ನಾವು ಕಾಂಗ್ರೆಸ್, ಅವರು ಬಿಜೆಪಿ!
ಮೈಸೂರು: ಸಾಹಿತಿಗಳು ರಾಜಕೀಯ ಪಕ್ಷ ಬೆಂಬಲಿಸುವುದು ಸರಿ ಎಂಬುದನ್ನು ಕಾದಂಬರಿಕಾರ ಡಾ.ಎಸ್.ಎಲ್. ಭೈರಪ್ಪ, ಸಂಶೋಧಕ ಎಂ. ಚಿದಾನಂದಮೂರ್ತಿ ಸೇರಿದಂತೆ 8 ಮಂದಿ ಸಾಹಿತಿಗಳು ಬಿಜೆಪಿ ಬೆಂಬಲಿಸುವ ಮೂಲಕ ಒಪ್ಪಿಕೊಂಡಿದ್ದಾರೆ ಎಂದು ಸಾಹಿತಿ ಡಾ.ಕೆ. ಮರಳುಸಿದ್ದಪ್ಪ ತಿರುಗೇಟು ನೀಡಿದ್ದಾರೆ.
ಮೈಸೂರಿನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರಜಾಪ್ರಭುತ್ವಕ್ಕೆ ಧಕ್ಕೆ ಬಂದಾಗ ಪ್ರಜ್ಞಾವಂತರಾದ ನಾವು ಹೊರಗೆ ಬಂದು ಮಾತನಾಡುತ್ತೇವೆ. ಮಾತನಾಡಲು ಇಚ್ಛಿಸದವರು ಅಲ್ಲೇ ಇರುವುದು ಒಳ್ಳೆಯದು. ಶಿವರಾಮ ಕಾರಂತ, ಕುವೆಂಪು ಅವರು ರಾಜಕೀಯದಿಂದ ದೂರವಿದ್ದರೂ ಗುಣಾತ್ಮಕ ರಾಜಕೀಯಕ್ಕೆ ಮಾರ್ಗದರ್ಶನ ನೀಡುತ್ತಿದ್ದರು ಎಂದರು.
ಚಿಂತಕ ಪ್ರೊ.ಜಿ.ಕೆ. ಗೋವಿಂದರಾವ್ ಮಾತನಾಡಿ, ಬಿಜೆಪಿಯವರು ಹರ ಹರ ಮಹದೇವ ಎಂಬುದರ ಬದಲಾಗಿ ಹರ ಹರ ಮೋದಿ ಎನ್ನುತ್ತಿದ್ದಾರೆ. ವಿಭೂತಿ ಪೂಜೆ, ವ್ಯಕ್ತಿಪೂಜೆ ಪ್ರಜಾಪ್ರಭುತ್ವದಲ್ಲಿ ಇರಬಾರದು. ನಮೋ ಬ್ರಿಗೇಡ್ ಅನ್ನು ನಾನು ಒಪ್ಪುವುದಿಲ್ಲ. ನಮೋ ಎನ್ನುವ ಬದಲು ಮೋನ ನ.. ನ.. ನ.. (ಮೋದಿ ಬೇಡ ಬೇಡ ಬೇಡ) ಎಂದು ಅರ್ಥೈಸಿಕೊಳ್ಳಬೇಕು. ಗುಜರಾತ್‌ನಲ್ಲಿ ಮೋದಿ ತನ್ನ ಚೇಲಾಗಳನ್ನು ಬಿಟ್ಟು ಮಾಡಿಸುತ್ತಿರುವ ಕೃತ್ಯಗಳನ್ನು ನಾವು ನೋಡಿದ್ದೇವೆ. ದೇಶದ ಏಳಿಗೆಗೆ ಕೇವಲ ಅಭಿವೃದ್ಧಿ ಮಾತ್ರವಲ್ಲ, ಸಮಾನತೆಯೂ ಬೇಕಾಗುತ್ತದೆ. ಮೋದಿಯಲ್ಲಿ ಸಮಾನತೆಯ ಭಾವನೆ ಇಲ್ಲ ಎಂದರು.
ಜಾನಪದ ವಿದ್ವಾಂಸ ಪ್ರೊ.ಹಿ.ಶಿ. ರಾಮಚಂದ್ರೇಗೌಡ ಮಾತನಾಡಿ, ಮೋದಿಯ ಹಾವ ಭಾವ ನೋಡುತ್ತಿದ್ದರೆ ಆತ ಭಾರತೀಯನೇ ಅಲ್ಲ ಎನಿಸುತ್ತದೆ. ನೆಹರು ಅವರು ದೇಶಕ್ಕೆ ಎಷ್ಟೆಲ್ಲಾ ಮಾಡಿದರೂ ದೇಶವನ್ನ ಮತ್ತೆ ಅರ್ಥ ಮಾಡಿಕೊಳ್ಳಬೇಕು ಎನ್ನುತ್ತಿದ್ದರು. ಮೋದಿ ಭಾರತವನ್ನು ದರ್ಶಿಸಲು ಸಾಧ್ಯವೇ ಇಲ್ಲ.
ಮೋದಿ ಪ್ರಧಾನಿಯಾದರೆ ದೇಶ ಛಿದ್ರವಾಗುತ್ತದೆ. ದೇಶ ಆಳುವವನಿಗೆ ಎಲ್ಲರನ್ನು ಸಮಾನವಾಗಿ ನೋಡುವ ಮನಸ್ಸು ಇರಬೇಕು. ಅದನ್ನು ಬಿಟ್ಟು ಪುಂಡನ ರೀತಿಯಲ್ಲಿ ಮಾತನಾಡುತ್ತಿರುವುದು ಸರಿಯಲ್ಲ. ಇವರನ್ನು ಬಗ್ಗು ಬಡಿಯಲು ನಾವು ಸಾತ್ವಿಕತೆಯುಳ್ಳ ಕಾಂಗ್ರೆಸ್‌ನ್ನು ಬೆಂಬಲಿಸಿದ್ದೇವೆ ಎಂದು ಸಮರ್ಥಿಸಿಕೊಂಡರು.
ಸಾಹಿತಿ ಪ್ರೊ.ಎಸ್.ಜಿ. ಸಿದ್ದರಾಮಯ್ಯ ಮಾತನಾಡಿ, ಜರ್ಮನಿ ಹಿಟ್ಲರ್ ಆಡಳಿತ ಬರುವ ಮುನ್ನ ಹೇಗಿತ್ತು, ಆತ ಬಂದ ನಂತರ ಹೇಗಾಯಿತು ಎಂಬುದನ್ನು ತಿಳಿದಿದ್ದೇವೆ.
ಈಗ ಭಾರತಕ್ಕೂ ಅಂಥ ಸಂದರ್ಭ ಒದಗಿ ಬಂದಿದೆ. ಈಗ ನಾವು ಎಚ್ಚರ ತಪ್ಪಿದರೆ ಮುಂದೊಂದು ದಿನ ಮಕ್ಕಳು, ಮೊಮ್ಮಕ್ಕಳಿಗೆ ತೊಂದರೆಯಾಗುತ್ತದೆ. ಅದನ್ನು ತಪ್ಪಿಸಲು ನೈತಿಕವಾಗಿ ನಾವೆಲ್ಲ ಕಾಂಗ್ರೆಸ್ ಬೆಂಬಲಿಸುತ್ತಿದ್ದೇವೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

