ಮೈಸೂರು: ನಗರದ ಮೊಹಮ್ಮದ್ ರಾಯನ್ ಷರೀಫ್ ಗೇಟ್ ಪರೀಕ್ಷೆ ಅಖಿಲ ಭಾರತ ಮಟ್ಟದಲ್ಲಿ 52ನೇ ರ್ಯಾಂಕ್ ಗಳಿಸಿದ್ದಾರೆ. ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಎಂಜಿನಿಯರಿಂಗ್ ವಿಭಾಗದಲ್ಲಿ ಒಟ್ಟು 2,56,135 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.
ಅಂಗವಿಕಲರ ಬಸ್ ನವೀಕರಣ
ಸಾರಿಗೆ ಸಂಸ್ಥೆಯಿಂದ ಅಂಗವಿಕಲರಿಗೆ ನೀಡಿರುವ 2012ರ ಸಾಲಿನ ಬಸ್ ಪಾಸುಗಳ ನವೀಕರಿಸುವ ಪ್ರಕ್ರಿಯೆಯು ಏ. 1ರಿಂದ 30 ರವರೆಗೆ ನಡೆಯಲಿದೆ. ಈ ಅವಧಿಯಲ್ಲಿ ಫಲಾನುಭವಿಗಳು 550 ಪಾವತಿಸಿ ಹಳೇ ಪಾಸ್ನ ಜೆರಾಕ್ಸ್ ಪ್ರತಿ ಹಾಗೂ 2 ಭಾವಚಿತ್ರಗಳನ್ನು ಸಲ್ಲಿಸಿ ರಿಯಾಯಿತಿ ದರದ ಬಸ್ ಪಾಸುಗಳನ್ನು ಪಡೆದುಕೊಳ್ಳುವಂತೆ ನಗರ ಸಾರಿಗೆ ವಿಭಾಗೀಯ ನಿಯಂತ್ರಣಾಧಿಕಾರಿ ಎಂ.ಎನ್. ಶ್ರೀನಿವಾಸ್ ತಿಳಿಸಿದ್ದಾರೆ.
ಹೋಬಳಿ ಜೆಡಿಎಸ್ ಅಧ್ಯಕ್ಷರ ಬದಲು
ಮೈಸೂರು: ವರುಣ ವಿಧಾನಸಭಾ ಕ್ಷೇತ್ರದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸದ ಹೋಬಳಿ ಘಟಕದ ಅಧ್ಯಕ್ಷ ಯಾಂದಳ್ಳಿ ಸಿದ್ದೇಗೌಡರನ್ನು ಪದಚ್ಯುತಗೊಳಿಸಿ, ಅವರ ಸ್ಥಾನಕ್ಕೆ ಕುಪ್ಪೇಗಾಲ ಬಾಬು ಅವರನ್ನು ನೇಮಿಸಲಾಗಿದೆ. ಶನಿವಾರ ನಗರದ ಸಯ್ಯಾಜಿರಾವ್ ರಸ್ತೆಯಲ್ಲಿರುವ ಜೆಡಿಎಸ್ ಕಚೇರಿಯಲ್ಲಿ ನಡೆದ ವರುಣ ಹೋಬಳಿಯ ಕಾರ್ಯಕರ್ತರ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. ಈ ಸಾರಿಯ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿ ಚೆಲುವರಾಜು ಅವರ ಗೆಲವಿಗೆ ಶ್ರಮಿಸಲು ಈ ಬದಲಾವಣೆ ಅಗತ್ಯವಿತ್ತು. ನೂತನ ಅಧ್ಯಕ್ಷರು ಪಕ್ಷ ಸಂಘಟನೆಗೆ ಸಕ್ರಿಯರಾಗಿ ದುಡಿಯುವಂತೆ ವರುಣ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಸಿ.ಎನ್. ಚಂದ್ರು ತಿಳಿಸಿದರು. ರಾಜ್ಯ ಪ್ರಧಾನ ಕಾರ್ಯದರ್ಶಿ ಮಂಜುನಾಥ್, ವರುಣ ವಿಧಾನಸಭಾ ಕ್ಷೇತ್ರದ ಉಪಾಧ್ಯಕ್ಷ ಗುರಿಕಾರ್ ಬಸವಣ್ಣ, ಎಸ್ಸಿ ಘಟಕದ ಅಧ್ಯಕ್ಷ ಹಲಗಯ್ಯನಹುಂಡಿ ಶಂಕರ್, ಬಿಳಿಗೆರೆ ಹೋಬಳಿ ಅಧ್ಯಕ್ಷ ರಾಜಣ್ಣ ಇದ್ದರು.