ಜನಪ್ರತಿನಿಧಿಗಳನ್ನು ನಿರ್ಲಕ್ಷಿಸಿದರೆ ತಕ್ಕಪಾಠ: ತಾಪಂ ಸದಸ್ಯರ ಎಚ್ಚರಿಕೆ
ಕ.ಪ್ರ.ವಾರ್ತೆ ಕೆ.ಆರ್. ನಗರ ಅ. 1
ಕಳೆದ ನಾಲ್ಕೈದು ಸಭೆಗಳಲ್ಲಿ ಅಧಿಕಾರಿಗಳ ವಿರುದ್ಧ ಮೃದು ಧೋರಣೆ ತಾಳುತ್ತಿದ್ದ ತಾಪಂ ಸದಸ್ಯರು, ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ ನಿರ್ಲಕ್ಷ್ಯದ ವಿರುದ್ಧ ಮುಗಿಬಿದ್ದರಲ್ಲದೆ ಜನಪ್ರತಿನಿಧಿಗಳನ್ನು ಕಡೆಗಣಿಸಿದರೆ ತಕ್ಕ ಪರಿಣಾಮ ಎದುರಿಸಬೇಕಾಗುತ್ತದೆ ಎಂಬ ನೇರ ಎಚ್ಚರಿಕೆ ನೀಡಿದರು.
ಸದಸ್ಯ ಹಾಡ್ಯ ಮಹದೇವಸ್ವಾಮಿ ಮಾತನಾಡಿ, ತಾಲೂಕಿನಲ್ಲಿ ಹತ್ತಾರು ಸಮಸ್ಯೆಗಳು ತಾಂಡವಾಡುತ್ತಿದ್ದರೂ ಅಧಿಕಾರಿಗಳು ತಮಗೆ ಸಂಬಂಧ ಇಲ್ಲದಂತೆ ವರ್ತಿಸುತ್ತಿದ್ದು, ಯಾವುದೇ ಮೂಲಭೂತ ಸೌಲಭ್ಯವಿಲ್ಲದ ಮತ್ತು ಅಗತ್ಯ ಮಕ್ಕಳಿಲ್ಲದ ಶಾಲೆಗಳಿಗೆ ಅನುದಾನ ನೀಡಲು ಶಿಫಾರಸ್ಸು ಮಾಡಿದ್ದು, ಇದರ ಹಿಂದೆ ಷಡ್ಯಂತ್ರವಿದ್ದು, ಪ್ರಭಾವ ಇರುವ ಶಾಲೆಗಳಿಗೆ ಅರ್ಹತೆ ಇಲ್ಲದಿದ್ದರೂ ಅನುದಾನ ನೀಡಲಾಗಿದೆ ಎಂದು ಆರೋಪಿಸಿದರು.
ಹನಸೋಗೆ ಗ್ರಾಮದಲ್ಲಿರುವ ಖಾಸಗಿ ಶಾಲೆಯೊಂದರಲ್ಲಿ ಮಕ್ಕಳು ಮತ್ತು ಮೂಲಭೂತ ಸೌಲಭ್ಯವಿಲ್ಲದಿದ್ದರೂ ಅನುದಾನ ನೀಡಿದ್ದು, ಈ ಬಗ್ಗೆ ಪರಿಶೀಲನೆ ನಡೆಸಿ ಎಂದು ಒತ್ತಾಯಿಸಿದಾಗ ಇದಕ್ಕಾಗಿ ಸಮಿತಿ ರಚಿಸಿ ತನಿಖೆ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ತಾಲೂಕಿನ ಅಂಗನವಾಡಿ ಕೇಂದ್ರಗಳಿಗೆ ಬಾಡಿಗೆ ಹಣ ನಿಗದಿ ಮಾಡುವಾಗ ಜನಪ್ರತಿನಿಧಿಗಳ ಗಮನಕ್ಕೆ ತಾರದೆ ಕಡೆಗಣಿಸಿದ್ದು, ಈ ಬಗ್ಗೆ ಯಾವುದೆ ಮಾಹಿತಿ ಇಲ್ಲ, ಆದ್ದರಿಂದ ಇದರಲ್ಲಿ ಲಕ್ಷಾಂತರ ರು. ಅವ್ಯವಹಾರ ನಡೆದಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಸದಸ್ಯ ನಾಗಣ್ಣ ಒತ್ತಾಯಿಸಿದಾಗ ಅಗತ್ಯ ತನಿಖೆಗೆ ಸಭೆ ಸಮ್ಮತಿ ಸೂಚಿಸಿತು.
