ಮೈಸೂರು

ಏಜೆಂಟ್ಸ್‌ರಿಂದ ಪ್ರವಾಸೋದ್ಯಮ ದಿನ

Published On :

ಕ.ಪ್ರ.ವಾರ್ತೆ ,  ಮೈಸೂರು ,  ಸೆ. 27
ವರ್ಷಪೂರ್ತಿ ದಸರಾ ಪ್ರಚಾರ ಸಮಿತಿ ಕ್ರಿಯಾಶೀಲವಾಗಿರುವುದು ಅವಶ್ಯಕ ಎಂದು ಮೈಸೂರು ಟ್ರಾವೆಲ್ ಏಜೆಂಟ್ಸ್ ಅಸೋಸಿಯೇಷನ್ ಅಧ್ಯಕ್ಷ ಬಿ.ಎಸ್. ಪ್ರಶಾಂತ್ ಹೇಳಿದರು.
ವಿಶ್ವ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ಅರಮನೆ ಬಲರಾಮ ದ್ವಾರದಲ್ಲಿ ಮೈಸೂರು ಟ್ರಾವೆಲ್ ಏಜೆಂಟ್ಸ್ ಅಸೋಸಿಯೇಷನ್ ಶುಕ್ರವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಿಶ್ವಪ್ರಸಿದ್ಧ ದಸರಾಗೆ ಹಾಗೂ ಮೈಸೂರು ಪ್ರವಾಸಿ ತಾಣಗಳಿಗೆ ಹೆಚ್ಚನ ಪ್ರವಾಸಿಗರನ್ನು ಸೆಳೆಯಲು ಪ್ರಚಾರ ಬಹುಮುಖ್ಯ. ಈ ದಿಸೆಯಲ್ಲಿ ದಸರಾ ಪ್ರಚಾರ ಸಮಿತಿ ವರ್ಷಪೂರ್ತಿ ಕ್ರಿಯಾಶೀಲವಾಗಿರುವುದು ಅಗತ್ಯ. ದಸರಾ ವೇಳೆ ರಚಿಸಲಾಗುವ ಉಪಸಮಿತಿಗಳಿಗೆ ಈ ಸಮಿತಿಯು ಸೂಕ್ತ ಸಲಹೆ ನೀಡಲು ಅನುಕೂಲವಾಗಲಿದೆ. ಇದರಿಂದ ಮೈಸೂರಿನ ಪ್ರವಾಸಿ ಕ್ಷೇತ್ರ ಹಾಗೂ ಉದ್ಯಮ ಕ್ಷೇತ್ರ ಅಬಿವೃದ್ಧಿಯಾಗಲು ಸಹಕಾರಿಯಾಗಲಿದೆ ಎಂದರು.
ಸಮಿತಿಗೆ ನೇಮಕ ಮಾಡಿ: ಪ್ರವಾಸಿ ಏಜೆಂಟರು ಹಾಗೂ ಹೊಟೇಲ್ ಉದ್ಯಮಿಗಳನ್ನು ದಸರಾದ ವಿವಿಧ ಸಮಿತಿಗಳಿಗೆ ನೇಮಕ ಮಾಡಬೇಕು. ನಗರದ ಪ್ರಮುಖ ಸ್ಥಳಗಳಲ್ಲಿ ರಾಜ್ಯದ ಪ್ರವಾಸಿ ತಾಣಗಳ ವರ್ಣಮಯ ಚಿತ್ರಗಳನ್ನು ಪ್ರದರ್ಶಿಸಬೇಕು. ಕೇಂದ್ರ ಸರ್ಕಾರದ ಸಹಕಾರದೊಡನೆ ಪ್ರವಾಸಿ ವಾಹನಗಳಿಗೆ ಇಡೀ ದೇಶದಲ್ಲಿ ಏಕರೂಪ ಪ್ರವೇಶ ತೆರಿಗೆ ಜಾರಿಗೆ ತರುವಲ್ಲಿ ಸರ್ಕಾರ ಮುಂದಾಗಬೇಕು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಉತ್ತಮ ಸೇವೆ ಸಲ್ಲಿಸಿರುವ ಪ್ರವಾಸಿ ವಾಹನ ಚಾಲಕರಾದ ಪ್ರಭಾಕರ್, ಮಾಧವರಾವ್ ಹಾಗೂ ಸಂಚಾರಿ ಪೊಲೀಸ್ ಪೇದೆಗಳಾದ ಮುನ್ಸಿಫರ್ ಅಹಮದ್ ಹಾಗೂ ಮಹದೇವ್ ಅವರನ್ನು ಸನ್ಮಾನಿಸಲಾಯಿತು.
