ಮಾಧವಮಂತ್ರಿ ನಾಲೆಯಿಂದ ಹೆಚ್ಚುವರಿ ಪ್ರದೇಶಕ್ಕೆ ನೀರು: ಸಚಿವರ ಭರವಸೆ
ಕ.ಪ್ರ.ವಾರ್ತೆ ಟಿ.ನರಸೀಪುರ ಮೇ 28
ನಬಾರ್ಡ್ ಯೋಜನೆಯಡಿ ಮಾಧವಮಂತ್ರಿ ಅಣೆಕಟ್ಟೆಯನ್ನು ಅಭಿವೃದ್ಧಿಪಡಿಸಿ ನೀರಿನ ಸೋರಿಕೆ ತಡೆಗಟ್ಟಿ, ಹೆಚ್ಚುವರಿ ಭೂ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲಾಗುವುದು ಎಂದು ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್ ಹೇಳಿದರು.
ತಾಲೂಕಿನ ತಲಕಾಡು ಬಳಿ ಕಾವೇರಿ ನದಿಗೆ ಕಟ್ಟಲಾಗಿರುವ ಪುರಾತನ ಕಾಲದ ಮಾಧವಮಂತ್ರಿ ಅಣೆಕಟ್ಟೆ ಹಾಗೂ ಪ್ರಗತಿಯಲ್ಲಿರುವ ನಾಲೆ ಆಧುನಿಕರಣ ಕಾಮಗಾರಿಯನ್ನು ಶನಿವಾರ ಪರಿಶೀಲಿಸಿ ಮಾತನಾಡಿ, ಎಂಟು ನೂರು ವರ್ಷಗಳಷ್ಟು ಹಳೇಯದಾಗಿರುವ ಮಾಧವಮಂತ್ರಿ ಅಣೆಕಟ್ಟೆಯನ್ನು ಎತ್ತರಿಸಲು ಯೋಜನೆ ರೂಪಿಸಲಾಗುವುದು. ಸಂಗ್ರಹಗೊಳ್ಳುವ ನೀರನ್ನು ವ್ಯರ್ಥವಾಗದಂತೆ ಮಳೆಯಾಶ್ರಿತ ಭೂಮಿಯ ಕೃಷಿಗೆ ಹೆಚ್ಚುವರಿಯಾಗಿ ನೀರನ್ನು ನೀಡುವ ಚಿಂತನೆಯಿದೆ ಎಂದು ತಿಳಿಸಿದರು.
ಪುರಾತನ ಕಾಲದ ಅಣೆಕಟ್ಟೆ ಗುಣಮಟ್ಟದಾಗಿರುವುದರಿಂದ ಎಂಟು ದಶಕಗಳವರೆಗೆ ಬಾಳಿಕೆಗೆ ಬರುತ್ತಿದೆ. ಇಂತಹ ಶಾಶ್ವತ ಯೋಜನೆಯನ್ನು ಉಳಿಸಿಕೊಳ್ಳಬೇಕು. ಈಗಾಗಲೇ ಮಾಧವಮಂತ್ರಿ ನಾಲೆಯ ಆಧುನಿಕರಣ 20 ಕೋಟಿ ವೆಚ್ಚದಲ್ಲಿ ಪ್ರಗತಿಯಲ್ಲಿದೆ. ನಾಲೆಯ ಆಧುನಿಕರಣದ ನಂತರ ಅಣೆಕಟ್ಟೆಯ ಅಭಿವೃದ್ಧಿಗೆ ಯೋಜನೆ ರೂಪಿಸಲಾಗುವುದು. ಆಧುನಿಕರಣ ಕಾಮಗಾರಿ ಕಳಪೆ ಗುಣಮಟ್ಟದಲ್ಲಿ ನಡೆಯುತ್ತಿರುವ ಬಗ್ಗೆ ದೂರು ಕೇಳಿ ಬಂದದ್ದರಿಂದ ಪರಿಶೀಲನೆ ನಡೆಸಿ, ಸೂಕ್ತ ಕ್ರಮ ಕೈಗೊಂಡು ಗುಣಮಟ್ಟ ಕಾಯ್ದುಕೊಳ್ಳುವಂತೆ ಇಲಾಖೆ ಅಧಿಕಾರಿಗಳಿಗೆ ತಾಕೀತು ಮಾಡುವುದಾಗಿ ಸಚಿವರು ಸ್ಪಷ್ಟಪಡಿಸಿದರು.
