ಸಾಹಿತ್ಯ ಸಾರಥಿ ಸಿಪಿಕೆಗೆ 75ರ ಸಂಭ್ರಮ
ಮಾ. ವೆಂಕಟೇಶ್
ಮೈಸೂರು: ಸಿಪಿಕೆ ಅನ್ನುವ ಮೂರು ಅಕ್ಷರಗಳು ಕನ್ನಡ ಸಾಹಿತ್ಯ, ಸಂಸ್ಕೃತಿಯನ್ನು ತ್ರಿವಿಕ್ರಮನಂತೆ ಆವರಿಸಿಕೊಂಡಿವೆ ಎಂಬ ಬಿ.ಎ. ವಿವೇಕ ರೈ ಅವರ ಮಾತು ಇಲ್ಲಿ ನೆನಪಾಗಲಿದೆ. ಅಷ್ಟೇ ಅಲ್ಲ, ಸೃಜನ ಸಾಹಿತ್ಯ ಹಾಗೂ ವಿಮರ್ಶನ ಸಾಹಿತ್ಯಗಳೆರಡರಲ್ಲೂ ಸಿಪಿಕೆ ಸರಿಸಮಾನ ಪ್ರತಿಭೆಯಿಂದ ಸಿದ್ಧಹಸ್ತರು ಎಂದಿರುವ ಕುವೆಂಪು ಅವರ ಮಾತು ಸಹ ಈ ಸಾಹಿತಿಯ ಬರವಣಿಗೆ ಮೇಲೆ ಬೆಳಕು ಚೆಲ್ಲಿವೆ.
ಕನ್ನಡ ಸಾರಸ್ವತ ಲೋಕದಲ್ಲಿ ಸಿಪಿಕೆ ಎಂದೇ ಖ್ಯಾತರಾಗಿರುವ ಪ್ರಸಿದ್ಧ ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್ ಅವರು, ಕವಿತೆ, ಸಾಹಿತ್ಯ ವಿಮರ್ಶೆ ಮತ್ತು ಭಾಷಾಂತರ ಇವುಗಳಲ್ಲದೆ ಗ್ರಂಥ ಸಂಪಾದನೆ, ಚಿಂತನ ಪ್ರಬಂಧ, ಅನ್ಯಭಾಷೆಗಳಿಂದ ಅನುವಾದಿತ ಕೃತಿಗಳು ಮತ್ತು ಇನ್ನೂ ಹತ್ತು ಹಲವು ಬಗೆಯ ಕೃತಿಗಳನ್ನು ಪ್ರಕಟಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ. ಈವರೆಗೆ 300ಕ್ಕೂ ಹೆಚ್ಚಿನ ಕೃತಿಗಳನ್ನು ರಚಿಸಿದ್ದಾರೆ. ಆಡು ಮುಟ್ಟದ ಸೊಪ್ಪಿಲ್ಲ ಎಂಬ ಗಾದೆ ಮಾತಿನಂತೆ ಸಿಪಿಕೆ ಬರೆಯದ ಸಾಹಿತ್ಯ ಪ್ರಕಾರಗಳಿಲ್ಲ ಎನ್ನಬಹುದು. ಆದರೆ ಮಹಾಕಾವ್ಯವೊಂದನ್ನು ಬರೆದಿಲ್ಲ ಎಂಬ ಚಿಂತೆ ಮಾತ್ರ ಇವರನ್ನು ಕಾಡದಿರದು. ಚುಟುಕು ಸಾಹಿತ್ಯದಲ್ಲಿಯೂ ಇವರದು ಮಹಾಪ್ರತಿಭೆ.
ಹತ್ತಾರು ವರ್ಷಗಳಿಂದ ಮಹಾಕಾವ್ಯ ರಚಿಸಬೇಕೆಂದು ಬಯಸಿ ಅದಕ್ಕಾಗಿ ಸಿದ್ಧತೆ ನಡೆಸಿದರು. ಒಮ್ಮೆ ಶ್ರೀರಾಮಕೃಷ್ಣ ಪರಹಂಸರನ್ನು ಕುರಿತು ಮಹಾಕಾವ್ಯ ಬರೆಯಲು ಆರಂಭಿಸಿದರು. ಕೆಲಸದ ಒತ್ತಡದಿಂದ ಮುಂದುವರಿಸಲಾಗಲಿಲ್ಲಿ. ಕಡೆಗೆ ಅದರ ಹಸ್ತ ಪ್ರತಿಯೂ ಸಿಗದ ಕಾರಣ ಆ ಯೋಜನೆ ಕೈಬಿಟ್ಟರು. ನಂತರ ಸ್ವಾಮಿ ವಿವೇಕಾನಂದರ ಕುರಿತು ಮಹಾಕಾವ್ಯ ರಚನೆಗೆ ತೊಡಗಿದರು. ಕಾರಣಾಂತರದಿಂದ ಅದು ಸಹ ಮುಂದುವರಿಯಲಿಲ್ಲಿ. ಈಗ ಸಮಗ್ರ ಮಹಾಭಾರತ ಕುರಿತಾಗಿ ಮಹಾಕಾವ್ಯ ರಚಿಸಲು ಲೇಖನಿ ಆರಂಭಿಸಿದ್ದಾರೆ.
