ಸಾಲ ನೀಡದ ಬ್ಯಾಂಕ್ಗಳ ವಿರುದ್ಧ ಕ್ರಮ
ಕ.ಪ್ರ.ವಾರ್ತೆ ಕೆ.ಆರ್. ನಗರ ಜೂ. 10
ಸರ್ಕಾರದ ವಿವಿಧ ಯೋಜನೆಯಲ್ಲಿ ಆಯ್ಕೆಯಾದ ಫಲಾನುಭವಿಗಳಿಗೆ ಸಾಲ ಸೌಲಭ್ಯ ನೀಡಲು ಹಿಂಜರಿಯುತ್ತಿರುವ ಬ್ಯಾಂಕ್ಗಳ ವಿರುದ್ಧ ಕೈಗೊಳ್ಳುವುದು, ಶಾಲಾ ಮಕ್ಕಳಿಗೆ ಸಕಾಲದಲ್ಲಿ ಪಠ್ಯಪುಸ್ತಕ ಮತ್ತು ಸಮವಸ್ತ್ರ ವಿತರಣೆ ಹಾಗೂ ಸಾಂಕ್ರಾಮಿಕ ರೋಗ ಹರಡದಂತೆ ಆರೋಗ್ಯ ಇಲಾಖೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕೆಂದು ತಾಪಂ ಸದಸ್ಯರು ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚಿಸಿದರು.
ಅಧ್ಯಕ್ಷೆ ಕವಿತಾ ರವಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸದಸ್ಯ ಮಹದೇವಸ್ವಾಮಿ ಮಾತನಾಡಿ, ವಿವಿಧ ಯೋಜನೆಯಡಿಯಲ್ಲಿ ಪ. ಜಾತಿ ಮತ್ತು ಪಂಗಡದ ಫಲಾನುಭವಿಗಳನ್ನು ಆಯ್ಕೆ ಮಾಡಿ ಪಟ್ಟಿಯನ್ನು ಬ್ಯಾಂಕ್ಗಳಿಗೆ ನೀಡಲಾಗಿದ್ದರೂ ಸಾಲ ನೀಡುವಲ್ಲಿ ಬ್ಯಾಂಕ್ಗಳು ವಿಫಲಗೊಂಡಿವೆ ಎಂದು ದೂರಿದರು.
ಅಂತಹ ಬ್ಯಾಂಕ್ಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕಳೆದ ಸಭೆಯಲ್ಲಿ ಹೇಳಿದರು. ಯಾವುದೇ ಪ್ರಯೋಜನವಾಗಿಲ್ಲ. ಆದರೂ ಸಭೆಗಳನ್ನು ಏಕೆ ನಡೆಸಬೇಕೆಂದು ಪಶ್ನಿಸಿದರು.
ಹೊಸೂರು ಸರ್ಕಾರಿ ಶಾಲೆಯ ಆವರಣದಲ್ಲಿ ಪರಿಸರ ಕಲುಷಿತಗೊಂಡಿದ್ದು, ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಬಿಇಒ ಕೂಡಲೆ ಇತ್ತ ಗಮನಹರಿಸಿ ಶಾಲೆಯ ನೈರ್ಮಲ್ಯ ಕಾಪಾಡುವಂತೆ ಸೂಚಿಸಿದರು.
ಸದಸ್ಯ ಸೀತಾರಾಮ್ ಮಾತನಾಡಿ, ಮಿರ್ಲೆ ಗ್ರಾಮದ ಮಿಥಿಲಾ ವಿದ್ಯಾಸಂಸ್ಥೆ ಅನುದಾನಕ್ಕೆ ಒಳಪಟ್ಟಿದ್ದು, ಸರ್ಕಾರದಿಂದ ಸೌಲಭ್ಯ ಪಡೆಯುತ್ತಿದ್ದರೂ ಎಂಟನೇ ತರಗತಿಯ ವಿದ್ಯಾರ್ಥಿಗಳ ದಾಖಲಾತಿ ಮಾಡಿಕೊಳ್ಳಲು ನಿಯಮ ಮೀರಿ ಡೊನೇಷನ್ ಪಡೆಯುತ್ತಿದ್ದಾರೆ. ಬಿಇಒ ಕೂಡಲೇ ಶಾಲೆಗೆ ಭೇಟಿ ನೀಡಿ ಆಡಳಿತ ಮಂಡಳಿ ವಿರುದ್ದ ಶಿಸ್ತು ಕ್ರಮ ಕೈಗೊಂಡು ವಿದ್ಯಾರ್ಥಿಗಳಿಂದ ಪಡೆದಿರುವ ಹೆಚ್ಚುವರಿ ಹಣವನ್ನು ವಾಪಸ್ ಕೊಡಿಸುವಂತೆ ಆಗ್ರಹಿಸಿದರು. ಶಾಲೆಗಳಿಗೆ ಶೌಚಾಲಯ ಮತ್ತು ಕುಡಿಯುವ ನೀರಿನ ವ್ಯವಸ್ಥೆಯನ್ನು ಅಗತ್ಯವಾಗಿ ಕಲ್ಪಿಸುವಂತೆ ಹೇಳಿದರು.
