ಮೈಸೂರು

ರೇಷ್ಮೆ ಗೂಡು; ಕೈತುಂಬಾ ದುಡ್ಡು

Published On :

ಕ.ಪ್ರ.ವಾರ್ತೆ  ಮೈಸೂರು  ಸೆ. 5
ಕೆ.ಆರ್. ನಗರ ತಾಲೂಕು ಹೊಸಅಗ್ರಹಾರ ಹೋಬಳಿ ಮಂಡಿಗನಹಳ್ಳಿ ಗ್ರಾಮದ ರೈತರೊಬ್ಬರು ಕಳೆದ 10 ವರ್ಷಗಳಿಂದಲೂ ಹಿಪ್ಪುನೇರಳೆ ಬೆಳೆ ಬೆಳೆದು, ರೇಷ್ಮೆ ಹುಳು ಸಾಕಾಣಿಕೆ ಮಾಡಿ, ವರ್ಷಕ್ಕೆ 10 ಬಾರಿ ರೇಷ್ಮೆಗೂಡು ಮಾರಾಟ ಮಾಡಿ ಕೈತುಂಬಾ ಕಾಸು ಸಂಪಾದಿಸುತ್ತಿದ್ದಾರೆ.
ಜವರೇಗೌಡ ಎಂಬವರ ಪುತ್ರ ಲಕ್ಷ್ಮಣೇಗೌಡ ಈ ರೈತ. ಅವರಿಗೆ ಗ್ರಾಮದಲ್ಲಿ 6 ಎಕರೆ ಜಮೀನಿದೆ. 1 ಎಕರೆ ಹೇಮಾವತಿ ನಾಲೆಯಿಂದ ನೀರಾವರಿಯಾಗಿದೆ. ಉಳಿದಿದ್ದು ಮಳೆಯಾಶ್ರಿತ ಪ್ರದೇಶ. ಆದರೆ ನೀರಾವರಿ ಸೌಲಭ್ಯಕ್ಕೆ 2 ಕೊಳವೆ ಬಾವಿ ಕೊರೆಸಿದ್ದಾರೆ. ನಾಲ್ಕು ಜಾನುವಾರುಗಳಿವೆ. ಅವರು ಹಾಗೂ ಸಹೋದರ ಸತೀಶ್ ಸೇರಿ ವ್ಯವಸಾಯ ಮಾಡುತ್ತಾರೆ.
ನೀರಾವರಿ ಪ್ರದೇಶದ 1 ಎಕರೆ ಜಮೀನಿನಲ್ಲಿ 15 ರಿಂದ 20 ಕ್ವಿಂಟಲ್ ಬತ್ತ ಬೆಳೆಯುತ್ತಾರೆ. ಅದು ಮನೆ ಬಳಕೆಗೆ ಸಾಕಾಗುತ್ತದೆ. ಮಳೆಯಾಶ್ರಿತ ಪ್ರದೇಶದ 1 ಎಕರೆಯಲ್ಲಿ 300 ಅಡಕೆ, 50 ತೆಂಗಿನ ಮರಗಳಿವೆ. ವಾರ್ಷಿಕ 25 ರಿಂದ 30 ಕ್ವಿಂಟಲ್ ಅಡಕೆ ಇಳುವರಿ ಬರುತ್ತಿದ್ದು, ಹಳ್ಳಿ ಮೈಸೂರಿನ ಗುತ್ತಿಗೆದಾರರಿಗೆ ಕ್ವಿಂಟಲ್‌ಗೆ 1600- 1700ಗೆ ಜಮೀನಿನ ಬಳಿಯೇ ಮಾರಾಟ ಮಾಡುತ್ತಾರೆ. ಪ್ರತಿ ತೆಂಗಿನ ಮರ ವಾರ್ಷಿಕ 100- 120 ತೆಂಗಿನಕಾಯಿ ಇಳುವರಿ ನೀಡುತ್ತಿದ್ದು, ಪ್ರತಿ ಬಾರಿ 1500 ರಿಂದ 2000 ಕಾಯಿಗಳನ್ನು ಒಂದಕ್ಕೆ 6 ರಿಂದ 8 ದರದಲ್ಲಿ ಮಾರಾಟ ಮಾಡಲಾಗುತ್ತದೆ. ಅಡಕೆ ಹಾಗೂ ತೆಂಗು ಬೆಳೆಗೆ ವಾರ್ಷಿಕ 50 ರಿಂದ 60,000 ಖರ್ಚು ಬರುತ್ತದೆ.
