ಮೈಸೂರು

ಮದುವೆಗೆ ನಕಾರ: ಪ್ರಿಯಕರನ ಎದುರೆ ಬೆಂಕಿ ಹಚ್ಚಿಕೊಂಡು ಯುವತಿ ಆತ್ಮಹತ್ಯೆ

Published On :

ಕ.ಪ್ರ. ವಾರ್ತೆ   ಟಿ. ನರಸೀಪುರ   ಜೂ. 18
ಮದುವೆಗೆ ಪ್ರಿಯಕರ ನಿರಾಕರಿಸಿದ್ದರಿಂದ ಮನನೊಂದ ಯುವತಿ ಮೈಮೇಲೆ ಪೆಟ್ರೋಲ್ ಸುರಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಕೊಳತ್ತೂರು ಗ್ರಾಮದಲ್ಲಿ ಮಂಗಳವಾರ ನಡೆದಿದೆ.
ಮಳವಳ್ಳಿ ತಾಲೂಕಿನ ಪೂರೀಗಾಲಿ ಗ್ರಾಮದ ಚಂದ್ರಯ್ಯ ಎಂಬವರ ಪುತ್ರಿ ಪಿ.ಸಿ. ತೇಜಸ್ವಿನಿ (19) ಆತ್ಮಹತ್ಯೆ ಮಾಡಿಕೊಂಡ ಯುವತಿ. ಮೂರ್ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದ ಯುವಕ ಮದುವೆಗೆ ನಿರಾಕರಿಸಿದ್ದಕ್ಕೆ ಆತನ ಊರಿನಲ್ಲಿಯೆ ಮರಣ ಪತ್ರ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಪೂರೀಗಾಲಿ ಗ್ರಾಮದ ಪಿಎಲ್ಎನ್ ಪ್ರಥಮ ದರ್ಜೆ ಕಾಲೇಜಿನಲ್ಲಿ ದ್ವಿತೀಯ ಬಿಎ ವ್ಯಾಸಂಗ ಮಾಡುತ್ತಿದ್ದ ತೇಜಸ್ವಿನಿ ಕೊಳತ್ತೂರು ಗ್ರಾಮದ ನಿಂಗಯ್ಯ ಎಂಬವರ ಪುತ್ರ ಬೆಂಗಳೂರಿನಲ್ಲಿ ಅಡುಗೆ ಕೆಲಸ ಮಾಡಿಕೊಂಡಿದ್ದ ಎಂ.ಎ ಪದವೀಧರ ಉಮೇಶ (28) ಎಂಬಾತನನ್ನು ಪ್ರೀತಿಸುತ್ತಿದ್ದಳು. ಇವರಿಬ್ಬರ ಪ್ರೀತಿಗೆ ಎರಡೂ ಕಡೆಯ ಪೋಷಕರೂ ಒಪ್ಪಿಗೆ ಸೂಚಿಸಿದ್ದರಾದರೂ ಮದುವೆಯಾಗಲು ಉಮೇಶ ಒಪ್ಪಿರಲಿಲ್ಲ. ಇದರಿಂದ ಬೇಸತ್ತ ತೇಜಸ್ವಿನಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಆತ ನಿರಾಕರಿಸಿದರೆ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿ ಆಕೆ ಪೆಟ್ರೋಲ್ ಮತ್ತು ಬೆಂಕಿ ಪೊಟ್ಟಣವನ್ನು ಜತೆಯಲ್ಲಿಯೇ ತಂದಿದ್ದಳು. ಸೋಮವಾರ ರಾತ್ರಿಯೇ ಕೊಳತ್ತೂರು ಗ್ರಾಮಕ್ಕೆ ಆಗಮಿಸಿ ಉಮೇಶ್ನನ್ನು ಮದುವೆಯಾಗುವಂತೆ  ಒತ್ತಾಯಿಸಿದಳು. ಆತ ಒಪ್ಪದಿದ್ದಾಗ ಇಬ್ಬರ ನಡುವೆ ವಾಗ್ವಾದ ನಡೆದಿದೆ. ಮುಂಜಾನೆಯಾಗುತ್ತಿದ್ದಂತೆ ಕೊಳತ್ತೂರು ಗ್ರಾಮದ ಪ್ರವೇಶ ದ್ವಾರದ ಬಳಿ ಬಂದ ತೇಜಸ್ವಿನಿ ಪ್ರಿಯಕರ ಉಮೇಶನ ಸಮ್ಮುಖದಲ್ಲಿಯೇ ತಂದಿದ್ದ ಪೆಟ್ರೋಲನ್ನು ಮೈಮೇಲೆ ಸುರಿದು ಬೆಂಕಿ ಹಚ್ಚಿಕೊಂಡು ಮೃತಪಟ್ಟಿದ್ದಾಳೆ.
ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ್ ಕೆ.ಎಸ್. ಸುಂದರ್ರಾಜ್ ಆಗಮಿಸಿ ಪರಿಶೀಲಿಸಿದರು. ತಲಕಾಡು ಪೊಲೀಸ್ ಠಾಣೆಯ ಪ್ರಭಾರ ಪಿಎಸ್ಐ ಸುರೇಶ್ಕುಮಾರ್ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.