ಸದಸ್ಯೆ ಹೇಮಾವತಿ ಮಾತನಾಡಿ, 12ನೇ ವಾರ್ಡ್ನ ಕಂಠೇನಹಳ್ಳಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ನೀಡುವ ವಿದ್ಯಾರ್ಥಿ ವೇತನದಲ್ಲಿ ಕಡಿತ ಮಾಡಿ ನೀಡುತ್ತಿದ್ದಾರೆ. ಈ ಶಾಲೆಯಲ್ಲಿ ಹೆಚ್ಚು ಪ. ಜಾತಿ ಮಕ್ಕಳೆ ಇದ್ದು, ವೇತನ ಕಡಿಮೆ ಮಾಡಿ ನೀಡುವುದರಿಂದ ಅನಾನುಕೂಲವಾಗಿದೆ. ಆದ್ದರಿಂದ ಸಮಾಜ ಕಲ್ಯಾಣ ಇಲಾಖಾಧಿಕಾರಿಗಳು ಈ ಬಗ್ಗೆ ಪರಿಶೀಲಿಸಿ ಮಕ್ಕಳಿಗೆ ನ್ಯಾಯ ಒದಗಿಸುವಂತೆ ಸೂಚಿಸಿದರು.
ಎಲ್ಲೆಡೆ ಡೆಂಘೀ ಜ್ವರ ಇರುವುದರಿಂದ ಆಯಾ ಗ್ರಾಪಂ ಅಧಿಕಾರಿಗಳು ಮತ್ತು ಆರೋಗ್ಯ ಇಲಾಖೆಯವರು ಸಾಂಕ್ರಾಮಿಕ ರೋಗಗಳು ಹರಡದಂತೆ ಎಚ್ಚರ ವಹಿಸಬೇಕು. ಸರ್ಕಾರ ವಿದ್ಯಾರ್ಥಿನಿಲಯಗಳನ್ನು ಈ ತಿಂಗಳ ಒಂದರಿಂದಲೇ ಪ್ರಾರಂಭ ಮಾಡಿ ವಿದ್ಯಾರ್ಥಿಗಳನ್ನು ದಾಖಲು ಮಾಡಿಕೊಂಡು ಸೌಲಭ್ಯ ನೀಡುವಂತೆ ಆದೇಶ ನೀಡಿದ್ದರೂ ತಾಲೂಕಿನ ಹೊಸೂರು ಗ್ರಾಮದ ನಿಲಯವನ್ನು ಇಂದಿನವರೆಗೂ ತೆರೆದಿಲ್ಲ. ಜೊತೆಗೆ ಕಳೆದ ವರ್ಷ ನೀಡಬೇಕಾದ ಸವಲತ್ತುಗಳನ್ನು ಮಕ್ಕಳಿಗೆ ನೀಡಿಲ್ಲ ಎಂದು ಸದಸ್ಯೆ ಶಶಿಕಲಾ ರಮೇಶ್ ದೂರಿದರು.
ನಾಲೆಗಳ ಆಧುನೀಕರಣ ಕಾಮಗಾರಿ ನಡೆಯುತ್ತಿರುವುದರಿಂದ ನಾಲೆಗಳಿಗೆ ನೀರು ಹರಿಸುವ ದಿನಾಂಕ ತಿಳಿಸುವಂತೆ ಸೂಚಿಸಿದರು. ಆದರೆ ಸಂಬಂಧಪಟ್ಟ ಹಾರಂಗಿ ಎಇಇ ರಾಜೇಗೌಡ ಸಭೆಗೆ ಹಾಜರಾಗದ ಕಾರಣಕ್ಕೆ ತೀವ್ರ ತರಾಟೆಗೆ ತೆಗೆದುಕೊಂಡ ಸದಸ್ಯರು ಸಭೆ ಮುಗಿಯುವ ಮುನ್ನ ಕರೆಸುವಂತೆ ಇಒ ಅವರಿಗೆ ಸೂಚಿಸಿದರು.
ಸಭೆಯಲ್ಲಿ ಉಪಾಧ್ಯಕ್ಷೆ ಶಕುಂತಲಾ, ಸ್ಥಾಯಿ ಸಮಿತಿ ಅಧ್ಯಕ್ಷ ಸಾದಿಕ್ಖಾನ್, ಇಒ ಬಸವರಾಜ್ ಹಾಗೂ ಸದಸ್ಯರು, ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

