ಮೈಸೂರು

ದಸರಾ ಉಪಸಮಿತಿಗಳ ರಚನೆ ಅಸಮರ್ಪಕ

Published On :

ಕ.ಪ್ರ.ವಾರ್ತೆ  ಮೈಸೂರು  ಸೆ. 14
ವಿಶ್ವಪ್ರಸಿದ್ಧ ದಸರಾ ಮಹೋತ್ಸವದ ಉಸ್ತುವಾರಿ ನಿರ್ವಹಣೆಗಾಗಿ ರಚಿಸಲಾಗಿರುವ ಉಪಸಮಿತಿಗಳ ನೇಮಕವು ಈ ಬಾರಿ ಅಸಮರ್ಪಕವಾಗಿದೆ ಎಂದು ಅನೇಕರು ದೂರಿದ್ದಾರೆ.  
ಪ್ರತಿವರ್ಷವೂ ಈ ರೀತಿ ಉಪಸಮಿತಿಗಳನ್ನು ರಚಿಸುವುದು ವಾಡಿಕೆ. ಒಂದೊಂದು ಸರ್ಕಾರ ಬಂದಾಗ ತನ್ನ ಕಾರ್ಯಕರ್ತರು ಹಾಗೂ ಮುಖಂಡರಿಗೆ ಅವಕಾಶ ಕಲ್ಪಿಸುವುದು ಸಹಜ. ಇದರ ನಡುವೆ ಆಯಾಯ ಕ್ಷೇತ್ರಗಳ ಪರಿಣಿತರು, ಕಲಾವಿದರು, ಸಾಹಿತಿಗಳು, ಹೋರಾಟಗಾರರು ಮತ್ತಿತರ ಸಮಾಜದ ಗಣ್ಯರನ್ನು ಸಮತಿಗಳಿಗೆ ನೇಮಿಸುವ ಪರಿಪಾಠವಿದೆ.
ಆಡಳಿತ ಪಕ್ಷದವರಲ್ಲದೆ ಪ್ರತಿಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರಿಗೂ ಅವಕಾಶ ಕಲ್ಪಿಸುವ ಸಂಪ್ರದಾಯವಿದೆ. ಆದರೆ ಈ ಬಾರಿ ಕಾಂಗ್ರೆಸ್ ಸರ್ಕಾರದ ನೇತೃತ್ವದಲ್ಲಿ ನಡೆದಿರುವ ದಸರಾ ಮಹೋತ್ಸವದಲ್ಲಿ ಬೇರೆ ಪಕ್ಷದವರಿಗಿರಲಿ, ಕಾಂಗ್ರೆಸ್ ಕಾರ್ಯಕರ್ತರಿಗೇ ಮನ್ನಣೆ ದೊರಕಿಲ್ಲ ಎಂಬ ಆರೋಪಗಳು ಕೇಳಿ ಬಂದಿದೆ.    
ಮೈಸೂರಿನಲ್ಲಿ ನಡೆಯುತ್ತಿರುವ ಈ ಮಹೋತ್ಸವಕ್ಕೆ ಇಲ್ಲಿನ ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸಮಿತಿಯಲ್ಲಿದ್ದರೆ, ದಸರಾದ ಸಂಪ್ರದಾಯ, ಇತಿಹಾಸ ಹಾಗೂ ಅದರ ಮಹತ್ವಕ್ಕೆ ಅನುಗುಣವಾಗಿ ಉತ್ಸವ ನಡೆಸಲು ಸಾಧ್ಯವಾಗುವುದು. ಇದರಿಂದ ಉತ್ಸವದ ಘನತೆ ಹಾಗೂ ಸುಗಮ ವ್ಯವಸ್ಥೆಗೆ ಅನುಕೂಲವಾಗಲಿದೆ.
ಆದರೆ ಉಪಸಮಿತಿಗಳಲ್ಲಿ ಮೈಸೂರು ನಗರದವರಿಗೆ ಆದ್ಯತೆ ನೀಡಿಲ್ಲ. ಬೇರೆ ಜಿಲ್ಲೆಗಳ ಹಾಗೂ ತಾಲೂಕಿನವರಿಗೆ ಮಣೆ ಹಾಕಲಾಗಿದೆ ಎಂಬುದು ಸಹ ಅಸಮಾಧಾನಕ್ಕೆ ಕಾರಣವಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ವರುಣ ಕ್ಷೇತ್ರದವರು. ಜಿಲ್ಲಾ ಉಸ್ತುವಾರಿ ಸಚಿವರಾದ ವಿ.ಶ್ರೀನಿವಾಸ ಪ್ರಸಾದ್  ನಂಜನಗೂಡು ಪ್ರತಿನಿಧಿ. ಮಹದೇವ ಪ್ರಸಾದ್ ಗುಂಡ್ಲುಪೇಟೆ ಹಾಗೂ ಡಾ. ಎಚ್.ಸಿ.ಮಹದೇವಪ್ಪ ಟಿ. ನರಸೀಪುರ ಪ್ರತಿನಿಧಿಸುತ್ತಿರವುದರಿಂದ ಬೇರೆ ತಾಲೂಕಿಗೆ ಹೆಚ್ಚಿನ ಆದ್ಯತೆ ದೊರಕಿದೆ ಎಂಬ ಮಾತು ಕೇಳಿಬಂದಿದೆ.  
