ಮೈಸೂರು

ಗಂಧನಹಳ್ಳಿ ಹಾಲು ಉತ್ಪಾದಕರ ಸಂಘದಲ್ಲಿ ಅವ್ಯವಹಾರ ನಡೆದಿಲ್ಲ: ಶಿವಸ್ವಾಮಿ ಸ್ಪಷ್ಟನೆ

Published On :

ಕ.ಪ್ರ.ವಾರ್ತೆ ,  ಭೇರ್ಯ ,  ಅ. 24
ಗಂಧನಹಳ್ಳಿ ಹಾಲು ಉತ್ಪಾದಕರ ಸಂಘದಲ್ಲಿ ಅವ್ಯವಹಾರ ನಡೆದಿದೆ ಎಂದು ಗ್ರಾಪಂ ಅಧ್ಯಕ್ಷೆ ಭಾಗ್ಯಮ್ಮ ಆರೋಪಿಸಿರುವುದು ಸತ್ಯಕ್ಕೆ ದೂರವಾದ ಸಂಗತಿ ಎಂದು ಸಂಘದ ಅಧ್ಯಕ್ಷ ಜಿ.ಎಚ್. ಶಿವಸ್ವಾಮಿ ಹೇಳಿದ್ದಾರೆ.
ಕೆಲವು ವರ್ಷಗಳ ಹಿಂದೆ ಭಾಗ್ಯಮ್ಮ ಅವರೆ ಹಾಲು ಉತ್ಪಾದಕರ ಸಂಘದ ಅಧ್ಯಕ್ಷರಾಗಿದ್ದರು. ಅವರು ಎಷ್ಟು ಹಣ ಗುಳುಂ ಮಾಡಿದ್ದರು ಅವರಿಗೆ ಗೊತ್ತಿಲ್ಲವೆ? ಎಷ್ಟು ಲೀಟರ್ ಹಾಲು ಬರುತ್ತಿತ್ತು, ಲಾಭ ನಷ್ಟದ ಬಗ್ಗೆ ಗೊತ್ತಿದ್ದರೂ, ವ್ಯಯಕ್ತಿಕ ದ್ವೇಷದಿಂದ ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಂಘ ಪ್ರಾರಂಭವಾಗಿನಿಂದಲೂ ಕೇವಲ 100 ಲೀಟರ್‌ಗಿಂತ ಕಡಿಮೆ ಹಾಲು ಸರಬರಾಜು ಆಗುತ್ತಿದೆ. ಕಳೆದ ಮೂರು ವರ್ಷಗಳಿಂದ 250 ರಿಂದ 300 ಲೀಟರ್ ಹಾಲನ್ನು ಸದಸ್ಯರು ಸರಬರಾಜು ಮಾಡುತ್ತಿದ್ದು, ಯಾವುದೇ ಲೋಪ ದೋಷವಿಲ್ಲದೆ ನಿಗದಿತ ಸಮಯಕ್ಕೆ ಬಟವಾಡೆ ಮಾಡುತ್ತಾ ಸಂಘ ಬಂದಿದೆ. ಗ್ರಾಪಂ ಅಧ್ಯಕ್ಷರು 50 ಲಕ್ಷ ಭ್ರಷ್ಟಾಚಾರವೆಸಗಿದ್ದಾರೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಅಧ್ಯಕ್ಷ ಶಿವಸ್ವಾಮಿ, ಸಂಘ ಪ್ರಾರಂಭದಿಂದ ಇಂದಿನವರೆಗೂ 50 ಲಕ್ಷ ವಹಿವಾಟು ನಡೆಸಿಲ್ಲ. ಅಂತಹದರಲ್ಲಿ 50 ಲಕ್ಷ ಎಂದರೆ ಹುಡುಗಾಟವೇ ಎಂದು ಪ್ರಶ್ನಿಸಿದರು.
ಉತ್ಪಾದಕರು, ಸಂಘದ ನಿರ್ದೇಶಕರು, ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಮ್ಮ ಕಾರ್ಯದರ್ಶಿ ಕೆ. ಮಹದೇವ್ ಸಂಘ ನಡೆಸಿಕೊಂಡು ಬರುತ್ತಿದ್ದಾರೆ. ಆದರೆ ಭಾಗ್ಯಮ್ಮ ರಾಜಕೀಯ ದುರುದ್ದೇಶ ಮತ್ತು ಖಾಸಗಿಯಾಗಿ ಡೇರಿ ನಡೆಸುತ್ತಿರುವ ಮಂಜುನಾಥ್ ಅವರ ಕೈಗೊಂಬೆಯಾಗಿ ಹಾಲಿನ ಡೇರಿ ಬಗ್ಗೆ ಆರೋಪಿಸುತ್ತಿದ್ದಾರೆ.
ಹಾಲು ಉತ್ಪಾದಕರ ಸಂಘಕ್ಕೆ ನಿವೇಶನ ಕೊಡಿ ಎಂದು ನಮ್ಮ ಕಾರ್ಯದರ್ಶಿ ಮಹದೇವ್, ಗ್ರಾಪಂ ಅಧ್ಯಕ್ಷರು ಮತ್ತು ಅಂದಿನ ಕಾರ್ಯದರ್ಶಿಗಳಿಗೆ ಮನವಿ ಮಾಡಿದ್ದರೂ ಇದುವರೆಗೂ ನಿವೇಶನ ಮಂಜೂರು ಮಾಡಿಲ್ಲ ಏಕೆ ಎಂದು ಗ್ರಾಪಂ ಅಧ್ಯಕ್ಷರನ್ನು ಪ್ರಶ್ನಿಸಿದ ಅವರು, ಸಂಘದಲ್ಲಿ ಅವ್ಯವಹಾರ ನಡೆದಿದ್ದರೆ ತನಿಖೆ ಮಾಡಿಸಲಿ. ಅದು ಬಿಟ್ಟು ಇಲ್ಲಸಲ್ಲದ ಹೇಳಿಕೆ ಕೊಡುವುದನ್ನು ನಿಲ್ಲಿಸುವಂತೆ ಹೇಳಿದರು.
ಕಾರ್ಯದರ್ಶಿ ಮಹದೇವ್, ಸಂಘದ ನಿರ್ದೇಶಕ ಜಿ.ಕೆ. ಶಿವಣ್ಣ, ಸಣ್ಣಸ್ವಾಮಿ, ಜವರೇಗೌಡ, ಉತ್ಪಾದಕರಾದ ಜಿ.ಪಿ. ನಾಗರಾಜು, ಕೆಂಪೇಗೌಡ, ಜಿ.ಎಸ್. ಬೀರೇಗೌಡ, ಜಿ.ಸಿ. ಮಹದೇವ್, ಗೋವಿಂದ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.