ಮೈಸೂರು

ವಿಶ್ವಕರ್ಮ ಜಯಂತ್ಯುತ್ಸವ: ನಾಳೆ ಸಭೆ

Published On :

ಕ.ಪ್ರ. ವಾರ್ತೆ   ಮೈಸೂರು   ಜೂ.16
ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾವು ಸೆ.17 ರಂದು ಬೆಂಗಳೂರಿನಲ್ಲಿ 5ನೇ ರಾಜ್ಯಮಟ್ಟದ ವಿಶ್ವಕರ್ಮ ಜಯಂತ್ಯುತ್ಸವ ಆಚರಿಸಲು ನಿರ್ಧರಿಸಿದ್ದು, ಈ ಸಂಬಂಧ ಸಮಾಜದ ಮುಖಂಡರೊಂದಿಗೆ ಚರ್ಚಿಸಲು ಜೂ.18 ರಂದು ಬೆಳಗ್ಗೆ 10ಕ್ಕೆ ನಗರದ ಜಗನ್ಮೋಹನ ಅರಮನೆಯಲ್ಲಿ ಪೂರ್ವಭಾವಿ ಸಭೆ ಕರೆಯಲಾಗಿದೆ.
ಅಂದಿನ ಸಭೆಯಲ್ಲಿ ಮಹಾಸಭಾದ ರಾಜ್ಯಾಧ್ಯಕ್ಷ ಕೆ.ಪಿ. ನಂಜುಂಡಿ ಅಧ್ಯಕ್ಷತೆ ವಹಿಸಿ ಮಾತನಾಡುವರು. ಮಹಾಸಭಾದ ಆಶ್ರಯದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಅಖಿಲ ಕರ್ನಾಟಕ ವಿಶ್ವಕರ್ಮ ಯುವ ಸೇನೆಗೆ ಸೂಕ್ತ ಮಾರ್ಗದರ್ಶನ ನೀಡುವರು. ಈ ಸಭೆಗೆ ವಿಶ್ವಕರ್ಮ ಸಮಾಜದ ಯುವಕರು, ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮಹಾಸಭಾದ ಜಿಲ್ಲಾಧ್ಯಕ್ಷ ಎನ್. ಚಂದ್ರು ವಿಶ್ವಕರ್ಮ ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸೆ.17 ರಂದು ಬೆಂಗಳೂರಿನಲ್ಲಿ ನಡೆಯುವ ವಿಶ್ವಕರ್ಮ ಜಯಂತಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಹೊತ್ತಿರುವ ಮಧುಸೂದನ್ ಮಿಸ್ತ್ರಿ, ಮಾಜಿ ಸಚಿವ ಆಸ್ಕರ್ ಫರ್ನಾಂಡಿಸ್ ಭಾಗವಹಿಸುವರು. ರಾಜ್ಯ ಕಾಂಗ್ರೆಸ್ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಹೊರತಂದಿದ್ದ ಪ್ರಣಾಳಿಕೆಯಲ್ಲಿ ತಿಳಿಸಿದಂತೆ ವಿಶ್ವಕರ್ಮ ಪ್ರಾಧಿಕಾರ ರಚನೆಗೆ ಈ ಸಮಾವೇಶದಲ್ಲಿ ಒತ್ತಾಯಿಸಲಾಗುವುದು ಎಂದರು.
ಬೇಡಿಕೆಗಳು: ಹಿಂದುಳಿದ ವರ್ಗಗಳಿಗೆ ಶೇ.15 ರಷ್ಟು ಮೀಸಲಾತಿಯಲ್ಲಿ ಸಮಾಜಕ್ಕೆ ಪ್ರತ್ಯೇಕ ಶೇ.3 ರಷ್ಟು ಮೀಸಲಾತಿ ನಿಗದಿಪಡಿಸುವುದು, ಸೆ.17 ರಂದು ಸಾರ್ವತ್ರಿಕ ರಜೆ ಘೋಷಿಸುವುದು, ಮರ, ಕಬ್ಬಿಣ, ಕಂಚು, ಚಿನ್ನ- ಬೆಳ್ಳಿ ಮತ್ತು ಶಿಲ್ಪ ಈ ಕೆಲಸ ಮಾಡುವ ವಿಶ್ವಕರ್ಮರ ಪಂಚ ಕಸುಬುಗಳಿಗೆ ವಿಶ್ವಕರ್ಮ ಅಭಿವೃದ್ಧಿ ನಿಗಮ ಸ್ಥಾಪಿಸುವುದು, ಕಪ್ಪು ಹಣದಲ್ಲಿ ರಾಜ್ಯ ಪ್ರವೇಶಿಸುತ್ತಿರುವ ಚಿನ್ನದ ಆಭರಣಗಳ ಮೇಲೆ ನಿಗಾ ವಹಿಸಿ ಕ್ರಮ ವಹಿಸುವುದು, ಗ್ರಾಮಾಂತರ ಪ್ರದೇಶದಲ್ಲಿ ಕಮ್ಮಾರಿಕೆ ಮಾಡುವವರಿಗೆ ಶೆಡ್ ನಿರ್ಮಿಸಿಕೊಡುವುದು, ಚಿನ್ನ- ಬೆಳ್ಳಿ ವ್ಯಾಪಾರಸ್ಥರ ಮೇಲೆ ನಡೆಯುತ್ತಿರುವ ಪೊಲೀಸ್ ದೌರ್ಜನ್ಯ ತಡೆಯುವುದು, ಸಮಾಜದ ಮಠಗಳ ಅಭಿವೃದ್ಧಿಗೆ ಹಣ ನೀಡುವುದು, ವಿಶ್ವಕರ್ಮರಿಗೆ ರಾಜಕೀಯ ಪ್ರಾತಿನಿಧ್ಯ ಕಲ್ಪಿಸುವ ಬೇಡಿಕೆಗಳನ್ನು ಮುಖ್ಯಮಂತ್ರಿಗಳ ಮುಂದಿಡಲಾಗುವುದು ಎಂದು ಅವರು ವಿವರಿಸಿದರು.
ಮುಖಂಡರಾದ ಶಿವಶಂಕರ್ ಎ.ವಿಶ್ವಕರ್ಮ, ರವಿ ಎಚ್. ವಿಶ್ವಕರ್ಮ, ಎಸ್.ರವಿಕುಮಾರ್, ಎಚ್.ಪಿ. ಪರಮೇಶ್ವರ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.