ಮೈಸೂರು

ಕಬಿನಿ ಪ್ರವಾಹ ಮುನ್ನೆಚ್ಚರಿಕೆ

Published On :

ಸರಗೂರು: ಕಬಿನಿ ಜಲಾಶಯದಿಂದ 30 ಸಾವಿರ ಕ್ಯುಸೆಕ್ ನೀರನ್ನು ಹೊರ ಬಿಟ್ಟಿರುವುದರಿಂದ, ಸಾಗರೆ, ಸರಗೂರು, ನಿಲವಾಗಿಲು, ತುಂಬಸೊಗೆ ಇಟ್ನಾ ತೊರವಳ್ಳಿ, ಶಾಂತಿಪುರ, ಮಂಚಳ್ಳಿ ಹಾಗೂ ಇನ್ನಿತರ ಗ್ರಾಮಗಳ ಗ್ರಾಮಸ್ಥರು ದನ ತೊಳೆಯುವುದು, ನದಿ ದಾಟುವುದು ಮೀನು ಹಿಡಿಯುವುದು, ಶಾಲಾ ಮಕ್ಕಳು ನದಿ ತೀರಕ್ಕೆ ಹೋಗುವುದನ್ನು ನಿಷೇಧಿಸಿದೆ ಎಂದು ಸರಗೂರು ಪೊಲೀಸರು ತಿಳಿಸಿದ್ದಾರೆ.

ಐಒಬಿ ಶಾಖೆ ಉದ್ಘಾಟನೆ
ಮೈಸೂರು: ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಹೊನ್ನೂರಿನಲ್ಲಿ ಇಂಡಿಯನ್ ಒವರ್‌ಸೀಸ್ ಬ್ಯಾಂಕ್‌ನ ನೂತನ ಶಾಖೆಯನ್ನು ಆರಂಭಿಸಲಾಯಿತು. ಗ್ರಾಮೀಣ ಭಾಗಕ್ಕೆ ಬ್ಯಾಂಕಿನ ಸೇವೆ ಕಲ್ಪಿಸುವ ಸಲುವಾಗಿ ಹಮ್ಮಿಕೊಂಡಿರುವ ರೂರಲ್ ಔಟ್‌ರೀಚ್ ಕಾರ್ಯಕ್ರಮದ ಅಂಗವಾಗಿ ತೆರೆಯಲಾಗಿರುವ ಈ ಹೊಸ ಶಾಖೆಯನ್ನು ಐಒಬಿ ಹಿರಿಯ ಪ್ರಾದೇಶಿಕ ಪ್ರಬಂಧಕ ಎಸ್. ನರಸಿಂಹನ್ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಕುಗ್ರಾಮವಾಗಿರುವ ಹೊನ್ನೂರಿನಲ್ಲಿ ಇದೇ ಮೊದಲ ಬಾರಿಗೆ ಐಒಬಿ ಶಾಖೆ ಪ್ರಾರಂಭಿಸಿದೆ. ಬ್ಯಾಂಕಿಂಗ್ ಸೇವೆಯನ್ನು ಪ್ರತಿ ಹಳ್ಳಿ- ಹಳ್ಳಿಗೂ ತಲುಪಿಸುವಲ್ಲಿ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಅಂತೆಯೇ ಕಳೆದ 3 ತಿಂಗಳಿನಲ್ಲಿ ಮೈಸೂರು ಜಿಲ್ಲೆ ಸೇರಿದಂತೆ ವಿವಿಧೆಡೆ 8 ಗ್ರಾಮೀಣ ಶಾಖೆ ಆರಂಭಿಸಲಾಗಿದೆ. ಇತ್ತೀಚೆಗೆ ಮೈಸೂರಿನಲ್ಲಿ ಪ್ರಾದೇಶಿಕ ಕಚೇರಿ ತೆರೆಯಲಾಗಿದ್ದು, ಬ್ಯಾಂಕಿನ ಸಬಲತೆಗೆ ಹಲವು ಕಾರ್ಯ ಚಟುವಟಿಕೆಯನ್ನು ಮೈಸೂರು ವಲಯದಲ್ಲಿ ಕೈಗೊಳ್ಳಲಾಗಿದೆ ಎಂದರು.

ಡಿಪ್ಲೊಮಾ ಸಿಇಟಿ
ಮೈಸೂರು: ನಗರದಲ್ಲಿ ಜೂ. 30ರಂದು ಡಿಪ್ಲೊಮಾ ಸಿಇಟಿ 8 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದ್ದು, ಈ ಪರೀಕ್ಷಾ ಬೆಳಗ್ಗೆ 6 ರಿಂದ ಮಧ್ಯಾಹ್ನ 1 ರವರೆಗೆ 200 ಮೀಟರ್ ವ್ಯಾಪ್ತಿ ಪ್ರದೇಶದ ಸುತ್ತಲೂ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಪರೀಕ್ಷಾ ಕೇಂದ್ರಗಳ ಬಳಿಯಿರುವ ಜೆರಾಕ್ಸ್ ಹಾಗೂ ಲೇಖನ ಸಾಮಗ್ರಿ ಅಂಗಡಿಗಳನ್ನು ಸಹ ಮುಚ್ಚಲು ಆದೇಶಿಸಲಾಗಿದೆ. ಈ ಪ್ರದೇಶಗಳಲ್ಲಿ ಪರೀಕ್ಷಾರ್ಥಿಗಳು ಮತ್ತು ಪರೀಕ್ಷಾ ಸಿಬ್ಬಂದಿ ಹೊರತುಪಡಿಸಿ ಅನಧಿಕೃತ ವ್ಯಕ್ತಿಗಳು ಸಂಚರಿಸಬಾರದು. ಯಾರೂ ಆಕ್ಷೇಪಾರ್ಹ ವಸ್ತುಗಳನ್ನು ಒಯ್ಯಬಾರದು. ಪರೀಕ್ಷಾರ್ಥಿಗಳ ಹಿತದೃಷ್ಟಿಯಿಂದ ಹಾಗೂ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಸಲುವಾಗಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಈ ಆದೇಶವು ಮದುವೆ ಸಮಾರಂಭಗಳಿಗೆ, ಧಾರ್ಮಿಕ ಮತ್ತು ಶವ ಸಂಸ್ಕಾರಗಳಿಗೆ ಅನ್ವಯಿಸುವುದಿಲ್ಲ. ಇದಕ್ಕೆ ಸಾರ್ವಜನಿಕರು ಸಹಕರಿಸುವಂತೆ ಪೊಲೀಸ್ ಆಯುಕ್ತ ಕೆ.ಎಲ್. ಸುಧೀರ್ ಕೋರಿದ್ದಾರೆ.