ತಾಲೂಕಿನ ಬಹುತೇಕ ಖಾಸಗಿ ಶಾಲೆಯವರು ಮಕ್ಕಳನ್ನು ಕರೆತರಲು ಉಪಯೋಗಿಸುತ್ತಿರುವ ವಾಹನಗಳು ಸುಸ್ಥಿತಿಯಲ್ಲಿವೆಯೇ ಎಂದು ಪರಿಶೀಲಿಸಿ, ಈ ಬಗ್ಗೆ ಕ್ರಮ ಜರುಗಿಸುವಂತೆ ಹಾಗೂ ಪಟ್ಟಣದಲಿ ಆಟೋಗಳಲ್ಲಿ ಮಕ್ಕಳನ್ನು ಮಿತಿಮೀರಿ ತುಂಬುತ್ತಿದ್ದು, ಇದಕ್ಕೆ ಕಡಿವಾಣ ಹಾಕುವಂತೆ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಸದಸ್ಯರು ಒತ್ತಾಯಿಸಿದರು.
ತಾಲೂಕಿನ ಸಾಲಿಗ್ರಾಮ ಭಾಗದಲ್ಲಿ ಕಾಲು-ಬಾಯಿ ಜ್ವರದಿಂದ ರಾಸುಗಳು ಮೃತಪಟ್ಟಿದ್ದು, ಈ ಬಗ್ಗೆ ಮುನ್ನೆಚ್ಚರಿಕೆ ವಹಿಸಿ ಲಸಿಕೆ ಹಾಕುವಂತೆ ಪಶು ಸಹಾಯಕ ನಿರ್ದೇಶಕ ಡಾ. ರಮೇಶ್ ಅವರಿಗೆ ಸೂಚಿಸಲಾಯಿತಲ್ಲದೆ, ತಾಲೂಕಿನ ಮಿರ್ಲೆ ಅಂಕನಹಳ್ಳಿ ಸೇರಿದಂತೆ ಇತರ ಗ್ರಾಮಗಳಲ್ಲಿ ಬತ್ತಕ್ಕೆ ಬೆಂಕಿರೋಗ ಬಂದಿದ್ದು, ಕೂಡಲೆ ಸೂಕ್ತ ಔಷಧೋಪಚಾರಕ್ಕೆ ಕ್ರಮ ಕೈಗೊಳ್ಳುವಂತೆ ಕೃಷಿ ಸಹಾಯಕ ನಿರ್ದೇಶಕ ಸೋಮಶೇಖರ್ ಅವರಿಗೆ ಸದಸ್ಯರು ತಾಕೀತು ಮಾಡಿದರು.
ತಾಪಂ ಅಧ್ಯಕ್ಷೆ ಕವಿತಾ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಉಪಾಧ್ಯಕ್ಷೆ ಶಕುಂತಲಾ, ಸ್ಥಾಯಿ ಸಮಿತಿ ಅಧ್ಯಕ್ಷ ಸಾದಿಕ್ ಖಾನ್, ಸದಸ್ಯರಾದ ಹೇಮಾವತಿ ಅಶೋಕ್, ರಮ್ಯ ಸತೀಶ್, ಶಕುಂತಲಾ ರಮೇಶ್, ವಿಜಯಲಕ್ಷ್ಮೀ, ಜಯಲಕ್ಷ್ಮೀ, ಸುಷ್ಮಾ, ಲಕ್ಷ್ಮೀ, ಕೃಷ್ಣೇಗೌಡ, ಮಿರ್ಲೆ ಸೀತಾರಾಂ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜು, ಸಿಡಿಪಿಒ ಸದಾಶಿವಪ್ಪ, ಟಿಎಚ್ಒ ಡಾ.ಟಿ. ಶಿವಪ್ರಸಾದ್, ಸಹಾಯಕ ಪಶು ನಿರ್ದೇಶಕ ಡಾ. ರಮೇಶ್, ಕ್ಷೇತ್ರ ಶಿಕ್ಷಾಣಾಧಿಕಾರಿ ಜವರೇಗೌಡ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

