ಕೈಗೆ ಮರಳಿದ ಬನ್ನೂರು ಮಾದೇಗೌಡ
ಮೈಸೂರು: ಈ ಹಿಂದೆ ಇದ್ದ ಬನ್ನೂರು ವಿಧಾನಸಭಾ ಕ್ಷೇತ್ರದಿಂದ ಎರಡು ಬಾರಿ ಆಯ್ಕೆಯಾಗಿದ್ದ ಮಾಜಿ ಶಾಸಕ ಕೆ.ಮಾದೇಗೌಡ ಅವರು ರಾಜಕೀಯ ಸನ್ಯಾಸ ಸ್ವೀಕರಿಸಿದ್ದರು. ಬದಲಾದ ರಾಜಕೀಯ ವಿದ್ಯಮಾನದಿಂದ ಇದೀಗ ಮಾತೃ ಪಕ್ಷ ಕಾಂಗ್ರೆಸ್ಗೆ ಮರಳಿದ್ದಾರೆ.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆ.ಮಾದೇಗೌಡರು, ಎರಡು ಬಾರಿ ಬನ್ನೂರು ಕ್ಷೇತ್ರದಿಂದ ಶಾಸಕನಾಗಿ ಗೆದ್ದು ಪ್ರಾಮಾಣಿಕ ಸೇವೆ ಸಲ್ಲಿಸಿದ್ದೇನೆ. ಕೆಲವು ದಶಕಗಳ ರಾಜಕೀಯ ವಿದ್ಯಮಾನಗಳನ್ನು ನೋಡಿ ರಾಜಕೀಯದಿಂದ ದೂರವಿದ್ದೆ. ಆದರೆ, 2014ರ ಲೋಕಸಭಾ ಚುನಾವಣೆಯಲ್ಲಿ ನಮ್ಮ ಜಿಲ್ಲೆಯವರೇ ಆದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಹಾಯ ಮಾಡಲು ಪುನಃ ಪಕ್ಷಕ್ಕೆ ಮರಳಿದ್ದೇನೆ. ನನ್ನ ತಮ್ಮ ಕೆ. ಮಹದೇವ್ ಕೂಡ ಪಕ್ಷದ ಪರವಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದರು.
ನಾನು 1972 ರಲ್ಲಿ ಚುನಾವಣೆಗೆ ನಿಂತಿದ್ದಾಗ ವಿದ್ಯಾರ್ಥಿಯಾಗಿದ್ದ ಸಿದ್ದರಾಮಯ್ಯ ಸಹಾಯ ಮಾಡಿದ್ದರು. ಈಗ ನಾನು ಸಹಾಯ ಮಾಡಬೇಕಾದ ಅನಿವಾರ್ಯವಿದ್ದು, ಮಾನವೀಯತೆ ದೃಷ್ಟಿಯಿಂದ ಬಂದಿದ್ದೇನೆ. ನಾನು ಒಕ್ಕಲಿಗ ನಾಯಕನಿರಬಹುದು. ಆದರೆ, ಒಕ್ಕಲಿಗರು ನನ್ನ ಹಿಂಬಾಲಕರಾಗಬೇಕು ಎಂಬುದು ನನ್ನ ನಿಲುವಲ್ಲ. ನನ್ನ ಸಂಬಂಧಿಕರು, ಹಿತೈಷಿಗಳ ಜತೆಗೂಡಿ ಕೈಲಾದಷ್ಟು ಕಾಂಗ್ರೆಸ್ಗೆ ಸಹಾಯ ಮಾಡುತ್ತೇವೆ. ಅಭ್ಯರ್ಥಿಗಳಾದ ಎಚ್. ವಿಶ್ವನಾಥ್, ಆರ್. ಧ್ರುವನಾರಾಯಣ ಅವರನ್ನು ಗೆಲ್ಲಿಸಲು ಪ್ರಯತ್ನಿಸುತ್ತೇನೆ ಎಂದರು.
ಕಾಂಗ್ರೆಸ್ ಬೀಳಿಸಬೇಡಿ: ಬಿಜೆಪಿಯ ಅಧಿಕಾರದ ಆಟ ನೋಡಿ ಜನ ಕಳೆದ ಬಾರಿ ಕಾಂಗ್ರೆಸ್ ಬೆಂಬಲಿಸಿದ್ದಾರೆ. ಆ ಪಕ್ಷಕ್ಕೆ 5 ವರ್ಷದ ಅವಧಿಯಿದ್ದು ಸಿದ್ದರಾಮಯ್ಯ ಸಂಪೂರ್ಣವಾಗಿ ಆಡಳಿತ ನಡೆಸಲು ಬಿಡಬೇಕು. ಒಂದು ವೇಳೆ ಅವರನ್ನು ಕಿತ್ತು ಹಾಕಿದರೂ ಸರ್ಕಾರವೇ ಉಳಿಯುವುದಿಲ್ಲ ಎಂಬ ಪರಿಸ್ಥಿತಿ ಬಂದರೂ ಬರಬಹುದು. ಆದ್ದರಿಂದ ಅಂತಹ ಕೆಲಸಕ್ಕೆ ಯಾವುದೇ ಪಕ್ಷ ಮುಂದಾಗಬಾರದು ಎಂದು ಮನವಿ ಮಾಡಿದರು.
ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಡಾ.ಕೆ.ಮಹದೇವ್, ಮುಖಂಡರಾದ ವೈ.ಜೆ. ಪುಟ್ಟಪ್ಪ, ಶಶಿಕಲಾ ಜಯರಾಂ, ಎಂ.ರಾಜು, ಮಂಜೇಗೌಡ, ವೈ.ಆರ್. ಪ್ರಭಾಕರ್, ಬಿ.ಸಿ. ಮಾದೇಗೌಡ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