ಈ ಬಾರಿ 23 ಸಮಿತಿಗಳನ್ನು ರಚಿಸಲಾಗಿದ್ದು, ಇದರಲ್ಲಿ ಮಹಿಳಾ ಮತ್ತು ಮಕ್ಕಳ ದಸರಾ, ಲಲಿತಕಲೆ ಮತ್ತು ಕರಕುಶಲ ಉಪಸಮಿತಿ, ಸಾಂಸ್ಕೃತಿಕ ಉಪಸಮಿತಿ, ಕವಿಗೋಷ್ಠಿ, ಆಹಾರ ಮೇಳ ಹಾಗೂ ಸ್ವಾಗತ ಮತ್ತು ಆಮಂತ್ರಣ, ವ್ಯವಸ್ಥೆ ಮತ್ತು ಸ್ವಚ್ಛತೆ ಸಮಿತಿ ಸೇರಿದಂತೆ ಕೆಲವು ಸಮಿತಿಗಳಲ್ಲಿ ಮಾತ್ರ ಮಹಿಳೆಯರಿಗೆ ಅವಕಾಶ ಕಲ್ಪಿಸಲಾಗಿದೆ. 10ಕ್ಕೂ ಹೆಚ್ಚಿನ ಸಮಿತಿಗಳಲ್ಲಿ ಒಬ್ಬ ಮಹಿಳಾ ಸದಸ್ಯರಿಗೂ ಪ್ರಾತಿನಿಧ್ಯ ಲಭ್ಯವಾಗಿಲ್ಲ.   
ಗ್ರಾಮೀಣ ದಸರಾ ಉಪಸಮಿತಿಯಲ್ಲಿ ಉಪಾಧ್ಯಕ್ಷರಾಗಿರುವ ವಕೀಲ ಟಿ.ಎಸ್.ಸತ್ಯಾನಂದ ಎಂಬವರು ರೈತ ದಸರಾ ಸಮಿತಿಯಲ್ಲಿ ಸದಸ್ಯರಾಗಿದ್ದಾರೆ. ಒಂದು ಕಡೆ ಟಿ.ಎಸ್.ಸತ್ಯಾನಂದ, 1ನೇ ತಿರುವು, ಸುಭಾಷ್‌ನಗರ, ಮಂಡ್ಯ ಎಂಬ ವಿಳಾಸವನ್ನೂ, ಮತ್ತೊಂದೆಡೆ ಸತ್ಯಾನಂದ, ವಕೀಲ, ಮಂಡ್ಯ ಎಂದ ವಿಳಾಸವನ್ನೂ ನಮೂದಿಸಲಾಗಿದೆ.
ಅಂತೆಯೇ ಗ್ರಾಮೀಣ ದಸರಾ ಹಾಗೂ ಪ್ರಚಾರ, ಪ್ರಾಯೋಜಕತ್ವ ಮತ್ತು ಗಾಳಿಪಟ ಉಪಸಮಿತಿ ಈ ಎರಡರಲ್ಲಿಯೂ ಎಂ. ಶಿವಕುಮಾರ್ ಸದಸ್ಯರಾಗಿದ್ದೂ, ಗ್ರಾಮೀಣ ದಸರಾ ಉಪಸಮಿತಿಯಲ್ಲಿ ಎಂ. ಶಿವಕುಮಾರ್, ಪ್ರೆಸ್‌ಕ್ಲಬ್ ಮಂಡ್ಯ ಎಂತಲೂ, ಪ್ರಚಾರ ಸಮಿತಿಯಲ್ಲಿ ಎಂ. ಶಿವಕುಮಾರ್, ವರದಿಗಾರರು, ಸಂಯುಕ್ತ ಕರ್ನಾಟಕ, ಕುರುಬರ ನಿಲಯ, ಮಂಡ್ಯ ಎಂತಲೂ ನಮೂದಿಸಲಾಗಿದೆ. ಇದು ಸಹ ಹಲವರ ಅಸಮಾಧಾನಕ್ಕೆ ಕಾರಣವಾಗಿದೆ.
ಭಾರಿ ವೆಚ್ಚದಲ್ಲಿ ಅರಮನೆ ಆವರಣದಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳ ಉಸ್ತುವಾರಿ ನೋಡಿಕೊಳ್ಳುವ ಸಾಂಸ್ಕೃತಿಕ ಸಮಿತಿಗೆ ಸಚಿವ ಶ್ರೀನಿವಾಸಪ್ರಸಾದ್ ಅವರ ಕಟ್ಟಾ ಬೆಂಬಲಿಗ ಕೆ.ಆರ್.ಮೋಹನಕುಮಾರ್ ಅಧ್ಯಕ್ಷರಾದರೆ, ಸಿದ್ದರಾಮಯ್ಯ ಬೆಂಬಲಿಗ ಕೆ.ಸಿ.ಬಲರಾಂ ಉಪಾಧ್ಯಕ್ಷರು.
