ಮೈಸೂರು

ದೇವರಾಜ ಅರಸು ಪೀಠಕ್ಕೆ 25 ಲಕ್ಷ ಅನುದಾನ: ಸಂಸದ ಎಚ್. ವಿಶ್ವನಾಥ್

Published On :

ಮೈಸೂರು: ಮೈಸೂರು ವಿವಿ ದೇವರಾಜ ಅರಸು ಪೀಠದ ಅಭಿವೃದ್ಧಿಗಾಗಿ 25 ಲಕ್ಷ ಅನುದಾನ ನೀಡುವುದಾಗಿ ಸಂಸದ ಎಚ್. ವಿಶ್ವನಾಥ್ ಹೇಳಿದರು.
ಮಾನಸಗಂಗೋತ್ರಿ ಮಾನವಿಕ ಸಭಾಂಗಣದಲ್ಲಿ ಅಭಿವೃದ್ಧಿ ಅಧ್ಯಯನ ಸಂಸ್ಥೆಯು ಬುಧವಾರ ಆಯೋಜಿಸಿದ್ದ ದೇವರಾಜ ಅರಸು ಅವರ 98ನೇ ಜನ್ಮ ದಿನೋತ್ಸವದಲ್ಲಿ ಪ್ರೊ. ಕೆ.ವಿ. ಅಯ್ಯಣ್ಣ ಅವರ ದೇವರಾಜ ಅರಸು ಅವರ ಅಭಿವೃದ್ಧಿ ಚಿಂತನೆಗಳು ಎಂಬ ಪುಸ್ತಕವನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ವಿವಿಯಲ್ಲಿ ಸರ್ಕಾರವು ಯಾವ ಉದ್ದೇಶದಿಂದ ಪೀಠಗಳನ್ನು ಸ್ಥಾಪಿಸಿದೆಯೋ ಆ ಉದ್ದೇಶ ಈಡೇರಿಸುವ ನಿಟ್ಟಿನಲ್ಲಿ ಕೆಲಸಗಳು ಆಗಬೇಕು. ಪೀಠಗಳಿಂದ ಸರ್ಕಾರಕ್ಕೆ ನಿರ್ದೇಶನ, ಯೋಜನೆಗಳು ನೀಡುವ ಕೆಲಸ ಆಗಬೇಕು. ಈ ನಿಟ್ಟಿನಲ್ಲಿ ಕುಲಪತಿ ಪ್ರೊ. ರಂಗಪ್ಪ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ತಿಳಿಸಿದರು.
ಎಸ್.ಎಂ. ಕೃಷ್ಣ ಸೈಬರ್ ಲೀಡರ್: ದೇವರಾಜ ಅರಸು ಅವರಿಂದಾಗಿ ನಾನು ರಾಜಕೀಯದಲ್ಲಿ ಬೆಳೆದಿದ್ದೇನೆ. ಅವರು ಹಿಂದುಳಿದ ವರ್ಗದವರನ್ನು ಗುರುತಿಸಿ ಬೆಳೆಸುತ್ತಿದ್ದರು. ಡಾ. ಅಂಬೇಡ್ಕರ್ ಹೇಳಿದನ್ನು ಅಕ್ಷರಶಃ ಜಾರಿಗೆ ತಂದವರು ಅರಸು. ರಾಜ್ಯಶಾಸ್ತ್ರ ವಿದ್ಯಾರ್ಥಿಗಳಿಗೆ ಪಾಠ ಮಾಡುವ ವಿಚಾರ ಹಾಗೂ ನೈಜ ವಿಚಾರ ಎರಡೂ ಬೇರೆ ಬೇರೆ ಆಗಿದೆ ಎಂದರು. ಹಳ್ಳಿ ಹಕ್ಕಿ ಹಾಡು, ಮತಸಂತೆ ಎಂಬ ಪುಸ್ತಕಗಳನ್ನು ನಾನು ಬರೆದಿದ್ದೇನೆ. ಈ ಪುಸ್ತಕಗಳಲ್ಲಿ ನನ್ನ ರಾಜಕೀಯ ಅನುಭವ ಇದೆ. ಮತಸಂತೆ ಪುಸ್ತಕವನ್ನು ಪಠ್ಯವಾಗಿ ಸಹ ಅಳವಡಿಸಿಕೊಳ್ಳಬಹುದು ಎಂದು ಸಲಹೆ ನೀಡಿದ ಅವರು, ಕೇಂದ್ರ ಮತ್ತು ರಾಜ್ಯ ಬಜೆಟ್ಗಳ ಬಗ್ಗೆ ಅರ್ಥಶಾಸ್ತ್ರ, ವಾಣಿಜ್ಯಶಾಸ್ತ್ರ ವಿಭಾಗಗಳಲ್ಲಿ ಚರ್ಚೆ ಆಗಬೇಕು. ದೇಶದ ಪರಿಸ್ಥಿತಿ ಮತ್ತು ವ್ಯವಸ್ಥೆಯನ್ನು  ವಿದ್ಯಾರ್ಥಿಗಳು ಅರ್ಥ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು. ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು ದೇಶದ ಸೈಬರ್ ಲೀಡರ್ ಆಗಿದ್ದಾರೆ. ಯುವಕರು 2 ಲಕ್ಷ ಸಂಬಳ ಪಡೆಯಲು ಎಸ್.ಎಂ. ಕೃಷ್ಣ ಕೊಡುಗೆ ಕಾರಣ. ಆದರೆ, ಯುವಕರ ಬಗ್ಗೆ ಮಾತನಾಡುವ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಏನು ಕೊಡುಗೆ ನೀಡಿದ್ದಾರೆ ಎಂದು ಅವರು ಪ್ರಶ್ನಿಸಿದರು.
