ಅವಿವಾಹಿತರು, ಮಹಿಳೆಯರಿಗೆ ಮಾಸಾಶನ
ಕ.ಪ್ರ.ವಾರ್ತೆ ಮೈಸೂರು ಜೂ. 21
ನಲವತ್ತು ವರ್ಷ ಮೀರಿದ ಅವಿವಾಹಿತ ಮಹಿಳೆಯರಿಗೆ ಮತ್ತು ಬಿಪಿಎಲ್ ಪಡಿತರ ಚೀಟಿ ಹೊಂದಿರುವ ವಿಚ್ಚೀದಿತ ಮಹಿಳೆಯರಿಗೆ ಮಾಸಾಶನ ನೀಡುವ ಸಂಬಂಧ ಚರ್ಚಿಸಿ, ಬಜೆಟ್ನಲ್ಲಿ ಪ್ರಕಟಿಸಲಾಗುವುದು ಎಂದು ಕಂದಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸಪ್ರಸಾದ್ ಹೇಳಿದರು.
ಕಾಡಾ ಕಚೇರಿ ಸಮುಚ್ಚಯದಲ್ಲಿ ಶುಕ್ರವಾರ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ ಉದ್ಘಾಟಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾರ ಆಸರೆಯೂ ಇಲ್ಲದೆ ಕಷ್ಟದಲ್ಲಿ ಜೀವನ ನಡೆಸುತ್ತಿರುವ 40 ವರ್ಷ ಮೀರಿದ ಅವಿವಾಹಿತ ಮಹಿಳೆಯರು ಮತ್ತು ಬಿಪಿಎಲ್ ಪಡಿತರ ಚೀಟಿ ಹೊಂದಿರುವ ವಿಚ್ಚೇದಿತ ಮಹಿಳೆಯರಿಗೆ ಮಾಸಾಶನ ನೀಡುವ ವಿಷಯದ ಬಗ್ಗೆ ಚರ್ಚಿಸಿ ತೀರ್ಮಾನಿಸಿ, ಈ ಬಾರಿಯ ಬಜೆಟ್ನಲ್ಲಿ ಪ್ರಕಟಿಸಲಾಗುವುದು. ಇದರಿಂದ ಸರ್ಕಾರಕ್ಕೆ 10 ಕೋಟಿ ಹೊರೆಯಾಗಬಹುದಷ್ಟೆ ಎಂದು ತಿಳಿಸಿದರು.
ಈಗಾಗಲೇ ಪಿಂಚಣಿ ಅದಾಲತ್ ಆರಂಭಿಸಲು ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ. ಪಿಂಚಣಿಗೆ ಸಂಬಂಧಿಸಿದಂತೆ ಈ ಮುಂಚೆ ಕೇವಲ ಸ್ಥಳೀಯ ಅಧಿಕಾರಿಗಳು ತೀರ್ಮಾನ ಕೈಗೊಳ್ಳುತ್ತಿದ್ದರು. ಆದರೆ ಈಗ ತಿಂಗಳ 15 ದಿನ ಜಿಲ್ಲಾಧಿಕಾರಿಗಳು ಮತ್ತು ಉಪ ವಿಭಾಗಾಧಿಕಾರಿಗಳು ಈ ಅದಾಲತ್ನಲ್ಲಿ ಭಾಗವಹಿಸಿ, ಸ್ಥಳೀಯ ಮಟ್ಟದ ಸಮಸ್ಯೆ ಬಗೆಹರಿಸಬೇಕು ಎಂದರು.
ಶೀಘ್ರದಲ್ಲೆ ಕೆಡಿಪಿ ಸಭೆ: ಮುಂದಿನ ತಿಂಗಳು ಮಂಡನೆಯಾಗುವ ರಾಜ್ಯ ಬಜೆಟ್ಗೆ ಮುನ್ನ ಕೆಡಿಪಿ ಸಭೆ ನಡೆಸಲು ಉದ್ದೇಶಿಸಲಾಗಿದೆ. ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಬೇಕಾದ ಅಗತ್ಯ ಅನುದಾನ ಬರುತ್ತದೆ. ಆದರೆ ವಿವಿಧ ಇಲಾಖೆಯಲ್ಲಿನ ಕುಂದುಕೊರತೆ ತಿಳಿಯಲು ಬಜೆಟ್ ಪೂರ್ವದಲ್ಲಿಯೇ ಕೆಡಿಪಿ ಸಭೆ ನಡೆಸಲಾಗುವುದು. ಅಲ್ಲದೆ ತಾಲೂಕು ಮಟ್ಟದಲ್ಲಿಯೂ ಕೆಡಿಪಿ ಸಭೆ ನಡೆಸಲು ಅಗತ್ಯ ಸೂಚನೆ ನೀಡಲಾಗಿದೆ. ಆಡಳಿತ ಯಂತ್ರ ಚುರುಕುಗೊಳಿಸಲು ಇದರ ಅಗತ್ಯವಾಗಿದೆ ಎಂದು ಹೇಳಿದರು.
