ಸಿದ್ದರಾಮಯ್ಯ ಊರಿಗೆ ಬಂದರೆ ದನ ಮೇಯಿಸಲು ನನ್ನೊಟ್ಟಿಗೆ ಬರುತ್ತಿದ್ದ
ಕ.ಪ್ರ. ವಾರ್ತೆ ಮೈಸೂರು ಮೇ 10-
'ಸಿದ್ದರಾಮಯ್ಯ ಅವರ ಸೋದರರಿಗೆ ಮಾತ್ರವಲ್ಲ, ಅವರ ಜತೆ ಓದಿದ ಅನೇಕರಿಗೆ ವಿದ್ಯೆ ಅಷ್ಟಾಗಿ ಒಲಿದಿಲ್ಲ. ಮೈಸೂರಿನಲ್ಲಿ ಓದುವಾಗಲೂ ಊರಿಗೆ ಬಂದರೆ ನನ್ನನ್ನು ಬಿಟ್ಟು ದನ ಮೇಯಿಸಲು ಸಿದ್ದರಾಮಯ್ಯ ಹೋಗುತ್ತಿರಲಿಲ್ಲ. ನನ್ನ ಜೊತೆಯಲ್ಲಿಯೆ ಬರುತ್ತಿದ್ದ. ವ್ಯವಸಾಯ ಮಾಡುತ್ತಿದ್ದು ನನ್ನ ಜೊತೆಯಲ್ಲಿಯೆ, ಕೆರೆಯಲ್ಲಿ ಈಜಲು ನಾನೆ ಬೇಕು ಆತನಿಗೆ' ಎಂದು ಅವರ ಬಾಲ್ಯದ ಗೆಳೆಯ ಸಿದ್ದೇಗೌಡ ಹಳೆಯ ನೆನಪುಗಳನ್ನು ಮೆಲುಕು ಹಾಕಿದರು. 'ನಮಗಿಂತಲೂ ತುಂಬಾ ಬುದ್ಧಿವಂತ ಆತ. ಸಿದ್ದರಾಮಯ್ಯ ವಕೀಲನಾದ ಮೇಲೂ ವಕೀಲರ ಸಂಘದ ಚುನಾವಣೆಯಲ್ಲಿಯೂ ಗೆದ್ದಿದ್ದ. ಶಾಸಕನಾಗಿ, ಸಚಿವನಾಗಿ, ಉಪ ಮುಖ್ಯಮಂತ್ರಿಯಾದ ಮೇಲೂ ಊರಿನ ಸಿದ್ದರಾಮೇಶ್ವರನ ಜಾತ್ರೆಗೆ ಬಂದಾಗ ನಮ್ಮೊಡನೆಯೇ ಕುಣಿದು ಕುಪ್ಪಳಿಸುತ್ತಾನೆ. ಸೂಟುಬೂಟು ಧರಿಸಿ ಶೋಕಿ ಮಾಡಿದವನಲ್ಲ. ಯಾರಿಗೂ ಅನ್ಯಾಯ ಮಾಡಿ ಬದುಕ ಬೇಕು ಎನ್ನಲಿಲ್ಲ. ಒಂದುಚೂರು ಕಳಂಕ ಇಲ್ಲದೆ ಇದ್ದಾನೆ' ಎಂದರು. ವಯಸ್ಸಿನಲ್ಲಿ ಸಿದ್ದರಾಮಯ್ಯ ಅವರಿಗಿಂತ ಕಿರಿಯರಾದ ಚಿಕ್ಕಣ್ಣ ಮಾತನಾಡಿ, ಹಬ್ಬ ಹರಿದಿನಗಳಿಗೆ ಊರಿಗೆ ಬರುತ್ತಿದ್ದ ಸಿದ್ದರಾಮಯ್ಯ ಎಲ್ಲರೊಡನೆ ಸೇರಿ ಕುಣಿಯುತ್ತಿದ್ದದ್ದು ಸಂತೋಷದ ವಿಷಯ. ಇಂಥ ಊರಿಗೆ ರಸ್ತೆ ಇಲ್ಲ, ಶಾಲೆ ಇಲ್ಲ, ಕುಡಿಯುವ ನೀರಿಲ್ಲ ಎಂಬುದು ತಿಳಿದರೆ ಅಲ್ಲಿಗೆ ಆ ಎಲ್ಲಾ ಸೌಲಭ್ಯ ಸಿಗಬೇಕು. ಅಲ್ಲಿಯವರೆಗೆ ಹಠ ಮಾತ್ರ ಬಿಡುತ್ತಿರಲಿಲ್ಲ ಎಂದರು.
