ಮೈಸೂರು

ಇಂದು ಶಿಕ್ಷಕರ ದಿನ

Published On :

ಎಚ್.ಡಿ. ಕೋಟೆ: ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಸೆ.28 ರಂದು ಪಟ್ಟಣದ ಅಂಬೇಡ್ಕರ್ ಭವನದ ಮುಂಭಾಗ ಶಿಕ್ಷಕರ ದಿನಾಚರಣೆ ಏರ್ಪಡಿಸಿದ್ದು, ತಾಪಂ ಅಧ್ಯಕ್ಷೆ ಲಕ್ಷ್ಮೀ ರಮೇಶ್ ಉದ್ಘಾಟಿಸುವರು. ಶಾಸಕ ಎಸ್. ಚಿಕ್ಕಮಾದು ಅಧ್ಯಕ್ಷತೆ ವಹಿಸಲಿದ್ದು, ಶಾಸಕರಾದ ಸಿದ್ಧರಾಜು, ಸಂದೇಶ್ ನಾಗರಾಜು, ಮರಿತಿಬ್ಬೇಗೌಡ, ಗೋ. ಮದುಸೂದನ್, ಆರ್. ಧರ್ಮಸೇನ ಭಾಗವಹಿಸುವರು.

ಗಣಪತಿ ವಿಸರ್ಜನೆ
ಬೈಲುಕುಪ್ಪೆ: ಗಜಾನನ ಸೇವಾ ಸಮಿತಿಯಿಂದ ರಂಗಮಂದಿರದ ಆವರಣದಲ್ಲಿ ಪ್ರತಿಷ್ಠಾಪಿಸಿದ್ದ ಗಣಪತಿಯನ್ನು ಶುಕ್ರವಾರ ಕೆರೆಯಲ್ಲಿ ವಿಸರ್ಜಿಸಲಾಯಿತು. ಸಾರ್ವಜನಿಕರ ಸಹಕಾರದಿಂದ ಇದುವರೆಗೆ ಪ್ರತಿ ದಿನ ವಿವಿಧ ಕಾರ್ಯಕ್ರಮಗಳೊಂದಿಗೆ ಪೂಜಿಸಿ, ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ, ವಿಸರ್ಜಿಸಲಾಯಿತು ಎಂದು ಗಜಾನನ ಸೇವಾ ಸಮಿತಿ ಅಧ್ಯಕ್ಷ ರಾಮಕೃಷ್ಣ ತಿಳಿಸಿದರು.

ಸಾಂಸ್ಕೃತಿಕ ಸ್ಪರ್ಧೆ ವಿಜೇತರು
ಕೆ.ಆರ್. ನಗರ: ಪಟ್ಟಣದ ಬಯಲು ರಂಗಮಂದಿರಲ್ಲಿ ನಡೆದ ಗ್ರಾಮೀಣ ದಸರಾ ಕಾರ್ಯಕ್ರಮದ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದವರ ವಿವರ. ಪುರುಷರ ವಿಭಾಗ: ಭಜನೆ- ಕರ್ನಾಟಕ ಜಾನಪದ ಪರಿಷತ್ ಕೆ.ಆರ್. ನಗರ ಶಾಖೆ (ಪ್ರಥಮ), ಭಾಸ್ಕರ ತಂಡ (ದ್ವಿತೀಯ) ಸ್ಥಾನ ಪಡೆದರು. ಗೀಗೀಪದ ಹಾಗೂ ಸೋಬಾನೆ ಪದ ಸ್ಪರ್ಧೆ- ಕರ್ನಾಟಕ ಜಾನಪದ ಪರಿಷತ್ ಕೆ.ಆರ್. ನಗರ ಶಾಖೆ (ಪ್ರಥಮ)  ತಮಟೆ ಸ್ಪರ್ಧೆ- ಆದಿಶಕ್ತಿ ಕಲಾ ತಂಡ (ಪ್ರಥಮ) ಪಡೆದುಕೊಂಡರು. ಮಹಿಳೆಯರ ವಿಭಾಗ: ಭಜನೆ ವಿಭಾಗ- ಕೆ.ಆರ್. ನಗರಣದ ಗೀತಾ ಮಹಿಳಾ ಸಮಾಜ (ಪ್ರಥಮ), ಶಿವಾನುಭವ ಮಹಿಳಾ ಸಂಘ (ದ್ವಿತೀಯ). ಗೀಗೀಪದ ಕುಸುಮ ಮತ್ತು ತಂಡ- (ಪ್ರಥಮ). ಸೋಬಾನೆ ಪದ ಸ್ಪರ್ಧೆ- ಶಾಂತಿ (ಪ್ರಥಮ), ಜಯಲಕ್ಷ್ಮಮ್ಮ ಮತ್ತು ತಂಡ- (ದ್ವಿತೀಯ). ಕೋಲಾಟ ಸ್ಪರ್ಧೆ- ಯಶಸ್ವಿನಿ ತಂಡ (ಪ್ರಥಮ), ಮಾರುತಿ ಮತ್ತು ತಂಡ- (ದ್ವಿತೀಯ) ಪಡೆದುಕೊಂಡಿವೆ.

