ಪ್ರತಿಯೊಬ್ಬರಿಗೂ ಶಿಕ್ಷಣ ಧಕ್ಕಬೇಕು: ಶ್ರೀನಿವಾಸಪ್ರಸಾದ್
ಕ.ಪ್ರ.ವಾರ್ತೆ ಮೈಸೂರು ಸೆ. 14
ಮೂಲಭೂತ ಹಕ್ಕುಗಳಲ್ಲಿ ಒಂದಾದ ಶಿಕ್ಷಣವು ಈ ಸಮಾಜದಲ್ಲಿನ ತಳ ಸಮುದಾಯದವರಿಗೂ ಧಕ್ಕಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸಪ್ರಸಾದ್ ಹೇಳಿದರು.
ಮಹಾರಾಜ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಶನಿವಾರ ನಡೆದ ಪ್ರತಿಭಾ ಪುರಸ್ಕಾರ ಹಾಗೂ ಸಹಪಠ್ಯ ಚಟುವಟಿಕೆಗಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನೂರಾರು ವರ್ಷಗಳಷ್ಟು ಇತಿಹಾಸವುಳ್ಳ ಮಹಾರಾಜ ಪಿಯು ಕಾಲೇಜಿನಲ್ಲಿ ಅವಕಾಶ ವಂಚಿತ ಮಕ್ಕಳು ಹೆಚ್ಚಾಗಿದ್ದಾರೆ. ಇಂಥವರಿಗೆ ಪಾಠ ಮಾಡುವ ಉಪನ್ಯಾಸಕರ ಕೆಲಸ ಶ್ರೇಷ್ಠ ಎಂದರು.
ಇಂದು ಶಿಕ್ಷಣ ಸಂಸ್ಥೆಗಳು ವ್ಯಾಪಾರೀಕರಣಗೊಳ್ಳುತ್ತಿವೆ. ಅನುಕೂಲಸ್ಥರ ಮಕ್ಕಳು ಮಾತ್ರ ಖಾಸಗಿ ಸಂಸ್ಥೆಗಳಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಬಡವರು ಆ ಸಂಸ್ಥೆಗಳ ಮೆಟ್ಟಿಲನ್ನೂ ಹತ್ತಲು ಅವಕಾಶ ನೀಡದಿರುವ ವಾತಾವರಣ ನಿರ್ಮಾಣವಾಗಿದೆ. ನಾನು ಒಬ್ಬ ಜಿಲ್ಲಾ ಉಸ್ತುವಾರಿ ಸಚಿವನಾಗಿ ಬಡ ವಿದ್ಯಾರ್ಥಿಗೆ ಸೀಟು ಕೊಡುವಂತೆ ಕೇಳಿಕೊಂಡರೂ ಶಿಕ್ಷಣ ಸಂಸ್ಥೆಯೊಂದು ಕ್ಯಾರೇ ಎನ್ನಲಿಲ್ಲ. ಕೇಂದ್ರದಲ್ಲಿ ಐದು ಬಾರಿ ಸಂಸದನಾಗಿ, ಕೇಂದ್ರ ಸಚಿವನಾಗಿದ್ದೆ. ಇಂದು ರಾಜ್ಯ ಸಚಿವನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಮನಸ್ಸು ಮಾಡಿದರೆ ಪ್ರಧಾನಮಂತ್ರಿಯಿಂದ ಹಿಡಿದು ರಾಜ್ಯಪಾಲರವರೆಗೆ ಯಾವುದೇ ಕೆಲಸ ಮಾಡಿಸುವಷ್ಟು ಶಕ್ತಿ ಇದೆ. ಆದರೆ ಈ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಸೀಟು ಕೊಡಿಸಲು ಆಗಲಿಲ್ಲ ಎಂದು ಶಿಕ್ಷಣ ವ್ಯಾಪಾರೀಕರಣದ ವ್ಯಾಪ್ತಿಯನ್ನು ಬಿಡಿಸಿಟ್ಟರು.