ತಾತನೊಂದಿಗೆ ಕೆಲಸ ಮಾಡಬೇಕು: ನಾನು ಜಿಲ್ಲಾಧಿಕಾರಿ ಆಗಬೇಕು. ಈಗ ಮೈಸೂರಿನ ಟೆರೀಷಿಯನ್ ಶಾಲೆಯಲ್ಲಿ 7ನೇ ತರಗತಿ ಉತ್ತೀರ್ಣನಾಗಿದ್ದೇನೆ. ನಾನು ಸಿದ್ದರಾಮಯ್ಯ ಅವರ ಮೊಮ್ಮಗ ಎಂದು ಗೊತ್ತಾದ ಮೇಲೆ ಶಾಲೆಯಲ್ಲಿ ನನಗೆ ಮರ್ಯಾದೆ ಕೊಡುತ್ತಾರೆ. ಶಾಲೆಯಲ್ಲಿ ನಾನು ಚೆನ್ನಾಗಿ ಓದುತ್ತೇನೆ, ಅಲ್ಲದೆ ಯಾರೊಂದಿಗೂ ಜಗಳಕ್ಕೆ ಹೋಗುವುದಿಲ್ಲ ಎಂಬ ಕಾರಣಕ್ಕೆ ಶಿಕ್ಷಕರಿಗೆ ನನ್ನ ಮೇಲೆ ಪ್ರೀತಿ ಎಂದು ಸಿದ್ದರಾಮಯ್ಯ ಅವರ ಸಹೋದರ ಸಿದ್ದೇಗೌಡರ ಮೊಮ್ಮಗ ಪವನ್ ಹೇಳುತ್ತಾನೆ. ಮತ್ತೋರ್ವ ಮೊಮ್ಮಗ ಹರ್ಷವರ್ಧನ್ ನಾನು ಎಂಜಿನಿಯರ್ ಆಗಬೇಕು ಎಂಬ ಆಸೆ ಇದೆ. ಆಗ ನಮ್ಮ ತಾತನ ಜತೆ ಕೆಲಸ ಮಾಡಬಹುದು. ನಮ್ಮ ತಾತ ಸರ್ಕಾರಿ ಶಾಲೆಯಲ್ಲಿ ಓದಿ ವಕೀಲರಾಗಿ, ಮಂತ್ರಿಯಾಗಿ, ಉಪ ಮುಖ್ಯಮಂತ್ರಿಯಾಗಿ ಈಗ ಮುಖ್ಯಮಂತ್ರಿ ಆಗುತ್ತಿದ್ದಾರೆ. ನಾವು ಖಾಸಗಿ ಶಾಲೆಯಲ್ಲಿ ಓದಿ ಒಳ್ಳೆಯ ಅಧಿಕಾರಿ ಆಗಬೇಕು ಎನ್ನುತ್ತಾನೆ. ರಾಮೇಗೌಡರ ಮೊಮ್ಮಗ ದರ್ಶನ್ ವೈದ್ಯನಾಗಿ ಜನಗಳ ಸೇವೆ ಮಾಡಬೇಕು ಎಂದು ತನ್ನ ಆಶಯ ವ್ಯಕ್ತಪಡಿಸುತ್ತಾನೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