ಎಚ್‌ಡಿಕೆ ಸುಳ್ಳು ಆರೋಪ ನಿಲ್ಲಿಸಲಿ
ಕೆ.ಆರ್. ನಗರ: ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಸಿಎಂ ಸಿದ್ದರಾಮಯ್ಯ ಅವರ ಮೇಲೆ ಇಲ್ಲ ಸಲ್ಲದ ಆರೋಪ ಮಾಡುವುದನ್ನು ನಿಲ್ಲಿಸುವಂತೆ ಜಿಲ್ಲಾ ಕಾಂಗ್ರೆಸ್ ಸಮಿತಿ ಕಿಸಾನ್ ಮತ್ತು ಕೃಷಿಕ ಕಾರ್ಮಿಕ ವಿಭಾಗದ ಕಾರ್ಯದರ್ಶಿ ಯೋಗೇಶ್ ಆಗ್ರಹಿಸಿದ್ದಾರೆ. ಕುಮಾರಸ್ವಾಮಿ ಅವರ ಆರೋಪದಲ್ಲಿ ಯಾವುದಾದರೂ ದಾಖಲೆಗಳಿದ್ದರೆ ಬಹಿರಂಗಪಡಿಸಲಿ ಎಂದು ಸವಾಲು ಹಾಕಿದರು.

ಚುನಾವಣೆಯಲ್ಲಿ ಬೆಂಬಲಿಸಿ
ನಂಜನಗೂಡು: ಜಿಲ್ಲೆಯ ಕುರುಬ ಸಮುದಾಯದ ಅಭಿವೃದ್ಧಿಗೆ ವಿದ್ಯಾರ್ಥಿನಿಲಯ ಎಂಜಿನಿಯರಿಂಗ್ ಕಾಲೇಜು ಸ್ಥಾಪನೆ ಸೇರಿದಂತೆ ಅನೇಕ ಕಲ್ಯಾಣ ಕಾರ್ಯಕ್ರಮವನ್ನು ಅನುಷ್ಠಾನಕ್ಕೆ ತರಲು ಸೆ.29 ರಂದು ನಡೆಯಲಿರುವ ರಾಜ್ಯ ಕುರುಬರ ಸಂಘದ ನಿರ್ದೇಶಕರ ಚುನಾವಣೆಯಲ್ಲಿ ಜಿಲ್ಲೆಯಿಂದ ಸ್ಪರ್ಧಿಸಿರುವ ತಂಡವನ್ನು ಬೆಂಬಲಿಸುವಂತೆ ಜಿಪಂ ಮಾಜಿ ಅಧ್ಯಕ್ಷ ಕೆ.ಸಿ. ಬಲರಾಮ್ ಸಮಾಜದ ಮತದಾರರಲ್ಲಿ ಮನವಿ ಮಾಡಿದ್ದಾರೆ. ಜಿಲ್ಲೆಯಿಂದ 6 ಸ್ಥಾನದಲ್ಲಿ 5 ಮಂದಿ ಪುರುಷರು, ಒಬ್ಬ ಮಹಿಳೆಯನ್ನು ಆಯ್ಕೆ ಮಾಡಬೇಕಾಗಿದ್ದು, ಜಿಲ್ಲೆಯಲ್ಲಿ 8,837 ಮತಗಳು, ನಂಜನಗೂಡು ತಾಲೂಕಿನಲ್ಲಿ 300 ಮತಗಳಿವೆ, ಒಬ್ಬರಿಗೆ 6 ಮತ ಚಲಾಯಿಸುವ ಅವಕಾಶವಿದ್ದು, ಇದನ್ನು ಸದುಪಯೋಗ ಪಡಿಸಿಕೊಂಡು ಕಳೆದ ವರ್ಷ ನಮ್ಮ ತಂಡ ಜನಾಂಗದ ಅಭಿವೃದ್ಧಿಗೆ ಶ್ರಮಿಸಿದ್ದರಿಂದ ಸಂಘವು ಆರ್ಥಿಕವಾಗಿ ಸದೃಢವಾಗಿದೆ. ಯಾವುದೇ ಅಭಿವೃದ್ಧಿ ಕಾರ್ಯಗಳಿಗೆ ಹಣ ವಿನಿಯೋಗಿಸಲಿದೆ ಎಂದು ತಿಳಿಸಿದರು.