ಮುಂಬರುವ ದಸರೆಗೆ ಈಗಿನಿಂದಲೇ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ದಸರಾ ಸಮೀಪಿಸಿದ ಬಳಿಕ ತರಾತುರಿಯ ಕಾಮಗಾರಿ ನಡೆಸುವ ಬದಲು ಈಗಲೆ ಅಗತ್ಯ ಸಿದ್ಧತೆ ಮಾಡಿಕೂಳ್ಳಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.
ನಂಜನಗೂಡು ರಸ್ತೆ ಕಾಮಗಾರಿ: ಮೈಸೂರು ನಂಜನಗೂಡು ರಸ್ತೆ ಕಾಮಗಾರಿಯನ್ನು ಶೀಘ್ರದಲ್ಲಿಯೇ ಆರಂಭಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಆ ರಸ್ತೆಯಲ್ಲಿ ಹೆಚ್ಚು ಅಪಘಾತ ಸಂಭವಿಸುವುದರಿಂದ ಕೆರೆಗಳಿಗೆ ತಡೆಗೋಡೆ ಹಾಕಲು ಸಹ ಅಧಿಕಾರಿಗಳಿಗೆ ಸೂಚನೆ ನೀಡಲಾಗಿತ್ತು. ಸದ್ಯದಲ್ಲಿಯೆ ರಸ್ತೆ ವಿಸ್ತರಣೆ ಕಾಮಗಾರಿ ನಡೆಯಲಿದೆ. ಕೇಂದ್ರದಲ್ಲಿ ರಾಜ್ಯದ ಆಸ್ಕರ್ ಫರ್ನಾಂಡಿಸ್ ಅವರು ಹೆದ್ದಾರಿ ಖಾತೆ ಸಚಿವರಾಗಿರುವ ಹಿನ್ನೆಲೆಯಲ್ಲಿ ಕಾಮಗಾರಿ ಬೇಗ ನಡೆಯಲಿದೆ. ಅಲ್ಲದೆ ಮೈಸೂರು- ಬೆಂಗಳೂರು ಜೋಡಿ ರೈಲು ಮಾರ್ಗ ಕಾಮಗಾರಿಗೆ ಅಗತ್ಯವಿರುವ ಭೂಮಿಯನ್ನು ವಶಪಡಿಸಿಕೊಳ್ಳುವಿಕೆ ಮತ್ತು ತೊಡಕು ನಿವಾರಿಸುವ ಸಂಬಂಧ ಎರಡೂ ಜಿಲ್ಲೆಯ ಜಿಲ್ಲಾಧಿಕಾರಿಗಳ ಜತೆ ಮಾತುಕತೆ ನಡೆಸಲಾಗುವುದು. ಅಲ್ಲದೆ ಪಾರಂಪರಿಕ ಇಲಾಖೆ ಅಧಿಕಾರಿಗಳ ಜತೆಯೂ ಮಾತನಾಡುವುದಾಗಿ ತಿಳಿಸಿದರು.
ನಾರಾಯಣ ಶಾಸ್ತ್ರಿ ರಸ್ತೆಯಲ್ಲಿರುವ ಎನ್ಟಿಎಂಎಸ್ ಶಾಲೆ ಕುರಿತು ಮಾಹಿತಿ ಕಲೆ ಹಾಕಲಾಗಿದೆ. ಈ ಹಿಂದಿನ ಸರ್ಕಾರ ಏನು ತೀರ್ಮಾನಿಸಿತ್ತು. ಅದು ಯಾವ ಹಂತದಲ್ಲಿದೆ ಎಂಬ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲಾಗುವುದು. ಬಳಿಕ ಸ್ಥಳೀಯ ಜನಪ್ರತಿನಿಧಿಗಳ ಜತೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

