ಮೈಸೂರು

11 ಸಾವಿರ ಮನೆ ಮಂಜೂರು

Published On :

ಕ.ಪ್ರ.ವಾರ್ತೆ ,  ಕೆ.ಆರ್. ನಗರ ,  ಜೂ. 29
ಕಳೆದ ಅವಧಿಯಲ್ಲಿ ನಾನು ಶಾಸಕನಾಗಿದ್ದಾಗ ತಾಲೂಕಿಗೆ 11 ಸಾವಿರ ಬಸವ ವಸತಿ ಯೋಜನೆಯ ಮನೆಗಳನ್ನು ಮಂಜೂರು ಮಾಡಿಸಿದ್ದು, ಅವುಗಳಲ್ಲಿ 5 ಸಾವಿರ ಮನೆಗಳನ್ನು ಅರ್ಹ ಫಲಾನುಭವಿಗಳಿಗೆ ವಿತರಿಸಲಾಗಿದೆ. ಉಳಿದ 6 ಸಾವಿರ ಮನೆಗಳನ್ನು ವಿತರಣೆಯ ಹಂತರದಲ್ಲಿವೆ ಎಂದು ಶಾಸಕ ಸಾ.ರಾ. ಮಹೇಶ್ ಹೇಳಿದರು.
ತಾಲೂಕಿನಲ್ಲಿ ಹೆಬ್ಬಾಳು ಗ್ರಾಮದಲ್ಲಿ ಶನಿವಾರ ಮತದಾರರಿಗೆ ಕೃತಜ್ಞತೆ ಸಲ್ಲಿಸಿ ಸಾರ್ವಜನಿಕರ ಅಹವಾಲು ಆಲಿಸಿ ಮಾತನಾಡಿ, ಹನ್ನೊಂದು ಸಾವಿರ ಮನೆಗಳನ್ನು ಸರ್ಕಾರದ ಮೇಲೆ ಒತ್ತಡ ತಂದು ಮಂಜೂರು ಮಾಡಿಸಿದ್ದೇನೆ. ಆದರೆ, ಕೆಲವು ಗ್ರಾಪಂಗಳ ಅಭಿವೃದ್ಧಿ ಅಧಿಕಾರಿಗಳು ಮನೆ ವಿತರಿಸಲು ದಾಖಲಾತಿ ಮತ್ತಿತರ ಕಾರಣ ನೀಡಿ ವಿಳಂಬ ಮಾಡಿದ್ದಾರೆ. ಈ ಬಗ್ಗೆ ಕೂಡಲೆ ಅಗತ್ಯ ಕ್ರಮ ಕೈಗೊಳ್ಳುವಂತೆ ಸಂಬಂಧಿತರಿಗೆ ಸೂಚಿಸಿದ್ದೇನೆ ಎಂದು ತಿಳಿಸಿದರು.
ಗ್ರಾಪಂ ವ್ಯಾಪ್ತಿಯ ಸುಮಾರು 15 ಗ್ರಾಮಗಳಿಗೆ ಕಾವೇರಿ ನದಿಯಿಂದ ಶಾಶ್ವತ ಕುಡಿಯುವ ನೀರು ಸರಬರಾಜು ಮಾಡಲು 6 ಕೋಟಿ ಮಂಜೂರು ಮಾಡಿಸಿದ್ದು, ಈಗಾಗಲೇ ಕಾಮಗಾರಿ ಪ್ರಗತಿಯಲ್ಲಿದೆ. ಆಗಸ್ಟ್ ವೇಳೆಗೆ ನೀರು ಸರಬರಾಜು ಆರಂಭಿಸಲಾಗುತ್ತದೆ ಎಂದು ಹೇಳಿದರು.
ಚುನಾವಣೆಯಲ್ಲಿ ನನ್ನನ್ನು ಮತದಾರರು ಎರಡನೇ ಬಾರಿಗೆ ಬೆಂಬಲಿಸಿರುವುದರ ಜತೆಗೆ ತಾಲೂಕಿನ ವಿವಿಧ ಸಂಘ- ಸಂಸ್ಥೆಗಳು ಮತ್ತು  ಸ್ತ್ರೀಶಕ್ತಿ ಸಂಘಗಳ ಸೋದರಿಯರು 50 ಲಕ್ಷಕ್ಕೂ ಅಧಿಕ ಧನಸಹಾಯ ನೀಡಿದ್ದೀರಿ, ನಿಮ್ಮ ಋಣ ಎಂದಿಗೂ ಮರೆಯುವುದಿಲ್ಲ ಬಾವುಕರಾಗಿ ನುಡಿದರು.