ಇಂದು ನೀರು ಪೂರೈಕೆ ವ್ಯತ್ಯಯ
ಮೈಸೂರು: ಸೆ..28 ರಂದು ಜೆ.ಪಿ. ನಗರ, ಶ್ರೀರಾಂಪುರ, ಅರವಿಂದ ನಗರ, ವಿವೇಕಾನಂದ ನಗರ, ರಾಮಕೃಷ್ಣ ನಗರ, ಕುವೆಂಪುನಗರ, ದಟ್ಟಗಳ್ಳಿ 3ನೇ ಹಂತ, ಅಶೋಕಪುರಂ, ಜಯನಗರ, ಕೆ.ಆರ್. ಮೊಹಲ್ಲಾ, ಚಾಮುಂಡಿಪುರಂ ಮತ್ತಿತರ ಪ್ರದೇಶಗಳಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ, ಸಾರ್ವಜನಿಕರು ನೀರು ಬಂದಾಗ ಶೇಖರಿಸಿಕೊಂಡು ಸಹಕರಿಸುವಂತೆ ವಾಣಿವಿಲಾಸ ನೀರು ಸರಬರಾಜು ಕಾರ್ಯಾಗಾರದ ಕಾರ್ಯಪಾಲಕ ಎಂಜಿನಿಯರ್ ಕೋರಿದ್ದಾರೆ.

ಮೃಗಾಲಯಕ್ಕೆ ವಾರದ ರಜೆ ಇಲ್ಲ
 ದಸರಾ ಮಹೋತ್ಸವದ ಅಂಗವಾಗಿ ಪ್ರವಾಸಿಗರು, ಜನಸಾಮಾನ್ಯರು ಹಾಗೂ ಸ್ಥಳೀಯರಿಗೆ ಮೃಗಾಲಯ ವೀಕ್ಷಿಸಲು ಅನುವಾಗುವಂತೆ ಅ.8 ಮತ್ತು 15ರ ಮಂಗಳವಾರಗಳಂದು ಶ್ರೀ ಚಾಮರಾಜೇಂದ್ರ ಮೃಗಾಲಯ ಹಾಗೂ ಕಾರಂಜಿಕೆರೆ ಪ್ರಕೃತಿ ಉದ್ಯಾನವನ ಸಾರ್ವಜನಿಕರ ವೀಕ್ಷಣೆಗೆ ತೆರೆದಿರುತ್ತದೆ. ವಾರದ ರಜೆ ಇರುವುದಿಲ್ಲ ಎಂದು ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಬಿ.ಪಿ. ರವಿ ಹೇಳಿದ್ದಾರೆ.