ಕಡಿವಾಣಕ್ಕೆ ಕ್ರಮ: ಅಣೆಕಟ್ಟೆಗಳ ಬಳಿ ನದಿ ಪಾತ್ರದಲ್ಲಿ ಮರಳು ಗಣಿಗಾರಿಕೆ ನಿಷೇಧಿಸುವ ಸಂಬಂಧ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಮಾಧವಮಂತ್ರಿ ಅಣೆಕಟ್ಟೆಯ ಗೇಟ್‌ಗಳನ್ನು ತೆರೆದು ನೀರು ಬಿಟ್ಟಿದ್ದರಿಂದ ತಲಕಾಡು ಗ್ರಾಮಕ್ಕೆ ಕುಡಿಯುವ ನೀರಿಗೆ ಸಮಸ್ಯೆ ತಲೆದೋರಿದೆ. ಕೋಟ್ಯಂತರ ರು.ಗಳ ಸ್ವಜಲಧಾರೆ ಯೋಜನೆಗೆ ನೀರಿನ ಪೂರೈಕೆಯಾಗುತ್ತಿಲ್ಲವೆಂದು ಸ್ಥಳೀಯರೊಬ್ಬರು ಸಚಿವರ ಗಮನ ಸೆಳೆದರು.
ಬೆಂಗಳೂರು ನಗರ ಪ್ರದೇಶದಲ್ಲಿ ಕುಡಿಯುವ ನೀರಿಗೆ ವ್ಯಾಪಕ ಅಭಾವ ತಲೆದೂರಿರುವ ಹಿನ್ನೆಲೆಯಲ್ಲಿ ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್ ಅವರು ಮೈಸೂರು ಹಾಗೂ ಮಂಡ್ಯ ಜಿಲ್ಲೆಗಳ ವ್ಯಾಪ್ತಿಯಲ್ಲಿ ಬರುವ ಅಣೆಕಟ್ಟೆಗಳನ್ನು ಪರಿಶೀಲನೆ ನಡೆಸಲು ಪ್ರವಾಸ ಕೈಗೊಂಡಿದ್ದರು. ಶ್ರೀರಂಗಪಟ್ಟಣ ತಾಲೂಕಿನ ಬಳಿ ಇರುವ ರಾಮಸ್ವಾಮಿ ಅಣೆಕಟ್ಟೆ ಸೇರಿದಂತೆ ತಲಕಾಡಿನ ಮಾಧವಮಂತ್ರಿ ಅಣೆಕಟ್ಟೆಗಳಿಗೆ ಭೇಟಿ ನೀಡಿ ಸಂಗ್ರಹಗೊಂಡಿದ್ದ ನೀರಿನ ಪ್ರಮಾಣ ಪರಿಶೀಲಿಸಿದರು. ನಂತರ ಶಿವನಸಮುದ್ರದ ಬಫ್ಲ್‌ಗೆ ಪ್ರಯಾಣ ಬೆಳೆಸಿದರು. ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಕಪಿಲ್ ಮೋಹನ್, ಮಂಡ್ಯ ಜಿಲ್ಲಾಧಿಕಾರಿ ಕೃಷ್ಣಯ್ಯ, ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಜಿ. ಬೋರೆಸೆ, ಸಿಇಒ ಪಿ.ಸಿ. ಜಯಣ್ಣ, ಅಧಿಕ್ಷಕ ಶಂಕರೇಗೌಡ, ಕೆಆರ್‌ಎಸ್ ಅಣೆಕಟ್ಟೆ ಕಾರ್ಯಪಾಲಕ ಎಂಜಿನಿಯರ್ ಶಿವಕುಮಾರ್, ಎಂಜಿನಿಯರ್ ಶಿವಶಂಕರ್, ಬನ್ನೂರು ಕಾವೇರಿ ನೀರಾವರಿ ನಿಗಮದ ಇಇ ವಿನೋದ್‌ಕುಮಾರ್, ನರಸೀಪುರ ಸರ್ಕಲ್ ಇನ್ಸ್‌ಪೆಕ್ಟರ್ ಕೆ.ಎಸ್. ಸುಂದರರಾಜ್, ತಾಪಂ ಕಾರ್ಯನಿರ್ವಹಣಾಧಿಕಾರಿ ಸಿ. ವೆಂಕಟೇಶ್, ಗ್ರಾಪಂ ಮಾಜಿ ಅಧ್ಯಕ್ಷ ಮಲ್ಲಣ್ಣಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

