ಮೈಸೂರು

ಠಾಣೆಗಳ ಮರು ವಿಂಗಡಣೆ

Published On :

ಕ.ಪ್ರ.ವಾರ್ತೆ  ಪಿರಿಯಾಪಟ್ಟಣ  ಅ. 4
ತಾಲೂಕಿನಲ್ಲಿ ಬರುವ ಮೂರು ಪೊಲೀಸ್ ಠಾಣೆಗಳ ವ್ಯಾಪ್ತಿಯನ್ನು ವೈಜ್ಞಾನಿಕ ರೀತಿಯಲ್ಲಿ ಮರುವಿಂಗಡಣೆ ಮಾಡಲು ಮೇಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸುವುದಾಗಿ ಡಿವೈಎಸ್ಪಿ ನಂಜುಂಡ ಹೇಳಿದರು.
ಸರ್ಕಲ್ ಇನ್ಸ್ಪೆಕ್ಟರ್ ಕಚೇರಿ ಆವರಣದಲ್ಲಿ ಏರ್ಪಡಿಸಿದ್ದ ಜನಸ್ಪಂದನಾ ಸಭೆಯಲ್ಲಿ ಸಾರ್ವಜನಿಕರ ಸಮಸ್ಯೆ ಆಲಿಸಿ ಮಾತನಾಡಿದ ಅವರು, ತಾಲೂಕಿನ ರಾವಂದೂರು, ಕಣಗಾಲು, ಕಂಪಲಾಪುರ, ಪಂಚವಳ್ಳಿ ಮತ್ತಿತರ ಕಡೆಗಳಲ್ಲಿ ಪೊಲೀಸ್ ಔಟ್ ಪೋಸ್ಟ್ಗಳ ಬೇಡಿಕೆ ಇದ್ದು, ಈ ಬಗ್ಗೆ ಮೇಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು. ಈ ವಿಚಾರ ಸರ್ಕಾರದ ಮಟ್ಟದಲ್ಲಿ ನಡೆಯಬೇಕಾಗಿದ್ದು, ಈ ಬಗ್ಗೆ ಹೆಚ್ಚಿನ ಗಮನ ಹರಿಸಲಾಗುವುದು ಎಂದರು. ಠಾಣೆಗಳಲ್ಲಿ ಸಿಬ್ಬಂದಿ ಕೊರತೆ ಇದ್ದು, ರಾತ್ರಿ ಪಾಳಿ ಸೇರಿದಂತೆ ಗ್ರಾಮಗಳಿಗೆ ಗಸ್ತು ತಿರುಗುವ ವ್ಯವಸ್ಥೆಯಲ್ಲಿ ವ್ಯತ್ಯಾಸವಾಗಿದ್ದು, ದಸರಾ ನಂತರ ಗಸ್ತು ವ್ಯವಸ್ಥೆಯನ್ನು ಸುಧಾರಿಸಲಾಗುವುದು.
ಫಲಕಗಳ ಅಳವಡಿಕೆ: ಪಟ್ಟಣ ವ್ಯಾಪ್ತಿಯಲ್ಲಿ ವಾಹನಗಳ ವೇಗ ಮಿತಿಯ ಫಲಕಗಳನ್ನು ಪ್ರಾಯೋಗಿಕವಾಗಿ ಅಳವಡಿಸಲಾಗುವುದು. ಆದ್ದರಿಂದ ಪರಿಣಾಮಕಾರಿ ಫಲಿತಾಂಶ ಕಂಡುಬಂದಲ್ಲಿ ಅದನ್ನು ಶಾಶ್ವತವಾಗಿ ಅಳವಡಿಸಲಾಗುವುದು ಎಂದು  ತಿಳಿಸಿದರು.
