ಸಿದ್ದರಾಮಯ್ಯರ ಸತ್ಯ ಏನೆಂದು ಅಧಿವೇಶನದಲ್ಲಿ ತೋರಿಸುವೆ: ಎಚ್ಡಿಕೆ
ಪಿರಿಯಾಪಟ್ಟಣ: ಮುಖ್ಯಮಂತ್ರಿ ಸಿದ್ದರಾಮಯ್ಯ ಸತ್ಯದ ಹೆಸರಿನಲ್ಲಿ ಪ್ರಮಾಣ ಮಾಡಿದ್ದಾರೆ. ಅವರ ಸತ್ಯ ಏನೆಂಬುದನ್ನು ವಿಧಾನಸಭೆಯ ಕಲಾಪದಲ್ಲಿ ತೆಗೆಯುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸವಾಲು ಹಾಕಿದರು.
ಕಂಠಿತಮ್ಮಯ್ಯ ಸುಬ್ಬಮ್ಮ ಬಸವ ಮಂದಿರದಲ್ಲಿ ಗುರುವಾರ ವೀರಶೈವ ಸಮುದಾಯದ ಮುಖಂಡರ ಸಭೆಯಲ್ಲಿ ಮಾತನಾಡಿ, ಸಿದ್ದರಾಮಯ್ಯ ಹೋದಲ್ಲೆಲ್ಲ ಎರಡು ಬಾರಿ ಮುಖ್ಯಮಂತ್ರಿ ಆಗುವ ಅವಕಾಶವನ್ನು ಜೆಡಿಎಸ್ನ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ತಪ್ಪಿಸಿದರು ಎಂದು ಹೇಳುತ್ತಿದ್ದಾರೆ. ಈ ಬಗ್ಗೆ ಸಿದ್ದರಾಮಯ್ಯ ಅವರೊಂದಿಗೆ ಕಲಾಪದಲ್ಲಿ ಚರ್ಚಿಸಲು ಸಿದ್ಧನಿದ್ದೇನೆ ಎಂದು ತಿಳಿಸಿದರು.
ದ್ವೇಷದ ರಾಜಕೀಯ: ಚುನಾವಣೆಯಲ್ಲಿ ಸಿದ್ದರಾಮಯ್ಯ ವಿರುದ್ಧ ನಿಂತಿದ್ದ ಕಾ.ಪು. ಸಿದ್ದಲಿಂಗಸ್ವಾಮಿ ಮೇಲೆ ದೈಹಿಕ ಹಿಂಸೆಗೆ ಸಂಬಂಧಿಸಿದಂತೆ, ಅವರ ದೂರಿನನ್ವಯ ದೂರು ದಾಖಲಿಸಿಕೊಂಡಿದ್ದ ಇನ್ಸ್ಪೆಕ್ಟರ್ ಅವರನ್ನು ಅಮಾನತು ಮಾಡುವ ತೀರ್ಮಾನದಂತಹ ದ್ವೇಷ ರಾಜಕೀಯ ಮಾಡಲು ಹೊರಟಿದ್ದಾರೆ. ಇದೇ ರೀತಿ ಈ ಹಿಂದೆಯೂ ಮೈಸೂರು ತಾಲೂಕಿನ ಟಿ. ಬಸವರಾಜು ಎಂಬ ಅಧಿಕಾರಿಯನ್ನು ಅಮಾನತು ಮಾಡಿದ್ದರು. ನಾನು ಅದನ್ನು ತೆರವುಗೊಳಿಸಿದೆ. ಇಂತಹ ದ್ವೇಷ ರಾಜಕಾರಣ ಸರಿ ಅಲ್ಲ. ಇದರಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ ಎಂದು ಹೇಳಿದರು.
ಇನ್ನು ಕೇಂದ್ರದಲ್ಲಿ ಯುಪಿಎ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದ್ದು, ಭಾರತ್ ನಿರ್ಮಾಣ್ ಜಾಹೀರಾತಿಗಾಗಿ ಮಾಡುತ್ತಿರುವ ಖರ್ಚಿನಿಂದ 100 ಹಳ್ಳಿಗಳನ್ನು ಅಭಿವೃದ್ಧಿಪಡಿಸಬಹುದಿತ್ತು. ತಮ್ಮ ಪಕ್ಷದಲ್ಲಿ ವೀರಶೈವ ಸಮುದಾಯ ಸೇರಿದಂತೆ ಎಲ್ಲ ಸಮುದಾಯಗಳಿಗೂ ಅವಕಾಶ ನೀಡಿದೆ. ಸಮುದಾಯದ ಜನತೆ ತಮ್ಮ ಪಕ್ಷದ ಅಭ್ಯರ್ಥಿಗೆ ಮತ ನೀಡುವಂತೆ ಅವರು ಮನವಿ ಮಾಡಿದರು.
ಮಾಜಿ ಸಚಿವ ಎಂ. ಮಹದೇವ್ ಮಾತನಾಡಿ, ವೀರಶೈವ ಸಮಾಜ ದುಸ್ಥಿತಿಗೆ ಬರಲು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕಾರಣರಾಗಿದ್ದಾರೆ. ಅವರಿಂದಾಗಿಯೇ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಕಾರಣವಾಯಿತು. ಯಡಿಯೂರಪ್ಪ ಅವರ ವೈಯಕ್ತಿಕ ಪ್ರತಿಷ್ಠೆ ಹಾಗೂ ದ್ವೇಷದ ರಾಜಕಾರಣದಿಂದಾಗಿ ಸಮುದಾಯದವರು ರಾಜಕೀಯವಾಗಿ ಅತಂತ್ರರಾಗಲು ಕಾರಣರಾದರು ಎಂದು ಆರೋಪಿಸಿ, ಪಕ್ಷದ ಅಭ್ಯರ್ಥಿಗೆ ಸಮುದಾಯದವರು ಮತ ನೀಡುವಂತೆ ಮನವಿ ಮಾಡಿದರು.
ಮಾಜಿ ಶಾಸಕಿ ಪರಿಮಳಾ ನಾಗಪ್ಪ, ಅಭ್ಯರ್ಥಿ ಕೆ. ಮಹದೇವ್ ಮಾತನಾಡಿದರು.
ಶಾಸಕರಾದ ಬಾಲಕೃಷ್ಣ, ಜಿ.ಟಿ. ದೇವೇಗೌಡ, ಮಾಜಿ ಸಚಿವರಾದ ಬಸವನಗೌಡ ಪಾಟೀಲ್ ಯತ್ನಾಳ್, ಎಂ. ಶಿವಣ್ಣ, ಜಿಪಂ ಉಪಾಧ್ಯಕ್ಷೆ ಎಂ.ಕೆ. ಸುಚಿತ್ರಾ, ತಾಪಂ ಉಪಾಧ್ಯಕ್ಷ ಯೋಗೇಶ್, ಸದಸ್ಯ ಪ್ರಕಾಶ್, ಪಪಂ ಸದಸ್ಯ ಪಿ.ವಿ. ನಂಜುಂಡಸ್ವಾಮಿ, ವಕೀಲರಾದ ಬಿ.ವಿ. ಜವರೇಗೌಡ, ಗೋವಿಂದೇಗೌಡ, ಬಸವರಾಜ್, ತಾರೇಶ್, ವಿನೋದ್, ಮುಖೇಶ್, ವಿದ್ಯಾಶಂಕರ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

