ದಸರಾ ಆನೆಗಳ ತಾಲೀಮು
ಮೈಸೂರು: ಮೊದಲ ತಂಡದಲ್ಲಿ ಆಗಮಿಸಿರುವ ದಸರಾ ಆನೆಗಳು ಮಂಗಳವಾರ ಬೆಳಗ್ಗೆ ವಾಕಿಂಗ್ ಹೋಗಿದ್ದವು. ಕಾಡಿನಿಂದ ನಾಡಿಗೆ ಮೊದಲ ತಂಡದಲ್ಲಿ ಆಗಮಿಸಿರುವ ಅಂಬಾರಿ ಆನೆ ಅರ್ಜುನ, ಬಲರಾಮ, ಗಜೇಂದ್ರ, ಅಭಿಮನ್ಯು, ವರಲಕ್ಷ್ಮಿ ಮತ್ತು ಸರಳ ಆನೆಗಳು ತಾಲೀಮಿನಲ್ಲಿ ಪಾಲ್ಗೊಂಡಿದ್ದವು. ಅರಮನೆಯಿಂದ ಹೊರಟು ಚಾಮರಾಜ ವೃತ್ತ, ಕೆ.ಆರ್. ವೃತ್ತ, ಸಯ್ಯಾಜಿರಾವ್ ರಸ್ತೆ ಮೂಲಕ ಹೈವೆ ವೃತ್ತದವರೆಗೆ ತಲುಪಿ ಅದೇ ಮಾರ್ಗವಾಗಿ ವಾಪಸ್ ಅರಮನೆ ತಲುಪಿದವು. ಸಂಜೆ ಮಳೆಯಾಗಿದ್ದರಿಂದ ತಾಲೀಮು ನಡೆಸಿಲ್ಲ ಎಂದು ಆನೆ ವೈದ್ಯ ಡಾ. ನಾಗರಾಜು ತಿಳಿಸಿದ್ದಾರೆ.
ರೈಲಿಗೆ ಸಿಲುಕಿ
ವ್ಯಕ್ತಿ ಸಾವು
ಮೈಸೂರು: ಮಂಡ್ಯ- ಹನಕೆರೆ ರೈಲು ನಿಲ್ದಾಣಗಳ ಮಧ್ಯೆ ಉಮ್ಮಡಹಳ್ಳಿ ಓವರ್ ಬ್ರಿಡ್ಜ್ ಬಳಿಯ ಅಸಿಟೆಂಟ್ ಫ್ಯಾಕ್ಟರಿಯ ಕ್ವಾಟ್ರಸ್ ಎದುರು ಅಪರಿಚಿತ ವ್ಯಕ್ತಿಯೊಬ್ಬರು ರೈಲಿಗೆ ಸಿಕ್ಕಿ ಮೃತಪಟ್ಟಿರುವ ಘಟನೆ ಸೋಮವಾರ ನಡೆದಿದೆ. ಚಹರೆ- 35 ವರ್ಷ, 5.6 ಅಡಿ ಎತ್ತರ, ಎಣ್ಣೆಗೆಂಪು ಮೈಬಣ್ಣ, ಸಾಧಾರಣ ಶರೀರ, ದುಂಡು ಮುಖ, ದುಂಡು ಮೂಗು, ತಲೆಯಲ್ಲಿ 2 ಇಂಚು ಉದ್ದದ ಕಪ್ಪು ಕೂದಲು, ಅರ್ಧ ಇಂಚು ಗಡ್ಡ ಬಿಟ್ಟಿದ್ದಾರೆ. ಹಸಿರು ಬಿಳಿ ಗೆರೆಯುಳ್ಳ ಟೀ- ಶರ್ಟ್, ನೀಲಿ ಜೀನ್ಸ್ ಪ್ಯಾಂಟ್ ಧರಿಸಿದ್ದಾರೆ. ಮೃತ ವ್ಯಕ್ತಿಯ ದೇಹವನ್ನು ಮಂಡ್ಯ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಮೃತರ ವಾರಸುದಾರರು ಇದ್ದಲ್ಲಿ ದೂ. 08232- 222340, 0821- 2516579 ಸಂಪರ್ಕಿಸಲು ಮೈಸೂರು ರೇಲ್ವೆ ಠಾಣೆ ಪೊಲೀಸರು ಕೋರಿದ್ದಾರೆ.
ಅಪರಿಚಿತ
ಯುವಕ ಸಾವು
ಮೈಸೂರು: ನಗರದ ರೈಲು ನಿಲ್ದಾಣ ವೃತ್ತದ ಬಳಿಯ ಹೊಸ ಕಟ್ಟಡದ ಪಕ್ಕದಲ್ಲಿ ಅಪರಿಚಿತ ಯುವಕನೊಬ್ಬ ಇತ್ತೀಚೆಗೆ ಮೃತಪಟ್ಟಿದ್ದಾನೆ.