ಟೆನ್ನಿಸ್ ಕ್ಲಬ್ ಉಳಿಸಲು ಮನವಿ
ಮೈಸೂರು: ನಗರದ ನಜರಬಾದಿನ ಸರ್ಕಾರಿ ಅತಿಥಿಗೃಹ ರಸ್ತೆಯಲ್ಲಿರುವ ಗಾರ್ಡನ್ ಟೆನ್ನಿಸ್ ಕ್ಲಬ್ ಉಳಿಸುವಂತೆ ಇಲ್ಲಿನ ಆಟಗಾರರು ಹಾಗೂ ಸಾರ್ವಜನಿಕರು ಮನವಿ ಮಾಡಿದ್ದಾರೆ. ಕ್ರೀಡಾ ಉದ್ದೇಶಕ್ಕಾಗಿ ನೋಂದಾಯಿತವಾಗಿರುವ ಈ ಟೆನ್ನಿಸ್ ಕ್ಲಬ್‌ನಲ್ಲಿ ಆಟ ಆಡಲು ಸೂಕ್ತ ವಾತಾವರಣ ಇಲ್ಲವಾಗಿದೆ. ಆವರಣದಲ್ಲಿ ಇಸ್ಪೀಟ್ ಹಾಗೂ ಕುಡಿತ ವಿಜೃಂಭಿಸುತ್ತಿದ್ದು, ಇಂತಹ ಕೃತ್ಯ ನಡೆಸುವವರ ಉಪಟಳ ದಿನೇ ದಿನೇ ಹೆಚ್ಚಾಗಿದೆ ಎಂದು ತಿಳಿಸಿದ್ದಾರೆ. ದಿನನಿತ್ಯ ಟೆನಿಸ್ ಕೋರ್ಟ್‌ನಲ್ಲಿ ಮದ್ಯದ ಬಾಟಲ್ ಸೇರಿದಂತೆ ತ್ಯಾಜ್ಯ ವಸ್ತುಗಳನ್ನು ಎಸೆದು ತೊಂದರೆ ನೀಡುತ್ತಿದ್ದಾರೆ. ಸಮೀಪದಲ್ಲಿ ಪ್ರಾರ್ಥನಾ ಮಂದಿರ ಹಾಗೂ ಬಾಲಕಿಯರ ಕಾಲೇಜು ಅವರಣವಿದ್ದು, ಇದರಿಂದಾಗಿ ಅಲ್ಲಿಗೆ ಬರುವ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಮುಜುಗರಪಡುವಂತಾಗಿದೆ ಎಂದಿದ್ದಾರೆ.  ಈ ಸಂಬಂಧ ಸಾಹಿತಿಗಳು, ಹೋರಾಟಗಾರರು ಹಾಗೂ ಆಟಗಾರರು ಅನೇಕ ಬಾರಿ ಹೋರಾಟ ನಡೆಸಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಆದ್ದರಿಂದ ಜಿಲ್ಲಾಧಿಕಾರಿ ಅವರು ಕೂಡಲೇ ಈ ಟೆನ್ನಿಸ್ ಕ್ಲಬ್ ಉಳಿವಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ವಿವೇಕಾನಂದ ಸ್ಮಾರಕ: ಸಂವಾದ
ಮೈಸೂರು: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಸ್ವಾಮಿ ವಿವೇಕಾನಂದ ವಿಚಾರ ವೇದಿಕೆ ವತಿಯಿಂದ ಜು. 1ರ ಸಂಜೆ 5ಕ್ಕೆ ಎಂಜಿನಿಯರುಗಳ ಸಭಾಂಗಣದಲ್ಲಿ ಸ್ವಾಮಿ ವಿವೇಕಾನಂದ ಸ್ಮಾರಕ ಅಗತ್ಯ ಮತ್ತು ಸತ್ಯ ಕಾರ್ಯಕ್ರಮ ನಡೆಯಲಿದೆ. ಡಾ. ದೇ. ಜವರೇಗೌಡ ಉದ್ಘಾಟಿಸುವರು. ಡಾ. ಪ್ರಭುಶಂಕರ ಅಧ್ಯಕ್ಷತೆ ವಹಿಸುವರು. ಡಾ.ಸಿ.ಪಿ. ಕೃಷ್ಣಕುಮಾರ್, ಡಾ. ಮಳಲಿ ವಸಂತಕುಮಾರ್, ಡಾ.ಕೆ. ಚಿದಾನಂದಗೌಡ, ಪ್ರ1.ಕೆ. ಭೈರವಮೂರ್ತಿ, ಡಿ. ಮಾದೇಗೌಡ ಉಪನ್ಯಾಸ ನೀಡುವರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.