ಸರ್ಕಲ್ ಇನ್ಸ್ಪೆಕ್ಟರ್ ಪ್ರಸನ್ನಕುಮಾರ್ ಮಾತನಾಡಿ, ಪೊಲೀಸ್ ಸಿಬ್ಬಂದಿ ಮೇಲೆ ಆರೋಪಗಳು ಕೇಳಿಬರುತ್ತಿದ್ದು, ಈ ಬಗ್ಗೆ ನೇರವಾಗಿ ಮಾಹಿತಿ ನೀಡಿದರೆ ಪೊಲೀಸರ ವಿರುದ್ಧವೂ ಶಿಸ್ತು ಕ್ರಮ ಜರುಗಿಸಲಾಗುತ್ತದೆ. ಹೆದ್ದಾರಿಯಲ್ಲಿ ರಸ್ತೆ ಡುಬ್ಬಗಳು ಹೆಚ್ಚಾಗಿದ್ದು, ಅವುಗಳನ್ನು ಕಡಿಮೆ ಮಾಡಿ ತೆರವುಗೊಳಿಸುವಂತೆ ಎಸ್ಪಿ ಅವರು ಆದೇಶಿಸಿದ್ದಾರೆ. ಈ ಬಗ್ಗೆ ಕ್ರಮ ವಹಿಸಲಾಗುವುದು ಮತ್ತು ಹೆಚ್ಚು ಅಪಘಾತಗಳು ನಡೆಯುವ ಸ್ಥಳಗಳಲ್ಲಿ ಬ್ಯಾರಿಕೇಡ್ಗಳನ್ನು ಹಾಕಲಾಗುವುದು. ಇನ್ನು ತಾಲೂಕು ವ್ಯಾಪ್ತಿಯಲ್ಲಿನ ಕ್ಲಬ್ಗಳಲ್ಲಿ ಕಾನೂನು ಬಾಹಿರ ಚಟುವಟಿಕೆಗಳು ಕಂಡುಬಂದಲ್ಲಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಹಾಗೂ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಲಾಗುವುದು ಎಂದು ತಿಳಿಸಿದರು.
ಮಾಹಿತಿ ನೀಡಿ: ಮನೆ ಬೀಗ ಹಾಕಿ ಬೇರೆ ಸ್ಥಳಗಳಿಗೆ ತೆರಳುವವರು ಮನೆಯ ಬಾಗಿಲಿಗೆ ದೊಡ್ಡ ಬೀಗಗಳನ್ನು ಹಾಕದೆ ಡೋರ್ಲಾಕ್ಗಳನ್ನು ಹಾಕಿಕೊಳ್ಳಿ ಮನೆಯಿಂದ ತೆರಳುವ ಮುನ್ನ ಅಕ್ಕಪಕ್ಕದವರಿಗೆ ಮಾಹಿತಿ ನೀಡಿ ಮತ್ತು ಪೊಲೀಸ್ಠಾಣೆಗೆ ಮಾಹಿತಿ ನೀಡಿದ ಪಕ್ಷದಲ್ಲಿ ಮನೆಗೆ ರಕ್ಷಣೆ ನೀಡಲಾಗುವುದು ಎಂದು ಹೇಳಿದರು. ಸಭೆಯಲ್ಲಿ ಎಸ್ಐ ರಫೀಕ್, ಎಎಸ್ಐ ಸಿದ್ದಯ್ಯ, ಮಹದೇವಯ್ಯ, ಸಿಬ್ಬಂದಿ ಬೀರೇಗೌಡ, ಮಂಜುನಾಥ್, ಗಿರೀಶ್, ಪಪಂ ಸದಸ್ಯ ಎಂ.ಎ. ಅಬ್ದುಲ್ಅಜೀಜ್, ಮಂಜುನಾಥ್ಸಿಂಗ್, ವಿವಿಧ ಸಂಘಟನೆಗಳ ಮುಖಂಡರಾದ ಗೊರಳ್ಳಿ ಜಗದೀಶ್, ತಮ್ಮಣ್ಣಯ್ಯ, ಪಿ. ಮಹದೇವ್, ಚಾಮರಾಯನ ಕೋಟೆ ಜಗದೀಶ್ ಸೇರಿದಂತೆ ವಾಹನ ಚಾಲಕರು ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.