ಮುಖ್ಯ ಅತಿಥಿಯಾಗಿದ್ದ ಮಹಾಜನ ಪ್ರವಾಸೋದ್ಯಮ ಅಭಿವೃದ್ಧಿ ಸಂಸ್ಥೆ ನಿರ್ದೇಶಕ ಪ್ರೊ.ಕೆ.ಎಸ್. ನಾಗಪತಿ, ವಿಶ್ವ ಪ್ರವಾಸೋದ್ಯಮ ದಿನದ ಮಹತ್ವ ವಿವರಿಸಿದರು. ಕಂಟ್ರಿ ಇನ್ ಮತ್ತುಸ್ಯೂಟ್ಸ್ ಪ್ರಧಾನ ವ್ಯವಸ್ಥಾಪಕ ಪಂಕಜ್ ಸಕ್ಸೇನಾ ಇದ್ದರು. ಸಂಘದ ಕಾರ್ಯದರ್ಶಿ ಎ.ಸಿ. ರವಿ ನಿರೂಪಿಸಿದರು.
ನಂತರ ಅರಮನೆ ಬಲರಾಮ ದ್ವಾರದಿಂದ ಹೊರಟ ಮೆರವಣಿಗೆಯಲ್ಲಿ ನಾಡಿನ ಸಂಸ್ಕೃತಿ ಪ್ರತಿಬಿಂಬಿಸುವ ಡೊಳ್ಳು ಕುಣಿತ, ಕಂಸಾಳೆ, ಗೊರವರ ಕುಣಿತ, ಟೆಬೆಟಿಯನ್ನರ ಕೊಳಲು ವಾದನ ಹಾಗೂ ನೃತ್ಯ ಗಮನ ಸೆಳೆಯಿತು. ಅಲ್ಲದೆ ಅಲಂಕೃತ ಎತ್ತಿನ ಗಾಡಿಗಳು, ಕುದುರೆ ಗಾಡಿಗಳು ಹಾಗೂ ಇತರೆ ವಾಹನಗಳು ಸಾಗಿದವು. ಪ್ರಮುಖ ಮಾರ್ಗದಲ್ಲಿ ಸಂಚರಿಸಿದ ಮೆರವಣಿಗೆಯು ರೇಲ್ವೆ ನಿಲ್ದಾಣದಲ್ಲಿ ಅಂತ್ಯಗೊಂಡಿತು.  
ಮಾಹಿತಿ ಕೇಂದ್ರಕ್ಕೆ ಚಾಲನೆ: ಪ್ರವಾಸಿಗರ ಅನುಕೂಲಕ್ಕಾಗಿ ಮೈಸೂರು ಟ್ರಾವೆಲ್ ಏಜೆಂಟ್ಸ್ ಅಸೋಸಿಯೇಷನ್ ವತಿಯಿಂದ ಇಲ್ಲಿನ ರೇಲ್ವೆ ನಿಲ್ದಾಣದಲ್ಲಿ ತೆರೆಯಲಾಗಿರುವ ಮಾಹಿತಿ ಕೇಂದ್ರವನ್ನು ನೈಋತ್ಯ ರೇಲ್ವೆ ಮೈಸೂರು ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಅನಿಲ್ ಕುಮಾರ್ ಉದ್ಘಾಟಿಸಿದರು.
ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಶಿವಲಿಂಗಪ್ಪ, ಸಂಘದ ಅಧ್ಯಕ್ಷ ಬಿ.ಎಸ್. ಪ್ರಶಾಂತ್, ಕಾರ್ಯದರ್ಶಿ ಎ.ಸಿ. ರವಿ ಹಾಗೂ ಸಂಸ್ಥಾಪಕ ಅಧ್ಯಕ್ಷ ಎಸ್. ಶಾಂತಿನಾಥ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.