ಮಳೆಯಾದರೆ ಕೆರೆಯಾಗುವ ಕ್ರೀಡಾಂಗಣ!
ಕ.ಪ್ರ.ವಾರ್ತೆ ಕೆ.ಆರ್.ನಗರ ಸೆ. 3
ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ಬೇಜವಾಬ್ದಾರಿಯಿಂದ ಕ್ರೀಡಾಪಟುಗಳ ಮತ್ತು ಸಾರ್ವಜನಿಕರ ಅನುಕೂಲಕ್ಕಾಗಿ ಬೇಕಾದ ಕ್ರೀಡಾಂಗಣ ಯಾವುದೆ ಮೂಲ ಸವಲತ್ತು ಇಲ್ಲದೆ ಸೊರಗುತ್ತಿದ್ದು, ಜೋರು ಮಳೆ ಬಂತೆಂದರೆ ಕೆರೆಯಾಗಿ ಪರಿವರ್ತನೆಯಾಗುತ್ತಿದ್ದು, ಸಮಸ್ಯೆ ಪರಿಹರಿಸಿ ಸವಲತ್ತು ಕಲ್ಪಿಸಲು ಯಾರು ಮುಂದಾಗುತ್ತಿಲ್ಲ.
ಇಲ್ಲಿನ ಕೃಷ್ಣರಾಜೇಂದ್ರ ಕ್ರೀಡಾಂಗಣ ನಿರ್ಮಾಣವಾಗಿ 20 ವರ್ಷಗಳಾಗಿದ್ದು, ಅಂದು ಕೈಗೊಂಡಿದ್ದ ಕಾಮಗಾರಿ ಹೊರತುಪಡಿಸಿ ಈವರೆಗೆ ಯಾವುದೆ ಹೊಸ ಕಾಮಗಾರಿ ಮಾಡದೆ ಇರುವುದರಿಂದ ಹೆಸರಿಗಷ್ಟೆ ಕ್ರೀಡಾಂಗಣವಿದ್ದು, ಸವಲತ್ತುಗಳು ಇಲ್ಲದೆ ಸೊರಗುತ್ತಿದೆ.
ನಿರ್ಲಕ್ಷ್ಯ: ಹತ್ತಾರು ಎಕರೆ ಪ್ರದೇಶದಲ್ಲಿ ನಗರಕ್ಕೆ ಹೊಂದಿಕೊಂಡಂತೆ ಇರುವ ಕೃಷ್ಣರಾಜೇಂದ್ರ ಕ್ರೀಡಾಂಗಣ ಎಲ್ಲ ದೃಷ್ಟಿಯಿಂದಲೂ ಕ್ರೀಡಾಪಟುಗಳಿಗೆ ಮತ್ತು ನಾಗರಿಕರಿಗೆ ಅನುಕೂಲಕರವಾಗಿದೆ. ಆದರೆ, ನಿರ್ವಹಣೆ ಮಾಡುತ್ತಿರುವ ಇಲಾಖೆಯವರು ಅಭಿವೃದ್ಧಿಯತ್ತ ಗಮನಹರಿಸದೆ ನಿರ್ಲಕ್ಷ್ಯ ತೋರುತ್ತಿದ್ದಾರೆ.
ಕ್ರೀಡಾಂಗಣಕ್ಕೆ ರಾತ್ರಿ ವೇಳೆ ಕಾವಲುಗಾರರು ಇಲ್ಲದಿರುವುದರಿಂದ ಸ್ವಚ್ಛತೆ ಇಲ್ಲ, ಇದರ ಜೊತೆಗೆ ಕೆಲವು ಸಮಯ ಕುಡುಕರ ತಾಣವಾಗಿಯೂ ಮಾರ್ಪಡಾಗುತ್ತದೆ. ಮಳೆ ಬಂತೆಂದರೆ ಇಡೀ ಕ್ರೀಡಾಂಗಣವೆ ನೀರಿನಿಂದ ಆವೃತ್ತವಾಗಿ ಕೆರೆಯಾಗಿ ಮಾರ್ಪಡುತ್ತದೆ. ನಂತರ ಎರಡು ದಿನಗಳು ಕೆಸರು ತುಂಬಿಕೊಂಡು ನಡೆದಾಡಲು ಸಾಧ್ಯವಾಗುವುದಿಲ್ಲ.
ಸೋಮವಾರ ವಾಸವಿ ಶಿಕ್ಷಣ ಸಂಸ್ಥೆಯ ವತಿಯಿಂದ ನಡೆದ ರಾಜ್ಯಮಟ್ಟದ ಪ್ರಾಂತೀಯ ಕ್ರೀಡಾಕೂಟದ ವೇಳೆ ಭಾರಿ ಮಳೆ ಬಂದಿದ್ದರಿಂದ ಮಧ್ಯಾಹ್ನ ನಂತರ ಕೂಟವನ್ನೆ ರದ್ದುಪಡಿಸಲಾಯಿತು. ಆದರೆ, ಈ ಅವ್ಯವಸ್ಥೆ ಗಮನಿಸುವವರೆ ಇರಲಿಲ್ಲ.
ಇಲ್ಲಿ ನೂರಾರು ಮಂದಿ ಕ್ರೀಡಾ ಪ್ರತಿಭೆಗಳಿದ್ದು, ಅವರಿಗೆ ಅನುಕೂಲವಾಗಲಿ ಎಂಬ ಸದುದ್ದೇಶದಿಂದ ಹಿಂದೆ ಕನ್ನಡ ಮತ್ತು ಸಂಸ್ಕೃತಿ ಸಚಿವರಾಗಿದ್ದ ಎಚ್. ವಿಶ್ವನಾಥ್ ಅವಧಿಯಲ್ಲಿ ನಿರ್ಮಾಣವಾದ ಕ್ರೀಡಾಂಗಣ ಇಂದಿಗೂ ಅಭಿವೃದ್ಧಿ ಕಾಣದೆ ಅನಾಥವಾಗಿದ್ದು, ಇದರ ನಿರ್ವಹಣೆ ಹೊಣೆ ಹೊತ್ತಿರುವವರು ಯಾರು ಎಂಬುವುದೆ ತಿಳಿಯುತ್ತಿಲ್ಲ.
ಸಂಬಂಧಿತ ಇಲಾಖೆಯವರು ಮತ್ತು ಚುನಾಯಿತ ಜನಪ್ರತಿನಿಧಿಗಳು ಈಗಲಾದರೂ ಕೆ.ಆರ್. ನಗರದ ಕೃಷ್ಣರಾಜೇಂದ್ರ ಕ್ರೀಡಾಂಗಣಕ್ಕೆ ಕಾಯಕಲ್ಪ ನೀಡಿ, ಅಗತ್ಯ ಮೂಲ ಸವಲತ್ತು ಕಲ್ಪಿಸಿ ಕ್ರೀಡಾಳುಗಳಿಗೆ ಮತ್ತು ನಾಗರಿಕರಿಗೆ ಅನುಕೂಲ ಕಲ್ಪಿಸಲು ಮುಂದಾಗಬೇಕಿದೆ.
ಕುಪ್ಪೆ ಮಹದೇವಸ್ವಾಮಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

