ಮೈಸೂರು

'ಕಸ'ವಿಸಿ ಅಲ್ಲ, ತ್ಯಾಜ್ಯದಿಂದ ಕಾಂಚಾಣ!

Published On :

ಕ.ಪ್ರ.ವಾರ್ತೆ   ಮೈಸೂರು   ಸೆ. 2
ತ್ಯಾಜ್ಯ ನಿರ್ವಹಣೆ ಆದಾಯ ತರುವ ಉದ್ಯಮವಾಗಿರುವುದು ಸಂತಸದ ಸಂಗತಿ ಎಂದು ಸಾಹಿತಿ ಪ್ರೊ. ದೇಜಗೌ ಮೆಚ್ಚುಗೆ ವ್ಯಕ್ತಪಡಿಸಿದರು.
ಫೆಡರೇಷನ್ ಆಫ್ ಮೈಸೂರು ಸಿಟಿ ಕಾರ್ಪೋರೇಷನ್ ವಾರ್ಡ್ ಪಾರ್ಲಿಮೆಂಟ್ ಕುಂಬಾರುಕೊಪ್ಪಲು ಸಶ್ಮಾನದಲ್ಲಿನ ಘನತ್ಯಾಜ್ಯ ನಿರ್ವಹಣಾ ಘಟಕದಲ್ಲಿ ಸೋಮವಾರ ಏರ್ಪಡಿಸಿದ್ದ ಸ್ವಚ್ಛ ಮೈಸೂರು ಆಂದೋಲನಕ್ಕೆ ಚಾಲನೆಗೊಳಿಸಿ ಮಾತನಾಡಿದರು.
ನಿರ್ಮಲನಗರ ಯೋಜನೆ ಅಂಗವಾಗಿ ಮನೆ- ಮನೆಗೆ ಹೋಗಿ ಕಸ ಸಂಗ್ರಹಿಸಿ ತಂದು, ಅದನ್ನು ವಿಂಗಡಿಸಿ ಸಾವಯವ ಗೊಬ್ಬರ ಮಾಡುವುದರ ಜತೆಗೆ, ಪ್ರಯೋಜನಕಾರಿಯಲ್ಲವೆಂದು ಬೀಸಾಡುವ ವಸ್ತುಗಳನ್ನು ಬೇರ್ಪಡಿಸಿ ಅದರಿಂದ ಆದಾಯ ಗಳಿಸುತ್ತಿರುವುದನ್ನು ನೋಡಿದರೆ, ಇದು ಕಸವನ್ನು ರಸ ಮಾಡುವ ಹಾಗೂ ಆದಾಯ ತರುವ ಉದ್ಯಮ ಎನಿಸಲಿದೆ ಎಂದರು.
ಸಾನ್ನಿಧ್ಯ ವಹಿಸಿ ಮಾತನಾಡಿದ ರಾಮಕೃಷ್ಣ ಆಶ್ರಮದ ಅಧ್ಯಕ್ಷ ಸ್ವಾಮಿ ಮುಕ್ತಿದಾನಂದಜಿ, ಕಸದಿಂದ ಸಾವಯವ ಗೊಬ್ಬರ ತಯಾರಿಸುತ್ತಿರುವುದು ಹಾಗೂ ಹಳೆಯ ಪದಾರ್ಥ ಸಂಗ್ರಹಿಸಿ ಮಾರಾಟ ಮಾಡುತ್ತಿರುವುದು ಅನುಕರಣೀಯ. ನಿರ್ಮಲ ನಗರ ಯೋಜನೆಯ ಬಗ್ಗೆ ಪ್ರತಿ ಬಡಾವಣೆ ಹಾಗೂ ಶಾಲಾ ಕಾಲೇಜುಗಳಿಗೆ ಮಾಹಿತಿ ನೀಡುವುದು ಅವಶ್ಯಕ ಎಂದರು.
ಒಕ್ಕೂಟದ ಅಧ್ಯಕ್ಷ ಹಾಗೂ ವಿಧಾನಪರಿಷತ್ ಮಾಜಿ ಸದಸ್ಯ ಡಿ. ಮಾದೇಗೌಡ ಮಾತನಾಡಿ, ಕಳೆದ 4 ವರ್ಷಗಳಿಂದ ಸ್ತ್ರೀಶಕ್ತಿ ಸಂಘಗಳ ನೆರವಿನಿಂದ ಘನತಾಜ್ಯ ನಿರ್ವಹಣೆ ಘಟಕ ನಡೆಸಿಕೊಂಡು ಬರಲಾಗುತ್ತಿದ್ದು, ದೇಶ ಹಾಗೂ ವಿದೇಶದ ಪರಿಣಿತರು ಇಲ್ಲಿಗೆ ಭೇಟಿ ನೀಡಿದ್ದಾರೆ. ಇದೇ ಮಾದರಿಯಲ್ಲಿ ತ್ಯಾಜ್ಯ ನಿರ್ವಹಣೆ ಮಾಡಿದರೆ ಮುಂದೆ ಒದಗಬಹುದಾದ ಕಸದ ಸಮಸ್ಯೆ ತಪ್ಪಿಸಬಹುದು. ಅಲ್ಲದೆ, ಸರ್ಕಾರಕ್ಕೂ ಆದಾಯ ತರಲಿದೆ ಎಂದು ತಿಳಿಸಿದರು.
ಶಾಸಕ ವಾಸು ಅಧ್ಯಕ್ಷತೆ ವಹಿಸಿದ್ದರು. ರಾಮಕೃಷ್ಣ ಶಾಲೆಯ ಸ್ವಾಮಿ ವಿಶ್ವವಿದ್ಯಾನಂದ, ಸಾಹಿತಿಗಳಾದ ಡಾ. ಸಿಪಿಕೆ, ಡಾ. ಪ್ರಭುಶಂಕರ್, ಡಾ. ಮಳಲಿ ವಸಂತಕುಮಾರ್, ನಗರಪಾಲಿಕೆ ಸದಸ್ಯರಾದ ಶಿವಮಾದು, ಎಂ. ರಮೇಶ್, ಉದ್ಯಮಿ ಕೆ.ಬಿ. ಲಿಂಗಣ್ಣ, ಒಕ್ಕೂಟದ ಉಪಾಧ್ಯಕ್ಷ ಪ್ರೊ. ಕೆ. ಎನ್. ನಾಗಪತಿ, ಸದಸ್ಯರಾದ ರುಕ್ಮಾಂಗದ, ಅರುಣ್ಕುಮಾರ್, ಸಿದ್ದೇಗೌಡ, ಕೆ.ಎನ್. ಮಹೇಶ್ ಇತರರು ಇದ್ದರು.


