ಮೈಸೂರು

ಅಂಧರ ಬಾಳಿಗೆ ಬೆಳಕಾಗಿ: ಕೆಂಪೇಗೌಡ

Published On :

ಕ.ಪ್ರ.ವಾರ್ತೆ   ಮೈಸೂರು   ಮೇ 27
ನೇತ್ರದಾನ ಮಾಡುವ ಮೂಲಕ ಅಂಧರ ಬಾಳಿಗೆ ಬೆಳಕಾಗಿ ಎಂದು ಕನ್ನಡ ಪ್ರಾಧ್ಯಾಪಕ ಟಿ.ಕೆ. ಕೆಂಪೇಗೌಡ ಹೇಳಿದರು.
ಚಿಂತನ ಚಿತ್ತಾರ ವೇದಿಕೆಯು ರಂಗಾಯಣದ ಶ್ರೀರಂಗದಲ್ಲಿ ಸೋಮವಾರ ಏರ್ಪಡಿಸಿದ್ದ ರವೀಂದ್ರ ಜಿ. ಭಟ್ಟ ಐನಕೈ ಅವರ ಅಕ್ಷಯ ನೇತ್ರ ಅಂಧನೊಬ್ಬನ ಆತ್ಮೀಯ ಕಥೆಗಳು ಪುಸ್ತಕದ ಓದು ವಿಮರ್ಶೆ ಕಾರ್ಯಕ್ರಮದಲ್ಲಿ ಕೃತಿ ಕುರಿತು ಅವರು ಮಾತನಾಡಿದರು.
ಕಣ್ಣು ಇದ್ದವರು ಈ ದೇಶದಲ್ಲಿ ಭ್ರಷ್ಟಾಚಾರ, ಅತ್ಯಾಚಾರ ಹಾಗೂ ಅನಾಚಾರ ಮಾಡುತ್ತಿದ್ದಾರೆ. ಆದರೆ ಕಣ್ಣು ಕಾಣದ ಪ್ರೊ.ವೇಣುಗೋಪಾಲ್ ಅವರು ಯಾವುದೇ ಅಪೇಕ್ಷೆಯಿಲ್ಲದೆ ಮಕ್ಕಳಿಗೆ ಉಚಿತ ಪಾಠ ಹೇಳಿಕೊಡುವುದು, ಇನ್ನೊಬ್ಬರ ಕಷ್ಟಕ್ಕೆ ನೆರವಾಗುತ್ತಿದ್ದಾರೆ. ಇಂಥ ಹೃದಯವಂತರ ಸಂಖ್ಯೆ ಹೆಚ್ಚಾಗಬೇಕು. ಸಮಾಜ ಅಂಧರಿಗೆ ನೇತ್ರದಾನ ಮಾಡುವ ಮೂಲಕ ನೆರವಾಗಬೇಕು ಎಂದರು.
ಬೇರೆಯವರ ಸಹಾಯ ಪಡೆದು 7-8 ಪದವಿಗಳನ್ನು ಪಡೆದಿರುವ ವೇಣುಗೋಪಾಲ್ ಅವರು ಅಂಧರಿಗೆ ಮಾತ್ರವಲ್ಲ, ಕಣ್ಣು ಇರುವಂಥವರ ಸಾಧನೆಗೂ ಮಾದರಿ. ದೇಶದ ವಿವಿಧ ಆಸ್ಪತ್ರೆಗಳಲ್ಲಿ 6 ಬಾರಿ ಶಸ್ತ್ರಚಿಕಿತ್ಸೆಗೆ ಒಳಗಾಗಿ ದೃಷ್ಟಿ ಬರುತ್ತದೆ ಈ ಜಗತ್ತನ್ನು ನೋಡುತ್ತೇನೆ ಎಂದು ಕನಸು ಕಂಡಿದ್ದ ಅವರು, ದೃಷ್ಟಿ ಬಾರದೇ ಇದ್ದರೂ ಒಳಗಣ್ಣಿನಿಂದ ಈ ಸಮಾಜ ನೋಡುತ್ತಾ ಸಾಧನೆ ಮಾಡಿದವರು ಎಂದು ತಿಳಿಸಿದರು.
ಕನಸು ಕಾಣಲು..?: ಕನಸು ಕಾಣಲು ಕಣ್ಣು ಮುಚ್ಚಬೇಕು. ಆದರೆ ನಾನು ಕನಸು ಕಾಣಲು ಕಣ್ಣು ಮುಚ್ಚಬೇಕಿಲ್ಲ. ಎಷ್ಟು ಕನಸುಗಳನ್ನಾದರೂ ಕಾಣಬಹುದು ಎನ್ನುವ ಮಾತಿನೊಂದಿಗೆ ಆರಂಭವಾಗುವ ರವೀಂದ್ರಭಟ್ಟರ ಅಕ್ಷಯ ನೇತ್ರ ಕೃತಿಯಲ್ಲಿ, ಎಲ್ಲಾ ಅಂಗಾಂಗಗಳು ಇದ್ದವರು ಆತ್ಮಸ್ಥೈರ್ಯ ಕಳೆದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಅಂಧನೊಬ್ಬ ಆತ್ಮಹತ್ಯೆ ಮಾಡಿಕೊಂಡ ಉದಾಹರಣೆ ಇಲ್ಲ. ಹಾಗೆಯೇ ಅಪಘಾತದಲ್ಲಿ ವರ್ಷಕ್ಕೆ 50 ಸಾವಿರಕ್ಕೂ ಹೆಚ್ಚು ಮಂದಿ ಸಾಯುತ್ತಾರೆ. ಇವರಲ್ಲಿ ಒಬ್ಬನು ಅಂಧನಿರುವುದಿಲ್ಲ ಎಂಬ ವೇಣುಗೋಪಾಲರ ಮಾತು ನಮ್ಮ ಕಣ್ಣುಗಳ ತೆರೆಸಲಿದೆ ಎಂದರು.
ಕಲಾವಿದ ಎನ್. ಮಹೇಶ್ಕುಮಾರ್ ಪ್ರತಿಕ್ರಿಯಿಸಿ, ಅಂಧರ ಬದುಕಿಗೆ ಮಾರ್ಗದರ್ಶನವಾಗ ಬಲ್ಲ ಈ ಕೃತಿ ಅಂಧನೊಬ್ಬನ ಹೋರಾಟದ ಅನುಭವ ಹೇಳುತ್ತದೆ. ಈ ಪುಸ್ತಕ ಓದಿ ಜನಸಾಮಾನ್ಯರು ಕಲಿಯಬೇಕಾದುದು ತುಂಬಯಿದೆ ಎಂದರು.
ಇದಕ್ಕೂ ಮುನ್ನ ಈ ಕೃತಿಯಲ್ಲಿನ ಸೋವಿನಿಂದ ಸುಖಕ್ಕೆ ಅರ್ಥ ವಿಶೇಷ ಲೇಖನವನ್ನು ಪರಮೇಶ್ ಕೆ. ಉತ್ತನಹಳ್ಳಿ ಓದಿದರು. ಪ್ರಾಧ್ಯಾಪಕಿ ಬಿ.ಎನ್. ಯಶೋದಾ ಅತಿಥಿಯಾಗಿ ಭಾಗವಹಿಸಿದ್ದರು. ವೇದಿಕೆ ಸಂಚಾಲಕ ನಿಂಗರಾಜು ಚಿತ್ತಣ್ಣನವರ್ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.