ಮೈಸೂರು

4 ಪರಿಷ್ಕೃತ ವಿಶ್ವಕೋಶ ಸಂಪುಟ ಬಿಡುಗಡೆಗೆ ಸಿದ್ಧತೆ

Published On :

 ಅಂಶಿ ಪ್ರಸನ್ನಕುಮಾರ್
ಕ.ಪ್ರ.ವಾರ್ತೆ   ಮೈಸೂರು   ಜೂ. 9
ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಹೆಮ್ಮೆಯ ಪ್ರಕಟಣೆಗಳಾದ ವಿಶ್ವಕೋಶಗಳ ನಾಲ್ಕು ಸಂಪುಟಗಳ ಪರಿಷ್ಕೃತ ಮರು ಮುದ್ರಣ ಆವೃತ್ತಿಗಳು ಜುಲೈ 15ರ ವೇಳೆಗೆ ಸಿದ್ಧವಾಗಲಿವೆ.
ಈಗಾಗಲೇ 1 ಮತ್ತು 2ನೇ ಸಂಪುಟಗಳು ಪರಿಷ್ಕೃತಗೊಂಡು, ಮರು ಮುದ್ರಣಗೊಂಡಿವೆ. 4ನೇ ಸಂಪುಟ ಬಿಡುಗಡೆಗೆ ಸಿದ್ಧವಾಗಿದೆ. ಇದೀಗ 3,5,6 ಮತ್ತು 7ನೇ ಸಂಪುಟಗಳ ಪರಿಷ್ಕರಣೆ, ಚಿತ್ರ ಅಳವಡಿಕೆ ಕಾರ್ಯ ನಡೆಯುತ್ತಿದೆ. ಇದು ಮುಗಿದ ನಂತರ ಮುದ್ರಣ ಕಾರ್ಯ ಆರಂಭವಾಗಲಿದೆ ಎಂದು ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ ಪ್ರೊ. ನೀಲಗಿರಿ ಎಂ. ತಳವಾರ್ ಅವರು ಕನ್ನಡಪ್ರಭಕ್ಕೆ ತಿಳಿಸಿದರು. ಅಲ್ಲಿಗೆ ವಿಶ್ವಕೋಶಗಳ 14 ಸಂಪುಟಗಳ ಪೈಕಿ 7 ಸಂಪುಟಗಳ ಪರಿಷ್ಕರಣೆ ಮುಕ್ತಾಯವಾಗಲಿದ್ದು, ಉಳಿದ ಸಂಪುಟಗಳ ಕಾರ್ಯವನ್ನು ನಂತರ ಆರಂಭಿಸಲಾಗುವುದು. ಈ ಸಂಬಂಧ ಈಗಾಗಲೇ ಸಿಬ್ಬಂದಿಗೆ, ಹೊರಸಂಪನ್ಮೂಲ ವ್ಯಕ್ತಿಗಳಿಗೆ ಅಗತ್ಯ ಮಾಹಿತಿ ನೀಡಲಾಗುತ್ತಿದೆ. ಈ ಕಾರ್ಯ ಕೂಡ ಮುಂದಿನ ಆರೇಳು ತಿಂಗಳುಗಳಲ್ಲಿ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ ಎಂದರು.
ವಿಷಯ ವಿಶ್ವಕೋಶಗಳು: ವಿಷಯ ವಿಶ್ವಕೋಶಗಳ ಪೈಕಿ ಮಾಹಿತಿ ತಂತ್ರಜ್ಞಾನ ಮತ್ತು ಗಣಕ ವಿಜ್ಞಾನ ಜು. 15ರ ವೇಳೆಗೆ ಮುದ್ರಣ ಸಿದ್ಧವಾಗಲಿದೆ. ವೈದ್ಯವಿಜ್ಞಾನ ವಿಷಯಕೋಶ ಕೂಡ ಶೇ. 50ರಷ್ಟು ಸಿದ್ಧವಾಗಿದೆ.