ಮಹಾರಾಜ ಕಾಲೇಜು ಎಸ್ಸೆಸ್ಸೆಲ್ಸಿಯಲ್ಲಿ ಶೇ.35ರಷ್ಟು ಅಂಕ ಪಡೆದ ವಿದ್ಯಾರ್ಥಿಯನ್ನು ದ್ವಿತೀಯ ಪಿಯುಸಿ ಪಾಸಾಗುವ ವೇಳೆಗೆ ಶೇ.80ರಷ್ಟು ಅಂಕ ಪಡೆಯುವಷ್ಟು ಬಲಿಷ್ಠರಾಗಿ ರೂಪಿಸುತ್ತದೆ. ಹೀಗಾಗಿ ಈ ಸಂಸ್ಥೆಗೇ ಮಾನ್ಯತೆ ಹೆಚ್ಚು ಎಂದರು.
ಪ್ರಧಾನ ಭಾಷಣ ಮಾಡಿದ ನಾಡೋಜ ಡಾ. ದೇಜಗೌ, ಆದರ್ಶ ಶಿಕ್ಷಕರಿಂದ ವಿದ್ಯಾರ್ಥಿಗಳು ಶಿಸ್ತನ್ನು ಮೈಗೂಡಿಸಿಕೊಳ್ಳಬೇಕು. ಯಾವ ದೇಶದಲ್ಲಿ ಶಿಸ್ತು ಇರುವುದಿಲ್ಲವೋ ಅದು ನೈತಿಕ ಅಧಃಪತನ ಹೊಂದುತ್ತದೆ. ಜಗತ್ತಿಗೆ ಜ್ಞಾನ ಕೊಟ್ಟ ಸಾಲಿನಲ್ಲಿ ಭಾರತ ಮುಂದಿದೆ. ವೇದ ಉಪನಿಷತ್ತುಗಳು ವಿಶ್ವಮನ್ನಣೆ ಪಡೆದಿವೆ ಎಂದರು.
ಇದೇ ವೇಳೆ ಕಳೆದ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ನಂದಕುಮಾರ್, ಚಂದನ್, ಕೆ.ಸಿ.ಮಹೇಶ್, ಕೆ.ರವಿ, ಜನಾರ್ದನ್, ಮನೋಹರ್, ಕಾರ್ತಿಕ್, ಎಂ.ಎನ್.ಮೋಹನ್ಕುಮಾರ್, ಎಸ್.ಮೋಹನ್ಕುಮಾರ್, ನವೀನ್, ಸಜ್ಜನ್, ಅಭಿಜಿತ್, ಶಿವಕುಮಾರ್, ಜಗದೀಶ್, ರಾಹುಲ್, ಪ್ರತಾಪ್ ಅವರನ್ನು ಅಭಿನಂದಿಸಲಾಯಿತು.
ಮಹಾರಾಜ ಪಿಯು ಕಾಲೇಜು ಅಭಿವೃದ್ಧಿ ಮಂಡಳಿ ಅಧ್ಯಕ್ಷ, ಶಾಸಕ ವಾಸು ಅಧ್ಯಕ್ಷತೆ ವಹಿಸಿದ್ದರು. ಶಾಸಕ ಮರಿತಿಬ್ಬೇಗೌಡ, ಡಿಡಿಪಿಯು ಕೆ.ಎಂ.ಪುಟ್ಟು, ಪಾಲಿಕೆ ಸದಸ್ಯರಾದ ಎಸ್.ಬಾಲು, ಡಿ.ನಾಗಭೂಷಣ್, ಪದವಿಪೂರ್ವ ಶಿಕ್ಷಣ ಇಲಾಖೆ ನಿವೃತ್ತ ನಿರ್ದೇಶಕ ಬಿ.ಎಸ್.ಶ್ರೀಧರರಾಜೇ ಅರಸ್, ಸುರೇಶ್ ಇದ್ದರು. ಪ್ರಾಂಶುಪಾಲ ಟಿ.ಆರ್.ಸಿದ್ದರಾಜು ಸ್ವಾಗತಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

