ಮೈಸೂರು

ನಗರ ಪೊಲೀಸರಿಂದ 11 ಆರೋಪಿಗಳ ಸೆರೆ

Published On :

ಕ.ಪ್ರ.ವಾರ್ತೆ    ಮೈಸೂರು    ಅ. 28
ಸರಗಳ್ಳತನ, ವಂಚನೆ ಹಾಗೂ ದ್ವಿಚಕ್ರ ವಾಹನ ಕಳವು ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ 11 ಮಂದಿ ಆರೋಪಿಗಳನ್ನು ನಗರ ಪೊಲೀಸರು ಬಂಧಿಸಿ, ಒಟ್ಟು 53 ಲಕ್ಷ ಮೌಲ್ಯದ ಚಿನ್ನಾಭರಣ, ಕಾರು ಹಾಗೂ ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ವರ್ಷ ದಾಖಲಾಗಿದ್ದ ವಿವಿಧ ಪ್ರಕರಣಗಳು ಪತ್ತೆಯಾಗಿದೆ. ಸರ ಅಪಹರಣ ಹಾಗೂ ಇನ್ನಿತರ ಕೆಲವು ಪ್ರಕರಣಗಳು ಮಾತ್ರ ಬಾಕಿ ಉಳಿದಿದೆ. ಇದನ್ನು ಹೊರತುಪಡಿಸಿ ಬಹುತೇಕ ಪ್ರಕರಣಗಳು ಪತ್ತೆ ಮಾಡಲಾಗಿದೆ ಎಂದು ಪೊಲೀಸ್ ಆಯುಕ್ತ ಡಾ.ಎಂ.ಎ. ಸಲೀಂ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಡಿಸಿಪಿಗಳಾದ ಎ.ಎನ್. ರಾಜಣ್ಣ, ಎಂ.ಎಂ. ಮಹದೇವಯ್ಯ, ಎಸಿಪಿಗಳಾದ ಸಿ.ಡಿ. ಜಗದೀಶ್, ಜಯಮಾರುತಿ, ಬಿ.ಟಿ. ಕವಿತಾ ಇದ್ದರು.
11 ಮಂದಿ ಮಹಿಳೆಯರಿಗೆ ವಂಚಿಸಿದ್ದ: ಒಂಟಿ ಮಹಿಳೆಯರಿಗೆ ಅವರ ಮನೆಯವರಿಗೆ ಅಪಘಾತ ಆಗಿದೆ ಎಂದು ಹೇಳಿ ಸಹಾಯ ಮಾಡುವ ನೆಪದಲ್ಲಿ ದೋಚುತ್ತಿದ್ದ ಹೂಟಗಳ್ಳಿ ನಿವಾಸಿ ದೀಪಕ್ ಅ. ದಪ್ಪತಲೆ(26) ಎಂಬಾತನನ್ನು ದೇವರಾಜ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಈತನು ಒಂಟಿ ಮಹಿಳೆಯರನ್ನು ಗುರಿಯಾಗಿಸಿಕೊಂಡು, ಅವರ ಮನೆಯವರಿಗೆ ಅಪಘಾತ ಆಗಿದೆ ಎಂದು ಹೇಳಿ ನಂಬಿಸಿ ವಿವಿಧ ವಾಹನಗಳಲ್ಲಿ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅವರ ಮೇಲೆ ಹಲ್ಲೆ ನಡೆಸಿ ಚಿನ್ನಾಭರಣ ದೋಚುತ್ತಿದ್ದ. ಬಂಧಿತನಿಂದ ದೇವರಾಜ ಠಾಣೆ, ಮೇಟಗಳ್ಳಿ ಠಾಣೆಯ ತಲಾ 3, ವಿವಿ ಪುರಂ, ವಿಜಯನಗರ ಠಾಣೆ ತಲಾ 2 ಹಾಗೂ ನಜರ್ಬಾದ್ ಠಾಣೆ 1 ಪ್ರಕರಣ ಸೇರಿದಂತೆ ಒಟ್ಟು 11 ಪ್ರಕರಣಗಳು ಪತ್ತೆಯಾಗಿದೆ. 30 ಲಕ್ಷ ಮೌಲ್ಯದ ಚಿನ್ನಾಭರಣ, ಕೃತ್ಯಕ್ಕೆ ಬಳಸುತ್ತಿದ್ದ ಕಾರು, ಬೈಕ್, ಆಟೋಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ದೇವರಾಜ ಉಪ ವಿಭಾಗ ಎಸಿಪಿ ಜಯಮಾರುತಿ ಮಾರ್ಗದರ್ಶನದಲ್ಲಿ ದೇವರಾಜ ಠಾಣೆ ಇನ್ಸ್ಪೆಕ್ಟರ್ ಎಚ್.ಎಂ. ಕಾಂತರಾಜು, ಎಸ್ಐಗಳಾದ ಕೆ. ಲೇಪಾಕ್ಷ, ಪುಟ್ಟನಂಜಪ್ಪ ಮತ್ತು ಸಿಬ್ಬಂದಿ ಈ ಪತ್ತೆ ಮಾಡಿದ್ದಾರೆ.