20 ವರ್ಷದ ಯುವಕನು ಯಾವುದೋ ಕಾಯಿಲೆಯಿಂದ ಸರಿಯಾದ ಔಷಧೋಪಚಾರ ಇಲ್ಲದೆ ಮೃತಪಟ್ಟಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಚಹರೆ- 5.4 ಅಡಿ ಎತ್ತರ, ಗೋದಿ ಮೈಬಣ್ಣ, ತೆಳ್ಳನೆ ಶರೀರ, ಗುಂಡು ಮುಖ, ಕಪ್ಪು ಕೂದಲು, ನೀಲಿ ಜೀನ್ಸ್ ಪ್ಯಾಂಟ್, ಹಸಿರು ಟೀ- ಶರ್ಟ್ ಧರಿಸಿದದಾರೆ. ಮೃತರ ವಾರಸುದಾರರು ಇದ್ದಲ್ಲಿ ದೂ. 0821- 2418313, 513 ಸಂಪರ್ಕಿಸಲು ಮಂಡಿ ಠಾಣೆ ಎಎಸ್ಐ ಎಸ್.ಎ. ಕೆಂಪೇಗೌಡ ಕೋರಿದ್ದಾರೆ.
ಹುಣಸೂರು ಎಸೈ ಅಮಾನತಿಗೆ ಮುದ್ದಯ್ಯ ಆಗ್ರಹ
ಚಾಮರಾಜನಗರ: ಆದಿವಾಸಿ ಮುಖಂಡ ಹಾಗೂ ಕರ್ನಾಟಕ ಲ್ಯಾಂಪ್ ಸಹಕಾರ ಮಹಾಮಂಡಳದ ಅಧ್ಯಕ್ಷ ಎಂ.ಕೃಷ್ಣಯ್ಯ ಅವರ ಮೇಲೆ ಸುಳ್ಳು ಆರೋಪ ಹೊರಿಸಿ ನ್ಯಾಯಾಂಗ ಬಂಧನಕ್ಕೆ ಕಾರಣರಾಗಿರುವ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಎಲ್.ಅರುಣ್ ಅವರ ಮೇಲೆ ಕ್ರಮ ಕೈಗೊಳ್ಳುವಂತೆ ಕರ್ನಾಟಕ ಆದಿವಾಸಿ ರಕ್ಷಣಾ ಪರಿಷತ್ ಜಿಲ್ಲಾಧ್ಯಕ್ಷ ಮುದ್ದಯ್ಯ ಆಗ್ರಹಿಸಿದ್ದಾರೆ.
ಹುಣಸೂರು ತಾಲೂಕಿನ ಯಶೋಧರಪುರ ಗ್ರಾಮದ ಆದಿವಾಸಿ ಮುಖಂಡ ಎಂ.ಕೃಷ್ಣಯ್ಯ ಹಲವಾರು ದಶಕಗಳಿಂದ ಗಿರಿಜನರ ಪರ ಹೋರಾಟ ಮಾಡಿಕೊಂಡು ಬಂದಿದ್ದಾರೆ. ಹರಳಹಳ್ಳಿ ಹಾಡಿಯಲ್ಲಿ ನಿವೇಶನ ವಿಚಾರವಾಗಿ ಪ್ರತಿಭಟನೆ ನಡೆಸುತ್ತಿದ್ದ ಗಿರಿಜನ ಮಹಿಳೆಯರ ಮೇಲೆ ಸಬ್ ಇನ್ಸ್ಪೆಕ್ಟರ್ ಎಲ್.ಅರುಣ್ ಲಾಠಿ ಚಾರ್ಚ್ ಮಾಡಿಸಿದ್ದರು. ಇದನ್ನು ವಿರೋಧಿಸಿ ಕೃಷ್ಣಯ್ಯ ಧರಣಿ ಸತ್ಯಾಗ್ರಹ ನಡೆಸಿದ್ದರಿಂದ, ಇದೀಗ ಸುಳ್ಳು ಆರೋಪದಡಿ ಕೃಷ್ಣಯ್ಯ ಅವರನ್ನು ಬಂಧಿಸಿ ಕಿರುಕುಳ ನೀಡಿದ್ದಾರೆ ಎಂದು ಮಂಗಳವಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಆರೋಪಿಸಿದರು.
ಮಾನಸಿಕ ಅಸ್ವಸ್ಥ ಯುವತಿ ಆತ್ಮಹತ್ಯೆ
ಮೈಸೂರು: ಮಾನಸಿಕ ಅಸ್ವಸ್ಥೆಯಾಗಿದ್ದ ಯುವತಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳವಾರ ಮಧ್ಯಾಹ್ನ ನಡೆದಿದೆ. ಜಯನಗರ ಬಳಿಯ ಚಿಕ್ಕಹರದನಹಳ್ಳಿ ನಿವಾಸಿ ಜವರಯ್ಯ ಎಂಬವರ ಪುತ್ರಿ ಪುಷ್ಪಲತಾ (24) ಆತ್ಮಹತ್ಯೆ ಮಾಡಿಕೊಂಡವರು. ಇವರಿಗೆ ವಿವಾಹವಾಗಿರಲಿಲ್ಲ. ಮಾನಸಿಕ ಅಸ್ವಸ್ಥೆಯಾಗಿದ್ದ ಪುಷ್ಪಲತಾ ಮನೆಯೊಳಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಅಶೋಕಪುರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

