ಮೈಸೂರು

ಶೋಷಣೆ, ದಬ್ಬಾಳಿಕೆ ತಡೆಗೆ ಶಿಕ್ಷಣ ಪರಿಹಾರ: ಶ್ರೀನಿವಾಸಪ್ರಸಾದ್

Published On :

ಕ.ಪ್ರ.ವಾರ್ತೆ ,  ಮೈಸೂರು ,  ಸೆ. 29
ಇಂದು ಸಮಾಜದಲ್ಲಿ ನಡೆಯುತ್ತಿರುವ ಶೋಷಣೆ ಹಾಗೂ ದಬ್ಬಾಳಿಕೆ ತಡೆಗೆ ಶಿಕ್ಷಣವೇ ಪರಿಹಾರ ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸ ಪ್ರಸಾದ್ ಹೇಳಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ, ಸರ್ವಶಿಕ್ಷಣ ಅಭಿಯಾನ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಾಗೂ ಪದನಿಮಿತ್ತ ತಾಲೂಕು ಯೋಜನಾ ಸಮನ್ವಯಾಧಿಕಾರಿಗಳ ಕಚೇರಿ ಉತ್ತರ ವಲಯದ ಸಂಯುಕ್ತಾಶ್ರಯದಲ್ಲಿ ನಜರ್‌ಬಾದಿನ ಪ್ರಾಯೋಗಿಕ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಭಾನುವಾರ ಏರ್ಪಡಿಸಿದ್ದ ವಿಶಿಷ್ಟ ವರ್ಗದ ಮಕ್ಕಳ ವಸತಿ ಶಾಲೆಯ ಕಟ್ಟಡ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.
ಜ್ಞಾನದ ತಿಳಿವಳಿಕೆಯಿಂದ ಮಾತ್ರ ಶೋಷಣೆ ಹಾಗೂ ದಬ್ಬಾಳಿಕೆ ಎದುರಿಸಬಹುದಾಗಿದೆ. ಸಂವಿಧಾನಬದ್ಧ ಸವಲತ್ತುಗಳನ್ನು ಪಡಬೇಕಾದರೆ ಹಾಗೂ ಹಕ್ಕುಗಳ ಚಲಾಯಿಸಬೇಕಾದರೆ ಆಲೋಚನಾ ಶಕ್ತಿ ಬಹುಮುಖ್ಯ. ಅಂತಹ ಶಕ್ತಿಯನ್ನು ಶಿಕ್ಷಣ ನೀಡಲಿದ್ದು, ಸೌಲಭ್ಯ ಪಡೆಯುವ ಆಲೋಚನೆಗಳನ್ನು ಅಂತಹ ಜ್ಞಾನದಿಂದ ಹೊಂದಬಹುದು ಎಂದರು.
1.17 ಕೋಟಿ ವೆಚ್ಚದಲ್ಲಿ ಶಾಲೆ: ಕೆಳವರ್ಗದ ಬಡತನ ಹಾಗೂ ಅನಿಷ್ಟ ಪದ್ಧತಿಯಿಂದಾಗಿ ಸೌಲಭ್ಯ ವಂಚಿತರಾಗಿರುವ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಸಲುವಾಗಿ 1.17 ಕೋಟಿ ವೆಚ್ಚದಲ್ಲಿ ಈ ವಸತಿ ಶಾಲೆಯನ್ನು ನಿರ್ಮಿಸಲಾಗುತ್ತಿದೆ. ಸದ್ಯಕ್ಕೆ 81 ವಿಶಿಷ್ಟ ಮಕ್ಕಳು ಇಲ್ಲಿ ಕಲಿಯುತ್ತಿದ್ದು, ಅವರಿಗೆ ಬೇರೆ ಕಡೆ ವಸತಿ ಕಲ್ಪಿಸಲಾಗಿದೆ. ಇನ್ನು ಒಂದು ವರ್ಷದಲ್ಲಿ ಈ ನಿರ್ಮಾಣ ಕಾರ್ಯ ಪೂರ್ಣಗೊಳಿಸಲಾಗುವುದು. ಅದಕ್ಕೆ ಬೇಕಾದ ಎಲ್ಲಾ ಸಹಕಾರ ನೀಡುವುದಾಗಿ ಅವರು ತಿಳಿಸಿದರು.
ಬೆಂಗಳೂರು, ದಕ್ಷಿಣ ಕನ್ನಡ, ಮೈಸೂರು ಸೇರಿದಂತೆ ರಾಜ್ಯದ ಐದು ಜಿಲ್ಲೆಗಳಲ್ಲಿ ವಿಶಿಷ್ಟ ಮಕ್ಕಳಿಗಾಗಿ ವಸತಿ ಶಾಲೆಗಳನ್ನು ತೆರೆಯಲು ಯೋಜನೆ ಹಮ್ಮಿಕೊಳ್ಳಲಾಗಿದೆ. ಮೈಸೂರಿನಲ್ಲಿ ಆರಂಭಿಸಿರುವ ಈ ವಸತಿ ಶಾಲೆಯನ್ನು ಮಾದರಿ ಶಾಲೆಯಾಗಿ ರೂಪಿಸಲಾಗುವುದು ಎಂದರು.
ಚಾಮರಾಜ ಕ್ಷೇತ್ರದ ಶಾಸಕ ವಾಸು ಅಧ್ಯಕ್ಷತೆ ವಹಿಸಿದ್ದರು. ನಗರ ಪಾಲಿಕೆ ಸದಸ್ಯೆ ಶಿವಮ್ಮ, ಮಾಜಿ ಸದಸ್ಯರಾದ ಎಂ. ಸತ್ಯನಾರಾಯಣ, ರಾಜು, ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಮಾಜಿ ಅಧ್ಯಕ್ಷ ಆರ್. ರಘು, ಜನತಾ ಬಜಾರ್ ಅಧ್ಯಕ್ಷ ಎಸ್. ಚಂದ್ರಶೇಖರ್, ಡಿಡಿಪಿಐ ಬಿ.ಕೆ. ಬಸವರಾಜು ಮುಖ್ಯ ಅತಿಥಿಗಳಾಗಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.