ನಾಟಕ ಪ್ರದರ್ಶನಕ್ಕೆ ಅರ್ಜಿ ಆಹ್ವಾನ
ನಂಜನಗೂಡು ತಾಲೂಕು ಸುತ್ತೂರು ಶ್ರೀ ಕ್ಷೇತ್ರದಲ್ಲಿ 2014ರ ಜ.27 ರಿಂದ ಫೆ.1 ರವರೆಗೆ ನಡೆಯುವ ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ ಜಾತ್ರಾ ಮಹೋತ್ಸವದಲ್ಲಿ ನಾಟಕ ಪ್ರದರ್ಶಿಸಲು ಅರ್ಜಿ ಆಹ್ವಾನಿಸಲಾಗಿದೆ. ಪೌರಾಣಿಕ, ಸಾಮಾಜಿಕ ಹಾಗೂ ಶರಣರ ಜೀವನ ಕುರಿತ ನಾಟಕಗಳಿಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಈ ಹಿಂದಿನ ಜಾತ್ರೆಗಳಲ್ಲಿ ಹೆಚ್ಚು ಪ್ರದರ್ಶನ ನೀಡಿರುವ ದಕ್ಷಯಜ್ಞ, ಶಿವಕುಮಾರ, ಶನಿ ಪ್ರಭಾವ, ಕುರುಕ್ಷೇತ್ರ ಇತ್ಯಾದಿ ನಾಟಕಗಳಿಗೆ ಈ ವರ್ಷ ಪ್ರದರ್ಶನಕ್ಕೆ ಆದ್ಯತೆ ಇರುವುದಿಲ್ಲ. ಆಯ್ಕೆಯಾದ ತಂಡಗಳಿಗೆ ರಂಗಸಜ್ಜಿಕೆ, ಪ್ರಸಾದ ಮತ್ತು ಅಗತ್ಯವಿದ್ದಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲಾಗುತ್ತದೆ ಎಂದು ಜಾತ್ರಾ ಮಹೋತ್ಸವ ಸಮಿತಿ ಸಂಚಾಲಕ ಪ್ರೊ.ಎಚ್.ಬಿ. ದೇವಣ್ಣ ತಿಳಿಸಿದ್ದಾರೆ. ಮೊ. 94811 69524, ದೂ. 0821- 2548201 ಸಂಪರ್ಕಿಸಬಹುದು.

ವಾರ್ಷಿಕೋತ್ಸವ
ಯಾದವಗಿರಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿವಿಯ 37ನೇ ವಾರ್ಷಿಕೋತ್ಸವವು ಸೆ.29 ರಂದು ಸಂಜೆ 6.30ಕ್ಕೆ ಬಿ.ಕೆ. ಲಕ್ಷ್ಮೀಜಿ ಅವರ ಸಮ್ಮುಖದಲ್ಲಿ ನಡೆಯಲಿದೆ.

ರೇಲ್ವೆ ಸಲಹಾ ಸಮಿತಿಗೆ ನೇಮಕ
ಮೈಸೂರು: ಜಿಲ್ಲಾ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಎಂ.ಎಚ್. ರಾಜಶೇಖರ ಮೂರ್ತಿ ಅವರನ್ನು ಕರ್ನಾಟಕ, ತಮಿಳುನಾಡು, ಕೇರಳ, ಆಂಧ್ರಪ್ರದೇಶ ಹಾಗೂ ಪಾಂಡಿಚೇರಿ ಒಳಗೊಂಡ ವಲಯ ರೇಲ್ವೆ ಬಳಕೆದಾರರ ಸಲಹಾ ಸಮಿತಿ ಸದಸ್ಯರಾಗಿ ನೇಮಿಸಲಾಗಿದೆ. ಇವರು ತಾಲೂಕಿನ ಜಯಪುರ ಹೋಬಳಿ ಮಾರ್ಬಳ್ಳಿ ಗ್ರಾಮದವರು.

ಎಲ್‌ಐಸಿ ಬೆಳ್ಳಿಹಬ್ಬ
ವಿಮಾ ನಿಗಮ ನೌಕರರ ಸಂಘದ ವಿಭಾಗೀಯ ಸಂಘಟನೆಯ ಬೆಳ್ಳಿಹಬ್ಬವು ಸೆ.29ರ ಬೆಳಗ್ಗೆ 10.30ಕ್ಕೆ ಬನ್ನಿಮಂಟಪದ ಎಲ್‌ಐಸಿ ವಿಭಾಗೀಯ ಕಚೇರಿಯಲ್ಲಿ ನಡೆಯಲಿದ್ದು, ರಾಷ್ಟ್ರಾಧ್ಯಕ್ಷ ಅಮಾನುಲ್ಲಾಖಾನ್, ಉಪಾಧ್ಯಕ್ಷ ಬಿ.ಭಾಸ್ಕರ ಸೋಮಯಾಜಿ, ಜೆ.ಸುರೇಶ್, ರಂಗಾಯಣ ನಿರ್ದೇಶಕ ಜನ್ನಿ, ಎನ್. ವಿಜಯಕುಮಾರ್ ಭಾಗವಹಿಸುವರು.

