ಆಧುನಿಕ ಮಾಧ್ಯಮಗಳ ಹೊಡೆತಕ್ಕೆ ಜಾನಪದ ತತ್ತರ: ಡಾ.ರಾಜಶೇಖರ್
ಕ.ಪ್ರ.ವಾರ್ತೆ ಮೈಸೂರು ಸೆ. 13
ಜಾನಪದ ಅವಿನಾಶಿ ಎಂಬ ನಂಬಿಕೆ ಹಿಂದೆ ಇತ್ತು. ಈಗ ಆಧುನಿಕ ಮಾಧ್ಯಮಗಳ ಹೊಡೆತಕ್ಕೆ ಸಿಲುಕಿ ಜಾನಪದ ನಶಿಸುತ್ತಿದೆ. ಅವಿನಾಶಿ ಎಂಬ ಪದದಿಂದ ದೂರವಾಗುತ್ತಿದೆ ಎಂದು ಜಾನಪದ ವಿದ್ವಾಂಸ ಡಾ.ಪಿ.ಕೆ. ರಾಜಶೇಖರ್ ಆತಂಕ ವ್ಯಕ್ತಪಡಿಸಿದರು.
ದೇಸಿರಂಗ ಸಾಂಸ್ಕೃತಿಕ ಸಂಸ್ಥೆ ಶುಕ್ರವಾರ ಕಲಾಮಂದಿರದ ಮನೆಯಂಗಳದಲ್ಲಿ ಏರ್ಪಡಿಸಿದ್ದ ಜಾನಪದ ನೃತ್ಯಗಳ ತರಬೇತಿ ಶಿಬಿರವನ್ನು ಕಂಸಾಳೆ ಬಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ರಾಗಿ ಬೀಸುವಾಗ, ಬತ್ತ ಕುಟ್ಟುವಾಗ ಹಾಡುತ್ತಿದ್ದ ಗೀತೆಗಳು ಕಣ್ಮರೆಯಾಗಿವೆ.
ಜನಪದ ಕೋಗಿಲೆ ಕಂಠಗಳು ಕುಸಿಯುತ್ತಿವೆ. ಇಂತಹ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಜನಪದ ಕಲೆಗಳಿಗೆ ಪುನಶ್ಚೇತನ ನೀಡಬೇಕಾಗಿದೆ ಎಂದು ಅಪೇಕ್ಷಿಸಿದರು.
ನಮ್ಮ ನಾಡಿನಲ್ಲಿ 500ಕ್ಕೂ ಹೆಚ್ಚು ಜನಪದ ಕಲೆಗಳಿವೆ. ಅವುಗಳಲ್ಲಿ ನೃತ್ಯ, ವಾದ್ಯ, ಹಾಡುಗಾರಿಕೆ ಪ್ರಕಾರಗಳಿವೆ. ವಾದ್ಯವಿಲ್ಲದ ಹಾಡುಗಳನ್ನು ಹಾಡಬಹುದು. ಆದರೆ, ವಾದ್ಯಗಳಿಲ್ಲದೆ ನೃತ್ಯ ಮಾಡಲು ಆಗುವುದಿಲ್ಲ. ಒಂದು ಕಾಲದಲ್ಲಿ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದೆವು. ಕಂಸಾಳೆ ಮಹಾದೇವಯ್ಯ ಅವರು ಬೀಸು ಕಂಸಾಳೆ ಹೇಳಿಕೊಟ್ಟ ಮೇಲೆ ಅದು ಪ್ರಚಾರಕ್ಕೆ ಬಂದಿತು. ಜಾನಪದ ಗೀತೆಗಳನ್ನು ಮೂಲಮಟ್ಟುಗಳಲ್ಲೆ ಹಾಡುವುದನ್ನು ಕಲಿತವು. ಆದರೂ ಅಕ್ಷರಸ್ಥರು ಜನಪದರ ಸಮೀಪಕ್ಕೆ ಹೋಗುವುದು ತುಂಬಾ ಕಷ್ಟ. ಯುವಜನರು ಮುಂದೆ ಬಂದು ಇಂತಹ ಕಲೆಗಳನ್ನು ಉಳಿಸಿ ಬೆಳೆಸಬೇಕಿದೆ ಎಂದರು.
ಜಾನಪದ ಅಕಾಡೆಮಿ ಮಾಜಿ ಅಧ್ಯಕ್ಷ ಡಾ.ಹಿ.ಶಿ. ರಾಮಚಂದ್ರಗೌಡ ಅಧ್ಯಕ್ಷತೆ ವಹಿಸಿದ್ದರು. ಮಹಾರಾಣಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ಪ್ರಾಧ್ಯಾಪಕಿ ಮನೋನ್ಮಣಿ, ದೇಸಿರಂಗ ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷ ಕೃಷ್ಣ ಜನಮನ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