ಉತ್ತಮ ಆದಾಯ: ಲಕ್ಷ್ಮಣೇಗೌಡರ ಆದಾಯ ತರುವ ಬೆಳೆ ಎಂದರೆ ಹಿಪ್ಪುನೇರಳೆ. ವಾರ್ಷಿಕ 10 ಬೆಳೆ. ಪ್ರತಿ ಬಾರಿ 150 ರಿಂದ 170 ಕ್ರಾಸ್ ಮೊಟ್ಟೆಗಳನ್ನು ತರುತ್ತಾರೆ. ಕಡಿಮೆ ಎಂದರೂ 1.50 ರಿಂದ 2 ಕ್ವಿಂಟಲ್ ರೇಷ್ಮೆಗೂಡು ಬರುತ್ತದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಪ್ರತಿ ಕೆಜಿಗೆ 350 ಇದೆ. ಅದರಂತೆ ಪ್ರತಿ ಬಾರಿ 70,000 ಆದಾಯ. ಪ್ರತಿ ಬೆಳೆಯ ಖರ್ಚು 10 ರಿಂದ 12,000 ರೇಷ್ಮೆಗೂಡನ್ನು ರಾಮನಗರ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಾರೆ. ರೇಷ್ಮೆ ಇಲಾಖೆಯಿಂದ ಸಹಾಯಧನ, ಔಷಧ ಸಿಗುತ್ತಿದೆ. ಕಲವೊಮ್ಮೆ ಮಾರುಕಟ್ಟೆ ದರ 160- 170 ಗೆ ಕುಸಿಯುತ್ತದೆ. ಆಗ ಆದಾಯ ಅರ್ಧದಷ್ಟು ಕಡಿಮೆಯಾಗುತ್ತದೆ. ಕೆಲವೊಮ್ಮೆ ಗೂಡು ಕೈಗೆ ಬರುವುದಿಲ್ಲ. ಒಟ್ಟಾರೆ ರೇಷ್ಮೆಯಿಂದ ವಾರ್ಷಿಕ 5 ರಿಂದ 7 ಲಕ್ಷದವರೆಗೂ ಆದಾಯ ಗಳಿಸಬಹುದು. ಖರ್ಚು 1.20 ಲಕ್ಷ ಆಗುತ್ತದೆ. ಮಾರುಕಟ್ಟೆಯಲ್ಲಿ ಎಷ್ಟೇ ದರ ಕಡಿಮೆಯಾದರೂ ಯಾವತ್ತೂ ನಮಗೆ ವಾರ್ಷಿಕ 2 ಲಕ್ಷ ಲಾಭಕ್ಕೆ ಮೋಸವಾಗಿಲ್ಲ ಎನ್ನುತ್ತಾರೆ ಲಕ್ಷ್ಮಣೇಗೌಡ.
ರೇಷ್ಮೆ ಬೆಳೆಯಿಂದಲೇ ಆರು ಮಂದಿಯ ಬದುಕು ಸಾಗುತ್ತಿದೆ. ಇಬ್ಬರು ಮಕ್ಕಳನ್ನು ಓದಿಸುತ್ತಿದ್ದೇನೆ ಎಂದರು.
ವ್ಯವಸಾಯ ಅಂದ್ರೆ ನಷ್ಟ ಇದ್ದಿದ್ದೆ. ಆದ್ರೆ ವೈಜ್ಞಾನಿಕ ಪದ್ಧತಿ ಅನುಸರಿಸಿ ವ್ಯವಸಾಯ ಮಾಡಿದರೆ, ಕಾಲಕಾಲಕ್ಕೆ ಗೊಬ್ಬರ, ಔಷಧ ಕೊಟ್ಟು, ಶ್ರಮಪಟ್ಟು ವ್ಯವಸಾಯ ಮಾಡಿದ್ರೆ ಖಂಡಿತ ಲಾಭ ಮಾಡಬಹುದು. ರೈತರು ಬೆಳೆಗೆ ರೋಗ ಬಾರದಂತೆ ನಿರ್ವಹಣೆ ಮಾಡಬೇಕು. ಜಮೀನಿಗೆ ಅತಿಯಾದ ರಾಸಾಯನಿಕ ಗೊಬ್ಬರ ಹಾಕಬಾರದು. ಅತಿಯಾದ್ರೆ ಅಮೃತವೂ ವಿಷವಿದ್ದಂತೆ. ಹೆಚ್ಚು ಗೊಬ್ಬರ ಹಾಕುವುದರಿಂದಲೇ ಬೆಳೆ ಹಾಳಾಗಿದ್ದು ನಮ್ಮ ಕಣ್ಮುಂದೆ ಇದೆ.
   ಲಕ್ಷ್ಮಣೇಗೌಡ, ಮಂಡಿಗನಹಳ್ಳಿ

  ಅಂಶಿ ಪ್ರಸನ್ನಕುಮಾರ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.