ನಕಲಿ ಸರ್ಕಾರಿ ಅಧಿಕಾರಿ: ಸರ್ಕಾರಿ ಅಧಿಕಾರಿ ಎಂದು ನಂಬಿಸಿ ಸಾರ್ವಜನಿಕರಿಗೆ ವಂಚಿಸುತ್ತಿದ್ದ ವ್ಯಕ್ತಿಯನ್ನು ಎನ್.ಆರ್. ಠಾಣೆ ಪೊಲೀಸರು ಬಂಧಿಸಿ, 20.43 ಲಕ್ಷ ಮೌಲ್ಯದ ಚಿನ್ನಾಭರಣ, ಕಾರು ಮತ್ತು ಲ್ಯಾಪ್ಟಾಪ್ ವಶಪಡಿಸಿಕೊಂಡಿದ್ದಾರೆ.
ತಮಿಳುನಾಡು ರಾಜ್ಯದ ಕೃಷ್ಣಗಿರಿ ಜಿಲ್ಲೆ ಹೊಸೂರು ತಾಲೂಕು ನಿವಾಸಿ ಮುನಿರಾಜು(37) ಬಂಧಿತ ಆರೋಪಿ. ಈತನು ತಾನು ಸರ್ಕಾರಿ ಅಧಿಕಾರಿ ಎಂದು ನಂಬಿಸಿ, ನಿವೇಶನ ಕೊಡಿಸುವುದಾಗಿ ಹೇಳುತ್ತಿದ್ದ. ತಮ್ಮ ಬಳಿ ಹಣ ಇಲ್ಲವೆನ್ನುತ್ತಿದ್ದವರಿಗೆ ಚಿನ್ನಾಭರಣ ಕೊಡಿ ಮೇಲಧಿಕಾರಿಗಳಿಗೆ ತೋರಿಸಿ ನಿವೇಶನ ಕೊಡಿಸುವುದಾಗಿ ನಂಬಿಸುತ್ತಿದ್ದ. ನಂತರ ಜನರಿಂದ ಚಿನ್ನಾಭರಣ ಪಡೆದು ಪರಾರಿಯಾಗುತ್ತಿದ್ದ.
