ಖಾಸಗಿ ಫೈನಾನ್ಸ್ ಕಂಪನಿ ನಿಷೇಧಕ್ಕೆ ಆಗ್ರಹ
ಎಚ್.ಡಿ. ಕೋಟೆ: ಮಣಪ್ಪುರಂ ಫೈನಾನ್ಸ್ ಕಂಪನಿಯನ್ನು ರಾಜ್ಯದಲ್ಲಿ ನಿಷೇಧಿಸುವಂತೆ ತಾಲೂಕಿನ ಬಾಚೆಗೌಡನಹಳ್ಳಿಯ ಬಿಜಿಎಸ್ ರೂರಲ್ ಡೆವಲಪ್ಮೆಂಟ್ ಪಬ್ಲಿಕ್ ಟ್ರಸ್ಟ್ನ ಅಧ್ಯಕ್ಷ ಎಸ್. ಕೃಷ್ಣೇಗೌಡ ಮುಖ್ಯಮಂತ್ರಿಗಳನ್ನು ಒತ್ತಾಯಿಸಿದ್ದಾರೆ. ರಾಜ್ಯದ ಎಲ್ಲ ತಾಲೂಕು, ಜಿಲ್ಲೆಗಳ ಮತ್ತು ಮುಖ್ಯ ಪಟ್ಟಣಗಳಲ್ಲಿ ಮಣಪುರಂ ಫೈನಾನ್ಸ್ ಕಾರ್ಯನಿರ್ವಹಿಸುತ್ತಿದ್ದು, ಸುಮಾರು 15 ವರ್ಷಗಳ ಹಿಂದಿನಿಂದಲೂ ಜನಸಾಮಾನ್ಯರಿಗೆ ಕಡಿಮೆ ಬಡ್ಡಿ ದರದಲ್ಲಿ ಚಿನ್ನದ ಮೇಲೆ ಹೆಚ್ಚು ಸಾಲ ನೀಡುವುದಾಗಿ ಸೆಲೆಬ್ರೆಟಿಗಳ ಜಾಹೀರಾತಿನ ಮುಖೇನ ಜನರನ್ನು ಆಕರ್ಷಿಸಿ ವ್ಯವಸ್ಥಿತವಾಗಿ ಜನಸಾಮಾನ್ಯರಿಗೆ ಮೋಸ ಮಾಡುತ್ತಾ ಬಂದಿದೆ ಎಂದು ಆರೋಪಿಸಿದ್ದಾರೆ. ಕಡಿಮೆ ಬಡ್ಡಿ ದರದಲ್ಲಿ ಹೆಚ್ಚು ಸಾಲ ನೀಡುವುದಾಗಿ ನಂಬಿಸಿ ದಿನಕ್ಕೆ ಬಡ್ಡಿ, ಚಕ್ರಬಡ್ಡಿ ಇತ್ಯಾದಿ ಬಡ್ಡಿಗಳನ್ನು ಒಂದರ ಮೇಲೋದರಂತೆ ಹಾಕಿ ಜನರು ತಮ್ಮ ಚಿನ್ನವನ್ನು ವಾಪಸ್ ಪಡೆಯಲಾಗದ ರೀತಿ ವಂಚಿಸುತ್ತಿದೆ ಎಂಬುದು ದೂರು.
ಬಾಲಕಾರ್ಮಿಕ ವಿರೋಧಿ ದಿನ
ಭೇರ್ಯ: ಇಲ್ಲಿಗೆ ಸಮೀಪದ ಗೇರದಡ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ವಿಶ್ವ ಬಾಲ ಕಾರ್ಮಿಕ ವಿರೋಧಿ ದಿನಾಚರಣೆಯನ್ನು ಕುಪ್ಪಳ್ಳಿ ಕ್ಲಸ್ಟರ್ ಸಿಆರ್ಪಿ ತುಳಸಿರಾಮ್ ನಾಯಕ್ ಉದ್ಘಾಟಿಸಿದರು. ನಂತರ ಮಾತನಾಡಿ, 14 ವರ್ಷದೊಳಗಿನ ಮಕ್ಕಳ ದುಡಿಮೆ ಮತ್ತು ಕಾರ್ಮಿಕರಾಗಿ ಕೆಲಸ ಮಾಡುತ್ತಿರುವುದು ಕಂಡುಬಂದರೆ ಅಂತಹ ಮಕ್ಕಳ ಪೋಷಕರಲ್ಲಿ ಮಕ್ಕಳ ಮುಂದಿನ ವಿದ್ಯಾಭ್ಯಾಸದಲ್ಲಿ ಅರಿವು ಮೂಡಿಸಿ ಶಾಲೆಗೆ ಸೇರಿಸುವ ಕೆಲಸವನ್ನು ಶಿಕ್ಷಕರು ಮಾಡಬೇಕೆಂದು ಹೇಳಿದರು. ಮುಖ್ಯಶಿಕ್ಷಕ ಕೃಷ್ಣಶೆಟ್ಟಿ, ಸಹಶಿಕ್ಷಕ ಬಸವರಾಜು, ಆರೋಗ್ಯ ಸಹಾಯಕಿ ಡಿಸೋಜಾ, ಪರಮೇಶ್, ಅಂಗನವಾಡಿ ಕಾರ್ಯಕರ್ತೆ ಭಾಗ್ಯಮ್ಮ, ಸಹಾಯಕಿ ಶಿವಮ್ಮ ಇದ್ದರು.