ಹೊಸ ಶಕೆ: ಕಾರ್ಯಕ್ರಮ ಉದ್ಘಾಟಿಸಿದ ಕಂದಾಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸಪ್ರಸಾದ್ ಮಾತನಾಡಿ, ದೇವರಾಜ ಅರಸು ಅವರು ಕರ್ನಾಟಕದಲ್ಲಿ ರಾಜಕೀಯ ಹೊಸ ಶಕೆ ಆರಂಭಿಸಿದರು. ಅವರಿಂದಾಗಿಯೇ ವೀರಪ್ಪ ಮೊಯ್ಲಿ, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾರೆ ಎಂದು ಅವರು ಹೇಳಿದರು. ನಾನು ವಿದ್ಯಾರ್ಥಿಯಾಗಿದ್ದಾಗ ಕಾಂಗ್ರೆಸ್ ವಿರೋಧಿ ಆಗಿದ್ದೆ. ಅರಸು ಅವರ ಸಾಮಾಜಿಕ ಕಳಕಳಿಯನ್ನು ನೆನಪಿಸಿಕೊಳ್ಳಬೇಕು. ಇದರಿಂದಾಗಿಯೆ ಜನ ಅರಸು  ಅವರನ್ನು 8 ವರ್ಷ ಮುಖ್ಯಮಂತ್ರಿ ಸ್ಥಾನದಲ್ಲಿ ಇರಿಸಿದ್ದರು. ಧ್ವನಿ ಇಲ್ಲದವರೆ ಧ್ವನಿಯಾದ ಅರಸು ಅವರು 20 ಅಂಶಗಳ ಕಾರ್ಯಕ್ರಮವು ಉತ್ತಮವಾಗಿತ್ತು ಎಂದು ಅವರು ತಿಳಿಸಿದರು. 1973ರಲ್ಲಿ ದಲಿತ ವೈದ್ಯ ಕಾಂತರಾಜು ಎಂಬರ ಕೊಲೆ ಆಗಿತ್ತು. ಪೊಲೀಸರು ಆತ್ಮಹತ್ಯೆ ಎಂದು ಪ್ರಕರಣ ದಾಖಲಿಸಿದ್ದರು. ಈ ಬಗ್ಗೆ ಸೂಕ್ತ ತನಿಖೆ ನಡೆಸಬೇಕೆಂದು ಆಗಿನ ಮುಖ್ಯಮಂತ್ರಿ ದೇವರಾಜ ಅರಸು ಅವರಿಗೆ ದೂರು ನೀಡಲು ಹೋಗಿದ್ದೇವು. ನಮ್ಮ ದೂರು ಸ್ವೀಕರಿಸಿದ ಅರಸು ಅವರು, ಈ ಬಗ್ಗೆ ಸೂಕ್ತ ತನಿಖೆ ನಡೆಸುವಂತೆ ಸ್ಥಳದಲ್ಲೆ ಆದೇಶಿಸಿದ್ದರು ಎಂದ ಶ್ರೀನಿವಾಸಪ್ರಸಾದ್ ಅವರು, ದೇವರಾಜ ಅರಸು ಅವರು ಇರಬೇಕಿತ್ತು. ಅವರು ಸಮಾಜದ ಶಕ್ತಿ ಆಗಿದ್ದರು ಎಂದರು. ಕೇಂದ್ರ ಸರ್ಕಾರದ ಟಿಸಿಪಿಒ ಮಾಜಿ ಮುಖ್ಯ ಯೋಜಕ ಹಾಗೂ ದೇವರಾಜ ಅರಸು ಪೀಠದ ಸಂದರ್ಶಕ ಪ್ರಾಧ್ಯಾಪಕ ಡಾ. ಡಿ.ಎಸ್. ಮೆಶ್ರಾಂ ಅವರು ಆಶಷ ಭಾಷಣ ಮಾಡಿದರು. ಮೈಸೂರು ವಿವಿ ಕುಲಪತಿ ಪ್ರೊ. ಕೆ.ಎಸ್. ರಂಗಪ್ಪ ಅಧ್ಯಕ್ಷತೆ ವಹಿಸಿದ್ದರು. ಲೇಖಕ ಪ್ರೊ. ಕೆ.ವಿ. ಅಯ್ಯಣ್ಣ ಇದ್ದರು. ಅಭಿವೃದ್ಧಿ ಅಧ್ಯಯನ ಸಂಸ್ಥೆ ನಿರ್ದೇಶಕ ಪ್ರೊ. ಕೃಷ್ಣೇಗೌಡ ಸ್ವಾಗತಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.