ಭಾರಾವತಾರ ಇದು ಮಹಾಕಾವ್ಯದ ಶೀರ್ಷಿಕೆ. ಮೂಲ ಕುಮಾರವ್ಯಾಸ ಭಾರತ. ಹಳೆಗನ್ನಡದಲ್ಲಿ ರಚನೆ. ಕೆಲವರು ಮಹಾಕಾವ್ಯ ರಚನೆಯನ್ನು ತಪ್ಪಸೆಂದು ಭಾವಿಸಿ, ಅದಕ್ಕಾಗಿ ಸಮಯವನ್ನು ನಿರ್ಧರಿಸಿ ಕೃಷಿ ಮಾಡುತ್ತಾರೆ. ಆದರೆ ನಾನು ಬೇರೆ ಕೃತಿಗಳ ರಚನೆ ಹಾಗೂ ಸಾಹಿತ್ಯಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರ ಜತೆಗೆ ಈ ಕಾವ್ಯ ರಚನೆಗೆ ತೊಡಗಬೇಕಿದೆ. ಯಾವುದೇ ಕಾಲಮಿತಿ ಹಾಕಿಕೊಂಡಿಲ್ಲ. ಈ ಕೃತಿಯಲ್ಲಿ ದುರ್ಯೋಧನನ ಒಳ್ಳೆಯ ಗುಣವನ್ನು ಬಿಂಬಿಸಲಾಗುವುದು ಎನ್ನುತ್ತಾರೆ ಸಿಪಿಕೆ.
ಸಾಹಿತಿಯಾದ ಕಾಲಘಟ್ಟಕ್ಕಿಂತ ಅಧ್ಯಾಪಕನಾಗಿ ಸುಮಾರು 30 ವರ್ಷಗಳ ಕಾಲ ಸೇವೆ ಸಲ್ಲಿಸಿದ ಅವಧಿ ನನಗೆ ತೃಪ್ತಿ ತಂದಿದೆ ಎನ್ನುವ ಸಿಪಿಕೆ, ದೇಜಗೌ ಅವರ ನೆಲ್ಮೆಯ ಶಿಷ್ಯ. ಗುರುವಿನ ಗುರು ಕುವೆಂಪು ಹಾಗೂ ದೇಜಗೌ ಹಾದಿಯಲ್ಲಿ ಸಾಹಿತ್ಯ ಕೃಷಿಯಲ್ಲಿ ತೊಡಗಿರುವ ಈ ದೈತ್ಯ ಪ್ರತಿಭೆಗೆ 75ನೇ ಹುಟ್ಟುಹಬ್ಬದ ಸಂಭ್ರಮ.
ಅಭಿನಂದನಾ ಸಮಾರಂಭ 8ರಂದು
ಡಾ. ಸಿಪಿಕೆ ಅವರು 75 ವಸಂತಗಳನ್ನು ಪೂರೈಸುತ್ತಿರುವ ಈ ಸಂದರ್ಭದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಹಾಗೂ ಸಂವಹನ ಟ್ರಸ್ಟ್ ಏ.8 ರಂದು ಅಭಿನಂದನಾ ಸಮಾರಂಭ ಏರ್ಪಡಿಸಿದೆ. ಅಂದು ಸಂಜೆ 5.30 ಕ್ಕೆ ಅಗ್ರಹಾರದ ಡಾ. ಶಿವರಾತ್ರಿ ರಾಜೇಂದ್ರ ಭವನದಲ್ಲಿ ಏರ್ಪಡಿಸಿರುವ ಕಾರ್ಯಕ್ರಮದಲ್ಲಿ ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಹಿರಿಯ ಸಾಹಿತಿ ಪ್ರೊ.ದೇಜಗೌ ಅಧ್ಯಕ್ಷತೆ ವಹಿಸುವರು. ಸಿಪಿಕೆ - 75 ಅಭಿನಂದನಾ ಗ್ರಂಥವನ್ನು ಪತ್ರಿಕೋದ್ಯಮಿ ರಾಜಶೇಖರ ಕೋಟಿ ಲೋಕಾರ್ಪಣೆಗೊಳಿಸುವರು. ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಮಾಲತಿ ಪಟ್ಟಣಶೆಟ್ಟಿ ಅಭಿನಂದಿಸುವರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