ಉಪನ್ಯಾಸಕರ ಸಭೆ
ಜಿಲ್ಲೆಯ ಸರ್ಕಾರಿ, ಅನುದಾನಿತ ಪಿಯು ಕಾಲೇಜುಗಳಲ್ಲಿ ಕಾಯಂ ನೆಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪಿಎಚ್.ಡಿ, ಸ್ಲೆಟ್, ಯುಜಿಸಿ, ಎಂ.ಫಿಲ್ ಪಾಸು ಮಾಡಿರುವ ಪ್ರಾಚಾರ್ಯರು ಹಾಗೂ ಉಪನ್ಯಾಸಕರು ಸಭೆಯನ್ನು ಸೆ.29ರ ಬೆಳಗ್ಗೆ 11ಕ್ಕೆ ಮಹಾರಾಣಿ ಸರ್ಕಾರಿ ಪಿಯು ಕಾಲೇಜಿನಲ್ಲಿ ನಡೆಯಲಿದೆ ಎಂದು ಡಾ.ಬಿ.ಎಂ. ಪ್ರಕಾಶ್ ತಿಳಿಸಿದ್ದಾರೆ. ಮೊ. 94487 85867 ಸಂಪರ್ಕಿಸಬಹುದು.

ವಾರ್ಷಿಕ ಸಭೆ
ಬ್ರಾಹ್ಮಣ ಧರ್ಮ ಸಹಾಯ ಸಭಾದ ವಾರ್ಷಿಕ ಮಹಾಸಭೆಯು ಸೆ.29 ರಂದು ತ್ಯಾಗರಾಜ ರಸ್ತೆಯ ಕಲ್ಯಾಣ ಭವನದಲ್ಲಿ ನಡೆಯಲಿದ್ದು, ದೂ.0821- 2446498 ಸಂಪರ್ಕಿಸಬಹುದು.

ಸಂಕೀರ್ತನ ಸ್ಪರ್ಧೆ
ಬೆಂಗಳೂರಿನ ಮಾಧ್ವ ಯುವ ಪರಿಷತ್ತು ಹಾಗೂ ಶ್ರೀಕೃಷ್ಣ ಟ್ರಸ್ಟ್‌ನಿಂದ ಸೆ.29ರ ಬೆಳಗ್ಗೆ 9.30ಕ್ಕೆ ಕುವೆಂಪುನಗರ ಶ್ರೀಕೃಷ್ಣ ಸಭಾ ಭವನದಲ್ಲಿ ಶ್ರೀಹಯವದನಾಂಕಿತ ಸಂಕೀರ್ತನ ಸ್ಪರ್ಧೆ ಏರ್ಪಡಿಸಿದ್ದು, ಸಂಶೋಧಕಿ ಡಾ.ಟಿ.ಎನ್. ನಾಗರತ್ನ ಅತಿಥಿಯಾಗಿ ಭಾಗವಹಿಸುವರು. ಮೊ. 98454 50219 ಸಂಪರ್ಕಿಸಿರಿ.

ಕಾಲ್ನಡಿಗೆ
ಯೂತ್ ಹಾಸ್ಟೆಲ್ಸ್ ಅಸೋಸಿಯೇಷನ್ ಆಫ್ ಇಂಡಿಯಾದಿಂದ ಸೆ.29 ರಂದು ತಾಲೂಕಿನ ಕಡಕೊಳದಿಂದ ಕೂಡನಹಳ್ಳಿ ಗ್ರಾಮದವರಿಗೆ ಕ್ರಾಸ್ ಕಂಟ್ರಿ ಮಾದರಿಯಲ್ಲಿ ಪರಿಸರ ಸ್ನೇಹಿ ಕಾಲ್ನಡಿಗೆ ಕಾರ್ಯಕ್ರಮ ಏರ್ಪಡಿಸಿದ್ದು, ಮೊ. 94490 47132 ಸಂಪರ್ಕಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.