ಕನ್ನಡ ಹತ್ತಿಕ್ಕಿ ತಮಿಳು ಪ್ರೇಮ ಮೆರೆಯುವುದು ದ್ರೋಹ
ಮೈಸೂರು: ಕೇಂದ್ರಿಯ ಆಹಾರ ಮತ್ತು ತಾಂತ್ರಿಕ ಸಂಶೋಧನಾಲಯದಲ್ಲಿ ಕನ್ನಡ ಹಾಗೂ ಕನ್ನಡಿಗರಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಹಿರಿಯ ಸಾಹಿತಿ ಪ್ರೊ.ದೇಜಗೌ ಕಿಡಿಕಾರಿದ್ದಾರೆ.
ಈ ಸಂಬಂಧ ಸಂಸ್ಥೆಯ ನಿರ್ದೇಶಕರಿಗೆ ಬಹಿರಂಗ ಪತ್ರ ಬರೆದಿರುವ ಅವರು, 25 ವರ್ಷಗಳಿಂದ ಕನ್ನಡ ನೆಲದಲ್ಲಿ ನೆಲೆ ಪಡೆದಿರುವ ತಾವು, ಇದುವರೆಗೂ ಕನ್ನಡ ಕಲಿತಿಲ್ಲ. ಇದು ತಾವು ನಿಂತಿರುವ ನೆಲಕ್ಕೆ, ಜಲಕ್ಕೆ, ನಿಮ್ಮ ಸುತ್ತಮುತ್ತಲು ಇರುವ ಕನ್ನಡತನದ ಪರಿಸರಕ್ಕೆ ಅಲ್ಲದೆ ಇಡೀ ಕರ್ನಾಟಕಕ್ಕೆ ಬಗೆಯುತ್ತಿರುವ ದ್ರೋಹವೆಂದು ಭಾವಿಸಿದ್ದೇನೆ ಎಂದಿದ್ದಾರೆ.
ಸಂಸ್ಥೆಯಲ್ಲಿ ಕನ್ನಡ ಹತ್ತಿಕ್ಕುವ ಹುನ್ನಾರ ನಡೆಸಿ, ಕನ್ನಡತವನ್ನು ಮೆಟ್ಟುತ್ತಾ, ತಮಿಳು ಪ್ರೇಮವನ್ನು ಪ್ರದರ್ಶಿಸುತ್ತಿರುವ ತಮ್ಮನ್ನು ಪ್ರಶ್ನಿಸಿದ ಕನ್ನಡಿಗ ಕೆಲಸಗಾರರನ್ನು ವಿನಾಕಾರಣ ತಾವು ಒಂದಿಲ್ಲೊಂದು ನೆಪದಲ್ಲಿ ಶೋಷಣೆ ಮಾಡುತ್ತಿರುವುದನ್ನು ಕೇಳಿದ್ದೇನೆ. ಕನ್ನಡಿಗರನ್ನು ಮಾನಸಿಕವಾಗಿ ಹಿಂಸಿಸುತ್ತಾ, ವರ್ಗಾವಣೆ ಮೂಲಕ ಅವರಿಗೆ ಏನೆಲ್ಲಾ ತೊಂದರೆ ಕೊಡುತ್ತಾ, ತಮಿಳು ಸಾಮ್ರಾಜ್ಯ ವಿಸ್ತರಿಸುತ್ತಿದ್ದೀರಿ ಎಂದು ತಿಳಿಸಿದ್ದಾರೆ.
