ್ಗಳನ್ನು ಪಾರಂಪರಿಕ ಮಾದರಿಯಲ್ಲಿ ನಿರ್ಮಿಸಲು ಉದ್ದೇಶಿಸಲಾಗಿದೆ. ಈಗ ಹಳೆಯ ಸಂಪ್ರದಾಯದ ರ್ಯಾಕ್ಗಳನ್ನು ಬಳಸಲಾಗುತ್ತಿದೆ. ಹಲವು ಕಡೆಗಳಲ್ಲಿ ಬೀರುವಿನಲ್ಲಿ ಪುಸ್ತಕ ಸಂಗ್ರಹಿಸಲಾಗಿದೆ. ಗಣಕೀಕರಣ ವೇಳೆ ಪಾರಂಪರಿಕ ಮಾದರಿಯ ರ್ಯಾಕ್ಗಳನ್ನು ನಿರ್ಮಿಸಿ ಪುಸ್ತಕ ಜೋಡಿಸಲಾಗುತ್ತದೆ. ಆಗ ಪಾರಂಪರಿಕ ನಗರದ ಘನತೆಗೆ ತಕ್ಕಂತೆ ಪುಸ್ತಕ ಜೋಡಿಸಲು ಅನುಕೂಲವಾಗಲಿದೆ ಎಂದು ಇಲಾಖೆ ಉಪ ನಿರ್ದೇಶಕ ಮಂಜುನಾಥ್ ಅಭಿಪ್ರಾಯಪಟ್ಟಿದ್ದಾರೆ.
ಸಿಸಿ ಕ್ಯಾಮೆರಾ: ಜುಲೈ ತಿಂಗಳಿಂದ ಗ್ರಂಥಾಲಯದ ಗಣಕೀಕರಣ ಕಾರ್ಯ ಆರಂಭವಾಗಲಿದೆ. ಅಲ್ಲದೆ, ಗ್ರಂಥಾಲಯದ ಒಳ ಆವರಣದಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲು ಸಹ ಚಿಂತಿಸಲಾಗಿದೆ. ಕೆಲವು ಓದಗರು ಅಥವಾ ವಿದ್ಯಾರ್ಥಿಗಳು ಪುಸ್ತಕ ಹುಡುಕುವ ನೆಪದಲ್ಲಿ ಪುಸ್ತಕದ ಹಾಳೆ ಕೀಳುವುದು, ಪಿಸುಪಿಸು ಮಾತನಾಡುವುದನ್ನು ತಪ್ಪಿಸಲು ಸಿಸಿ ಕ್ಯಾಮೆರಾ ಅಳವಡಿಸಲಾಗುತ್ತಿದೆ.ನಗರ ಕೇಂದ್ರ ಗ್ರಂಥಾಲಯದ ಜೊತೆಗೆ ಜೆ.ಪಿ. ನಗರ, ಉದಯಗಿರಿ ಮತ್ತು ವಿವೇಕಾನಂದನಗರದಲ್ಲಿನ ಶಾಖಾ ಗ್ರಂಥಾಲಯ ಗಣಕೀಕರಣಗೊಳಿಸಲು ಉದ್ದೇಶಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