ಮೈಸೂರು ನಗರಕ್ಕೆ ಮಾದರಿಯಾದ ಕೆಲಸ ಮಾಡುತ್ತಿರುವ ಈ ಒಕ್ಕೂಟದ ಕಾರ್ಯವನ್ನು ರೂಪಿಸುವಲ್ಲಿ ಇಚ್ಛಾಶಕ್ತಿ ಅವಶ್ಯಕ. ಸಾರ್ವಜನಿಕರು ಹಾಗೂ ನಗರಪಾಲಿಕೆಯ ಸಹಕಾರ ಬಹುಮುಖ್ಯ. ಸ್ವಚ್ಛತೆ ಮೊದಲು ಮನೆಯಿಂದ ಆರಂಭವಾಗಬೇಕು. ಯಾರದೋ ಮನೆಯ ಮುಂದೆ ಅಥವಾ ರಸ್ತೆಯಲ್ಲಿ ಬಿಸಾಡಬಾರದು. ಮೂಲದಲ್ಲಿಯೇ ತ್ಯಾಜ್ಯ ವಿಂಗಡಿಸುವ ಕೆಲಸವಾಗಬೇಕು. ಈ ಬಗ್ಗೆ ಹೆಚ್ಚಿನ ಅರಿವು ಮೂಡಿಸುವ ಕೆಲಸವಾಗಬೇಕು.
 ಪ್ರೊ. ದೇಜಗೌ, ಸಾಹಿತಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.