ಇತ್ತೀಚೆಗೆ ಸಂಪಾದಕ ಮಂಡಳಿಯ ಸಭೆ ನಡೆಸಿ, ಆದಷ್ಟು ಬೇಗ ಪೂರ್ಣಗೊಳಿಸಲು ತೀರ್ಮಾನಿಸಲಾಗಿದೆ. ಮಾನವಶಾಸ್ತ್ರ, ಭೂವಿಜ್ಞಾನ ವಿಷಯ ವಿಶ್ವಕೋಶಗಳ ಕೆಲಸ ನಡೆಯುತ್ತಿದೆ. ಸಸ್ಯವಿಜ್ಞಾನ ವಿಷಯಕೋಶಕ್ಕೆ ಅನುಮೋದನೆ ಸಿಕ್ಕಿದೆ.
ಶಾಸ್ತ್ರೀಯ ಭಾಷಾ ಯೋಜನೆ: ಕನ್ನಡಕ್ಕೆ ಶಾಸ್ತ್ರೀಯ ಭಾಷಾ ಸ್ಥಾನಮಾನ ಸಿಕ್ಕಿರುವ ಹಿನ್ನೆಲೆಯಲ್ಲಿ ಕೈಗೊಳ್ಳಲಾಗಿರುವ ಯೋಜನೆಗೆ ರಾಜ್ಯ ಸರ್ಕಾರದಿಂದ 1 ಕೋಟಿ ಅನುದಾನ ಸಿಕ್ಕಿದೆ. ಇದರಲ್ಲಿ ಎಪಿಗ್ರಾಫಿಯಾ ಕರ್ನಾಟಿಕ, ಕರ್ನಾಟಕದ ಅರಸು ಮನೆತನಗಳು ಸೇರಿದಂತೆ ವಿಷಯವಾರು 32 ಗ್ರಂಥಗಳು ಪ್ರಕಟವಾಗಿವೆ. ಇತರೆ 20 ಬೇರೆ ಬೇರೆ ಗ್ರಂಥಗಳ ಸಂಪಾದನಾ ಕಾರ್ಯ ನಡೆಯುತ್ತಿದೆ. ವಿಷಯ ವಿಶ್ವಕೋಶದ 1ನೇ ಸಂಪುಟದ ಇಂಗ್ಲಿಷ್ ಅನುವಾದ ಕಾರ್ಯ ಕೂಡ ನಡೆಯುತ್ತಿದೆ. ಇನ್ನೂ 30 ಪುಟಗಳು ಅನುವಾದವಾಗಿ ಬಂದಲ್ಲಿ 1000 ಪುಟಗಳ ಕರ್ನಾಟಕ ವಿಷಯ ವಿಶ್ವಕೋಶದ ಇಂಗ್ಲಿಷ್ ಅನುವಾದ ಸಿದ್ಧವಾಗುತ್ತದೆ. ಇದಕ್ಕೆಲ್ಲಾ 44 ಲಕ್ಷ ವೆಚ್ಚವಾಗಿದೆ. 16 ಲಕ್ಷದಲ್ಲಿ ಹೊನ್ನಕೋಗಿಲೆ ಯೋಜನೆ ಕೈಗೊಳ್ಳಲಾಗಿದೆ. ಈ ಎಲ್ಲಾ ಕಾರ್ಯಗಳು ಪೂರ್ಣಗೊಂಡ ನಂತರ ಬಳಕೆ ಪ್ರಮಾಣಪತ್ರ ನೀಡಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೂಲಕ ರಾಜ್ಯ ಸರ್ಕಾರದಿಂದ ಶಾಸ್ತ್ರೀಯ ಭಾಷೆಯ ಯೋಜನೆಯಡಿ ಮತ್ತೆ ಅನುದಾನ ಕೋರಲಾಗುವುದು ಎಂದು ಪ್ರೊ. ನೀಲಗಿರಿ ಎಂ. ತಳವಾರ್ ವಿವರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.