ಬಂಧಿತನಿಂದ ಎನ್.ಆರ್. ಠಾಣೆ, ಕೆ.ಆರ್. ಠಾಣೆ ಮತ್ತು ಜಯಲಕ್ಷ್ಮಿಪುರಂ ಠಾಣೆಯ ತಲಾ 1 ಪ್ರಕರಣಗಳಂತೆ ಒಟ್ಟು 3 ವಂಚನೆ ಪ್ರಕರಣ ಪತ್ತೆಯಾಗಿದೆ. ಈತ ಮಾರಾಟ ಮಾಡಿದ್ದ 300 ಗ್ರಾಂ. ತೂಕದ ಚಿನ್ನಾಭರಣ, ಕೃತ್ಯಕ್ಕೆ ಉಪಯೋಗಿಸುತ್ತಿದ್ದ ರೆನಾಲ್ ಡಸ್ಟರ್ ಕಾರು, ಲ್ಯಾಪ್ಟಾಪ್ ಮತ್ತು ಮೊಬೈಲ್ ಫೋನ್ಗಳ ಸೇರಿದಂತೆ ಒಟ್ಟು 20.43 ಲಕ್ಷ ಮೌಲ್ಯದ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಎನ್.ಆರ್. ಉಪ ವಿಭಾಗದ ಎಸಿಪಿ ಸಿ.ಡಿ. ಜಗದೀಶ್ ಮಾರ್ಗದರ್ಶನದಲ್ಲಿ ಎನ್.ಆರ್. ಠಾಣೆ ಇನ್ಸ್ಪೆಕ್ಟರ್ ಎಸ್. ಪರಶಿವಮೂರ್ತಿ ಮತ್ತು ಸಿಬ್ಬಂದಿ ಈ ಪತ್ತೆ ಮಾಡಿದ್ದಾರೆ.
ಒಬ್ಬ ಸರ ಅಪಹರಣಕಾರ, ಮೂವರು ವಂಚಕಿಯರು: ಕುವೆಂಪುನಗರ ಠಾಣೆ ಪೊಲೀಸರು ಒಬ್ಬ ಸರ ಅಪಹರಣಕಾರ ಹಾಗೂ ಮೂವರು ವಂಚಕಿಯರನ್ನು ಬಂಧಿಸಿದ್ದಾರೆ.
ಕನಕದಾಸನಗರ ಮಹಾಮನೆ ವೃತ್ತದ ಬಳಿ ದಿವಾಕರ್ ಅ. ಅಜಯ್ ಎಂಬಾತನನ್ನು ಬಂಧಿಸಿ, ಆತನ ಬಳಿಯಿದ್ದ 1 ಹಾಗೂ ಪಾನ್ ಬ್ರೋಕರ್ ಅಂಗಡಿಯಲ್ಲಿ ಇರಿಸಿದ್ದ 1 ಸರ ಸೇರಿದಂತೆ ಒಟ್ಟು 2 ಲಕ್ಷ ಮೌಲ್ಯದ ಎರಡು ಸರಗಳನ್ನು ವಶಪಡಿಸಿಕೊಂಡಿದ್ದಾರೆ.
ಕೃಷ್ಣಶೆಟ್ಟಿ ಜುವೆಲ್ಲರಿ ಅಂಗಡಿಗೆ ವ್ಯಾಪಾರ ಮಾಡುವ ಸೋಗಿನಲ್ಲಿ ತೆರಳಿ 27 ಗ್ರಾಂ. ತೂಕದ ಕರೀಮಣಿ ಇರುವ ಚಿನ್ನದ ಸರ ಮತ್ತು 1 ಚಿನ್ನದ ಬಳೆ ಕಳವು ಮಾಡಿದ್ದ ಮೂವರು ಮಹಿಳೆಯರನ್ನು ಪೊಲೀಸರು ಬಂಧಿಸಿದ್ದಾರೆ.
ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕು ಕೆಆರ್ಎಸ್ ನಿವಾಸಿ ಭಾರತಿ, ನಂಜನಗೂಡು ಹೌಸಿಂಗ್ ಬೋರ್ಡ್ ನಿವಾಸಿ ಲೀಲಾ ಮತ್ತು ಜೆ.ಪಿ. ನಗರ ಮಹದೇವಪುರ ರೇಲ್ವೆ ಗೇಟ್ ಹತ್ತಿರ ನಿವಾಸಿ ರೂಪ ಬಂಧಿತ ಆರೋಪಿಗಳು. 80 ಸಾವಿರ ಮೌಲ್ಯದ ಚಿನ್ನಾಭರಣವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಕುವೆಂಪುನಗರ ಠಾಣೆ ಇನ್ಸ್ಪೆಕ್ಟರ್ ಕೆ.ಎನ್. ಯಶವಂತ್ಕುಮಾರ್, ಎಸ್ಐ ಜಿ. ಪುರುಷೋತ್ತಮ್ ಮತ್ತು ಸಿಬ್ಬಂದಿ ಈ ಎರಡು ಪ್ರಕರಣಗಳ ಪತ್ತೆ ಮಾಡಿದ್ದಾರೆ.