300 ಕೋಟಿ ವೆಚ್ಚದಲ್ಲಿ ಕೈಗೊಂಡಿರುವ ತಾಲೂಕಿನ ನಾಲೆಗಳ ಆಧುನೀಕರಣ ಕಾಮಗಾರಿ ಭರದಿಂದ ಸಾಗಿದ್ದು, ಜುಲೈ ಅಂತ್ಯದ ವೇಳೆಗೆ ನೀರು ಹರಿಸಲಾಗುತ್ತದೆ. ನಾಲಾ ಕಾಮಗಾರಿಯಿಂದ ಅಂತ್ಯದವರೆಗೂ ನೀರು ಸಮರ್ಪಕವಾಗಿ ಸರಬರಾಜಗಲಿದ್ದು, ರೈತರಿಗೆ ಅನುಕೂಲವಾಗಲಿದೆ. ಕಾಮಗಾರಿ ಮಾಡಿಸಬೇಕೆನ್ನುವ ನನ್ನ ಕನಸು ನನಸಾಗಿದ್ದು, ಮುಂದೆಯೂ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಸರ್ಕಾರದಿಂದ ಅನುದಾನ ತರುತ್ತೇನೆ ಎಂದು ತಿಳಿಸಿದರು.
ನಂತರ ಸಾ.ರಾ. ಮಹೇಶ್, ಹೆಬ್ಬಾಳು ಕೊಪ್ಪಲು, ಹೆಬ್ಬಾಳು ಬಡಾವಣೆ, ಬೀರನಹಳ್ಳಿ ಗ್ರಾಮಗಳಿಗೆ ತೆರಳಿ ಮತದಾರರಿಗೆ ಕೃತಜ್ಞತೆ ಸಲ್ಲಿಸಿ, ತಾಲೂಕು ಅಧಿಕಾರಿಗಳ ಸಮ್ಮುಖದಲ್ಲಿ ಸಾರ್ವಜನಿಕರ ಸಮಸ್ಯೆ ಆಲಿಸಿ ಪರಿಹಾರಕ್ಕೆ ಸೂಚನೆ ನೀಡಿದರು.
ಜಿಪಂ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಸಿ.ಜೆ. ದ್ವಾರಕೀಶ್, ಸದಸ್ಯೆ ನಳಿನಾಕ್ಷಿ ವೆಂಕಟೇಶ್, ತಾಲೂಕು ಜೆಡಿಎಸ್ ಅಧ್ಯಕ್ಷ ಚಂದ್ರಶೇಖರ್, ತಾಪಂ ಅಧ್ಯಕ್ಷೆ ಕವಿತಾ ರವಿ, ಗ್ರಾಪಂ ಅಧ್ಯಕ್ಷೆ, ಅನುಸೂಯ ಶ್ರೀನಿವಾಸ್, ಮಾಜಿ ಉಪಾಧ್ಯಕ್ಷೆ ಶಾರದಮ್ಮ ಶಿವಣ್ಣ, ಸದಸ್ಯರಾದ ರೂಪಾರಾಜು, ಕೃಷ್ಣೇಗೌಡ, ಮಾಜಿ ಅಧ್ಯಕ್ಷ ಮಾದೇಗೌಡ, ಸಂತೋಷ್, ಹರಿಚಿದಂಬರ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.