ನಾಳೆ ಜೆಡಿಎಸ್ ಕೃತಜ್ಞತಾ ಸಭೆ
ಪಿರಿಯಾಪಟ್ಟಣ: ಜೆಡಿಎಸ್ ತಾಲೂಕು ಘಟಕದ ವತಿಯಿಂದ ಜೂ.17 ರಂದು ಕೃತಜ್ಞತಾ ಸಮಾರಂಭ ಏರ್ಪಡಿಸಿದೆ ಎಂದು ಅಧ್ಯಕ್ಷ ಕೆ. ಮಹದೇವ್ ಹೇಳಿದರು. ಕಳೆದ ವಿಧಾಸಭಾ ಚುನಾವಣೆಯಲ್ಲಿ ತಾಲೂಕಿನಲ್ಲಿ ಜೆಡಿಎಸ್ ಪಕ್ಷದ ಪರ ದುಡಿದ ಎಲ್ಲ ರಾಜ್ಯನಾಯಕರು, ಜಿಪಂ, ತಾಪಂ ಸದಸ್ಯರು ಹಾಗೂ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸುವ ಸಲುವಾಗಿ ಸಮಾರಂಭ ಏರ್ಪಡಿಸಿದ್ದು, ಶಾಸಕ ಹಾಗೂ ಪಕ್ಷದ ಜಿಲ್ಲಾಧ್ಯಕ್ಷ ಚಿಕ್ಕಮಾದು ಅಧ್ಯಕ್ಷತೆ ವಹಿಸುವರು. ಶಾಸಕ ಜಿ.ಟಿ. ದೇವೇಗೌಡ, ಸಾ.ರಾ. ಮಹೇಶ್ ಭಾಗವಹಿಸುವರು ಎಂದು ತಿಳಿಸಿದ್ದಾರೆ.
ಸರ್ಕಾರಿ ನೌಕರರ ಸಂಘ ಸದಸ್ಯತ್ವ ಶುಲ್ಕ ಪಾವತಿಸಿ
ಪಿರಿಯಾಪಟ್ಟಣ: ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಸದಸ್ಯತ್ವ ಶುಲ್ಕ ಪಾವತಿಸುವಂತೆ ಸಂಘದ ಕಾರ್ಯದರ್ಶಿ ಮುದ್ದಣ್ಣಾಚ್ಚಾರ್ ಹೇಳಿದ್ದಾರೆ. ಸಂಘದ ಸುತ್ತೂಲೆಯ ನಿರ್ದೇಶನದಂತೆ ಮುಂಬರುವ 2013- 18ನೇ ಸಾಲಿನ ಚುನಾವಣೆ ಸಂಬಂಧ, 2013ನೇ ಸಾಲಿನ ವಾರ್ಷಿಕ ಸದಸ್ಯತ್ವ ಶುಲ್ಕ 100ಗಳನ್ನು ಜೂ.18 ರೊಳಗೆ ಪಾವತಿಸುವಂತೆ ತಿಳಿಸಿದ್ದಾರೆ. ಸರ್ಕಾರಿ ನೌಕರರು ಚುನಾವಣೆಗಳಲ್ಲಿ ಸ್ಪರ್ಧಿಸಲು ಹಾಗೂ ಮತ ಚಲಾಯಿಸಲು ಸದಸ್ಯತ್ವ ಶುಲ್ಕ ಪಾವತಿಸಿದ್ದಲ್ಲಿ ಮಾತ್ರ ಅರ್ಹರಾಗಿರುತ್ತಾರೆ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