ಮೂವರು ಬೈಕ್ ಕಳ್ಳರು: ವಿಜಯನಗರ ಠಾಣೆ ಪೊಲೀಸರು ಮೂವರು ಬೈಕ್ ಕಳ್ಳರನ್ನು ಬಂಧಿಸಿ 2 ಲಕ್ಷ ಮೌಲ್ಯದ 5 ಬೈಕ್ಗಳನ್ನು ವಶಪಡಿಸಿಕೊಂಡಿದ್ದಾರೆ.
ಶಿವಕುಮಾರ್, ಮಣಿಕಂಠ ಮತ್ತು ಪಾಲ್ ವಿಕ್ಟರ್ ಬಂಧಿತ ಆರೋಪಿಗಳು. ಭಾರತ್ ಕ್ಯಾನ್ಸರ್ ಆಸ್ಪತ್ರೆ ಬಳಿ ಅನುಮಾನಸ್ಪದವಾಗಿ ಹೋಗುತ್ತಿದ್ದ ಇವರನ್ನು ಪೊಲೀಸರು ಹಿಡಿದು ವಿಚಾರಣೆ ನಡೆಸಿದಾಗ ಬೈಕ್ ಕಳವು ಪತ್ತೆಯಾಗಿದೆ. ಬಂಧಿತರಿಂದ ವಿಜಯನಗರ ಠಾಣೆಯ 4 ಹಾಗೂ ದೇವರಾಜ ಠಾಣೆ 1 ಸೇರಿದಂತೆ ಒಟ್ಟು 5 ಪ್ರಕರಣಗಳು ಪತ್ತೆಯಾಗಿದೆ.
ವಿಜಯನಗರ ಠಾಣೆ ಇನ್ಸ್ಪೆಕ್ಟರ್ ಸಿ.ವಿ. ರವಿ, ಎಸ್ಐ ರಘುಪ್ರಸಾದ್ ಮತ್ತು ಸಿಬ್ಬಂದಿ ಈ ಪತ್ತೆ ಮಾಡಿದ್ದಾರೆ.
ಸರ ಅಪಹರಣ- ಬಾಲಕ ಸೇರಿ ಇಬ್ಬರು: ಸರಸ್ವತಿಪುರಂ ಠಾಣೆ ಪೊಲೀಸರು ಬಾಲಕ ಸೇರಿದಂತೆ ಇಬ್ಬರು ಸರ ಅಪಹರಣಕಾರರನ್ನು ಬಂಧಿಸಿದ್ದಾರೆ.
ಜನತಾ ನಗರ ನಿವಾಸಿ ದರ್ಶನ್(17) ಮತ್ತು ನಂಜುಂಡ ಅ. ಪಿಳ್ಳೆ(18) ಬಂಧಿತರು. ಕಾನೂನು ಸಂಘರ್ಷಕ್ಕೊಳಗಾದ ಬಾಲಕ ದರ್ಶನ್ನನ್ನು ಮಕ್ಕಳ ವಿಶೇಷ ಪೊಲೀಸ್ ಘಟಕದ ವಶಕ್ಕೆ ಬಿಡಲಾಗಿದೆ.
ಮತ್ತೊಬ್ಬ ಆರೋಪಿ ನಂಜುಂಡನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಬಂಧಿತರಿಂದ 15,000 ಮೌಲ್ಯದ 20 ಗ್ರಾಂ. ಚಿನ್ನದ ಸರವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಸರಸ್ವತಿಪುರಂ ಠಾಣೆ ಇನ್ಸ್ಪೆಕ್ಟರ್ ಪಿ.ವಿ. ವೆಂಕಟೇಶ ಮತ್ತು ಸಿಬ್ಬಂದಿ ಮಹದೇವಯ್ಯ, ಯೋಗನರಸಿಂಹ, ಕಾಂತರಾಜು ಈ ಪತ್ತೆ ಮಾಡಿದ್ದಾರೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.