ಕನ್ನಡ ಕಾರ್ಯಕ್ರಮಗಳನ್ನು ನಡೆಸಲು ಅವಕಾಶ ಕೊಡುತ್ತಿಲ್ಲ. ನಿರಂಕುಶಾಧಿಕಾರಿಯಾಗಿ ವರ್ತಿಸುತ್ತಾ, ಅಲ್ಲಿ ಇರುವ ಕನ್ನಡ ಸಹೃದಯ ಬಳಗವನ್ನು ನಿರ್ನಾಮ ಮಾಡಲು ಸಂಚು ರೂಪಿಸಿದ್ದೀರಿ. ಅಲ್ಲದೆ ಸಂಸ್ಥೆಯ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ ನಡೆಸದಂತೆ ಹಾಗೂ ಕನ್ನಡ ಬಾವುಟ ಹಾರಿಸದಂತೆ ಮೌಖಿಕವಾಗಿ ಆದೇಶ ನೀಡಿದ್ದೀರಿ. ಹೀಗೆ ಕನ್ನಡ ಹಾಗೂ ಕನ್ನಡಿಗರಿಗೆ ಕಷ್ಟಕೋಟಲೆ ಕೊಡುತ್ತಿರುವ ತಮ್ಮನ್ನು ಕೂಡ ಪ್ರಶ್ನಿಸಲೇಬೇಕಾದ ಅನಿವಾರ್ಯತೆ ಕನ್ನಡ ನೆಲದಲ್ಲಿ ನಮಗೆ ಒದಗಿರುವುದು ನಿಜಕ್ಕೂ ದುರಂತ ಎಂದು ವಿಷಾದಿಸಿದ್ದಾರೆ.
ಕರ್ನಾಟಕದಲ್ಲಿದೆ: ಸಿಎಫ್ಟಿಆರ್ಐ ಇರುವುದು ತಮಿಳುನಾಡಿನಲ್ಲಿ ಅಲ್ಲ. ಕನ್ನಡಿಗರ ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ಎಂಬುದನ್ನು ತಾವು ನೆನಪಿನಲ್ಲಿ ಇಟ್ಟುಕೊಳ್ಳಬೇಕು. ನಮ್ಮ ಪ್ರೀತಿ, ಗೌರವ ಹಾಗೂ ಅಭಿಮಾನಕ್ಕೆ ನಿರಂತರ ಪಾತ್ರರಾಗಿರಬೇಕು. ಅಲ್ಲದೆ ಈಗಾಗಲೇ ತಾವು ಮಾಡಿರುವ ತಪ್ಪುಗಳನ್ನು ತಿದ್ದಿಕೊಂಡು ಮುನ್ನಡೆಯಬೇಕು. ಇತ್ತೀಚೆಗೆ ಮಾಡಿರುವ ಕನ್ನಡಿಗರ ವರ್ಗಾವಣೆಯನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿದ್ದಾರೆ.
ತಾವು ಇದೇ ರೀತಿ ಕನ್ನಡ ಹಾಗೂ ಕನ್ನಡಿಗರಿಗೆ ತೊಂದರೆ ಕೊಡುತ್ತಾ, ಕನ್ನಡದ ತಂಟೆಗೆ ಬಂದಲ್ಲಿ ಹಾಗೂ ಯಾವುದೇ ನೆಪದಲ್ಲಿ ಕನ್ನಡತ್ವಕ್ಕೆ ಧಕ್ಕೆ ತಂದಲ್ಲಿ, ಮುಂದಿನ ಆಗು ಹೋಗುಗಳಿಗೆ ತಾವೇ ಜವಾಬ್ದಾರರಾಗಬೇಕು. ಇದನ್ನು ತಾವು ವಿನಂತಿ ಎಂದಾದರೂ ಭಾವಿಸಬಹುದು ಅಥವಾ ಎಚ್ಚರಿಕೆ ಎಂತಾದರೂ ಭಾವಿಸಬಹುದು ಎಂದು ದೇಜಗೌ ಅವರು ಸಿಎಫ್ಟಿಆರ್ ನಿರ್ದೇಶಕ ಪ್ರೊ.ರಾಮ್ ರಾಜಶೇಖರನ್ ಅವರಿಗೆ ಬಹಿರಂಗ ಪತ್ರದಲ್ಲಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