ಮೆರವಣಿಗೆ ಸಮಿತಿಗೆ ಸಿದ್ದರಾಮಯ್ಯ ಅವರ ಕಟ್ಟಾ ಬೆಂಬಲಿಗ ಕೆ.ಮರೀಗೌಡ ಉಪಾಧ್ಯಕ್ಷರು. ಗ್ರಾಮೀಣ ದಸರಾ ಸಮಿತಿಗೆ ವಿಶ್ವನಾಥ್, ಸಿದ್ದರಾಮಯ್ಯ ಅವರ ಬೆಂಬಲಿಗ ಕೋಟೆಹುಂಡಿ ಮಹದೇವ್ ಅಧ್ಯಕ್ಷರು. ವ್ಯವಸ್ಥೆ ಮತ್ತು ಸ್ವಚ್ಛತಾ ಸಮಿತಿಗೆ ಪಿರಿಯಾಪಟ್ಟಣ ಶಾಸಕ ಕೆ.ವೆಂಕಟೇಶ್ ಅವರ ಬೆಂಬಲಿಗ ಡಾ. ವಿಜಯಕುಮಾರ್ ಅಧ್ಯಕ್ಷರು. ಅಷ್ಟೇ ಅದ್ಧೂರಿಯಾಗಿ ನಡೆಯುವ ಯುವ ದಸರಾ ಸಮಿತಿಗೆ ಶ್ರೀನಿವಾಸಪ್ರಸಾದ್ ಅವರ ಬೆಂಬಲಿಗ ಸತೀಶ್ ಅಧ್ಯಕ್ಷರು. ಯುವ ಸಂಭ್ರಮ ಸಮಿತಿಯ ಅಧ್ಯಕ್ಷತೆಯೂ ಪ್ರಸಾದ್ ಅವರ ಬೆಂಬಲಿಗ ಎಸ್.ಎಸ್.ನಿರಂಜನ್ ಪಾಲಾಗಿದೆ. ಪ್ರವಾಸೋದ್ಯಮ ಸಮಿತಿಯ ಅಧ್ಯಕ್ಷ ಸ್ಥಾನ ಮಹದೇವಪ್ರಸಾದ್ ಅವರ ಬೆಂಬಲಿಗ ವೈ.ಎನ್. ಶಂಕರೇಗೌಡರ ಪಾಲಾಗಿದೆ.

ಸಮಿತಿ ರದ್ದು ಪಡಿಸಲು ಆಗ್ರಹ
ಈ ಬಾರಿಯ ದಸರಾ ಮಹೋತ್ಸವದ ಉಪಸಮಿತಿಗಳು ಅಸಮರ್ಪಕವಾಗಿದ್ದು, ಇದನ್ನು ಕೂಡಲೇ ರದ್ದು ಪಡಿಸಬೇಕೆಂದು ಯುವ ಕಾಂಗ್ರೆಸ್ ಮುಖಂಡ ಕುರುಬಾರಹಳ್ಳಿ ಜೆ. ಪ್ರಕಾಶ್ ಆಗ್ರಹಿಸಿದ್ದಾರೆ. ಸ್ಥಳೀಯರಿಗಿಂತ ಹೊರಗಿನವರಿಗೆ ಆದ್ಯತೆ ನೀಡುವ ಮೂಲಕ ಜಿಲ್ಲಾಡಳಿತ ಮೈಸೂರು ಜನರಿಗೆ ದ್ರೋಹವೆಸಗಿದೆ. ಮೇಲ್ನೋಟಕ್ಕೆ ರಾಜಕೀಯ ಶಿಫಾರಸ್ಸಿಗೆ ಹಾಗೂ ಜನಪ್ರತಿನಿಧಿಗಳ ಒತ್ತಡಕ್ಕೆ ಮಣಿದು ಈ ಸಮಿತಿ ರಚಿಸಲಾಗಿದೆ. ಹಲವು ವರ್ಷಗಳಿಂದ ನಗರದಲ್ಲಿ ವಿವಿಧ ಕಲೆ, ಸಂಸ್ಕೃತಿ, ಇತರೆ ವಿಭಾಗದಲ್ಲಿ ದುಡಿದ ಸ್ಥಳೀಯರಿಗೆ ಆದ್ಯತೆ ನೀಡದಿರುವುದು ಸ್ಥಳೀಯರಿಗೆ ಮಾಡಿರುವ ಅನ್ಯಾಯ ಎಂದು ಅವರು ಟೀಕಿಸಿದ್ದಾರೆ. ಕೂಡಲೇ ಈ ಎಲ್ಲ ಉಪಸಮಿತಿಗಳನ್ನು ರದ್ದುಪಡಿಸಿ ಸ್ಥಳೀಯರಿಗೆ ಆದ್ಯತೆ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಮಾ. ವೆಂಕಟೇಶ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.