ಮೈಸೂರು

'ಸಮಾಜ ಸೇವೆಗೆ ಎಲ್ಲರೂ ಮುಂದಾಗಿ'

Published On :

ಕ.ಪ್ರ.ವಾರ್ತೆ  ಮೈಸೂರು  ಸೆ. 15
ನಮ್ಮ ಸಮಾಜ ನಮಗೇನು ಮಾಡಿತು ಎನ್ನುವುದರ ಬದಲು ನಮ್ಮ ಸಮಾಜಕ್ಕೆ ನಾವೇನು ಮಾಡಿದೆವು ಎಂಬ ಚಿಂತನೆ ಪ್ರತಿಯೊಬ್ಬರಲ್ಲೂ ಮೂಡಬೇಕು. ಆ ಮೂಲಕ ಎಲ್ಲರೂ ಸಮಾಜ ಸೇವೆಗೆ ಮುಂದಾಗಬೇಕು ಎಂದು ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ ಕರೆ ನೀಡಿದರು.
ವಿಶ್ವಮಾನವ ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘ ಭಾನುವಾರ ವಿದ್ಯಾರಣ್ಯಪುರಂನಲ್ಲಿರುವ ಒಕ್ಕಲಿಗರ ಭವನದಲ್ಲಿ ಏರ್ಪಡಿಸಿದ್ದ ಹಿರಿಯ ಸದಸ್ಯರಿಗೆ ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದ ಋಣ ಅತ್ಯಂತ ಪವಿತ್ರವಾದದು. ಪ್ರತಿಯೊಬ್ಬರು ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಂಡು ಋಣ ತೀರಿಸಬೇಕು. ಇಂತಹ ಸಂಘ ಸಂಸ್ಥೆಗಳ ಮೂಲಕ ಉತ್ತಮ ಸಮಾಜ ಸೇವೆ ಮಾಡಬಹುದಾಗಿದೆ ಎಂದರು.
ದೇಶದ ಜನರಿಗೆ ಅನ್ನ ನೀಡುವ ಪರಂಪರೆಯುಳ್ಳ ರೈತಾಪಿ ವರ್ಗವಾದ ಒಕ್ಕಲಿಗ ಸಮಾಜವನ್ನು ಕೆಲವು ಕಾಣದ ಕೈಗಳು ತುಳಿಯಲು ಹವಣಿಸುತ್ತಿವೆ. ಅಂತಹವರ ವಿರುದ್ಧ ಒಕ್ಕಲಿಗ ಸಮುದಾಯ ಎಚ್ಚರದಿಂದಿದ್ದು, ಒಗ್ಗಟ್ಟು ಪ್ರದರ್ಶಿಸಬೇಕು. ಇತ್ತೀಚಿನ ದಿನಗಳಲ್ಲಿ ಯಾವುದೇ ನೌಕರಿ ಪಡೆಯಲು ಇತರೆ ಸಮಾಜದವರು ಸುಳ್ಳು ಪ್ರಮಾಣಪತ್ರ ಸೃಷ್ಟಿಸಿ ನೌಕರಿ ಗಿಟ್ಟಿಸುತ್ತಿರುವ ಸಂಗತಿಗಳನ್ನು ನಾವು ನೋಡುತ್ತಿದ್ದೇವೆ. ಆದರೆ, ಒಕ್ಕಲಿಗ ಸಮಾಜಕ್ಕೆ ಅಂತಹ ಕಳಂಕ ಈವರೆಗೂ ಅಂಟಿಲ್ಲ ಎಂದು ತಿಳಿಸಿದರು.
ಸಮಾಜದಲ್ಲಿ ಏಳಿಗೆ ಕಾಣಿರಿ: ಒಕ್ಕಲಿಗ ಸಮಾಜದಲ್ಲಿ ಹುಟ್ಟಿ ಬೆಳೆದ ಮಹಾನ್ ವ್ಯಕ್ತಿಗಳು ಅನೇಕರಿದ್ದಾರೆ. ಅಂತಹವರನ್ನು ಆದರ್ಶವಾಗಿಟ್ಟು ಇಂದಿನ ವಿದ್ಯಾರ್ಥಿಗಳು ಸಮಾಜದಲ್ಲಿ ಏಳಿಗೆ ಕಾಣಬೇಕು. ಪ್ರತಿಯೊಬ್ಬ ವಿದ್ಯಾರ್ಥಿ ಜೀವನದಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪ್ರಮುಖ ಘಟ್ಟವಾಗಿದ್ದು, ಕಷ್ಟಪಟ್ಟು ಓದಿ ಉತ್ತಮ ಅಂಕ ಗಳಿಸಿ ಉನ್ನತ ಮಟ್ಟಕ್ಕೆ ಬೆಳೆಯಬೇಕು ಎಂದು ಸಲಹೆ ಮಾಡಿದರು.
ಕಳೆದ ಸಾಲಿನ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ಸಮುದಾಯದ ವಿದ್ಯಾರ್ಥಿಗಳಾದ ನಿತೀಶ್, ತೇಜಸ್, ಪ್ರೇಮ, ಹರ್ಷಿತಾ, ಭವ್ಯಶ್ರೀ, ಶರಗ್ಯ, ಇಂಚರ ಸೇರಿದಂತೆ ಅನೇಕ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ವಿಶ್ವಮಾನವ ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘ ಅಧ್ಯಕ್ಷ ಮೇ.ಸು. ನಿಂಗೇಗೌಡ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಲ್.ನಾಗೇಂದ್ರ, ನಗರ ಪಾಲಿಕೆ ಸದಸ್ಯ ಬಿ.ಎಲ್. ಭೈರಪ್ಪ, ಎಸ್. ಉಮಾಮಣಿ ಮಹದೇವ್, ನೇಗಿಲ ಯೋಗಿ ಸಮಾಜ ಸೇವಾ ಟ್ರಸ್ಟ್ ಅಧ್ಯಕ್ಷ ಡಾ.ಎಲ್. ದೇವೇಗೌಡ, ಕೆ.ಎಂ. ಬಸವೇಗೌಡ, ಯಶಸ್ವಿ ಎಸ್. ಸೋಮಶೇಖರ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.